Asianet Suvarna News Asianet Suvarna News

Uttarakannada: ದ್ವೀಪದಲ್ಲಿ ಸಂಭ್ರಮದಿಂದ ನಡೆದ ಕೂರ್ಮಗಢ ಜಾತ್ರೆ

ಉತ್ತರಕನ್ನಡ ಜಿಲ್ಲೆಯ ಕಾರವಾರ ಬೈತಖೋಲದ ಬಂದರು ಹಾಗೂ ಕೂರ್ಮಗಢ ದ್ವೀಪದಲ್ಲಿ ಮೀನುಗಾರರ ಆರಾಧ್ಯ ದೈವವಾದ ಕೂರ್ಮಗಢ ದ್ವೀಪದ ನರಸಿಂಹ ದೇವರ ಜಾತ್ರೆ ಸಂಭ್ರಮದಿಂದ ಜರುಗಿತು.

Pilgrims throng Kurmagad island for  God Narasimha  jatra gow
Author
First Published Jan 6, 2023, 10:07 PM IST | Last Updated Jan 6, 2023, 10:07 PM IST

ವರದಿ: ಭರತ್‌ರಾಜ್ ಕಲ್ಲಡ್ಕ  ಏಷಿಯಾನೆಟ್ ಸುವರ್ಣ ನ್ಯೂಸ್
 
ಕಾರವಾರ (ಜ.6): ಅದು ದ್ವೀಪದಲ್ಲಿ ನಡೆಯುವ ವಿಶೇಷ ಜಾತ್ರೆ. ಈ ಜಾತ್ರೆಗೆ ದೋಣಿಗಳಲ್ಲಿ ತೆರಳುವುದೇ ಒಂದು ವಿನೂತನ ಅನುಭವವಾದ್ದರಿಂದ ಪ್ರತೀ ವರ್ಷ ಸಾವಿರಾರು ಸಂಖ್ಯೆಯಲ್ಲಿ ಜನರು ಜಾತ್ರೆಗೆ ಆಗಮಿಸುತ್ತಾರೆ. ಅಲಂಕೃತಗೊಳಿಸಿದ ಬೋಟ್‌ಗಳಲ್ಲಿ ಬಾಳೆ ಗೊನೆಗಳನ್ನು ತುಂಬಿಸಿಕೊಂಡು ದ್ವೀಪಕ್ಕೆ ಪ್ರಯಾಣಿಸುವ ಭಕ್ತರು, ದೇವರಿಗೆ ಅರ್ಪಿಸಿ ತಮ್ಮ ಮನದ ಬಯಕೆಗಳನ್ನು ದೇವರ ಮುಂದಿಡುತ್ತಾರೆ.  ಒಂದೆಡೆ ತಳಿರು ತೋರಣಗಳಿಂದ ಸಿಂಗಾರಗೊಂಡಿರುವ ಮೀನುಗಾರಿಕಾ ಬೋಟುಗಳು. ಇನ್ನೊಂದೆಡೆ ಬಂದರಿಗೆ ಆಗಮಿಸುತ್ತಿರುವವರನ್ನು ತಪಾಸಣೆ ಮಾಡಿ ಬಿಡುತ್ತಿರುವ ಪೊಲೀಸರು. ಮತ್ತೊಂದೆಡೆ ದೊಡ್ಡ ಗುಡ್ಡವನ್ನು ಹತ್ತಿ ಬಾಳೆಗೊನೆಗಳನ್ನು ಅರ್ಪಿಸಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಬೇಡುತ್ತಿರುವ ಭಕ್ತಾಧಿಗಳು.

ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು ಉತ್ತರಕನ್ನಡ ಜಿಲ್ಲೆಯ ಕಾರವಾರ ಬೈತಖೋಲದ ಬಂದರು ಹಾಗೂ ಕೂರ್ಮಗಢ ದ್ವೀಪದಲ್ಲಿ. ಮೀನುಗಾರರ ಆರಾಧ್ಯ ದೈವವಾದ ಕೂರ್ಮಗಢ ದ್ವೀಪದ ನರಸಿಂಹ ದೇವರ ಜಾತ್ರೆ ಸಂಭ್ರಮದಿಂದ ಜರುಗಿದ್ದು, ಸಾವಿರಾರು ಭಕ್ತಾಧಿಗಳು ನೂರಾರು ಬೋಟುಗಳ ಮೂಲಕ ಸಮುದ್ರದ ಮಧ್ಯದಲ್ಲಿರುವ ದ್ವೀಪಕ್ಕೆ ತೆರಳಿ ನರಸಿಂಹನ‌ ಮುಂದೆ ಶರಣಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದ ಕ್ಷೇತ್ರಕ್ಕೆ ಆಗಮಿಸುವ ಭಕ್ತಾಧಿಗಳ ಸಂಖ್ಯೆ ಕಡಿಮೆಯಾಗಿತ್ತು.

ಆದರೆ, ಈ ಬಾರಿಯಂತೂ ಜನರು ಕಿಕ್ಕಿರಿದು ಸೇರಿದ್ದು, ತಮ್ಮ ಕುಟುಂಬಸ್ಥರ ಜತೆ ಆಗಮಿಸಿ ದೇವರ ದರ್ಶನ ಮಾಡಿದ್ದಾರೆ. ಕಾರವಾರದಿಂದ ಸುಮಾರು 16 ಕಿಲೋ ಮೀಟರ್ ದೂರದಲ್ಲಿರುವ ಕೂರ್ಮಗಢ ದ್ವೀಪದಲ್ಲಿ ನರಸಿಂಹ ದೇವರ ಜಾತ್ರೆ ಜರುಗುತ್ತದೆ. ವರ್ಷಕ್ಕೊಮ್ಮೆ ಜರುಗುವ ಜಾತ್ರೆಗೆ ಕೇವಲ ಮೀನುಗಾರರಷ್ಟೇ ಅಲ್ಲದೇ ರಾಜ್ಯ, ಹೊರರಾಜ್ಯಗಳ ಜನರು ಕೂಡಾ ಆಗಮಿಸುತ್ತಾರೆ. ಬೋಟಿನಲ್ಲಿ ಜಾತ್ರೆಗೆ ತೆರಳುವುದೇ ಒಂದು ವಿಶಿಷ್ಟ ಅನುಭವವಾಗಿದ್ದು, ದ್ವೀಪದಲ್ಲಿನ ಸುಂದರ ಪರಿಸರ ಜಾತ್ರೆಗೆ ಬಂದವರಿಗೆ ಪ್ರವಾಸದ ಅನುಭವ ನೀಡುತ್ತದೆ. ಜೈ ಭೂದೇವಿ, ಜೈ ನರಸಿಂಹ ಎಂದು ಘೋಷಣೆ ಕೂಗುತ್ತಾ ಜನರನ್ನು ದ್ವೀಪಕ್ಕೆ ಉಚಿತವಾಗಿ ಕರೆದೊಯ್ಯುವ ಮೀನುಗಾರರು, ಅಷ್ಟೇ ಸುರಕ್ಷತೆಯಿಂದ ಹಿಂತಿರುಗಿ ಬಿಡುತ್ತಾರೆ. 

ಅಂದಹಾಗೆ, ಪ್ರತೀ ವರ್ಷ ಜನವರಿ ತಿಂಗಳ ಹುಣ್ಣಿಮೆ ದಿನದಂದು ಕೂರ್ಮಢದ ನರಸಿಂಹ ದೇವರ ಜಾತ್ರೆ ನಡೆಯುತ್ತದೆ. ನರಸಿಂಹ ದೇವರಿಗೆ ಬಾಳೆಗೊನೆ ಸೇವೆ ನೀಡುವುದು ವಿಶೇಷವಾಗಿದ್ದು, ದೇವರಲ್ಲಿ ಹರಕೆ ಹೊತ್ತುಕೊಂಡರೆ ಇಷ್ಟಾರ್ಥ ಈಡೇರುತ್ತವೆ ಎನ್ನುವ ನಂಬಿಕೆ ಇದೆ. ಅಲ್ಲದೇ, ಮೀನುಗಾರರು ಪ್ರತೀ ವರ್ಷ ಜಾತ್ರೆಗೆ ಆಗಮಿಸಿ ದೇವರಿಗೆ ಬಾಳೆಗೊನೆಯನ್ನು ಅರ್ಪಿಸಿ ಮೀನುಗಾರಿಕೆ ಉತ್ತಮವಾಗಿ ನಡೆಯಲಿ ಎಂದು ಬೇಡಿಕೊಳ್ಳುತ್ತಾರೆ.

