ಕಾರ್ತಿಕ ಮಾಸದ ನಂತರ ಬರುವ ಮಾರ್ಗಶಿರ ಮಾಸವು ಅತ್ಯಂತ ಪವಿತ್ರವಾದ ಮಾಸವಾಗಿದೆ. ಈ ಮಾಸದಲ್ಲಿ ಬರುವ ಶುಕ್ಲಪಕ್ಷದ ಏಕಾದಶಿಯನ್ನು ವೈಕುಂಠ ಏಕಾದಶಿ ಎಂದು ಕರೆಯಲಾಗುತ್ತದೆ. ಈ ಏಕಾದಶಿಯನ್ನು ಕೆಲವು ಕಡೆ ಮೋಕ್ಷದಾ ಏಕಾದಶಿ ಎಂದು ಸಹ ಕರೆಯುತ್ತಾರೆ. ಈ ವರ್ಷ ವೈಕುಂಠ ಏಕಾದಶಿಯು ಡಿಸೆಂಬರ್ 25ರಂದು ಬಂದಿದೆ. ಮಾರ್ಗಶಿರ ಮಾಸದ ಈ ದಿನದಂದು ಮಹಾವಿಷ್ಣುವನ್ನು ಪೂಜಿಸಿ, ಆರಾಧಿಸಲಾಗುತ್ತದೆ. ಅಷ್ಟೇ ಅಲ್ಲದೆ ಏಕಾದಶಿ ವ್ರತದ ಕಥೆಯನ್ನು ಸಹ ಕೇಳಲಾಗುತ್ತದೆ.

ಮಹಾಭಾರತದ ಯುದ್ಧ ಪ್ರಾರಂಭವಾಗುವ ಮುನ್ನ ಶ್ರೀಕೃಷ್ಣನು ಅರ್ಜುನನಿಗೆ ಶ್ರೀಮದ್ ಭಗವದ್ಗೀತೆಯ ಉಪದೇಶವನ್ನು ನೀಡಿದ್ದು ಇದೇ ದಿನ ಎಂಬ ನಂಬಿಕೆ ಇದೆ. ಹಾಗಾಗಿಯೆ ಈ ದಿನ ಶ್ರೀಕೃಷ್ಣನನ್ನು ಮತ್ತು ಭಗವದ್ಗೀತೆಯನ್ನು ಪೂಜಿಸಿ, ಪಠಿಸಲಾಗುತ್ತದೆ. 

ಇದನ್ನು ಓದಿ: ಮಂಗಳ ಗ್ರಹದ ರಾಶಿ ಪರಿವರ್ತನೆ ಈ ರಾಶಿಯವರಿಗೆ ಧನಲಾಭ..! 

ವೈಕುಂಠ ಏಕಾದಶಿ (ಮೋಕ್ಷದಾ ಏಕಾದಶಿ)
ವೈಕುಂಠ ಏಕಾದಶಿಯನ್ನು ಆಚರಿಸುವುದು ಅತ್ಯಂತ ಪುಣ್ಯದ ಕೆಲಸವಾಗಿದೆ. ಈ ದಿನ ಶ್ರೀ ಮಹಾವಿಷ್ಣುವಿಗೆ ಧೂಪ, ದೀಪ, ನೈವೇದ್ಯಗಳನ್ನು ಸಮರ್ಪಿಸಿ ಆರಾಧಿಸುವುದರಿಂದ ಇಷ್ಟಾರ್ಥಗಳು ಸಿದ್ಧಿಸಿ, ನೆಮ್ಮದಿ ಲಭಿಸಲಿದೆ. ಅಷ್ಟೇ ಅಲ್ಲದೆ ಬ್ರಾಹ್ಮಣರಿಗೆ ಈ ಭೋಜನವನ್ನು ನೀಡಿ, ಆಶೀರ್ವಾದವನ್ನು ಪಡೆಯುವುದರಿಂದ ವಿಶೇಷ ಫಲಪ್ರಾಪ್ತಿಯಾಗುತ್ತದೆ. ಹಾಗೆಯೆ ಈ ದಿನ ಕೆಟ್ಟ ಕೆಲಸಗಳನ್ನು ಮಾಡಬಾರದು, ವ್ರತ ಪಾಲನೆಗೆ ಯಾವುದೆ ಆಡಚಣೆಯಾಗದಂತೆ ನೋಡಿಕೊಂಡು, ವ್ರತ ಆಚರಿಸಿದರೆ ಫಲಪ್ರಾಪ್ತಿ ಸಾಧ್ಯವಿದೆ ಎಂದು ಹೇಳಲಾಗುತ್ತದೆ. ವೈಕುಂಠ ಏಕಾದಶಿಯ ಪೌರಾಣಿಕ ವ್ರತ ಕಥೆಯನ್ನು ಓದುವುದರಿಂದ ಅಥವಾ ಕೇಳುವುದರಿಂದ ವಿಶೇಷ ಯಜ್ಞ ಮಾಡಿದ ಫಲ ದೊರೆಯಲಿದೆ.

