ಕೊಪ್ಪಳದ ಗವಿಸಿದ್ದೇಶ್ವರ ರಥೋತ್ಸವ: 5 ಲಕ್ಷ ಮಂದಿಗೆ ಪ್ರಸಾದ..!
ಕಳೆದ ವರ್ಷ ಮೊದಲ ದಿನ 70 ಕ್ವಿಂಟಲ್ ಅಕ್ಕಿ ಬಳಕೆಯಾಗಿದ್ದರೆ, ಈ ಬಾರಿ ಮೊದಲ ದಿನವೇ 105 ಕ್ವಿಂಟಲ್, ಎರಡನೇ ದಿನ 150 ಕ್ವಿಂಟಲ್ ಅಕ್ಕಿ ಬಳಕೆಯಾಗಿದೆ. ಎರಡೂ ದಿನ ಸೇರಿ ಬರೊಬ್ಬರಿ 5 ಲಕ್ಷ ಭಕ್ತರು ಪ್ರಸಾದ ಸ್ವೀಕರಿಸಿದ್ದಾರೆ.
ಸೋಮರಡ್ಡಿ ಅಳವಂಡಿ
ಕೊಪ್ಪಳ(ಜ.10): 250 ಕ್ವಿಂಟಲ್ ಅಕ್ಕಿಯ ಅನ್ನ, 18 ಕೊಪ್ಪರಿಗೆ ದಾಲ್, 25 ಕೊಪ್ಪರಿಗೆ ಸಾಂಬಾರ್, 20 ಕೊಪ್ಪರಿಗೆ ತರಕಾರಿ ಬಾಜಿ ಹಾಗೂ ಲಕ್ಷಗಟ್ಟಲೆ ರೊಟ್ಟಿ. ಇದು ಇಲ್ಲಿನ ಗವಿಸಿದ್ದೇಶ್ವರ ರಥೋತ್ಸವದ ನಿಮಿತ್ತ ಮಹಾದಾಸೋಹದಲ್ಲಿ ನಡೆದ ಪ್ರಸಾದ ವಿತರಣೆಯ ಭಾನುವಾರ, ಸೋಮವಾರ ಎರಡು ದಿನದ ಲೆಕ್ಕಾಚಾರ. ಪ್ರತಿ ವರ್ಷದಂತೆ ಈ ಬಾರಿಯೂ ಲಕ್ಷಾಂತರ ಭಕ್ತರು ಗವಿಸಿದ್ದೇಶ್ವರ ರಥೋತ್ಸವದ ನಿಮಿತ್ತ ಪ್ರಸಾದ ಸ್ವೀಕರಿಸಿದ್ದಾರೆ.
ಕಳೆದ ವರ್ಷ ಮೊದಲ ದಿನ 70 ಕ್ವಿಂಟಲ್ ಅಕ್ಕಿ ಬಳಕೆಯಾಗಿದ್ದರೆ, ಈ ಬಾರಿ ಮೊದಲ ದಿನವೇ 105 ಕ್ವಿಂಟಲ್, ಎರಡನೇ ದಿನ 150 ಕ್ವಿಂಟಲ್ ಅಕ್ಕಿ ಬಳಕೆಯಾಗಿದೆ. ಎರಡೂ ದಿನ ಸೇರಿ ಬರೊಬ್ಬರಿ 5 ಲಕ್ಷ ಭಕ್ತರು ಪ್ರಸಾದ ಸ್ವೀಕರಿಸಿದ್ದಾರೆ ಎಂದು ಅಂದಾಜಿಸಲಾಗಿದೆ.
ಕೊಪ್ಪಳದ ಗವಿಮಠ ಜ್ಞಾನದಾಸೋಹ, ಸಾಮಾಜಿಕ ಕಳಕಳಿಯ ಶಕ್ತಿ ಕೇಂದ್ರ
ಲಕ್ಷ ಮಿರ್ಚಿ:
2ನೇ ದಿನ (ಸೋಮವಾರ) ಮಿರ್ಚಿ ಬಜ್ಜಿ ಮಾಡುವ ಸಂಪ್ರದಾಯವಿದ್ದು, ಈ ವರ್ಷ 20 ಕ್ವಿಂಟಲ್ ಕಡಲೆ ಹಿಟ್ಟಿನ ಸುಮಾರು 5 ಲಕ್ಷ ಮಿರ್ಚಿ ಮಾಡಿ, ಉಣಬಡಿಸಲಾಗಿದೆ. ಅದಕ್ಕಾಗಿ ಮಿರ್ಚಿ ತಯಾರಿಸಿ ರಾಶಿಯಂತೆ ಹಾಕಲಾಗಿತ್ತು.
