Asianet Suvarna News Asianet Suvarna News

ಭಾವೈಕ್ಯ ಭಾರತದ ಪ್ರತಿಬಿಂಬ ಮೊಹರಂ..!

ಮುಸ್ಲಿಮರ ಕೊನೆಯ ಪ್ರವಾದಿ ಮೊಹಮ್ಮದ್‌ ಪೈಗಂಬರರು ಕಾಲವಾದ ಬಳಿಕ ಸೌದಿ ಅರೇಬಿಯಾದಲ್ಲಿ ನಡೆದ ದಾಯಾದಿ ಸಂಘರ್ಷದ ರಾಜಕೀಯ ಚರಿತ್ರೆಯೇ ಮೊಹರಂ ಆಚರಣೆಯ ರೂಪತಾಳಿದೆ. ಈ ಆಚರಣೆಯು ಕ್ರಮೇಣ ಮುಸಲ್ಮಾನರಿರುವ ಜಗತ್ತಿನ ನಾನಾ ಭಾಗಗಳಿಗೆ ಹರಡಿ ವಿಭಿನ್ನ ಆಚರಣೆಗಳ ರೂಪ ಪಡೆದಿದೆ: ಡಾ.ಜೀವನಸಾಬ್‌ ವಾಲಿಕಾರ್‌, ಕುಷ್ಟಗಿ 

Muharram is Reflection of Emotional India grg
Author
First Published Jul 29, 2023, 12:25 PM IST

ಬೆಂಗಳೂರು(ಜು.29):  ಮೊಹರಂ, ಧರ್ಮಸಹಿಷ್ಣತೆ ಭಾವೈಕ್ಯತೆ, ಕೋಮು ಸೌಹಾರ್ದತೆಯನ್ನು ಸಾರುವ ಹಬ್ಬ. ಹಿಂದೂ ಮುಸಲ್ಮಾನರ, ಪರಸ್ಪರ ಸ್ನೇಹ, ಪ್ರೀತಿ, ಒಡನಾಟದಿಂದ ಕೂಡಿ ಬಾಳುವಿಕೆಯ ಸಂಸ್ಕೃತಿಗಳನ್ನು ದ್ವಿಗುಣಗೊಳಿಸುವ ಪರಂಪರೆಯಾಗಿದೆ. ಇದೊಂದು ಬಹು ಸಂಸ್ಕೃತಿಯನ್ನು ಸಾರುವ ಹಬ್ಬ. ಧಾರ್ಮಿಕ ಸಾಮರಸ್ಯವು ಜಾತಿ ಭೇದವನ್ನು ತೊಲಗಿಸುವಷ್ಟು ಶಕ್ತವಾಗಿದೆ ಎಂಬ ನಂಬಿಕೆಯನ್ನು ಹುಟ್ಟಿಸುವುದೇ ಈ ಹಬ್ಬದ ಸಾರ.
ಇಸ್ಲಾಂ ಕ್ಯಾಲೆಂಡರ್‌ನ ಮೊದಲ ತಿಂಗಳೇ ಈ ಮೊಹರಂ. ಇದು ಇಸ್ಲಾಂ ಧರ್ಮದ ಪ್ರಕಾರ ಬಕ್ರೀದ್‌ ಆಚರಣೆಯ ಒಂದು ತಿಂಗಳ ನಂತರ ಬರುವ ಹಬ್ಬ. ಭಾರತದಲ್ಲಿ ಇದನ್ನು, ವಿಶೇಷವಾಗಿ ಕನ್ನಡದಲ್ಲಿ, ಮೊಹರಂ ಎಂದು ಕರೆದರೆ, ಇದರ ಮೂಲ ಪದ ಪರ್ಶಿಯನ್‌ ಭಾಷೆಯಿಂದ ಬಂದಿದೆ. ಇದೊಂದು ಇಸ್ಲಾಂ ಕ್ಯಾಲೆಂಡರ್‌ನ ತಿಂಗಳಿನ ಹೆಸರು. ಮೊಹರಂ ಎಂದರೆ ವರ್ಷದ ಆರಂಭ ಎಂದೂ, ನಿಷಿದ್ಧವಾದುದು ಎಂದೂ ಅರ್ಥವಿದೆ.