ಇದನ್ನು ಓದಿ: ಶನಿ ಸಾಡೇಸಾತ್‌ನಿಂದ ಸಂಕಷ್ಟಕ್ಕೀಡಾಗಿದ್ದರೆ ಹೀಗೆ ಮಾಡಿ.

ವೈಕುಂಠ ಏಕಾದಶಿಯ ವ್ರತ ಕಥೆ ಹೀಗಿದೆ…
ಗೋಕುಲ ಎಂಬ ನಗರದಲ್ಲಿ ವೈಖಾನಸ ಎಂಬ ರಾಜನು ರಾಜ್ಯವನ್ನಾಳುತ್ತಿದ್ದನು. ಆತನಲ್ಲಿ ನಾಲ್ಕೂ ವೇದಗಳನ್ನು ತಿಳಿದ ಜ್ಞಾನಿ ಬ್ರಾಹ್ಮಣರು ಇದ್ದರು. ರಾಜನು ಪ್ರಜೆಗಳನ್ನು ಸ್ವಂತ ಮಕ್ಕಳಂತೆ ನೋಡುತ್ತಿದ್ದನು. ಅವರ  ಕಷ್ಟಗಳಿಗೆ ಸ್ಪಂದಿಸುತ್ತಿದ್ದನು. ಒಂದು ದಿನ ರಾತ್ರಿ ಸ್ವಪ್ನದಲ್ಲಿ ತಂದೆಯು ನರಕದಲ್ಲಿರುವುದನ್ನು ಕಾಣುತ್ತಾನೆ. ಆ ಕನಸಿನಿಂದ ರಾಜನು ಆತಂಕಕ್ಕೊಳಗಾಗುತ್ತಾನೆ.ಮಾರನೇ ದಿನ ಬೆಳಗ್ಗೆ ರಾಜನು ವಿದ್ವಾನ್ ಬ್ರಾಹ್ಮಣರನ್ನು ಕಂಡು ತನ್ನ ಸ್ವಪ್ನದ ಬಗ್ಗೆ ತಿಳಿಸುತ್ತಾನೆ. ತನ್ನ ತಂದೆಯು ನರಕದಲ್ಲಿ ಅತ್ಯಂತ ಕಷ್ಟವನ್ನು ಅನುಭವಿಸುವುದನ್ನು ಕಂಡೆ. ಅಷ್ಟೇ ಅಲ್ಲದೆ “ಮಗನೆ ನನ್ನನ್ನು ಈ ಕಷ್ಟದಿಂದ ಪಾರು ಮಾಡೆಂದು ಹೇಳಿದರು” ಎಂದು ಹೇಳುತ್ತಾ ದುಃಖಿತನಾಗುತ್ತಾನೆ. ಕನಸಿನ ಬಗ್ಗೆ ಚಿಂತಿಸಿ ಸೋತಿದ್ದೇನೆ, ರಾಜ್ಯ, ಧನ, ಮಕ್ಕಳು, ಮಡದಿ, ಸೈನ್ಯ, ಆನೆ, ಕುದುರೆ ಯಾವುದರ ಮೇಲೂ ಆಸಕ್ತಿ ಇಲ್ಲದಂತಾಗಿದೆ. ಈ ದುಃಖದಿಂದ ಪಾರಾಗುವುದು ಹೇಗೆಂದು ಬ್ರಾಹ್ಮಣರಲ್ಲಿ ಕೇಳಿಕೊಳ್ಳುತ್ತಾನೆ.

