Asianet Suvarna News Asianet Suvarna News

Koppal: ಗವಿಸಿದ್ದೇಶ್ವರ ಜಾತ್ರೆಗೆ 30 ಟನ್‌ ಶೇಂಗಾ ಹೋಳಿಗೆ, 10 ಕ್ವಿಂಟಲ್‌ ತುಪ್ಪ!

ದಕ್ಷಿಣ ಭಾರತದ ಕುಂಭಮೇಳ ಖ್ಯಾತಿಯ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ನಡೆಯುತ್ತಿರುವ ಮಹಾದಾಸೋಹ ಹಲವು ದಾಖಲೆಗಳಿಗೆ ಸಾಕ್ಷಿಯಾಗುತ್ತಿದ್ದು, ಈ ಬಾರಿ ಈಗಾಗಲೇ 10 ಕ್ವಿಂಟಲ್‌ ತುಪ್ಪ ತರಿಸಲಾಗಿದೆ. ಅಲ್ಲದೇ 30 ಟನ್‌ ಶೇಂಗಾ ಶೇಂಗಾ ಹೋಳಿಗೆ ಸಿದ್ಧವಾಗಿವೆ.

30 tons shenga holige 10 quintals of ghee for Koppal Gavisiddeshwar fair rav
Author
First Published Jan 8, 2023, 9:49 AM IST

ಸೋಮರಡ್ಡಿ ಅಳವಂಡಿ

 ಕೊಪ್ಪಳ (ಜ.8) : ದಕ್ಷಿಣ ಭಾರತದ ಕುಂಭಮೇಳ ಖ್ಯಾತಿಯ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ನಡೆಯುತ್ತಿರುವ ಮಹಾದಾಸೋಹ ಹಲವು ದಾಖಲೆಗಳಿಗೆ ಸಾಕ್ಷಿಯಾಗುತ್ತಿದ್ದು, ಈ ಬಾರಿ ಈಗಾಗಲೇ 10 ಕ್ವಿಂಟಲ್‌ ತುಪ್ಪ ತರಿಸಲಾಗಿದೆ. ಅಲ್ಲದೇ 30 ಟನ್‌ ಶೇಂಗಾ ಶೇಂಗಾ ಹೋಳಿಗೆ ಸಿದ್ಧವಾಗಿವೆ.

ದಾಸೋಹದ ಅಡುಗೆಗಾಗಿ ನಂದಿನಿಯವರ ಉತ್ಪಾದನೆಯಿಂದ 10 ಕ್ವಿಂಟಲ್‌ ತುಪ್ಪ ತರಿಸಲಾಗಿದ್ದು, ಜತೆಗೆ ಭಕ್ತರು ಕೊಡುವುದು ಸೇರಿದಂತೆ ವಿವಿಧೆಡೆಯಿಂದ ಬರುವ ಲೆಕ್ಕಾಚಾರ ತುಪ್ಪ ಬಳಕೆ ಇನ್ನು ಅಧಿಕವಾಗುತ್ತದೆ. ಹಾಗೆಯೇ ಹತ್ತು ಸಾವಿರ ಲೀಟರ್‌ ಹಾಲು ಬಳಕೆಯಾಗುತ್ತದೆ.

ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಗೆ 7 ದಿನ ಬಾಕಿ; ಮಹಾದಾಸೋಹಕ್ಕೆ ಭರದ ಸಿದ್ಧತೆ

ಈ ವರ್ಷ ಇದಕ್ಕೆ ಹೊಸ ದಾಖಲೆ ಸೇರ್ಪಡೆಯಾಗುತ್ತಿದ್ದು, ರಾಯಚೂರು ಜಿಲ್ಲೆಯ ಸಿಂಧನೂರು(Sindhanur) ತಾಲೂಕಿನ ಸುಮಾರು 50 ಗ್ರಾಮಗಳ ಭಕ್ತರು ಕಳೆದೊಂದು ವಾರದಿಂದ ಶ್ರಮಿಸಿ ಬರೋಬ್ಬರಿ 6.5 ಲಕ್ಷ ಶೇಂಗಾ ಹೋಳಿಗೆಯನ್ನು ಸಿದ್ಧ ಮಾಡಿ ಗವಿಮಠಕ್ಕೆ ಕಳುಹಿಸಿಕೊಟ್ಟಿದ್ದಾರೆ.