ಇದನ್ನು ಗ್ರಾಮೀಣ ಜನರು ಗ್ರಾಂಥಿಕ ರೂಪದಲ್ಲಿ ಮೊಹರಂ ಎಂದು ಕರೆಯಲು ಸಾಧ್ಯವಾಗದಿರುವುದರಿಂದ ಮಸೂತಿ ಮುಂದೆ ನಡೆಯುವ ಕಾರ್ಯ ಚಟುವಟಿಕೆಗಳ ಆಧಾರಿತವಾಗಿ ಈ ಹಬ್ಬಕ್ಕೆ ಆಲಾವಿಹಬ್ಬ, ಕೆಲವು ಕಡೆ ಅಲೆ ಹಬ್ಬ ಎಂದು ಸಹ ಕರೆಯುತ್ತಾರೆ. ವಿದ್ವಾಂಸರಾದ ಎಂ.ಎಂ.ಕಲಬುರ್ಗಿ ಹೇಳಿದಂತೆ ಹಿಂದೂ ಮುಸಲ್ಮಾನರು ಕೂಡಿ ಅಲಾವಿ ಕುಣಿದು, ಹಾಡು ಹೇಳಿ, ಧರ್ಮ ಸಮನ್ವಯದ ಜೀವಂತ ಪಾತ್ರ ಮಾಡುತ್ತಾರೆ. ಹಿಂದೂಗಳು ಆಚರಿಸುವ ಮುಸಲ್ಮಾನರ ಹಬ್ಬ ಎಂದು ಮಹಾಲಿಂಗ ಮಂಗಿ ಹೇಳುವ ರೀತಿ ನೋಡಿದರೆ, ಮೊಹರಂ ಬಹು ಸಂಸ್ಕೃತಿಯ ಪ್ರತೀಕವಾಗಿದೆ.

ಮೊಹರಂ ಹಬ್ಬ: ಚಿಕ್ಕಮಗಳೂರಿನಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಯ ದ್ಯೋತಕ

