ತುಲಾ ರಾಶಿ ಪ್ರವೇಶಿಸುತ್ತಿರುವ ಬುಧ, ಯಾವ ರಾಶಿಯವರಿಗೆ ಯಾವ ಶುಭ ಫಲ..!
ಗ್ರಹಗಳ ರಾಶಿ ಪರಿವರ್ತನೆಯು ವ್ಯಕ್ತಿಯ ಜೀವನದ ಮೇಲೆ ಹಲವಾರು ರೀತಿಯ ಪ್ರಭಾವಗಳನ್ನು ಬೀರುತ್ತವೆ. ಕೆಲವು ಶುಭವಾದರೆ, ಇನ್ನು ಕೆಲವು ಅಶುಭವಾಗಿರುತ್ತದೆ. ಬುಧ ಗ್ರಹವು ಇದೇ ಸೆಪ್ಟೆಂಬರ್ 22ರಂದು ತುಲಾ ರಾಶಿಯನ್ನು ಪ್ರವೇಶಿಸಲಿದೆ. ಈ ರಾಶಿ ಪರಿವರ್ತನೆಯು ಹಲವು ರಾಶಿಗೆ ಅಶುಭ ಪ್ರಭಾವವನ್ನು ಬೀರಿದರೆ, ಕೆಲವು ರಾಶಿಗೆ ಒಳಿತನ್ನು ಮಾಡಲಿದೆ. ಹಾಗಾದರೆ ಯಾವ್ಯಾವ ರಾಶಿಯವರಿಗೆ ಯಾವ ರೀತಿಯ ಫಲ ತಿಳಿಯೋಣ...
ಬುಧ ಗ್ರಹವು ಇದೇ ಸೆಪ್ಟೆಂಬರ್ 22ರಂದು ತುಲಾ ರಾಶಿಯನ್ನು ಪ್ರವೇಶಿಸಲಿದೆ. ತುಲಾ ರಾಶಿಯ ಅಧಿಪತಿ ಶುಕ್ರ ಗ್ರಹ. ಬುಧ ಮತ್ತು ಶುಕ್ರ ಗ್ರಹಗಳು ಮಿತ್ರರಾಗಿರುವ ಕಾರಣ ಜಾತಕದಲ್ಲಿ ಬುಧನ ಸ್ಥಿತಿ ಉಚ್ಛವಾಗಿದ್ದಲ್ಲಿ ಅಂಥವರಿಗೆ ಶುಭ ಫಲ ಸಿಗುವುದು ಖಚಿತ. ಬುಧಗ್ರಹದ ಸ್ಥಿತಿ ನೀಚವಾಗಿದ್ದರೆ ಅಂಥವರು ಅಶುಭ ಪ್ರಭಾವವನ್ನು ಎದುರಿಸಬೇಕಾಗುತ್ತದೆ.
