Asianet Suvarna News Asianet Suvarna News

Chikkamagaluru: ಕಾಫಿನಾಡು ಜಿಲ್ಲೆಯ ಹೊರನಾಡು, ಶೃಂಗೇರಿಯಲ್ಲಿ ನವರಾತ್ರಿ ಸಂಭ್ರಮ

ಕಾಫಿನಾಡು ಜಿಲ್ಲೆಯಲ್ಲಿ ನವರಾತ್ರಿ ಸಂಭ್ರಮ ಮನೆ ಮಾಡಿದೆ. ಅದರಲ್ಲೂ ಶೃಂಗೇರಿ, ಹೊರನಾಡಿನಲ್ಲಿ ನವರಾತ್ರಿಯ ಸಂಭ್ರಮ ಕಳೆಕಟ್ಟಿದ್ದು, ಕಳೆದ ಎರಡು ವರ್ಷ ಕೋರೋನಾದಿಂದ ಸರಳವಾಗಿ ನವರಾತ್ರಿಯನ್ನು ಆಚರಣೆ ಮಾಡಲಾಗಿತ್ತು.

Navaratri celebrations in Hornadu Sringeri at chikkamagaluru gvd
Author
First Published Oct 3, 2022, 8:27 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಅ.03): ಕಾಫಿನಾಡು ಜಿಲ್ಲೆಯಲ್ಲಿ ನವರಾತ್ರಿ ಸಂಭ್ರಮ ಮನೆ ಮಾಡಿದೆ. ಅದರಲ್ಲೂ ಶೃಂಗೇರಿ, ಹೊರನಾಡಿನಲ್ಲಿ ನವರಾತ್ರಿಯ ಸಂಭ್ರಮ ಕಳೆಕಟ್ಟಿದ್ದು, ಕಳೆದ ಎರಡು ವರ್ಷ ಕೋರೋನಾದಿಂದ ಸರಳವಾಗಿ ನವರಾತ್ರಿಯನ್ನು ಆಚರಣೆ ಮಾಡಲಾಗಿತ್ತು. ಈ ಭಾರೀ ಅದ್ದೂರಿಯಾಗಿ ನವರಾತ್ರಿಯನ್ನು ಆಚರಣೆ ಮಾಡಲಾಗಿದ್ದು, ಹೊರನಾಡು, ಶೃಂಗೇರಿಗೆ ಭಕ್ತ ಸಾಗರವೇ ಹರಿದು ಬರುತ್ತಿದೆ. 

ಅನ್ನಪೂರ್ಣೇಶ್ವರಿಗೆ ವೃಷಭಾರೂಢಾ ತ್ರಿಮೂರ್ತಿ ಅಲಂಕಾರ: ಶರನ್ನವರಾತ್ರಿ  ಮಹೋತ್ಸವದ ಅಂಗವಾಗಿ ಹೊರನಾಡಿನ ಮಾತೆ ಅನ್ನಪೂರ್ಣೇಶ್ವರಿ ಇಂದು ವೃಷಭಾರೂಢಾ ತ್ರಿಮೂರ್ತಿ ಅಲಂಕಾರದೊಂದಿಗೆ ಕಂಗೊಳಿಸಿದಳು. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಸಪ್ತಶತಿ ಪಾರಾಯಣ, ವೇದ ಪಾರಾಯಣ, ಸುಂದರಕಾಂಡ ಪಾರಾಯಣ, ಕುಂಕುಮಾರ್ಚನೆ ಮತ್ತು ಶ್ರೀ ದುರ್ಗಾ ಮೂಲಮಂತ್ರ ಹೋಮ ನಡೆಯಿತು. ಬೆಳಿಗ್ಗೆ ನಡೆದ ಪೂರ್ಣಾಹುತಿಯಲ್ಲಿ ದೇವಸ್ಥಾನದ ಧರ್ಮಕರ್ತ ಡಾ|ಜಿ.ಭೀಮೇಶ್ವರ ಜೋಷಿ ಪಾಲ್ಗೊಂಡರು. 

ಜಗನ್ಮೋಹಿನಿ ಅಲಂಕಾರದಲ್ಲಿ ಕಂಗೊಳಿಸಿದ ಶಾರದೆ, ದುರ್ಗೆಯಾದ ಅನ್ನಪೂರ್ಣೇಶ್ವರಿ

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀಮತಿ ತೇಜಸ್ವಿನಿ ಚರಣ್ ಮತ್ತು ತಂಡ ಬೆಂಗಳೂರು ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಸುಗಮ ಸಂಗೀತ, ರಾಮಚಂದ್ರಯ್ಯ ಮತ್ತು ಶಿಷ್ಯವೃಂದ ಬೆಂಗಳೂರು ಇವರಿಂದ ಭರತನಾಟ್ಯ ನಡೆಯಿತು. ನಾಳೆ ಅಕ್ಕೋಬರ್ 4ರಂದು ಸಿಂಹಾರೂಢಾ ಸಿದ್ಧಿಧಾತ್ರಿ ಅಲಂಕಾರ ಪೂಜೆ, ಶ್ರೀ ಚಂಡಿಕಾ ಮೂಲಮಂತ್ರ ಹೋಮ ಹಾಗೂ ಆಯುಧ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಚಿಂತಲಪಲ್ಲಿ ಶ್ರೀನಿವಾಸ್ ಬೆಂಗಳೂರು ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ದೇವರ ನಾಮ, ಸಂಜೆ ನಾದಲಹರಿ ತಂಡ ಸಂಡೂರು ಬಳ್ಳಾರಿ ಇವರಿಂದ ಸಂಗೀತ ಮತ್ತು ನೃತ್ಯ ಕಾರ್ಯಕ್ರಮ ನಡೆಯಲಿದೆ.

