ಬುಧವಾರ ಗಣೇಶ ಮತ್ತು ಬುಧ ಗ್ರಹಕ್ಕೆ ಮೀಸಲು. ಈ ದಿನ ಬೂಟು, ಚರ್ಮದ ವಸ್ತು, ಹಾಲಿನ ಉತ್ಪನ್ನಗಳು, ಹಸಿರು ಬಟ್ಟೆ, ಸೌಂದರ್ಯವರ್ಧಕಗಳು, ಆಭರಣ, ಟೂತ್‌ಬ್ರಷ್/ಪೇಸ್ಟ್ ಮತ್ತು ಹಸಿರು ಆಹಾರ ಪದಾರ್ಥಗಳನ್ನು ಖರೀದಿಸಬಾರದು. ಇವು ಆರ್ಥಿಕ ನಷ್ಟ, ವೃತ್ತಿ ಅಡೆತಡೆ, ಸಂಬಂಧಗಳಲ್ಲಿ ಸಮಸ್ಯೆ, ಮಾತಿನ ದೋಷ ಮತ್ತು ಮಾನಸಿಕ ಅಶಾಂತಿಗೆ ಕಾರಣವಾಗಬಹುದು. ಪುಸ್ತಕ ಮತ್ತು ಚಿನ್ನ-ಬೆಳ್ಳಿ ಖರೀದಿ ಶುಭ.

ಅಗತ್ಯವಿದೆ ಎಂದಾಗ, ಶಾಪಿಂಗ್ ಮೂಡ್ ಬಂದಾಗ ನಾವು ವಸ್ತುಗಳನ್ನು ಖರೀದಿ ಮಾಡ್ತೇವೆ. ವಾರ, ದಿನ ನೋಡಿ ವಸ್ತುಗಳನ್ನು ಖರೀದಿ ಮಾಡೋರ ಸಂಖ್ಯೆ ಬಹಳ ಅಪರೂಪ. ನಾವು ಖುಷಿ ಖುಷಿಯಾಗಿ ಮನೆಗೆ ತಂದ ವಸ್ತುಗಳೇ ಅನೇಕ ಬಾರಿ ನಮ್ಮ ಅದೃಷ್ಟಕ್ಕೆ ಅಡ್ಡಿಯಾಗುತ್ವೆ. ಅದಕ್ಕೆ ಕಾರಣ ಆ ವಸ್ತು ಮಾತ್ರವಲ್ಲ, ಆ ವಸ್ತು ಖರೀದಿ ಮಾಡಿದ ದಿನ ಕೂಡ ಹೌದು. ವಾಸ್ತು ಹಾಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ವಾರದ ಏಳೂ ದಿನಕ್ಕೆ ಮಹತ್ವದ ಸ್ಥಾನ ನೀಡಲಾಗಿದೆ. ಒಂದೊಂದು ದೇವರಿಗೂ ಒಂದೊಂದು ವಾರ ಮೀಸಲಿದೆ. ವಾರಕ್ಕೆ ತಕ್ಕಂತೆ ನಾವು ವಸ್ತುಗಳನ್ನು ಖರೀದಿ ಮಾಡ್ಬಹುದು. ಅದಕ್ಕೆ ವಿರುದ್ಧವಾಗಿ ವಸ್ತುಗಳನ್ನು ನಾವು ಖರೀದಿ ಮಾಡಿದ್ರೆ ಸಮಸ್ಯೆಯನ್ನು ಮೈಮೇಲೆ ಎಳೆದುಕೊಂಡಂತೆ ಆಗುತ್ತೆ. ಬುಧವಾರ (Wednesday)ವನ್ನು ಗಣೇಶ (Ganesh) ಮತ್ತು ಬುಧ ಗ್ರಹದ ದಿನ ಎಂದು ನಂಬಲಾಗಿದೆ. ಈ ದಿನದಂದು ಕೆಲವು ವಸ್ತುಗಳನ್ನು ಖರೀದಿಸ್ಬಾರದು. ಅಪ್ಪಿತಪ್ಪಿ ವಸ್ತುಗಳನ್ನು ಖರೀದಿ ಮಾಡಿದ್ರೆ ಆರ್ಥಿಕ ನಷ್ಟ ಅಥವಾ ಇತರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಬುಧವಾರ ಯಾವ ವಸ್ತುಗಳನ್ನು ಖರೀದಿಸಬಾರದು ಎಂಬ ಮಾಹಿತಿ ಇಲ್ಲಿದೆ.

ಬುಧವಾರ ಈ ವಸ್ತು ಖರೀದಿ ಮಾಡ್ಬೇಡಿ :

ಬೂಟು – ಚರ್ಮದ ವಸ್ತು : ಬುಧವಾರ ಹೊಸ ಬೂಟುಗಳು ಅಥವಾ ಚರ್ಮದಿಂದ ಮಾಡಿದ ಯಾವುದೇ ವಸ್ತುವನ್ನು ಖರೀದಿಸುವುದು ತುಂಬಾ ಅಶುಭವೆಂದು ಪರಿಗಣಿಸಲಾಗಿದೆ. ಇದು ವೃತ್ತಿ ಮತ್ತು ವ್ಯವಹಾರದಲ್ಲಿ ಅಡೆತಡೆಯುಂಟು ಮಾಡುತ್ತದೆ. ಆರ್ಥಿಕ ನಷ್ಟಕ್ಕೂ ಕಾರಣವಾಗುತ್ತದೆ.