ಇಂದು ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಸಮಾರೋಪ
ಕೊಪ್ಪಳ: ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭ ಗವಿಮಠದ ಕೈಲಾಸ ಮಂಟಪದಲ್ಲಿ ಮಂಗಳವಾರ ಜರುಗಲಿದೆ. ಮಂಗಳವಾರ ಬೆಳಗ್ಗೆ 10 ಗಂಟೆಗೆ ಮಠದ ಆವರಣದಲ್ಲಿ ಆಹ್ವಾನಿತ ಮಹಿಳಾ ಮತ್ತು ಪುರುಷ ತಂಡಗಳಿಂದ ಕಬಡ್ಡಿ ಪಂದ್ಯಾವಳಿ ಜರುಗಲಿವೆ. ಸಂಜೆ 6 ಗಂಟೆಗೆ ಕೈಲಾಸ ಮಂಟಪದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ, ಹೆಬ್ಬಾಳದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.
ಸೌರ ವಿಜ್ಞಾನಿ ಡಾ. ಹರೀಶ ಹಂದೆ, ಧಾರವಾಡದ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿಯ ನಿರ್ದೇಶಕ ಪೊ›. ಎಂ.ಎಂ. ಶಿವಪ್ರಸಾದ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಸಂಗೀತ ಕಾರ್ಯಕ್ರಮ ಜರುಗಲಿದ್ದು, ನಾದಾಲಯ ರಂಜನಿ ಅವರಿಂದ ವಾದ್ಯಗೋಷ್ಠಿ ನಡೆಯಲಿದೆ. ವಿದುಷಿ ರೇವತಿ ಸದಾಶಿವಂ ವೀಣೆ, ಪೂರ್ಣಿಮಾ ಹೆಬ್ಬಾರ್ ತಬಲಾ, ವಿದುಷಿ ರಂಜನಿ ಸಿದ್ಧಾತಿ ವೆಂಕಟೇಶ ಮೃದಂಗ, ಸುಮಾ ಹೆಗಡೆ ಹಾಗೂ ಸಂಗಡಿಗರು ಸಂತೂರ್ ವಾದನದ ಸಾಥ್ ನೀಡುವರು. ಕಲಬುರಗಿಯ ರಾಮಚಂದ್ರ ಹಡಪದ ಹಾಗೂ ಸಂಗಡಿಗರಿಂದ ಭಾವತರಂಗ ಜರುಗಲಿದೆ. ನಂತರ ಗಂಗಾವತಿ ಪ್ರಾಣೇಶ ಅವರಿಂದ ಹಾಸ್ಯೋತ್ಸವ ಜರುಗಲಿದೆ.
