Asianet Suvarna News Asianet Suvarna News

Mysuru Dasara 2022: ಅದ್ದೂರಿ ದಸರಾ ಜಂಬೂಸವಾರಿಗೆ ಮೈಸೂರು ಸಜ್ಜು

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ‘ಜಂಬೂಸವಾರಿ’, ವಿಜಯದಶಮಿ ದಿನವಾದ ಬುಧವಾರ ಜರುಗಲಿದ್ದು, ಇದಕ್ಕಾಗಿ ಸಿದ್ಧತೆಗಳು ಭರದಿಂದ ಸಾಗಿವೆ. 

Mysuru Dasara 2022 Mysore Ready To Dasara Jambusavari gvd
Author
First Published Oct 4, 2022, 2:30 AM IST

ಅಂಶಿ ಪ್ರಸನ್ನಕುಮಾರ್‌

ಮೈಸೂರು (ಅ.04): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ‘ಜಂಬೂಸವಾರಿ’, ವಿಜಯದಶಮಿ ದಿನವಾದ ಬುಧವಾರ ಜರುಗಲಿದ್ದು, ಇದಕ್ಕಾಗಿ ಸಿದ್ಧತೆಗಳು ಭರದಿಂದ ಸಾಗಿವೆ. ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳ ಕಾಲ ಜಂಬೂಸವಾರಿ ಮೆರವಣಿಗೆ ಕೇವಲ ಅರಮನೆ ಆವರಣಕ್ಕೆ ಸೀಮಿತವಾಗಿತ್ತು. ಈ ಬಾರಿ ಜಂಬೂಸವಾರಿಯನ್ನು ಅದ್ದೂರಿಯಾಗಿ ನಡೆಸಲು ನಿರ್ಧರಿಸಲಾಗಿದೆ. ಈ ಮಧ್ಯೆ, ನವರಾತ್ರಿಯ 9ನೇ ದಿನವಾದ ಮಂಗಳವಾರ, ಅರಮನೆಯಲ್ಲಿ ರಾಜವಂಶಸ್ಥರಿಂದ ಸಾಂಪ್ರದಾಯಿಕವಾಗಿ ಆಯುಧ ಪೂಜೆ ನಡೆಯಲಿದೆ.

ಸಿಎಂರಿಂದ ಚಾಲನೆ: ಬುಧವಾರ ಮಧ್ಯಾಹ್ನ 2.36 ರಿಂದ 2.50 ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪೂಜೆ ಸಲ್ಲಿಸುವ ಮೂಲಕ, ಆಕರ್ಷಕ ಜಂಬೂಸವಾರಿಗೆ ಚಾಲನೆ ನೀಡಲಿದ್ದಾರೆ. ನಂತರ, ಸಂಜೆ 5.07 ರಿಂದ 5.18 ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆಯ ಒಳಾವರಣದ ವಿಶೇಷ ವೇದಿಕೆಯಲ್ಲಿ ಗಜರಾಜ ’ಅಭಿಮನ್ಯು’ ಹೊರಲಿರುವ 750 ಕೆ.ಜಿ ತೂಕದ ಚಿನ್ನದ ಅಂಬಾರಿಯಲ್ಲಿರುವ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ. ಕಾವೇರಿ ಹಾಗೂ ಚೈತ್ರಾ ‘ಕುಮ್ಕಿ’ ಆನೆಗಳಾಗಿ ಅಭಿಮನ್ಯುವಿನ ಜೊತೆ ಸಾಗಲಿವೆ.

Chikkamagaluru: ನವರಾತ್ರಿ ಗೊಂಬೆಗಳಲ್ಲಿ ಮೈಸೂರು ರಾಜ ಪರಂಪರೆಯ ಅನಾವರಣ

ಈ ಸಂದರ್ಭದಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌, ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ಕುಮಾರ್‌, ಮೇಯರ್‌ ಶಿವಕುಮಾರ್‌ ಉಪಸ್ಥಿತರಿರಲಿದ್ದಾರೆ. ನಾಡಿನ ಕಲೆ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ 47 ಸ್ತಬ್ಧಚಿತ್ರಗಳು, 50 ಜನಪದ ಕಲಾತಂಡಗಳು ಸೇರಿದಂತೆ 100ಕ್ಕೂ ಹೆಚ್ಚು ಕಲಾ ತಂಡಗಳು ಮೆರವಣಿಗೆಯಲ್ಲಿ ಸಾಗಲಿವೆ. ಅಭಿಮನ್ಯು ಸತತ ಮೂರನೇ ಬಾರಿಗೆ ಚಿನ್ನದ ಅಂಬಾರಿ ಹೊರಲಿದ್ದಾನೆ.

ಪಂಜಿನ ಕವಾಯತು: ಸಂಜೆ 7.30ಕ್ಕೆ ಬನ್ನಿಮಂಟಪದಲ್ಲಿ ನಡೆಯುವ ಪಂಜಿನ ಕವಾಯತಿನಲ್ಲಿ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋತ್‌ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಗೌರವ ವಂದನೆ ಸ್ವೀಕರಿಸಲಿದ್ದಾರೆ. ಇದರೊಂದಿಗೆ ಹತ್ತು ದಿನಗಳಿಂದ ನಡೆಯುತ್ತಿರುವ ದಸರೆಗೆ ತೆರೆ ಬೀಳಲಿದೆ.

Chikkaballapur: ಮೈಸೂರು ಜಂಬೂ ಸವಾರಿಗೆ ನಂದಿಗಿರಿ ಸ್ತಬ್ಧಚಿತ್ರ

ಹರಿದು ಬರುತ್ತಿರುವ ಪ್ರವಾಸಿಗರ ದಂಡು: ಈ ಮಧ್ಯೆ, ಅಂತಾರಾಜ್ಯ ವಾಹನಗಳಿಗೆ ಮೈಸೂರು ನಗರ ಮತ್ತು ಕೆಆರ್‌ಎಸ್‌ ಪ್ರವೇಶ ತೆರಿಗೆಯಿಂದ ವಿನಾಯ್ತಿ ನೀಡಿರುವುದು, ಶಾಲೆಗಳಿಗೆ ಮಧ್ಯಂತರ ರಜೆ ಸಿಕ್ಕಿರುವುದು, ವಾರಾಂತ್ಯದ ಜೊತೆಗೆ ಸರ್ಕಾರಿ ರಜೆಗಳು ಸಾಲು, ಸಾಲಾಗಿ ಬಂದಿರುವುದರಿಂದ ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ಮೈಸೂರಿನತ್ತ ಧಾವಿಸುತ್ತಿದ್ದಾರೆ. ಇದರಿಂದಾಗಿ ನಗರದ ಬಹುತೇಕ ಹೋಟೆಲ್‌ಗಳು ಭರ್ತಿಯಾಗಿವೆ. ಪ್ರವಾಸಿಗರ ಜೊತೆಗೆ ಸ್ಥಳೀಯರು ದೀಪಾಲಂಕಾರ ವೀಕ್ಷಣೆ ಸೇರಿದಂತೆ ವಿವಿಧೆಡೆ ಭೇಟಿ ನೀಡುತ್ತಿರುವುದರಿಂದ ಅರಮನೆ ಸುತ್ತಮುತ್ತಲಿನ ರಸ್ತೆ ಮತ್ತಿತರ ಕಡೆ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದೆ.

Follow Us:
Download App:
  • android
  • ios