ಸದ್ಯ ಪಿತೃಪಕ್ಷ ನಡೆಯುತ್ತಿದೆ. ಮಹಾಲಯ ಅಮವಾಸ್ಯೆ ಹತ್ತಿರ ಬರ್ತಿದೆ. ಈ ಪಿತೃಪಕ್ಷದಲ್ಲಿ ಶ್ರಾದ್ಧದ ಆಹಾರ ನೀಡಲು ಕಾಗೆ ಸಿಗ್ಲಿಲ್ಲ ಅಂದ್ರೆ ಏನು ಮಾಡ್ಬೇಕು? ಅದಕ್ಕೆ ಉತ್ತರ ಇಲ್ಲಿದೆ.

ಪಿತೃ ಪಕ್ಷದ ಸಮಯದಲ್ಲಿ ಪೂರ್ವಜರಿಗೆ ಶ್ರಾದ್ಧ, ತರ್ಪಣ ನೀಡುವುದು ಬಹಳ ಮುಖ್ಯ. ಶ್ರಾದ್ಧದ ಆಹಾರವನ್ನು ಮೊದಲು ಕಾಗೆಗಳಿಗೆ ನೀಡಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ಕಾಗೆ ಹಾಗೂ ಇತರ ಪಕ್ಷಿಗಳು ಅಪರೂಪವಾಗ್ತಿವೆ. ಹಾಗಾದರೆ ಪಿತೃ ಪಕ್ಷದಲ್ಲಿ ಕಾಗೆ ಸಿಗದಿದ್ದರೆ ಏನು ಮಾಡಬೇಕು? ಧಾರ್ಮಿಕ ನಂಬಿಕೆಗಳ ಪ್ರಕಾರ ಇದಕ್ಕೆ ಪರಿಹಾರವೇನು?

ಕಾಗೆ ಸಿಗದಿದ್ದರೆ ಏನು ಮಾಡಬೇಕು?

ಧಾರ್ಮಿಕ ನಂಬಿಕೆಗಳ ಪ್ರಕಾರ ಕಾಗೆಯನ್ನು ಪಿತೃಗಳ ಸಂದೇಶವಾಹಕ ಎಂದು ಪರಿಗಣಿಸಲಾಗುತ್ತದೆ. ಪಿತೃ ಪಕ್ಷದಲ್ಲಿ ಕಾಗೆಗೆ ಆಹಾರ ನೀಡಿದರೆ ಅದು ನೇರವಾಗಿ ಪಿತೃಗಳಿಗೆ ತಲುಪುತ್ತದೆ ಎಂಬ ನಂಬಿಕೆಯಿದೆ. ಪಿತೃ ಪಕ್ಷದ ಸಮಯದಲ್ಲಿ ಪೂರ್ವಜರು ಕಾಗೆಯ ರೂಪದಲ್ಲಿ ಬಂದು ಶ್ರಾದ್ಧದ ಆಹಾರವನ್ನು ಸ್ವೀಕರಿಸುತ್ತಾರೆ ಎಂಬ ನಂಬಿಕೆಯೂ ಇದೆ. ಹೀಗಾಗಿ ಕಾಗೆಗೆ ಆಹಾರ ನೀಡುವುದಕ್ಕೆ ವಿಶೇಷ ಮಹತ್ವ ನೀಡಲಾಗುತ್ತದೆ. ಆದರೆ ನಿಮ್ಮ ಸುತ್ತಮುತ್ತ ಕಾಗೆ ಸಿಗದಿದ್ದರೆ ಚಿಂತೆ ಮಾಡುವ ಅಗತ್ಯವಿಲ್ಲ. ಇಂತಹ ಸಂದರ್ಭದಲ್ಲಿ ಪಂಚಬಲಿಯಲ್ಲಿರುವ ಇತರ ಜೀವಿಗಳಿಗೆ ಆಹಾರ ನೀಡಬಹುದು ಎಂದು ಧಾರ್ಮಿಕ ನಂಬಿಕೆ ಹೇಳುತ್ತದೆ.