ಮುಖ್ಯ ಅತಿಥಿಗಳ ಪರಿಚಯ: ಸೌರಶಕ್ತಿಯ ಪ್ರಸಾರಕ ಡಾ. ಹರೀಶ್ ಹಂದೆ
ಸೌರವಿದ್ಯುತ್ ಮೂಲಕ ಬಡವರ ಮನೆಗೆ ಬೆಳಕು ಕಲ್ಪಿಸಿದ ಹೆಗ್ಗಳಿಕೆಗೆ ಪಾತ್ರವಾಗಿರುವ ಸೆಲ್ಕೊ ಕಂಪನಿಯ ಸ್ಥಾಪಕರೇ ಡಾ. ಹರೀಶ್ ಹಂದೆ. ಅವರು ಮೂಲತಃ ಉಡುಪಿ ಜಿಲ್ಲೆಯ ಕೋಟದವರು. ಐಐಟಿಯಲ್ಲಿ ಎಂಜಿನಿಯರಿಂಗ್ ಪದವಿ ಪೂರೈಸಿದರು. ಬಳಿಕ ಹರೀಶ್ ಹಂದೆ ಅವರು ಸೈಕಲ್‌ಗಳ ಮೇಲೆ ಹಳ್ಳಿಗಳಿಗೆ ತೆರಳಿ ಸೌರ ವಿದ್ಯುತ್ತಿನ ಮಹತ್ವವನ್ನು ತಿಳಿಸುತ್ತಾ ಬ್ಯಾಂಕುಗಳ ಸಹಾಯ, ಸಬ್ಸಿಡಿಗಳ ಮಾಹಿತಿ, ಸರಕಾರದ ಸಹಾಯಧನ ಇವುಗಳ ಕುರಿತು ವಿವರಿಸಿದರು. ಕರ್ನಾಟಕ, ಗುಜರಾತ, ಕೇರಳದಲ್ಲಿ ಒಂದೂವರೆ ಲಕ್ಷಕ್ಕಿಂತ ಹೆಚ್ಚಿನ ಗುಡಿಸಲುಗಳಿಗೆ ಸೌರ ಶಕ್ತಿಯನ್ನು ಪೂರೈಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಇವರ ಸಾಧನೆ ಪುರಸ್ಕರಿಸಿ 2011ರಲ್ಲಿ ಮ್ಯಾಗ್ಸೆಸ್ಸೆ ಪ್ರಶಸ್ತಿ ಲಭಿಸಿದೆ.
Koppal: ಗವಿಸಿದ್ದೇಶ್ವರ ಜಾತ್ರೆಗೆ 30 ಟನ್ ಶೇಂಗಾ ಹೋಳಿಗೆ, 10 ಕ್ವಿಂಟಲ್ ತುಪ್ಪ!
ಪ್ರೊ. ಎಸ್.ಎಂ. ಶಿವಪ್ರಸಾದ
ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಪ್ರಾರಂಭಿಸಲಾಗಿರುವ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿಯ ಧಾರವಾಡದ ನಿರ್ದೇಶಕ ಪ್ರೊ. ಎಸ್.ಎಂ. ಶಿವಪ್ರಸಾದ್ ಅವರು ಬೆಂಗಳೂರಿನ ಜವಾಹರಲಾಲ್ ನೆಹರು ಅಡ್ವಾನ್ಸ್ ಸೈಂಟಿಫಿಕ್ ಸೆಂಟರ್ ಫಾರ್ ರಿಸಚ್‌ರ್‍ನಲ್ಲಿ ಸೇವೆ ಸಲ್ಲಿಸಿದರು. ಇದರೊಂದಿಗೆ ಯುನೈಟೆಡ್ ಕಿಂಗ್‌ಡಮ್, ಯುಎಸ್‌ಎ, ಜರ್ಮನಿ, ಜಪಾನ್‌ನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಗೌರವ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಕಿರಿಯ ವಯಸ್ಸಿನಲ್ಲಿಯೇ ಯುವ ವಿಜ್ಞಾನಿ ಪ್ರಶಸ್ತಿಯನ್ನು ರಾಷ್ಟ್ರಮಟ್ಟದಲ್ಲಿ ಪಡೆದಿರುವ ಇವರು ರಾಜ್ಯ ಸರ್ಕಾರದಿಂದ ಹಿರಿಯ ವಿಜ್ಞಾನಿ ಪ್ರಶಸ್ತಿಯನ್ನು ಪಡೆದರು. ಇದರೊಂದಿಗೆ ಮೆಡಲ್ ಸುಪರ್ ಕಂಡಕ್ಟಿವಿಟಿ ಮತ್ತು ಮೆಟರಿಯಲ್ ಸೈನ್ಸ್ ಲೆಕ್ಚರ್‌ಶಿಪ್ ಅವಾರ್ಡ್, ಸಿಎನ್‌ಆರ್ ರಾವ್ ಒರಿಯೆಂಟೇಷನ್ ಅವಾರ್ಡ್‌ಗೆ ಭಾಜನರಾದರು. ವಿವಿಧ ಅಂತಾರಾಷ್ಟ್ರೀಯ ಪ್ರತಿಷ್ಠಿತ ವಿಜ್ಞಾನದ ಸಂಸ್ಥೆಗಳಲ್ಲಿ ಭಾರತದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.