Asianet Suvarna News Asianet Suvarna News

ಜಗನ್ಮೋಹಿನಿ ಅಲಂಕಾರದಲ್ಲಿ ಕಂಗೊಳಿಸಿದ ಶಾರದೆ, ದುರ್ಗೆಯಾದ ಅನ್ನಪೂರ್ಣೇಶ್ವರಿ

ಶೃಂಗೇರಿ, ಹೊರನಾಡಿನಲ್ಲಿ ನವರಾತ್ರಿ ಸಂಭ್ರಮ 
ಆರನೇ ದಿನ ಹೊರನಾಡಿನ ಅನ್ನಪೂಣೇಶ್ವರಿಗೆ ಮಯೂರಾ ರೂಢಾ ಅಲಂಕಾರ 
ಶೃಂಗೇರಿಯ ಶಾರದೆಯು ಜಗನ್ಮೋಹಿನಿ ಅಲಂಕಾರದಲ್ಲಿ ಭಕ್ತರಿಗೆ ದರ್ಶನ 
ಅನ್ನಪೂಣೇಶ್ವರಿಗೆ ದುರ್ಗೆ ಅಲಂಕಾರ 

Navratri Celebration day 6 at Sringeri and Horanadu skr
Author
First Published Oct 1, 2022, 5:24 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಆದಿಗುರು ಶಂಕರಾಚಾರ್ಯರಿಂದ ಸ್ಥಾಪಿತಗೊಂಡಿರುವ ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದಲ್ಲಿ ಶರನ್ನವರಾತ್ರಿ ಉತ್ಸವ ಹಾಗೂ ಧಾರ್ಮಿಕ ಕಾರ್ಯಗಳು  ನಡೆಯುತ್ತಿದ್ದು, ದೇವಿಯ ದರ್ಶನವನ್ನು ಪಡೆಯಲು ಭಕ್ತರು ವಿವಿಧೆಡೆಗಳಿಂದ ಗಿರಿಶಿಖರಗಳ ತಪ್ಪಲಿನಲ್ಲಿರುವ ಶೃಂಗೇರಿಗೆ ಆಗಮಿಸುತ್ತಿದ್ದಾರೆ. ಇಂದು ದೇವಿ ಶಾರದೆಯು ಜಗನ್ಮೋಹಿನಿ ಅಲಂಕಾರದಲ್ಲಿ ಅಲಂಕೃತಗೊಂಡು ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದಾಳೆ. ರತ್ನಖಚಿತ ಆಭರಣಗಳನ್ನು ದೇವಿಗೆ ಧರಿಸಲಾಗಿದ್ದು, ಕೈಯಲ್ಲಿ ಸ್ವರ್ಣದ ಕಳಶ ಹಿಡಿದು ದೇವಿಯು ನಾಟ್ಯ ಭಂಗಿಯಲ್ಲಿ ನಿಂತು ಭಕ್ತರನ್ನು ಅನುಗ್ರಹಿಸುತ್ತಿದ್ದು ಆಭರಣಗಳಿಂದ ಕಂಗೊಳಿಸುತ್ತಿರುವ ದೇವಿಯನ್ನು ಕಂಡು ಭಕ್ತಿ ಪರವಶರಾಗಿ, ಮೈಮರೆತು ಭಕ್ತರು ಪ್ರಾರ್ಥನೆಯಲ್ಲಿ ತೊಡಗಿದ್ದಾರೆ. ಶ್ರೀ ಮಠದ ಆವರಣದಲ್ಲಿ ಪ್ರತಿದಿನ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು ಈ ಎಲ್ಲಾ ಕಾರ್ಯಗಳಲ್ಲಿ ಭಕ್ತರು  ಭಾಗಿಯಾಗುತ್ತಿದ್ದಾರೆ. 

ಮಳೆಯ ಮಧ್ಯೆಯೂ ನಡೆದ ಸಂಜೆಯ ಬೀದಿ ಉತ್ಸವ
ನಿನ್ನೆ ಸಂಜೆ ಬೀದಿ ಉತ್ಸವ ನಡೆಯುವ ವೇಳೆ, ಮಳೆ ಬಂದರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಭಕ್ತಾದಿಗಳು ಮಳೆಯನ್ನೂ ಲೆಕ್ಕಿಸದೇ ಭಜನೆ ಮಾಡುತ್ತಾ, ಉತ್ಸವದಲ್ಲಿ ಪಾಲ್ಗೊಂಡರು. ಇಂದೂ ಕೂಡ ದೇವಿಯ ರಾಜಬೀದಿ ಉತ್ಸವ ನಡೆಯಲಿದ್ದು, ಪಟ್ಟಣದ ಭಾರತೀ ಬೀದಿ ಹಾಗೂ ಹರಿಹರಬೀದಿ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದ್ದು ಶೃಂಗೇರಿಯ ಗಾಂಧಿ ಮೈದಾನದಲ್ಲಿ ಹಾಕಿರುವ  ಎಕ್ಸಿಬಿಷನ್  ಜನರನ್ನು ಆಕರ್ಷಿಸುತ್ತಿದೆ.