Chikkamagaluru: ನರಸಿಂಹಾವತಾರದ ಕಥನದ ಅನಾವರಣ, ಮಹಿಳಾ ಕಲಾವಿದರಿಂದಲೇ ನಡೆದ ನೃತ್ಯರೂಪಕ

ಮೂರು ವರ್ಷಗಳ ಹಿಂದೆ ದ್ವೀಪಕ್ಕೆ ದೇವರ ದರ್ಶಕ್ಕಾಗಿ ಆಗಮಿಸಿದ ಭಕ್ತರು ಬೋಟು ದುರಂತ ಸಂಭವಿಸಿ ಸಾವಿಗೀಡಾಗಿದ್ದರು. ಈ ಹಿನ್ನೆಲೆ ಜಾತ್ರೆಗೆ ತೆರಳಲು ಭಿಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಸಮುದ್ರದಲ್ಲಿ ಕೋಸ್ಟ್‌ಗಾರ್ಡ್, ಕರಾವಳಿ ಕಾವಲುಪಡೆ ಬೋಟುಗಳು ಗಸ್ತು ತಿರುಗುತ್ತಿದ್ದವು. ಇನ್ನು ಹಲವು ವರ್ಷಗಳ ಹಿಂದೆ ಸಾಧುವೋರ್ವರು ದೇವಳದ ಮೊಕ್ತೇಸರರ ಕುಟುಂಬಕ್ಕೆ ಸಾಲಿಗ್ರಾಮವೊಂದನ್ನು ನೀಡಿ ಈ ಸ್ಥಳದಲ್ಲಿ ದೇವಳ ನಿರ್ಮಿಸಿ ಪೂಜೆ ಮಾಡುವಂತೆ ತಿಳಿಸಿ ಮಾಯವಾಗಿದ್ದರು. ಆ ನಂತರ ಪ್ರತೀ ವರ್ಷ ಇಲ್ಲಿ ಪೂಜೆ ಸಲ್ಲಿಕೆಯಾಗುತ್ತಿದ್ದು, ಇಂದಿಗೂ ದೇವರಿಗೆ ವಿವಿಧ ಸೇವೆಗಳನ್ನು ಸಲ್ಲಿಸಿ ಭಕ್ತರು ಪುನೀತರಾಗುತ್ತಿದ್ದಾದೆ.

ಯೋಗಾ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಎರಡು ಲಕ್ಷ ಲಾಡು ವಿತರಣೆ

 ಒಟ್ಟಿನಲ್ಲಿ, ಕಳೆದ ಬಾರಿ ಕೊರೊನಾ ಕಾರಣದಿಂದ ಕಳೆಗುಂದಿದ್ದ ನರಸಿಂಹಗಢದ ಜಾತ್ರೆ, ಈ ಬಾರಿಯಂತೂ ವಿಜೃಂಭಣೆಯಿಂದ ನಡೆದಿದೆ. ಕುಟುಂಬ ಸಮೇತರಾಗಿ ದ್ವೀಪಕ್ಕೆ ಪ್ರಯಾಣಿಸಿದ ರಾಜ್ಯ, ಹೊರ ರಾಜ್ಯದ ಭಕ್ತಾಧಿಗಳು ನರಸಿಂಹ ಆಶೀರ್ವಾದ ಪಡೆದು ಪುನೀತರಾಗಿದ್ದಾರೆ. 
 

Latest Videos
Follow Us:
Download App:
  • android
  • ios