ಶಾರದಾದೇವಿಯು ರಾಜರಾಜೇಶ್ವರಿ ಅಲಂಕಾರದಲ್ಲಿ ಭಕ್ತರಿಗೆ ದರ್ಶನ: ಶೃಂಗೇರಿಯಲ್ಲಿ ಅದ್ಧೂರಿಯಾಗಿ ಶಾರದಾ ಶರನ್ನವರಾತ್ರಿ ಉತ್ಸವ ಜರುಗುತ್ತಿದ್ದು, ಇಂದು ಜಗನ್ಮಾತೆ ಶಾರದಾದೇವಿಯು ರಾಜರಾಜೇಶ್ವರಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದು, ಭಕ್ತರನ್ನು ಅನುಗ್ರಹಿಸುತ್ತಿದ್ದಾಳೆ. ನವರಾತ್ರಿಯ 9 ದಿನಗಳಲ್ಲಿ 9 ಅಲಂಕಾರಗಳಿಂದ ಕಂಗೊಳಿಸುವ ಮಾತೆಯು ಇಂದು ವಿಶೇಷವಾಗಿ ರಾಜರಾಜೇಶ್ವರಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದು, ಪಾಷ, ಅಂಕುಶ, ಪುಷ್ಪ ಬಾಣಗಳನ್ನು ಧರಿಸಿರುವ ಮಾತೆಯು ಲಕ್ಷ್ಮೀ, ಸರಸ್ವತಿಯರಿಂದ ಚಾಮರ ಸೇವೆಯನ್ನು ಪಡೆಯುತ್ತಿದ್ದಾಳೆ. ದೇವಿಯ ಪದತಲದಲ್ಲಿ ಕನ್ನಡಿ ಇರುವುದು ಸ್ವಚ್ಛಂದ ಮನಸ್ಸನ್ನು ಬಿಂಬಿಸುವಂಥದ್ದು ಹಾಗೂ ಈ ಅಲಂಕಾರದ ವೈಶಿಷ್ಟ್ಯವೇ ಆಗಿದೆ. 

ಕಾಫಿನಾಡಿನಲ್ಲಿ ನವರಾತ್ರಿ ಸಂಭ್ರಮ: ದುರ್ಗೆಯ ದರ್ಶನಕ್ಕೆ ಶೃಂಗೇರಿ, ಹೊರನಾಡಲ್ಲಿ ಭಕ್ತ ಸಾಗರ..!

ಶೃಂಗೇರಿಗೆ ಸುತ್ತಮುತ್ತಲಿನ ಊರುಗಳಿಂದ ರಾಜ್ಯದ ಹಲವೆಡೆಗಳಿಂದ ಜನರು ಆಗಮಿಸುತ್ತಿದ್ದು, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಾಗೂ ಶೃಂಗೇರಿಯ ಗಾಂಧಿ ಮೈದಾನದಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ. ಅನೇಕ ಸಂಖ್ಯೆಯಲ್ಲಿ ಮಠಕ್ಕೆ ಆಗಮಿಸುವ ಭಕ್ತರು ದೇವಿ ಹಾಗೂ ಜಗದ್ಗುರುಗಳ ದರ್ಶನ ಪಡೆದು ಶ್ರೀ ಮಠದ ಭೋಜನ ಶಾಲೆಯಲ್ಲಿ ಪ್ರಸಾದ ಸ್ವೀಕರಿಸಿ ಇಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಒಟ್ಟಾರೆ ಶೃಂಗೇರಿಯಲ್ಲಿ ಕೊರೋನಾ ನಂತರದ ಅವಧಿಯ ನವರಾತ್ರಿ ಉತ್ಸವ ಅತ್ಯಂತ ಅದ್ಧೂರಿಯಾಗಿ ನಡೆಯುತ್ತಿದ್ದು, ಹಬ್ಬದ ವಾತಾವರಣವೇ ನಿರ್ಮಾಣವಾಗಿದೆ. ವಿದ್ಯುತ್ ದೀಪಾಲಂಕಾರಗಳಿಂದ ಇಡೀ ಪಟ್ಟಣವು ಶೃಂಗಾರಗೊಂಡಿದ್ದು, ರಾತ್ರಿಯ ವೇಳೆ ರಾಜಗೋಪುರದ ದೀಪಾಲಂಕಾರವು ಆಕರ್ಷಣೀಯವಾಗಿ ಕಾಣಿಸುತ್ತಿದೆ.

Follow Us:
Download App:
  • android
  • ios