ಮೇಷ ರಾಶಿ
ಮೇಷ ರಾಶಿಯಿಂದ ಏಳನೇ ಮನೆಯಲ್ಲಿ ಬುಧನು ಗೋಚಾರ ಮಾಡುವುದರಿಂದ ಈ ರಾಶಿಯವರಿಗೆ ಅತ್ಯುತ್ತಮವಾದ ಸಫಲತೆಯನ್ನು ಹೆಚ್ಚಿನ ಶುಭಫಲವನ್ನು ನೀಡುವುದು ನಿಶ್ಚಿತವಾಗಿದೆ. ಹೊಸ ಕೆಲಸವನ್ನು ಅಥವಾ ವ್ಯಾಪಾರವನ್ನು ಆರಂಭಿಸಿದಲ್ಲಿ ಹೆಚ್ಚಿನ ಯಶಸ್ಸನ್ನು ಪಡೆಯಬಹುದು. ಉದ್ಯೋಗವನ್ನು ಬದಲಾಯಿಸುವ ಮನಃಸ್ಥಿತಿ ಉಳ್ಳವರಿಗೆ ಇದು ಸಕಾಲವಾಗಿದೆ. ಕೇಂದ್ರ ಅಥವಾ ರಾಜ್ಯ ಸರ್ಕಾರಗಳಿಂದ ಆಗಬೇಕಾದ ಕೆಲಸಗಳಿದ್ದಲ್ಲಿ ಸುಗಮವಾಗಿ ಕಾರ್ಯವಾಗುವ ಕಾಲ ಇದಾಗಿದೆ. ವಿದೇಶ ಯಾತ್ರೆ ಅಥವಾ ವಿದೇಶಕ್ಕೆ ಸಂಬಂಧಪಟ್ಟ ವಿಷಯಗಳು ಸುಗಮವಾಗಿ ನೇರವೇರುತ್ತವೆ. ಈ ರಾಶಿಯ ಮೇಲೆ ಬುಧನ ಸಪ್ತಮ ದೃಷ್ಟಿ ಬಾಳುವ ಕಾರಣ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ವಿವಾಹಕ್ಕೆ ಸಂಬಂಧಪಟ್ಟ ವಿಷಯಗಳಿಂದ ಖುಷಿ ಹೆಚ್ಚುತ್ತದೆ.
ಇದನ್ನು ಓದಿ: ರಾಹು ರಾಶಿ ಪರಿವರ್ತನೆಯಿಂದ ರಾಶಿಗಳ ಮೇಲಾಗುವ ಶುಭಾಶುಭ ಫಲಗಳ ಬಗ್ಗೆ ತಿಳಿಯೋಣ..!
ವೃಷಭ ರಾಶಿ
ಈ ರಾಶಿಯಿಂದ ಆರನೇ ಅಂದರೆ ಶತ್ರುವಿನ ಮನೆಯಲ್ಲಿ ಬುಧನ ಗೋಚಾರವಾಗುವ ಕಾರಣ ಮಿಶ್ರಫಲವನ್ನು ನಿರೀಕ್ಷಿಸಬಹುದಾಗಿದೆ. ಹೆಚ್ಚಿನ ಸಾಲ ತೆಗೆದುಕೊಳ್ಳುವ ಮತ್ತು ಕೊಡುವ ವಿಷಯದಲ್ಲಿ ಜಾಗರೂಕರಾಗಿದ್ದರೆ ಉತ್ತಮ. ಆರೋಗ್ಯ ವಿಚಾರದಲ್ಲಿ ಅಲಕ್ಷ್ಯ ಮಾಡುವುದು ಒಳ್ಳೆಯದಲ್ಲ. ಶತ್ರುಗಳ ಸಂಖ್ಯೆ ಹೆಚ್ಚುವುದಲ್ಲದೇ, ನಿಮ್ಮವರೇ ನಿಮ್ಮನ್ನು ತುಳಿಯಲು ಪ್ರಯತ್ನಿಸುತ್ತಾರೆ. ವಿದ್ಯಾರ್ಥಿಗಳು ಹೆಚ್ಚಿನ ಪರಿಶ್ರಮ ಪಟ್ಟರೆ ಮಾತ್ರ ಸಫಲತೆ ಸಾಧ್ಯವಿದೆ. ಪ್ರೇಮಕ್ಕೆ ಸಂಬಂಧಿಸಿದ ವಿಷಯದಲ್ಲಿ ವೈಮನಸ್ಸು ಬರುವ ಸಾಧ್ಯತೆ ಇದೆ. ಖರ್ಚು ಹೆಚ್ಚಾಗುವ ಸಂಭವ ಸಹ ಇದೆ.