ಮೊಹರಂ ಐತಿಹಾಸಿಕ ಹಿನ್ನೆಲೆ

ಮುಸ್ಲಿಮರ ಕೊನೆಯ ಪ್ರವಾದಿ ಮೊಹಮ್ಮದ್‌ ಪೈಗಂಬರರ ನಿಧನದ ನಂತರ ಸೌದಿ ಅರೇಬಿಯಾದ ಪರಿಸರದಲ್ಲಿ ಅವರ ನಂತರ ಉತ್ತರಾಧಿಕಾರಿಗಳು ಯಾರಾಗಬೇಕು ಎಂಬ ಪ್ರಶ್ನೆಯಿಂದ ಮೊಹರಂ ಆಚರಣೆ ಮೂಲ ಆರಂಭವಾಗುತ್ತದೆ. ಪೈಗಂಬರರ ಅನುಯಾಯಿಗಳಾಗಿದ್ದ ಅಬೂಬಕರ ಸಿದ್ದೀಕಿ, ಉಮರ್‌ ಫಾರೂಕ್‌, ಉಸ್ಮಾನ್‌ ಕ್ರಮವಾಗಿ ಖಲೀಫರಾದರು. ಮುಂದೆ ಎರಡು ಮತ್ತು ಮೂರನೆಯ ಖಲೀಫ್‌ ಹತ್ಯೆಯಾದ ನಂತರ ಅಲಿಯನ್ನು ನಾಲ್ಕನೇ ಖಲೀಫರನ್ನಾಗಿ ಆಯ್ಕೆ ಮಾಡಲಾಯಿತು. ಹಾಸಿಮ… ಮತ್ತು ಉಮಯ್ಯಾ ವಂಶದ ಸಂಘರ್ಷದಲ್ಲಿ ಅಲಿ ಹತ್ಯೆಯಾದರು. ಈ ಘಟನೆ ಸೌದಿ ಅರೇಬಿಯಾದಲ್ಲಿ ಅರಾಜಕ ಸನ್ನಿವೇಶವನ್ನು ಸೃಷ್ಟಿಸಿತು. ಅಲಿಯ ಮೊದಲ ಮಗ ಹಸನನನ್ನು ಐದನೇ ಖಲೀಫನನ್ನಾಗಿ ಆಯ್ಕೆ ಮಾಡಿದರು. ಇದನ್ನು ಒಪ್ಪದ ಉಮಯ್ಯಾ ವಂಶದ ಮುಆವಿಯಾ, ಖಲೀಫ್‌ ಹಸನರ ಮೇಲೆ ಯುದ್ಧ ಸಾರಿದಾಗ ದುರ್ಬಲನಾಗಿದ್ದ ಹಸನ್‌ ಮುಆವಿಯಾಗೆ ಖಲೀಫ್‌ ಪಟ್ಟವನ್ನು ಬಿಟ್ಟುಕೊಟ್ಟನು. ಕೆಲವು ದಿನಗಳ ನಂತರ ಹಸನ್‌ನನ್ನೂ ಕೊಲ್ಲಲಾಯಿತು. 20 ವರ್ಷ ಖಲೀಫನಾಗಿ ಆಳ್ವಿಕೆ ಮಾಡಿದ ಮುಆವಿಯಾ ತನ್ನ ಮಗನಾದ ಯಜೀದನನ್ನು ಖಲೀಫನನ್ನಾಗಿ ಆಯ್ಕೆ ಮಾಡಿದನು. ಆಗ ಯಜೀದನು ಮೆಕ್ಕಾ, ಮದೀನಾ, ಕೂಫಾ ಪ್ರಾಂತ್ಯಗಳಿಗೆ ಪತ್ರ ಬರೆದು ತನ್ನ ಖಲೀಫತ್ವವನ್ನು ಒಪ್ಪಿಕೊಳ್ಳಬೇಕೆಂದು ತಿಳಿಸಿದನು. ಮದೀನಾ ಜನ ಒಪ್ಪಲಿಲ್ಲ. ತೂಫಾದಲ್ಲಿದ್ದ ಆಶಾಮಿ ಪಂಗಡದವರು ಉಮಯ್ಯಾ ಪಂಗಡದ ಯಜೀದನ ಆಳ್ವಿಕೆಗೆ ವಿರೋಧ ವ್ಯಕ್ತಪಡಿಸಿ, ಹಜರತ್‌ ಅಲಿಯ ಎರಡನೆಯ ಮಗನಾದ ಹುಸೇನ್‌ರನ್ನು ನೀವೇ ಖಲೀಫರಾಗಬೇಕೆಂದು ಒತ್ತಾಯಿಸಿದರು. ಹುಸೇನರು ಅದಕ್ಕೆ ಮಣಿದು ತಮ್ಮ ಮಡದಿ, ಮಕ್ಕಳು ಮತ್ತು 72 ಬೆಂಬಲಿಗರೊಂದಿಗೆ ಕೂಫಾಕ್ಕೆ ಹೊರಟರು. ಇರಾಕಿಗೆ ಸೇರಿದ ಯುಪ್ರಟೆಸ್‌ ಹೊಳೆ ದಡದಲ್ಲಿರುವ ಕರ್ಬಲ ಎಂಬ ಮರಳುಗಾಡ ಬಯಲಲ್ಲಿ ಬೀಡು ಬಿಟ್ಟಾಗ ಹುಸೇನರ ರುಂಡ ಛೇದನ ಮಾಡಿ ಅವರ ಸೈನ್ಯವನ್ನು ಸೋಲಿಸಲಾಯಿತು. ತದನಂತರ ಯಜೀದನು ಹುಸೇನರ ಪರಿವಾರವನ್ನು ದಮಾಸ್ಕಸ್‌ಗೆ ಕರೆದೊಯ್ದು ಕೈದಿಗಳನ್ನಾಗಿ ಇರಿಸಿಕೊಂಡನು.