ಲಾರಿಯವರು ನೀಡುವ ಲೆಕ್ಕಾಚಾರದ ಪ್ರಕಾರ ಶೇಂಗಾ ಹೋಳಿಗೆಯ ತೂಕವೇ 30 ಟನ್‌. ಅಂದರೆ 300 ಕ್ವಿಂಟಲ್‌ ಶೇಂಗಾ ಹೋಳಿಗೆ ತಯಾರಿಸಿ ದಾಸೋಹಕ್ಕೆ ಕಳುಹಿಸಿದ್ದಾರೆ. ವಿಜಯಕುಮಾರ ಹಾಗೂ ಸ್ನೇಹಿತರು ಒಡಗೂಡಿ ಶೇಂಗಾ ಹೋಳಿಗೆಯನ್ನು ಸಿದ್ಧ ಮಾಡಿಸಿರುವುದು ವಿಶೇಷ. ಇದಕ್ಕಾಗಿ ಸುಮಾರು .15 ಲಕ್ಷ ವೆಚ್ಚವಾಗಿದೆ.

ಇದ್ಕಕಾಗಿ 100 ಕ್ವಿಂಟಲ್‌ ಶೇಂಗಾಬೀಜ, 80 ಕ್ವಿಂಟಲ್‌ ಬೆಲ್ಲ, 60 ಕ್ವಿಂಟಲ್‌ ಗೋದಿ ಹಿಟ್ಟು ಹಾಗೂ ಬೇಯಿಸುವುದಕ್ಕಾಗಿ ಸುಮಾರು ಹತ್ತಾರು ಕ್ವಿಂಟಲ್‌ ಶೇಂಗಾ ಎಣ್ಣೆ ಖರ್ಚಾಗಿದೆ. ಸಿಂಧನೂರು ತಾಲೂಕಿನ 50 ಗ್ರಾಮಗಳ ಪ್ರತಿ ಮನೆಗೂ ನಾಲ್ಕಾರು ಕೆಜಿಯಂತೆ ವಿತರಿಸಿ ಪ್ರತಿ ಕೆಜಿಗೆ 60- 70 ಶೇಂಗಾ ಹೋಳಿಗೆ ಸಿದ್ಧ ಮಾಡಿದ್ದಾರೆ. ಹೀಗೆ ಮನೆಗೆ ಹಂಚಿ ತಯಾರಿಸುವ ವೇಳೆ ಭಕ್ತರು ಸಹ ತಮ್ಮದೂ ಪಾಲು ಇರಲಿ ಎಂದು ಸೇರಿಸಿ, ಮಾಡಿರುವುದರಿಂದ 6.5 ಲಕ್ಷಕ್ಕೂ ಅಧಿಕ ಶೇಂಗಾ ಹೋಳಿಗೆ ಸಿದ್ಧವಾಗಿವೆ.

ಲಾರಿಯೇ ದಾಸೋಹಕ್ಕೆ:

ಮಹಾದಾಸೋಹದಲ್ಲಿ ಲಕ್ಷ ಲಕ್ಷ ಭಕ್ತರು ನಿತ್ಯವೂ ಪ್ರಸಾದ ಸ್ವೀಕಾರ ಮಾಡುತ್ತಾರೆ. ಮೊದಲೆರಡು ದಿನ 2 ಲಕ್ಷಕ್ಕೂ ಅಧಿಕ ಭಕ್ತರು ಪ್ರಸಾದ ಸ್ವೀಕಾರ ಮಾಡಲಿದ್ದಾರೆ. ಶೇಂಗಾ ಹೋಳಿಗೆಯನ್ನು ತಂದಿರುವ ಲಾರಿಯನ್ನೇ ಮಹಾದಾಸೋಹದಲ್ಲಿ ನಿಲ್ಲಿಸಿ, ಶೇಂಗಾ ಹೋಳಿಗೆ ಬಳಕೆ ಮಾಡುತ್ತಿರುವುದು ವಿಶೇಷ.