ಮಿಥುನ ರಾಶಿ
ಈ ರಾಶಿಯಿಂದ ಐದನೇ ಮನೆಯಲ್ಲಿ ಬುಧನ ಗೋಚಾರವು ಉತ್ತಮ ಫಲವನ್ನು ನೀಡುತ್ತದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಯಶಸ್ಸನ್ನು ನೀಡುತ್ತದೆ. ಸಂತಾನಕ್ಕಾಗಿ ಹಂಬಲಿಸುತ್ತಿರುವವರಿಗೆ ಶುಭ ಸುದ್ದಿ ಸಿಗುವ ಸಂಭವವಿದೆ. ಹಲವಾರು ದಿನಗಳಿಂದ ಆಗದ ಕೆಲಸವು ಈ ಬಾರಿ ಪೂರ್ತಿಗೊಳ್ಳಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವಿರಿ. ಲಾಭ ದೃಷ್ಟಿಯು ಪೂರ್ಣಪ್ರಮಾಣ ಈ ರಾಶಿಯವರ ಮೇಲೆ ಬಿದ್ದಿರುವ ಕಾರಣ ಹಿರಿಯ ಸಹೋದರನಿಂದ ಆರ್ಥಿಕ ಸಹಾಯ ಸಿಗುತ್ತದೆ. ಉನ್ನತ ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಏರ್ಪಡಲಿದೆ.
ಕರ್ಕಾಟಕ ರಾಶಿ
ಈ ರಾಶಿಯಿಂದ ಚತುರ್ಥದಲ್ಲಿ ಅಂದರೆ ನಾಲ್ಕನೇ ಮನೆಯಲ್ಲಿ ಬುಧನ ಗೋಚಾರವು ಆಗಲಿದೆ. ಇದರಿಂದ ನಿಮ್ಮ ಇಚ್ಛೆಯಷ್ಟು ಲಾಭ ತರುವುದಿಲ್ಲವಾದರೂ ಮನೆ ಮತ್ತು ವಾಹನ ಖರೀದಿಸುವ ನಿಮ್ಮ ಕನಸು ನನಸಾಗುವ ಸಂಭವವಿದೆ. ತಂದೆ ಮತ್ತು ತಾಯಿಯ ಆರೋಗ್ಯದ ಕಾಳಜಿ ವಹಿಸುವುದು ಉತ್ತಮ. ಸ್ನೇಹಿತರು ಮತ್ತು ಸಂಬಂಧಿಕರ ಸಹಯೋಗ ದೊರಕಲಿದೆ. ವೃತ್ತಿ ಕ್ಷೇತ್ರದ ವ್ಯಾಪ್ತಿ ಹೆಚ್ಚುವ ಸಾಧ್ಯತೆ ಇದೆ. ಹೊಸ ವ್ಯಾಪಾರವನ್ನು ಆರಂಭಿಸಲು ಇದು ಸಕಾಲವಾಗಿದೆ. ಸಮಾಜದ ಪ್ರತಿಷ್ಠಿತ ವ್ಯಕ್ತಿಗಳೊಂದಿಗೆ ಉತ್ತಮ ಬಾಂಧವ್ಯ ಏರ್ಪಡುತ್ತದೆ.
ಸಿಂಹ ರಾಶಿ
ಸಿಂಹ ರಾಶಿಯವರು ಬುಧ ಗ್ರಹದ ರಾಶಿ ಪರಿವರ್ತನೆಯಿಂದ ಹಲವು ರೀತಿಯ ಅನಿರೀಕ್ಷಿತ ಪರಿಣಾಮಗಳನ್ನು ಎದುರಿಸಬೇಕಾಗಬಹುದು. ಸಾಹಸ ಮತ್ತು ಪರಾಕ್ರಮವು ವೃದ್ಧಿಸುವುದಲ್ಲದೇ, ನಿರ್ಧರಿಸಿದ ಕಾರ್ಯಗಳೆಲ್ಲ ಸರಾಗವಾಗಿ ಮುಗಿಯುತ್ತವೆ. ಈ ರಾಶಿಯವರು ಶಕ್ತಿಯ ಬಲದಿಂದ ಯಾವುದೇ ಸಂಕಷ್ಟದ ಸಂದರ್ಭವನ್ನು ಎದುರಿಸುವ ಎದೆಗಾರಿಕೆಯನ್ನು ಹೊಂದಿರುತ್ತಾರೆ. ವಿದೇಶಿ ಸಂಬಂಧಿತ ಕಾರ್ಯಗಳು ಸರಾಗವಾಗುತ್ತವೆ.