ಮುಂದೆ ಹನೀಫ್‌ ಎಂಬ ಯುವಕನು ಯಜೀದನನ್ನು ಸೋಲಿಸಿ, ಯುದ್ಧ ಕೈದಿಗಳಾಗಿದ್ದವರನ್ನು ಬಿಡಿಸಿಕೊಂಡು ಬಂದಿದ್ದು, ಖಲೀಫ ಪದವಿಗಾಗಿ ಅರಬಸ್ಥಾನದಲ್ಲಿ ಸಂಭವಿಸಿದ ರಾಜಕೀಯ ಘಟನೆಗಳು ದುರಂತದಲ್ಲಿ ಅಂತ್ಯವಾದವು. ಹಸನ್‌ ಹುಸೇನರು ಕರ್ಬಲಾ ಮೈದಾನದಲ್ಲಿ ಜೀವ ಕಳೆದುಕೊಂಡಿದ್ದರ ನೆನಪಿಗಾಗಿ ಅವರ ಅನುಯಾಯಿಗಳು ಶೋಕ ಸಭೆಗಳನ್ನು ಆರಂಭಿಸಿದರು. ಶೋಕ ಗೀತೆಗಳನ್ನು ರಚಿಸಿ ಹಾಡಲಾರಂಭಿಸಿದರು. ಈ ಶೋಕ ಮೆರವಣಿಗೆಯಲ್ಲಿ, ಆಲಂ ಎಂದು ಕರೆಯಲಾಗುವ ಚಿಹ್ನೆಗಳನ್ನು ಬಳಸಿದರು. ಈ ಆಲಂ ಪ್ರವಾದಿ ಮಹಮ್ಮದ್‌, ಬೀಬಿ ಫಾತಿಮಾ, ಹಜರತ್‌ ಅಲಿ ಹಸನ್‌ ಹಾಗೂ ಹುಸೇನರ ಸಂಕೇತಗಳೆಂದು ವ್ಯಾಖ್ಯಾನಿಸಲಾಗುತ್ತದೆ. ಹಸನ್‌, ಹುಸೇನರನ್ನು ಹತ್ಯೆಗೈದಿದ್ದರ ಪಾಪ ಪ್ರಾಯಶ್ಚಿತ್ತಕ್ಕಾಗಿ ಶೋಕಾಚರಣೆಯನ್ನು ಆರಂಭಿಸಿದವರು ಶಿಯಾ ಪಂಗಡದವರೆನಿಸಿಕೊಂಡರೆ, ಹಸನ್‌, ಹುಸೇನ್‌ ಮುಂತಾದ 12 ಜನರನ್ನು ತಮ್ಮ ಇಮಾಮರೆಂದು ಘೋಷಿಸಿಕೊಂಡು, ಪೈಗಂಬರರ ಜೊತೆಗೆ ಮೊದಲ ಮೂರು ಖಲೀಫರನ್ನು ಅನುಸರಿಸಿದವರು ಸುನ್ನಿಗಳಾದರು. ಈ ತೆರನಾದ ಅರಬ್ಬರ ದಾಯಾದಿ ಸಂಘರ್ಷದ ರಾಜಕೀಯ ಚರಿತ್ರೆ ಮೊಹರಂ ಆಚರಣೆಯ ರೂಪತಾಳಿದೆ. ಈ ಆಚರಣೆಯು ಕ್ರಮೇಣ ಮುಸಲ್ಮಾನರಿರುವ ಜಗತ್ತಿನ ನಾನಾ ಭಾಗಗಳಿಗೆ ಹರಡಿ ವಿಭಿನ್ನ ಆಚರಣೆಗಳ ರೂಪ ಪಡೆಯಿತು.