ಸಿಂಧನೂರು ತಾಲೂಕಿನ 50 ಗ್ರಾಮಗಳ ಭಕ್ತರು ಸೇರಿ ಶೇಂಗಾ ಹೋಳಿಗೆಯನ್ನು ಸಿದ್ಧ ಮಾಡಲಾಗಿದೆ. ನಾವು ಕೋಡಿಸಿರುವುದಕ್ಕೆ ಭಕ್ತರು ಸೇರಿಸಿ ಶೇಂಗಾ ಹೋಳಿಗೆಯನ್ನು ಸಿದ್ಧ ಮಾಡಿರುವುದರಿಂದ ನಾಲ್ಕು ಲಕ್ಷದ ಬದಲಾಗಿ 6.5 ಲಕ್ಷ ಶೇಂಗಾ ಹೋಳಿಗೆ ಸಿದ್ಧವಾಗಿವೆ. ಇದು ನಮ್ಮ ಸೇವೆಯಾಗಿರುವುದರಿಂದ ಅದನ್ನು ಹೆಚ್ಚೇನೂ ಹೇಳಲು ಬಯಸುವುದಿಲ್ಲ.

ವಿಜಯಕುಮಾರ, ಗವಿಮಠ ಭಕ್ತರು

ಸುಮಾರು 30 ಟನ್‌ ಶೇಂಗಾ ಹೋಳಿಗೆ ಲಾರಿಯಲ್ಲಿಯೇ ತರಲಾಗಿದೆ. ಇಷ್ಟೊಂದು ಶೇಂಗಾ ಹೋಳಿಗೆಯನ್ನು ಮಹಾದಾಸೋಹದಲ್ಲಿ ಬಡಿಸಿದ ಬಗ್ಗೆ ನನಗೆ ಮಾಹಿತಿ ಇಲ್ಲ. ಇದೇ ಮೊದಲು ಇರಬೇಕು ಅನಿಸುತ್ತದೆ.

ರಾಮನಗೌಡ, ಮಹಾದಾಸೋಹ ಉಸ್ತುವಾರಿ

ಕಾರಟಗಿಯಿಂದ 1 ಲಕ್ಷ ರೊಟ್ಟಿರವಾನೆ

ಕೊಪ್ಪಳ ಗವಿಮಠದ ಜಾತ್ರಾ ಮಹೋತ್ಸವದಲ್ಲಿ ನಡೆಯುವ ದಾಸೋಹಕ್ಕೆ ಪಟ್ಟಣದಿಂದ ಒಂದು ಲಕ್ಷ ರೊಟ್ಟಿಗಳನ್ನು ಶನಿವಾರ ಕಳುಹಿಸಿ ಕೊಡಲಾಯಿತು. ಇಲ್ಲಿನ ಶಾಂತಿನಿಕೇತನ ಪಬ್ಲಿಕ್‌ ಶಾಲೆ ಆವರಣದಿಂದ ಲಾರಿಯಲ್ಲಿ ರೊಟ್ಟಿಗಳನ್ನು ತುಂಬಿ ಲಾರಿಗೆ ಪೂಜೆ ಸಲ್ಲಿಸಿ ಭಕ್ತಿಯಿಂದ ಬೀಳ್ಕೊಟ್ಟರು. ಪಟ್ಟಣದ ಶಾಂತಿನಿಕೇತನ ಪಬ್ಲಿಕ್‌ ಶಾಲೆ ಮತ್ತು ಎಂಬಿಬಿಜಿ ಗ್ಲೋಬಲ್‌ ಲಿಮಿಟೆಡ್‌ ಜಂಟಿಯಾಗಿ ಒಟ್ಟು ಒಂದು ಲಕ್ಷ ರೊಟ್ಟಿಗಳನ್ನು ತಯಾರಿಸಿ ದಾಸೋಹಕ್ಕೆ ನೀಡಲಾಯಿತು.

