Chikkamagaluru: ನರಸಿಂಹಾವತಾರದ ಕಥನದ ಅನಾವರಣ, ಮಹಿಳಾ ಕಲಾವಿದರಿಂದಲೇ ನಡೆದ ನೃತ್ಯರೂಪಕ
ಮಲ್ಲಿಗೆ ಸುಗಮ ಸಂಗೀತ ಟ್ರಸ್ಟ್, ಉದ್ಭವ ಪ್ರಕಾಶನ, ಕಲ್ಕಟ್ಟೆ ಪುಸ್ತಕದ ಮನೆ ಮತ್ತು ಬೀರೂರು ಮಲ್ಲಿಗೆ ಬಳಗದಿಂದ ಚಿಕ್ಕಮಗಳೂರು ನಗರದ ಕುವೆಂಪು ಕಲಾ ಮಂದಿರದಲ್ಲಿ ಕೊಡವೂರು ನೃತ್ಯ ನಿಕೇತನದ ಕಲಾವಿದರಿಂದ ನಡೆದ ನರಸಿಂಹ ನೃತ್ಯ ರೂಪಕ ನೋಡುಗರ ಮನಗೆದ್ದಿತು.
ವರದಿ :ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು(ಡಿ.27): ಮಲ್ಲಿಗೆ ಸುಗಮ ಸಂಗೀತ ಟ್ರಸ್ಟ್, ಉದ್ಭವ ಪ್ರಕಾಶನ, ಕಲ್ಕಟ್ಟೆ ಪುಸ್ತಕದ ಮನೆ ಮತ್ತು ಬೀರೂರು ಮಲ್ಲಿಗೆ ಬಳಗದಿಂದ ಚಿಕ್ಕಮಗಳೂರು ನಗರದ ಕುವೆಂಪು ಕಲಾ ಮಂದಿರದಲ್ಲಿ ಕೊಡವೂರು ನೃತ್ಯ ನಿಕೇತನದ ಕಲಾವಿದರಿಂದ ನಡೆದ ನರಸಿಂಹ ನೃತ್ಯ ರೂಪಕ ನೋಡುಗರ ಮನಗೆದ್ದಿತು. ಶ್ರೀಮನ್ನಾರಾಯಣ ನರಸಿಂಹನಾಗಿ ಅವತರಿಸಿ ರಾಕ್ಷಸ ರಾಜನಾದ ಹಿರಣ್ಯಕಶ್ಯಪುವನ್ನು ಸಂಹರಿಸಿ ಲೋಕ ಕಲ್ಯಾಣ ಮಾಡುವ. ಮಹಾವಿಷ್ಣುವಿನ ದಶಾವತಾರಗಳಲ್ಲಿ ಒಂದಾದ ನರಸಿಂಹಾವತಾರದ ಕಥನವನ್ನು ಕಲಾವಿದರು ಮನೋಜ್ಞ ಅಭಿನಯದ ಮೂಲಕ ಸಭಿಕರೆದುರು ಸಮರ್ಥವಾಗಿ ತೆರೆದಿಟ್ಟರು.
ಕಲಾವಿದರು ಮನೋಜ್ಞ ಅಭಿನಯಕ್ಕೆ ತಲೆದೂಗಿದ ಸಭಿಕರು:
ಡಾ.ಶ್ರೀಪಾದ ಭಟ್ಟರ ಸಮರ್ಥವಾದ ನಿರ್ದೇಶನ ಕಲಾವಿದರ ವಸ್ತ್ರಾಲಂಕಾರ, ಮಿಂಚಿನ ಸಂಚಾರ, ನೃತ್ಯ, ಅಭಿನಯ ಸಭಿಕರು ಆಸನದಿಂದ ಮೇಲೇಳದಂತೆ ವೇದಿಕೆಯ ಮೇಲೆ ನೆಟ್ಟ ನೋಟವನ್ನು ಅತ್ತಿತ್ತ ಹೊರಳಿಸದಂತೆ ಮಾಡಿ ಎರಡು ಗಂಟೆಗೂ ಅಧಿಕ ಕಾಲ ಅವರನ್ನು ಹಿಡಿದಿಟ್ಟವು. ಎರಡು ಗಂಟೆಗಳ ಕಾಲ ನಿರಂತರ ಸಂಗೀತ, ಗಾಯನ, ನೃತ್ಯದ ರಸದೌತಣ ಉಣಬಡಿಸಿದ ನೃತ್ಯ ರೂಪಕದಲ್ಲಿ ಪ್ರತಿ ದೃಶ್ಯವೂ ನೆನಪಿನಲ್ಲಳಿಯುವಂತೆ ಕಟ್ಟಿ ಕೊಡುವಲ್ಲಿ ನಿರ್ದೇಶಕರು, ತಂತ್ರಜ್ಞರು, ಕಲಾವಿದರು ಸಾಂಘಿಕ ಪ್ರಯತ್ನ ಯಶಸ್ವಿಯಿತು.