ಯಜ್ಞ, ಯಾಗ, ತಪಸ್ಸು, ವ್ರತ, ಪೂಜೆ ಇವಾವುದನ್ನು ಮಾಡಿದರೆ ನರಕದಿಂದ ನನ್ನ ತಂದೆಗೆ ಮುಕ್ತಿ ದೊರಕುತ್ತದೆ ಎಂದು ಕೇಳುತ್ತಾನೆ. ತಂದೆ-ತಾಯಿಯ ಕಷ್ಟವನ್ನು ಪರಿಹರಿಸದಿರುವ ಮಗನ ಜೀವನ ವ್ಯರ್ಥವೆಂದೇ ಅರ್ಥ. ಹಾಗಾಗಿ ನನ್ನ ತಂದೆಗೆ ಮುಕ್ತಿ ಸಿಗಲು ನಾನೇನು ಮಾಡಬೇಕೆಂದು ವಿದ್ವಾನರಲ್ಲಿ ಪ್ರಶ್ನಿಸುತ್ತಾನೆ.ಅದಕ್ಕೆ ಬ್ರಾಹ್ಮಣರು ಉತ್ತರಿಸುತ್ತಾ, ಅಲ್ಲಿಯೇ ಹತ್ತಿರದಲ್ಲಿ ಭೂತ, ಭವಿಷ್ಯ, ವರ್ತಮಾನಗಳೆಲ್ಲವನ್ನು ತಿಳಿದು ಹೇಳುವ ಜ್ಞಾನಿಗಳಾದ ಪರ್ವತ ಋಷಿಗಳ ಆಶ್ರಮಕ್ಕೆ ತೆರಳಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಹೇಳುತ್ತಾರೆ. ಇದನ್ನು ತಿಳಿದ ರಾಜ ಪರ್ವತ ಋಷಿಯ ಆಶ್ರಮಕ್ಕೆ ತೆರಳಿ ನಡೆದ ವಿಷಯವನ್ನು ವಿವರಿಸಿ ಪರಿಹಾರ ಸೂಚಿಸುವಂತೆ ಕೇಳಿಕೊಳ್ಳುತ್ತಾನೆ.

ಇದನ್ನು ಓದಿ: ಏಕಮುಖಿ ರುದ್ರಾಕ್ಷಿ ಧರಿಸುವುದರಿಂದ ಆಗುವ ಲಾಭಗಳೇನು ಗೊತ್ತಾ..‍! 

ರಾಜನ ತಂದೆಯ ಕಾಲದಲ್ಲಿ ನಡೆದದ್ದೆಲ್ಲವನ್ನೂ ತಪೋ ಶಕ್ತಿಯಿಂದ ತಿಳಿದುಕೊಳ್ಳುವ ಪರ್ವತ ಋಷಿಯು, “ನಿನ್ನ ತಂದೆಯು ಪೂರ್ವ ಜನ್ಮದಲ್ಲಿ ಅನೇಕ ತಪ್ಪುಗಳನ್ನು, ಕೆಟ್ಟ ಕೆಲಸಗಳನ್ನು ಮಾಡಿದುದರ ಪರಿಣಾಮವೇ ಇದಾಗಿದೆ” ಎಂದು ಹೇಳುತ್ತಾರೆ. ಇದನ್ನು ಕೇಳಿದ ರಾಜನು ಪರಿಹಾರವನ್ನು ತಿಳಿಸಬೇಕಾಗಿ ಋಷಿಯ ಬಳಿ ಕೇಳಿಕೊಳ್ಳುತ್ತಾನೆ.
ಮಾರ್ಗಶಿರ ಮಾಸದ ಏಕಾದಶಿಯಂದು ತಂದೆಯ ಮುಕ್ತಿಗಾಗಿ ಉಪವಾಸ ವ್ರತವನ್ನು ಮಾಡಬೇಕೆಂದು ತಿಳಿಸುತ್ತಾರೆ. ಇದರ ಪುಣ್ಯದ ಫಲವಾಗಿ ತಂದೆಗೆ ನರಕದಿಂದ ಮುಕ್ತಿ ಸಿಗುತ್ತದೆಂದು ಹೇಳುತ್ತಾರೆ. ಋಷಿಯ ಮಾತಿನಂತೆ ರಾಜನು ಕುಟುಂಬ ಸಮೇತನಾಗಿ ವೈಕುಂಠ ಏಕಾದಶಿ ವ್ರತವನ್ನು ಮಾಡುತ್ತಾನೆ. ವ್ರತದ ಫಲವಾಗಿ ತಂದೆಗೆ ನರಕದಿಂದ ಮುಕ್ತಿ ಸಿಗುತ್ತದೆ. ಹಾಗಾಗಿ ಮಾರ್ಗಶಿರ ಮಾಸದ ಶುಕ್ಲಪಕ್ಷ ಏಕಾದಶಿಯ ವ್ರತವನ್ನು ಮಾಡುವವರ ಸರ್ವ ಪಾಪಗಳು ನಷ್ಟವಾಗುತ್ತವೆ.