ಪಂಚಬಲಿ ಶ್ರಾದ್ಧದಲ್ಲಿ ಯಾರಿಗೆ ಆಹಾರ ನೀಡಲಾಗುತ್ತದೆ?

ಪಿತೃ ಪಕ್ಷದಲ್ಲಿ ಪಂಚಬಲಿ ಶ್ರಾದ್ಧ ಮಾಡುವುದಕ್ಕೂ ವಿಶೇಷ ಮಹತ್ವವಿದೆ. ಪಂಚಬಲಿ ಪ್ರಕಾರ ಶ್ರಾದ್ಧದ ಊಟವನ್ನು ಬೇರೆ ಬೇರೆ ಭಾಗಗಳಾಗಿ ವಿಂಗಡಿಸಿ ಜೀವಿಗಳು ಮತ್ತು ದೇವರಿಗೆ ಅರ್ಪಿಸಲಾಗುತ್ತದೆ. ಪಂಚಬಲಿಯಲ್ಲಿ ಹಸು, ನಾಯಿ, ಕಾಗೆ, ಇರುವೆ ಮತ್ತು ದೇವತೆಗಳಿಗೆ ಆಹಾರವನ್ನು ಅರ್ಪಿಸಲಾಗುತ್ತದೆ.

ಕಾಗೆ ಸಿಗದಿದ್ದರೆ, ಕಾಗೆಯ ಭಾಗದ ಆಹಾರವನ್ನು ಹಸು ಅಥವಾ ನಾಯಿಗೆ ನೀಡಬಹುದು ಎಂಬ ನಂಬಿಕೆಯಿದೆ. ಈ ಮೂಲಕ ಪಂಚಬಲಿಯ ಪರಂಪರೆಯನ್ನು ಪಾಲಿಸಬಹುದು. ಮುಖ್ಯವಾಗಿ ಶ್ರಾದ್ಧವನ್ನು ಶ್ರದ್ಧೆ ಮತ್ತು ಸಮರ್ಪಣೆಯ ಭಾವನೆಯಿಂದ ಮಾಡುವುದು ಮುಖ್ಯ. ಪೂರ್ವಜರನ್ನು ನೆನೆದು ಭಕ್ತಿಯಿಂದ ಮಾಡುವ ಶ್ರಾದ್ಧದಿಂದ ಪಿತೃಗಳ ಆಶೀರ್ವಾದ ದೊರೆಯುತ್ತದೆ.

ಮಹಾಲಯ ಅಮಾವಾಸ್ಯೆ ಯಾವಾಗ?

ಪಿತೃ ಪಕ್ಷದ ಸಮಯದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಮಹತ್ವವಿದೆ. ಈ ವರ್ಷ ಮಹಾಲಯ ಅಮಾವಾಸ್ಯೆ ಅಕ್ಟೋಬರ್ 10ರಂದು ಆಚರಿಸಲಾಗುತ್ತಿದೆ. ಪೂರ್ವಜರು ನಿಧನರಾದ ದಿನಾಂಕ ಗೊತ್ತಿಲ್ಲದಿದ್ದರೆ, ಮಹಾಲಯ ಅಮಾವಾಸ್ಯೆಯಂದು ಶ್ರಾದ್ಧ ಕರ್ಮವನ್ನು ಮಾಡಬಹುದು. ಧಾರ್ಮಿಕ ನಂಬಿಕೆಯ ಪ್ರಕಾರ, ಮಹಾಲಯ ಅಮಾವಾಸ್ಯೆಯಂದು ಶ್ರಾದ್ಧ ಮಾಡುವುದರಿಂದ ಪೂರ್ವಜರ ಆತ್ಮಕ್ಕೆ ಶಾಂತಿ ದೊರೆಯುತ್ತದೆ ಮತ್ತು ಅವರ ಆಶೀರ್ವಾದ ಸಿಗುತ್ತದೆ.