ಮೊಹರಂ ಆಚರಣಾ ಸಂಪ್ರದಾಯ

14ನೇ ಶತಮಾನದ ಕಾಲಕ್ಕೆ ತೈಮೂರು ಲಂಗನಿಂದ ಭಾರತದಲ್ಲಿ ಮೊಹರಂ ಆಚರಣೆ ಪರಿಚಯವಾಯಿತು. ಕರ್ನಾಟಕದಲ್ಲಿ ಬಹಮನಿ ಮತ್ತು ಆದಿಲ…ಶಾಹಿಗಳು, ಹೈದರಾಬಾದಿನ ನಿಜಾಮ್‌, ಹೈದರಾಲಿ, ಟಿಪ್ಪು ಮುಂತಾದ ರಾಜರು ಮೊಹರಂ ಹಬ್ಬ ಆಚರಣೆಯನ್ನು ಉತ್ತೇಜಿಸಿದ ಫಲವಾಗಿ ಇಂದು ಇದು ಶೋಕಾಚರಣೆಯ ಜೊತೆಗೆ ಸಂಭ್ರಮಾಚರಣೆಯ ಹಬ್ಬವಾಗಿ ಮಾರುಪಟ್ಟಿರುವುದು ಧಾರ್ಮಿಕ ಚಾರಿತ್ರಿಕ, ಸಾಂಸ್ಕೃತಿಕ ಸಂಗತಿಗಳ ದ್ಯೋತಕವಾಗಿದೆ.
ಹತ್ತು ದಿನಗಳ ಕಾಲ ನಡೆಯುವ ಮೊಹರಂ ಹಬ್ಬವು ಚಂದ್ರ ಕಾಣಿಸಿಕೊಂಡ ನಂತರ ಗುದ್ದಲಿ (ಅಲಾವಿ ಕುಣಿ ತೆಗೆಯುವ) ಹಾಕುವ ಆಚರಣೆಯೊಂದಿಗೆ ಆರಂಭಗೊಳ್ಳುತ್ತದೆ. ನಾಲ್ಕನೇ ದಿನದ ರಾತ್ರಿ ಮಸೂತಿಯಲ್ಲಿರುವ ಪಂಜಾಯಿತಿನ್‌ಗಳನ್ನು ಬಡಿಗ ಅಥವಾ ಕಂಬಾರರಿಂದ ಶುಚಿಗೊಳಿಸಿ ಅಲ್ಲಿಂದ ಮೆರವಣಿಗೆಯ ಮೂಲಕ ಮಸೂತಿಯಲ್ಲಿ ಪ್ರತಿಷ್ಠಾಪಿಸುವುದು. ಮಾರನೆಯ ದಿನ ಅವುಗಳನ್ನು ಜನರಿಗೆ ಕಾಣುವಂತೆ ಪ್ರದರ್ಶಿಸುವುದರ ಮೂಲಕ ಆಚರಣೆ ಆರಂಭಗೊಳ್ಳುತ್ತದೆ,

ಧಾರ್ಮಿಕ ಸಾಮರಸ್ಯದ ಪ್ರತೀಕ

ಮೊಹರಂ ಹಿಂದೂ ಮುಸಲ್ಮಾನರು ಒಡಗೂಡಿ ಭಾವೈಕ್ಯತೆಯಿಂದ ಆಚರಿಸುವ ಹಬ್ಬ. ಇದು ಪರಸ್ಪರಲ್ಲಿ ಸಾಮರಸ್ಯವನ್ನು ಒಡಮೂಡಿಸುವುದರ ಜೊತೆಗೆ ಪ್ರೀತಿ ವಿಶ್ವಾಸವನ್ನು ಉತ್ತೇಜಿಸಲು ಸಹಕಾರಿಯಾಗಿದೆ. ಜಾತಿ, ಲಿಂಗ, ಧರ್ಮದ ಭೇದವಿಲ್ಲದೆ ಆಲಾಯಿ ದೇವರಿಗೆ ಪೂಜೆ ಸಲ್ಲಿಸಿ, ಹರಕೆ ಹೊತ್ತು ಸಕ್ಕರೆಯನ್ನು ಓದಿಸುವ ಸಂದರ್ಭದಲ್ಲಿ ಕ್ಯಾ ಹುಸೇನ್‌ ಬಾ ಹುಸೇನ್‌, ಯಮೋದ್ದೀನ್‌ ಎನ್ನುವ ಘೋಷಣೆಗಳ ಮೂಲಕ ಕೆಂಪು ಲಾಡಿಗಳನ್ನು ಕೈಗೆ ಹಾಕಿಕೊಳ್ಳುವ ಆಚರಣೆಯನ್ನು ಗಮನಿಸಿದರೆ ಸರ್ವ ಜನಾಂಗದ ಶಾಂತಿಯ ತೋಟವೇ ಕಣ್ಣೆದುರಿಗೆ ನಿಂತಂತೆ ಕಾಣಿಸುತ್ತದೆ.