ಈ ಸಮಯದಲ್ಲಿ ಶಾಂತಿನಿಕೇತನ ಶಾಲೆ ಮುಖ್ಯಸ್ಥ ಶರಣಪ್ಪ ಅಂಗಡಿ ಮಾತನಾಡಿ, ಕೊಪ್ಪಳದ ಗವಿಮಠ ಅನ್ನ, ಅಕ್ಷರ ಮತ್ತು ಆರೋಗದ ದಾಸೋಹಕ್ಕೆ ನಾಡಿನಾದ್ಯಂತ ಹೆಸರು ಮಾಡಿದೆ. ಗವಿಮಠದ ಜಾತ್ರಾ ಮಹೋತ್ಸವದಲ್ಲಿ ನಿತ್ಯ ಲಕ್ಷಾಂತರ ಜನರಿಗೆ ದಾಸೋಹ ನಡೆಯುತ್ತಿದೆ. ನಾಡಿನ ವಿವಿಧೆಡೆಯಿಂದ, ಅದರಲ್ಲಿ ರೈತರು, ಗ್ರಾಮೀಣ ಪ್ರದೇಶದ ಜನರು ಜಾತ್ರಾ ದಾಸೋಹಕ್ಕೆ ಭಕ್ತಿಯಿಂದ ಸೇವೆ ಸಲ್ಲಿಸುತ್ತಾರೆ.

ಇದರ ಪ್ರೇರಣೆಯಿಂದಾಗಿ ನಾವೂ ಸಣ್ಣಪ್ರಮಾಣದಲ್ಲಿ ಸೇವೆ ಮಾಡುವ ದೃಷ್ಟಿಯಿಂದ ಒಂದು ಲಕ್ಷ ರೊಟ್ಟಿಮಾಡಿ ಕೊಡಲು ತೀರ್ಮಾನಿಸಿದಂತೆ ಇಂದು ರೊಟ್ಟಿಗಳನ್ನು ಕಳುಹಿಸಿ ಕೊಡಲಾಗುವುದು ಎಂದರು. ಗ್ಲೋಬಲ್‌ ಲಿಮಿಟೆಡ್‌ನ ಶರಣಯ್ಯ ಸ್ವಾಮಿ, ಮಹೇಶ ಬಿರಾದಾರ್‌, ಸೋಮನಾಥ ಗಚ್ಚಿನಮನಿ, ಅಯ್ಯನಗೌಡ, ಪ್ರಭಾಕರ್‌ ಗೋಡೆ, ರವಿ ಸೇರಿದಂತೆ ಶಾಲೆ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು ಇದ್ದರು.

ದಾಸೋಹಕ್ಕೆ 25 ಟನ್‌ ಅಕ್ಕಿ ದೇಣಿಗೆ

ಕೊಪ್ಪಳದಲ್ಲಿ ಭಾನುವಾರದಿಂದ ನಡೆಯುವ ಗವಿಮಠದ ಜಾತ್ರೆಯ ದಾಸೋಹಕ್ಕೆ ವಾಣಿಜ್ಯ ಪಟ್ಟಣ ಕಾರಟಗಿಯಿಂದ ಶನಿವಾರ ಒಟ್ಟು 25 ಟನ್‌ ಅಕ್ಕಿಯನ್ನು ಶ್ರೀಮಠಕ್ಕೆ ಕಳುಹಿಸಿಕೊಡಲಾಯಿತು. ಇಲ್ಲಿನ ವಿಶೇಷ ಎಪಿಎಂಸಿಯಲ್ಲಿ ಅಕ್ಕಿ ಗಿರಣಿ ಮಾಲೀಕರು, ದಲ್ಲಾಳಿ ವರ್ತಕರು ಹಾಗೂ ಭಕ್ತರು ಸೇರಿಕೊಂಡು ಅಕ್ಕಿ ತುಂಬಿದ ಲಾರಿಯನ್ನು ಪೂಜೆ ಸಲ್ಲಿಸಿ ಶ್ರೀಮಠಕ್ಕೆ ಕಳುಹಿಸಲಾಯಿತು.

ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಎನ್‌. ಶ್ರೀನಿವಾಸ ಮಾತನಾಡಿ, ಗವಿಮಠದ ಜಾತ್ರೆಗೆ ಪ್ರತಿವರ್ಷದಂತೆ ಈ ವರ್ಷವೂ ಅಕ್ಕಿಗಿರಣಿ ಮಾಲೀಕರು, ದಲ್ಲಾಳಿ ವರ್ತಕರು ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ವರ್ತಕರು, ಉದ್ಯಮಿಗಳು, ರೈತರಿಂದ ಸಂಗ್ರಹಿಸಿದ 25 ಟನ್‌ ಅಕ್ಕಿಯನ್ನು ದಾಸೋಹಕ್ಕೆ ಕಳುಹಿಸಕೊಡಲಾಗಿದೆ ಎಂದರು.