ಡೈರಿ ಉತ್ಪನ್ನ : ಕೆಲವು ನಂಬಿಕೆಗಳ ಪ್ರಕಾರ, ಬುಧವಾರದಂದು ಹಾಲು ಅಥವಾ ಹಾಲಿನ ಉತ್ಪನ್ನ ಖರೀದಿಸುವುದು ಅಥವಾ ದಾನ ಮಾಡುವುದು ನಿಷಿದ್ಧವೆಂದು ಪರಿಗಣಿಸಲಾಗುತ್ತದೆ. ಅಗತ್ಯವಿದ್ದರೆ, ಇವುಗಳನ್ನು ಮನೆಯಲ್ಲಿಯೇ ತಯಾರಿಸಿ. ಇದು ಮನೆಯಲ್ಲಿ ಮಾನಸಿಕ ಅಶಾಂತಿ ಮತ್ತು ಅಪಶ್ರುತಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ಬುಧ ಗ್ರಹವು ದುರ್ಬಲವಾಗಿದ್ದರೆ ವ್ಯವಹಾರ, ಉದ್ಯೋಗ, ಪ್ರಗತಿ, ಯಶಸ್ಸು ಇತ್ಯಾದಿಗಳಲ್ಲಿ ಅಡೆತಡೆಗಳು ಉಂಟಾಗುತ್ತವೆ. ಮಾನಸಿಕ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತದೆ. 

ಹಸಿರು ಬಟ್ಟೆ ಖರೀದಿ : ಬುಧವಾರ ಹಸಿರು ಬಟ್ಟೆ ಧರಿಸುವುದು ಶುಭವೆಂದು ಪರಿಗಣಿಸಲಾಗುತ್ತದೆ. ಆದ್ರೆ ವಾಸ್ತು ಪ್ರಕಾರ, ಈ ದಿನ ಹಸಿರು ಬಟ್ಟೆಗಳನ್ನು ಖರೀದಿಸಬಾರದು. ಧರಿಸುವುದು ಶುಭವಾದ್ರೂ ಖರೀದಿ ಅಶುಭ. ಇದ್ರಿಂದ ಅನಗತ್ಯ ಖರ್ಚು ಹೆಚ್ಚಾಗುತ್ತದೆ. 

ಸೌಂದರ್ಯವರ್ಧಕಗಳು ಮತ್ತು ಆಭರಣಗಳು : ಮಹಿಳೆಯರ ಅಚ್ಚುಮೆಚ್ಚಿನ ವಸ್ತು ಸೌಂದರ್ಯವರ್ಧಕ. ಬುಧವಾರದಂದು ಮಹಿಳೆಯರು ಸೌಂದರ್ಯವರ್ಧಕಗಳು ಮತ್ತು ಆಭರಣ ಖರೀದಿಸಬಾರದು. ಶಾಸ್ತ್ರಗಳಲ್ಲಿ ಈ ದಿನ ಸೌಂದರ್ಯ ವರ್ಧಕ ಖರೀದಿಯನ್ನು ನಿಷೇಧಿಸಲಾಗಿದೆ. ಇದು ಸಂಬಂಧಗಳನ್ನು ಹದಗೆಡಿಸುತ್ತದೆ. ಹಣ ವ್ಯರ್ಥವಾಗುತ್ತದೆ ಎಂದು ನಂಬಲಾಗಿದೆ. 

ಟೂತ್ ಬ್ರಷ್ ಅಥವಾ ಪೇಸ್ಟ್ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬುಧವಾರ ಹಲ್ಲುಜ್ಜುವ ಬ್ರಷ್ ಅಥವಾ ಟೂತ್ಪೇಸ್ಟ್ ಖರೀದಿಸುವುದನ್ನು ಸಹ ನಿಷೇಧಿಸಲಾಗಿದೆ. ನೀವು ಬುಧವಾರ ಬ್ರಷ್ ಅಥವಾ ಪೇಸ್ಟ್ ಖರೀದಿ ಮಾಡಿದ್ರೆ ನಿಮಗೆ ಮಾತಿನ ದೋಷ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹಲ್ಲುಗಳಿಗೆ ಸಂಬಂಧಿಸಿದ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ನಂಬಲಾಗಿದೆ. 

ಹಸಿರು ಆಹಾರ ಪದಾರ್ಥ : ಜ್ಯೋತಿಷ್ಯದ ಪ್ರಕಾರ, ಹಸಿರು ಕೊತ್ತಂಬರಿ, ಹಸಿ ಮೆಣಸಿನಕಾಯಿ, ಹೆಸರುಕಾಳು, ಪಾಲಕ್, ಪೇರಲೆ ಹಣ್ಣು, ಪಪ್ಪಾಯಿ ಯಾವುದನ್ನೂ ಖರೀದಿ ಮಾಡ್ಬೇಡಿ. ಬುಧವಾರದಂದು ಇವುಗಳನ್ನು ಖರೀದಿಸಿದ್ರೆ ಮಾನಸಿಕ ಸಮಸ್ಯೆ ಮತ್ತಷ್ಟು ಹದಗೆಡಬಹುದು.

ಬುಧವಾರ ಏನು ಖರೀದಿಸುವುದು ಶುಭ? : ಬುಧವಾರ ನೀವು ಪುಸ್ತಕ ಸೇರಿದಂತೆ ಓದುವ ಸಾಮಗ್ರಿಗಳನ್ನು ಖರೀದಿಸಬೇಕು. ಚಿನ್ನ, ಬೆಳ್ಳಿ, ಆಭರಣ ಇತ್ಯಾದಿಗಳನ್ನು ಖರೀದಿಸಬಹುದು.