ಬಾಗಲಕೋಟೆ: ಮುಸ್ಲಿಮರೇ ಇಲ್ಲದ ಊರಲ್ಲಿ ಹಿಂದುಗಳಿಂದ ಮೊಹರಂ ಆಚರಣೆ..!

ಗ್ರಾಮೀಣ ಜಾನಪದ ಕಲೆಯ ಕಲರವ

ಕನ್ನಡ ನಾಡಿನಲ್ಲಿ ಮೊಹರಂ ಆಚರಣೆಯು ಗ್ರಾಮೀಣ ಸೊಗಡಿನ ಜಾನಪದ ಕಲಾ ಲೋಕವನ್ನೇ ಕಣ್ಣೆದುರಿಗೆ ಕಟ್ಟುವಂತೆ ಮಾಡುತ್ತದೆ. ಕರ್ಬಲ ಮರುಭೂಮಿಯ ಆ ಯುದ್ಧದಲ್ಲಿ ಹೋರಾಡಿದ ಹಜರತ್‌ ಅಲಿ, ಹಸನ್‌, ಹುಸೇನರ ಸಾಹಸ ಶೌರ್ಯವನ್ನು ರಿವಾಯಿತಿ ಹಾಡುಗಾರರು ಕಣ್ಣಿಗೆ ಕಟ್ಟುವ ರೀತಿಯಲ್ಲಿ ಹಾಡುತ್ತಾರೆ. ಅವುಗಳನ್ನು ಮೊಹರಂ ಪದ, ಅಲಾವಿಪದ, ಕರ್ಬಲ ಪದ, ಜಂಗಿನ ಪದ, ರಿವಾಯಿತ ಪದ, ಶೋಕವನ್ನು ಅಭಿವ್ಯಕ್ತಿಸುವ ಮರ್ಶಿಯ ಪದ ಎಂದೆಲ್ಲಾ ಕರೆಯುತ್ತಾರೆ. ಯುದ್ಧದಲ್ಲಿ ಹೋರಾಡಲು ಬಳಸಿದ ಕುದುರೆಯ ಸಂಕೇತವಾಗಿ ಕುದುರೆ ಕುಣಿತವನ್ನು, ಅಳ್ಳಳ್ಳಿ ಬೆಳ್ಳುಳ್ಳಿಯ ವೇಷಧಾರಿಕೆ, ಹುಲಿ ವೇಷ ಧರಿಸುವ ಸಂಪ್ರದಾಯವೂ ಇದೆ. ಕೋಲಾಟ, ಹಿಂದೂ ಮುಸಲ್ಮಾನರು ಒಡಗೂಡಿ ಅಲಾವಿ ಕುಣಿಯ ಸುತ್ತ ಕುಣಿಯುವುದು, ಹಲಿಗೆ ವಾದನಗಳು ಮೊಹರಂ ಆಚರಣೆಯನ್ನು ಶ್ರೀಮಂತಗೊಳಿಸಿದೆ. ಪ್ರದೇಶವಾರು ವಿಭಿನ್ನ ಆಚರಣೆಗಳು ರೂಢಿಯಲ್ಲಿವೆ. ಅಲೈ ದೇವರುಗಳು ಸವಾರಿ ಹೊರಡುವ ಸಂದರ್ಭದಲ್ಲಿ ಆಯಾ ಪ್ರದೇಶದಲ್ಲಿರುವ ಊರಿನ ಆರಾಧ್ಯ ದೇವರಾದ ಬಸವೇಶ್ವರ, ಹನುಮಾನ್‌, ದ್ಯಾಮವ್ವನ ಗುಡಿ, ಈಶ್ವರನ ದೇವಾಲಯ, ಪ್ರಮುಖ ಮಠ ದೇವಸ್ಥಾನಗಳಿಗೆ ತೆರಳಿ ಪರಸ್ಪರ ಭೇಟಿ ಮಾಡುವ ಕ್ಷಣವು ದೇವನೊಬ್ಬ ನಾಮ ಹಲವು ಎನ್ನುವ ಭಾವ ಮೂಡಿಸುತ್ತದೆ. ಕೆಲವು ಕಡೆ ಮೊಹರಂ ಕಡೆಯ ದಿನ ಬೆಳಗಿನ ಅವಧಿಯಲ್ಲಿ ದೇವರು ಸವಾರಿ ಹೊರಡುವ ಸಂದರ್ಭದಲ್ಲಿ ಮಸೂತಿಯ ಮುಖ್ಯದೇವರು ವಿವಿಧ ಕಾಳು ಕಡಿ (ಧಾನ್ಯ) ಗಳನ್ನು ಮುಟ್ಟಿಸುವ, ಯಾವ ಧಾನ್ಯಗಳನ್ನು ಮುಟ್ಟುತ್ತಾರೋ ಆ ವರ್ಷ ಆ ಧಾನ್ಯಗಳನ್ನು ಬಿತ್ತಿ ಬೆಳೆಯಲು ಶುಭ ಸೂಚಕ ಸಂದರ್ಭ ಎಂದು ಜನರು ನಂಬುತ್ತಾರೆ. ಆ ವರ್ಷದ ಮಳೆ ಬೆಳೆ, ಮಕ್ಕಳ ಸಂತಾನ, ಯುವಕರ ದುಶ್ಚಟಗಳನ್ನು ಬಿಡಿಸುವುದು, ಮೈಮೇಲೆ ಬಂದಿರುವ ಗಾಳಿಗಳನ್ನು ಹೋಗಲಾಡಿಸುವ, ಕಾಯಿಲೆ ಬಿದ್ದವರಿಗೆ ಸಂತೈಸುವ, ಜನರು ತಮ್ಮ ಬೇಡಿಕೆಗಳನ್ನು ದೇವರ ಮುಂದೆ ಇಡುವ ಈ ಎಲ್ಲಾ ಸಂದರ್ಭಗಳನ್ನು ಮೊಹರಂ ಹಬ್ಬ ಸಾಕ್ಷೀಕರಿಸುತ್ತದೆ. ಧರ್ಮ, ಜಾತಿಯ ಗಡಿಗಳನ್ನು ಮೀರಿ, ಹಬ್ಬದಲ್ಲಿ ಪಾಲ್ಗೊಳ್ಳುವ ಜನರ ಮನೋಭಾವವು ಭಾವೈಕ್ಯ ಭಾರತವು ಕಣ್ಣಲ್ಲಿ ಕುಣಿವಂತೆ ಮಾಡುತ್ತದೆ. ಜ್ಞಾನ ವಿಜ್ಞಾನಗಳು ಬೆಳೆದಂತೆ ಮನುಷ್ಯನ ಮನಸ್ಸು ಸಂಕುಚಿತಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಭಾವೈಕ್ಯತೆಯನ್ನು ಸಾರುವುದು ಮೊಹರಂ ಮುಂತಾದ ಜಾತ್ರೆ, ಉತ್ಸವಗಳ ಆಚರಣೆಯಿಂದ ಸಾಧ್ಯ ಎನ್ನುವುದಕ್ಕೆ ಈ ಹಬ್ಬ ದ್ಯೋತಕವಾಗಿದೆ.

ಇಂದು ಮೊಹರಂ ಕಡೆಯ ದಿನ

ಮುಸ್ಲಿಮರ ಕೊನೆಯ ಪ್ರವಾದಿ ಮೊಹಮ್ಮದ್‌ ಪೈಗಂಬರರು ಕಾಲವಾದ ಬಳಿಕ ಸೌದಿ ಅರೇಬಿಯಾದಲ್ಲಿ ನಡೆದ ದಾಯಾದಿ ಸಂಘರ್ಷದ ರಾಜಕೀಯ ಚರಿತ್ರೆಯೇ ಮೊಹರಂ ಆಚರಣೆಯ ರೂಪತಾಳಿದೆ. ಈ ಆಚರಣೆಯು ಕ್ರಮೇಣ ಮುಸಲ್ಮಾನರಿರುವ ಜಗತ್ತಿನ ನಾನಾ ಭಾಗಗಳಿಗೆ ಹರಡಿ ವಿಭಿನ್ನ ಆಚರಣೆಗಳ ರೂಪ ಪಡೆದಿದೆ: ಡಾ.ಜೀವನಸಾಬ್‌ ವಾಲಿಕಾರ್‌, ಕುಷ್ಟಗಿ 

Follow Us:
Download App:
  • android
  • ios