ವಿಶೇಷ ಎಪಿಎಂಸಿ ಮಾಜಿ ಅಧ್ಯಕ್ಷ ಶಶಿಧರಗೌಡ ಪಾಟೀಲ್‌ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ಎಲ್ಲ ಸದ್ಭಕ್ತರ ಸಹಕಾರದಿಂದ ಈ ಅಕ್ಕಿ ಸಂಗ್ರಹ ಕಾರ್ಯ ನಡೆದಿದೆ. ರೈತರು ಬೆಳೆದ ಭತ್ತವನ್ನು ನೀಡಿದ್ದು, ಇನ್ನು ಕಿರಾಣಿ ವರ್ತಕರು, ಬ್ರೋಕರ್‌ ಸಂಘ ಸೇರಿದಂತೆ ಎಲ್ಲರಿಂದ ಸಂಗ್ರಹಿಸಿದ ಅಕ್ಕಿ ಮತ್ತು ಭತ್ತವನ್ನು ಕ್ರೋಢಿಕರಿಸಿ ನಂತರ ಒಂದೇ ಅಕ್ಕಿಗಿರಣಿಯಲ್ಲಿ ಗುಣಮಟ್ಟದ ಅಕ್ಕಿಯನ್ನು ಪಡೆದುಕೊಂಡು ಶ್ರೀಮಠದ ಜಾತ್ರಾ ಮಹೋತ್ಸವದಲ್ಲಿ ನಡೆಯುವ ದಾಸೋಹಕ್ಕೆ ಕಳುಹಿಸಲಾಗಿದೆ. ಕಾರಟಗಿ ಸೇರಿದಂತೆ ತಾಲೂಕಿನ ಶ್ರೀಮಠದ ಭಕ್ತರು ಎಂದಿನಂತೆ ಈಗಲೂ ತಮ್ಮ ಕೈಲಾದಷ್ಟುಅಕ್ಕಿ ದೇಣಿಗೆ ನೀಡಿದ್ದಾರೆ. ಭಕ್ತರು ದಾಸೋಹಕ್ಕೆ ನಿರಂತರ ಸೇವೆ ಸಲ್ಲಿಸುತ್ತಾ ಬಂದಿದ್ದು, ಗವಿಸಿದ್ದೇಶನ ಕೃಪೆಗೆ ಪಾತ್ರರಾಗಿದ್ದಾರೆ. ಪ್ರತಿವರ್ಷವೂ ಶ್ರೀಗಳ ಆರ್ಶೀವಾದದಿಂದಾಗಿ ಈ ಪರಂಪರೆ ಮುಂದುವರಿಯಲಿದೆ. ತನು- ಮನದಿಂದ ಸೇವೆ ಸಲ್ಲಿಸುತ್ತಿರುವ ಭಕ್ತರಿಗೆ ಶ್ರೀಗಳ ಕೃಪೆಯೂ ಸದಾ ಇರಲಿದೆ ಎಂದರು.

ಕೊಪ್ಪಳ ಅಜ್ಜನ ಜಾತ್ರೆಗಾಗಿ ಸಿದ್ಧವಾಗುತ್ತಿವೆ 4 ಲಕ್ಷ ಶೇಂಗಾ ಹೋಳಿಗೆ!

ಈ ವೇಳೆ ಪ್ರಮುಖರಾದ ಉದ್ಯಮಿಗಳಾದ ವೀರೇಶಪ್ಪ ಚಿನಿವಾಲರ, ಅಮರೇಶಪ್ಪ ಸಾಲಗುಂದಾ, ಪಿ. ಗುರುರಾಜ್‌ ಶ್ರೇಷ್ಠಿ, ಚೆನ್ನಳ್ಳಿ ಯಂಕಾರೆಡ್ಡೆಪ್ಪ, ಜಿ. ಯಂಕನಗೌಡ, ಬಸವರಾಜ ಪಗಡದಿನ್ನಿ, ವಿಜಯ್‌ ಕೋಲ್ಕಾರ್‌, ಪುರಸಭೆ ಸದಸ್ಯ ಮಂಜುನಾಥ ಮೇಗೂರು, ಮಾಜಿ ಸದಸ್ಯ ಸಿದ್ರಾಮಯ್ಯಸ್ವಾಮಿ ಹಿರೇಮಠ, ವೀರೇಶ ಮುದುಗಲ್‌, ಜೀತೇಂದ್ರಗೌಡ, ಪ್ರಭು ಉಪನಾಳ, ಮಲ್ಲಪ್ಪ ಬೆಣಕಲ್‌, ಬಸವರಾಜ ಜುಟ್ಲದ್‌, ಅಯ್ಯಪ್ಪ ಉಪ್ಪಾರ, ದಶರಥರೆಡ್ಡಿ ಚನ್ನಳ್ಳಿ, ರೆಡ್ಡೆಪ್ಪ, ಮಾರ್ಕಂಡಯ್ಯ, ಚನ್ನಬಸವ ದಿವಟರ್‌, ರಮೇಶಸ್ವಾಮಿ ಇತರರಿದ್ದರು. 

11 ಕಿಮೀ ದೀಡ್‌ ನಮಸ್ಕಾರ ಹಾಕಿದ ಭಕ್ತ!

 ನಗರದ ಗವಿಮಠದ ಗವಿಸಿದ್ದೇಶ್ವರ ರಥೋತ್ಸವ ಪ್ರಯುಕ್ತ ತಾಲೂಕಿನ ಹಲಗೇರಿ ಗ್ರಾಮದಿಂದ ಕೊಪ್ಪಳ ಗವಿಮಠದವರೆಗೆ ದೀಡ್‌ ನಮಸ್ಕಾರ ಹಾಕುವ ಮೂಲಕ ಭಕ್ತರೊಬ್ಬರು ಭಕ್ತಿ ಸಮರ್ಪಿಸಿದ್ದಾರೆ. ಹಲಗೇರಿ ಗ್ರಾಮದ ಗುಡದಪ್ಪ ನೀಲಪ್ಪ ಹಡಪದ ಎಂಬಾತ ಗವಿಮಠದವರೆಗೆ ದೀಡ್‌ ನಮಸ್ಕಾರ ಹಾಕುತ್ತೇನೆ ಎಂದು ಹರಕೆ ಹೊತ್ತಿದ್ದರು. ಶನಿವಾರ ಗುಡದಪ್ಪ ಅವರು ಸ್ವಗ್ರಾಮ ಹಲಗೇರಿಯಿಂದ ಕೊಪ್ಪಳ ಗವಿಮಠದವರೆಗೆ ಬರೋಬ್ಬರಿ 11 ಕಿಮೀ ದೀಡ್‌ ನಮಸ್ಕಾರ ಹಾಕಿದ್ದಾರೆ. ಗುಡದಪ್ಪ ದೀಡ್‌ ನಮಸ್ಕಾರ ಹಾಕುತ್ತಾ ತೆರಳುತ್ತಿರುವುದನ್ನು ಕೊಪ್ಪಳದಲ್ಲಿ ಕಂಡ ಜನರು ಅವರಿಗೆ ಎಳೆನೀರು ಕುಡಿಸಿದ್ದಾರೆ. ನಂತರ ಟ್ಯಾಂಕರ್‌ ನೀರನ್ನು ಕರೆಯಿಸಿ ಆತನ ಮುಂದೆ ಮುಂದೆ ನೀರು ಹಾಕುತ್ತಾ ಹೋಗಲು ತಿಳಿಸಿದ್ದಾರೆ. ಗುಡದಪ್ಪನ ಭಕ್ತಿ ಕಂಡು ನಗರದ ಜನರೆಲ್ಲ ಬೆರಗಾಗಿದ್ದಾರೆ. ನಗರಸಭೆ ಸದಸ್ಯ ವಿರುಪಾಕ್ಷಪ್ಪ ಮೊರನಾಳ ಹಾಗೂ ಮುನಿರ್‌ ಸಿದ್ದಕೀ ಹಾಗೂ ಇತರರು ಗುಡದಪ್ಪನ ದೀಡ್‌ ನಮಸ್ಕಾರ ಹರಕೆಗೆ ನಗರದಲ್ಲಿ ಟ್ಯಾಂಕರ್‌ ನೀರು ಕರೆಸುವ ಮೂಲಕ ಆಸರೆಯಾದರು.

Follow Us:
Download App:
  • android
  • ios