ಪೂರಕ ಸಂಗೀತ, ಮುಖ್ಯ ಭೂಮಿಕೆಯಲ್ಲಿ ಪಾತ್ರ ನಿರ್ವಹಿಸಿದ ಸುಧೀರ್, ಕೊಡವೂರು, ಮಾನಸಿ ಸುಧೀರ್ರವರ ಮನೋಜ್ಞ ಅಭಿನಯ ಪ್ರೇಕ್ಷಕರನ್ನು ಹಿಡಿದಿಡುವಂತೆ ಮಾಡಿತ್ತು. ಅಲ್ಲಲ್ಲಿ ಅಗತ್ಯವೆನಿಸಿದೆಡೆ ಯಕ್ಷಗಾನ ನೃತ್ಯದ ಭಂಗಿಗಳನ್ನು ಬಳಸಿಕೊಳ್ಳುವ ಮೂಲಕ ಹಿರಣ್ಯಕಶ್ಯಪುವಿನ ಪಾತ್ರಕ್ಕೆ ರೌದ್ರತೆಯ ಸ್ಪರ್ಷತೆ ನೀಡುವ ಮೂಲಕ ಪಾತ್ರಕ್ಕೆ ಮತ್ತಷ್ಟು ಮೆರಗು ಹೆಚ್ಚಿಸಿದ್ದರು. ರೂಪಕದ ಪ್ರತಿ ಅಂಕದಲ್ಲಿಯೂ ಸಹ ನರ್ತಿಕಿಯರ ವೇಷ ಭೂಷಣಗಳ ಬಳಕೆ ರಂಗಪರಿಕರಗಳ ಸಮಯೋಚಿತ ಬಳಕೆ, ಬಹುಅಂಧದ ವಸ್ರ್ತವಿನ್ಯಾಸ, ನೆರಳು ಬೆಳಕಿನಾಟ ಕಲಾಸಕ್ತರ ಮನಸೂರೆಗೊಂಡಿತ್ತು.
Panchang: ಇಂದು ಗಾಣಗಾಪುರ ನರಸಿಂಹ ಸರಸ್ವತಿ ಸ್ವಾಮಿಗಳ ಜಯಂತಿ
ಮಹಿಳಾ ಕಲಾವಿದರಿಂದಲೇ ನಡೆದ ನೃತ್ಯರೂಪಕ:
ಹಿರಣ್ಯಕಶ್ಯಪುವಿನ ಪಾತ್ರವೊಂದನ್ನು ಹೊರತುಪಡಿಸಿ ಮಹಿಳಾ ಕಲಾವಿದರಿಂದಲೇ ನಡೆದ ಇಡೀ ನೃತ್ಯರೂಪಕ ಬಹಳ ವರ್ಷಗಳ ಹಿಂದೆ ಪ್ರದರ್ಶನಗೊಳ್ಳುತ್ತಿದ್ದ ಖ್ಯಾತ ಪ್ರಭಾತ್ ಕಲಾವಿದರ ನೃತ್ಯರೂಪಕವನ್ನು ನೆನಪಿಸಿತು.ಕಯಾದು ಪಾತ್ರದಲ್ಲಿ ಗಾಯಕಿ, ಚಲನಚಿತ್ರ ನಟಿ ಮಾನಸಿ ಸುಧೀರ್ ಮತ್ತು ಹಿರಣ್ಯಕಶ್ಯಪುವಿನ ಪಾತ್ರದಲ್ಲಿ ವಿದ್ವಾನ್ ಸುಧೀರ್ ಅವರ ಅಭಿನಯ ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಯಿತು.ಇದೇ ವೇಳೆ ಗಾಯಕ ಮಲ್ಲಿಗೆ ಸುಧೀರ್ ತಂಡದಿಂದ ಸಿ.ಅಶ್ವಥ್ ಅವರು ಹಾಡಿರುವ ಗೀತೆಗಳ ಗಾಯನ ನಡೆಯಿತು.
Sutradhari Song ಚಂದನ್ ಶೆಟ್ಟಿ ಜತೆ ಸಂಜನಾ ಆನಂದ್ ನೃತ್ಯ!
ನೃತ್ಯರೂಪಕವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಸಮಾಜದಲ್ಲಿ ಸದಭಿರುಚಿಯನ್ನು ಬೆಳೆಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು ಎಂದು ಹೇಳಿದರು. ಚಿತ್ರನಟಿ ಮಾನಸಿ ಸುಧೀರ್ ಮತ್ತು ವಿದ್ವಾನ್ ಸುಧೀರ್ ಅವರಿಗೆ ಮಲ್ಲಿಗೆ ಪುರಸ್ಕಾರ ನೀಡಿ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಕಲಾವಿದರಿಂದ ಸಾರ್ವಜನಿಕರೊಂದಿಗೆ ಸಂವಾದ ನಡೆಯಿತು. ಮಲ್ಲಿಗೆ ಸುಗಮ ಸಂಗೀತ ಟ್ರಸ್ಟ್ನ ಮಲ್ಲಿಗೆ ಸುಧೀರ್, ಶಾಂತಾ ಸುಧೀರ್, ಅಭಿ ಮಲ್ಲಿಗೆ, ಮಲ್ಲಿಗೆ ಬೀರೂರು ಬಳಗದ ಸ್ವರ್ಣಾ ಗುರುನಾಥ್, ಮಂಜುಳಾ ಮಹೇಶ್ ಉಪಸ್ಥಿತರಿದ್ದರು.