Astrology Tips: ಕಾಲಿಗೆ ಬಣ್ಣ ಹಚ್ಚುವಾಗ ಈ ವಿಷ್ಯ ನೆನಪಿಡಿ

ಅನ್ನಪೂಣೇಶ್ವರಿಗೆ ದುರ್ಗೆ ಅಲಂಕಾರ 
ನವರಾತ್ರಿಯ ಆರನೇ ದಿನವಾದ ಇಂದು  ಹೊರನಾಡಿನ ಮಾತೆ ಅನ್ನಪೂರ್ಣೇಶ್ವರಿ ದುರ್ಗೆಯ ಆರನೇ ಅಲಂಕಾರವಾದ ಮಯೂರಾರೂಢಾ ಕಾತ್ಯಾಯಿನೀ ಅಲಂಕಾರದೊಂದಿಗೆ ಕಂಗೊಳಿಸಿದಳು. ವಿವಿಧ ಹೂಗಳ ಅಲಂಕಾರ ಆಭರಣಗಳಿಂದ ಕಂಗೊಳಿಸಿದ ಅನ್ನಪೂರ್ಣೇಶ್ವರಿಯನ್ನು ಕಣ್ತುಂಬಿಸಲು ರಾಜ್ಯ ಹೊರ ರಾಜ್ಯಗಳಿಂದ ನೂರಾರು ಭಕ್ತರು ಬಂದು ಕಣ್ತುಂಬಿಸಿಕೊಂಡರು. ಕಷ್ಟ ಕಾಲಕ್ಕೆ ಹೇಳಿಕೊಂಡಿದ ಹರಕೆಗಳನ್ನು ಭಕ್ತರು ತೀರಿಸಿಕೊಂಡರು. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ  ಸಪ್ತಶತಿ ಪಾರಾಯಣ, ವೇದ ಪಾರಾಯಣ, ಸುಂದರಕಾಂಡ ಪಾರಾಯಣ, ಕುಂಕುಮಾರ್ಚನೆ ಮತ್ತು ಶ್ರೀ ಸರಸ್ವತಿ ಮೂಲಮಂತ್ರ ಹೋಮ ನಡೆಯಿತು. ಹೋಮದ ಪೂರ್ಣಾಹುತಿಯನ್ನು ಧರ್ಮಕರ್ತ ಡಾ|ಜಿ.ಭೀಮೇಶ್ವರ ಜೋಷಿ ದಂಪತಿಗಳು ನೆರವೇರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಜಿ.ಎಂ.ಸೌಮ್ಯ ಉಪಾಧ್ಯಾಯ ತಂಡ ಬೆಂಗಳೂರು ಇವರಿಂದ ದೇವರ ನಾಮ, ನೃತ್ಯ ವಿದ್ಯಾ ನಿಲಯ ಬೆಂಗಳೂರು ಇವರಿಂದ ಭರತನಾಟ್ಯ ನಡೆಯಿತು. ನಾಳೆ ಅಶ್ವರೂಢಾ ಗೌರೀ ಅಲಂಕಾರ ಪೂಜೆ, ಶ್ರೀ ವಾಗೀಶ್ವರೀ ಮೂಲಮಂತ್ರ ಹೋಮ ಮತ್ತು ಶ್ರೀ ಶಾರದಾ ಪೂಜೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಎಂ.ನಿಶಾಂತ್ ಮತ್ತು ತಂಡ ಬೆಂಗಳೂರು ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಸಂಜೆ ಶ್ರೀ ಮಹಾಗಣಪತಿ ಆರ್ಟ್ ಮತ್ತು ಕಲ್ಚರಲ್ ಫೌಂಡೇಷನ್ ಶ್ರೀ ಕ್ಷೇತ್ರ ಬೆಳಗುಂಡಿ ಮಠ ಉಡುಪಿ ಇವರಿಂದ ಯಕ್ಷಗಾನ ನಡೆಯಲಿದೆ.

Navratri 2022 Day 7: ಅಕ್ಷರಾಭ್ಯಾಸಕ್ಕೆ ಸುದಿನ ಸರಸ್ವತಿ ಪೂಜೆಯ ದಿನ..

Follow Us:
Download App:
  • android
  • ios