ಕನ್ಯಾ ರಾಶಿ
ಈ ರಾಶಿಯವರ ಆರ್ಥಿಕ ಪರಿಸ್ಥಿತಿಯಲ್ಲಿ ಉತ್ತಮ ಮಟ್ಟದ ಸುಧಾರಣೆಯಾಗುತ್ತದೆ. ಹಲವು ದಿನಗಳಿಂದ ಬರಬೇಕಿದ್ದ ಹಣ ವಾಪಸ್ ನಿಮ್ಮ ಕೈ ಸೇರಲಿದೆ. ಆಕಸ್ಮಿಕ ಧನ ಲಾಭವಾಗುವ ಯೋಗವಿದೆ. ಮನೆ ಮತ್ತು ವಾಹನ ಖರೀದಿಸುವ ಯೋಜನೆ ಇದ್ದಲ್ಲಿ, ಇದು ಖರೀದಿಗೆ ಸುಸಂದರ್ಭವಾಗಿದೆ. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಉತ್ತಮ. ವಾದ-ವಿವಾದ ಮತ್ತು ಜಗಳಗಳಿಂದ ದೂರವಿದ್ದರೆ ಉತ್ತಮ.
ತುಲಾ ರಾಶಿ
ಬುಧ ಗ್ರಹದ ಪ್ರವೇಶ ಈ ರಾಶಿಗೆ ಆಗುವುದರಿಂದ ಎಲ್ಲ ರೀತಿಯಲ್ಲಿಯೂ ಸಫಲತೆ ದೊರಕುವ ಸೂಚನೆ ಇದಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿಯನ್ನು ಸಾಧಿಸಬಹುದಾಗಿದೆ. ಪ್ರೇಮ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಬಾಂಧವ್ಯ ಮೂಡುತ್ತದೆ. ಪ್ರೇಮ ವಾವಾಹಕ್ಕೂ ಇದು ಯೋಗ್ಯವಾದ ಸಮಯವಾಗಿದೆ. ಸಂತಾನ ಸಮಸ್ಯೆಯು ದೂರವಾಗುವ ಸಂಭವವಿದೆ. ಆಧ್ಯಾತ್ಮ ಕ್ಷೇತ್ರದಲ್ಲಿ ಹೆಚ್ಚಿನ ಒಲವು ಮೂಡುತ್ತದೆ.
ಇದನ್ನು ಓದಿ: ರಾಹು ರಾಶಿ ಪರಿವರ್ತನೆಯಿಂದ ಸಮಸ್ಯೆ ಎದುರಿಸುವವರಿಗಿಲ್ಲಿದೆ ಪರಿಹಾರ..!
ವೃಶ್ಚಿಕ ರಾಶಿ
ಈ ರಾಶಿಯಿಂದ ಹನ್ನೆರಡನೇ ಮನೆಯಲ್ಲಿ ಬುಧನ ಗೋಚಾರವಾಗುತ್ತದೆ. ಇದರಿಂದ ಈ ರಾಶಿಯವರು ಮಿಶ್ರ ಫಲವನ್ನು ನಿರೀಕ್ಷಿಸಬಹುದು. ಐಶ್ವರ್ಯದಲ್ಲಿ ವೃದ್ಧಿಯನ್ನು ಕಾಣಬಹುದಾಗಿದೆ. ಯಾತ್ರೆ, ದೇಶ ಪರ್ಯಟನೆ ಸಹ ಅಧಿಕವಾಗಿರುತ್ತದೆ. ಜಗಳ ಮತ್ತು ವಿವಾದಗಳಿಂದ ದೂರವಿರುವುದು ಉತ್ತಮ. ಕೋರ್ಟ್ ವಿವಾದಗಳಿದ್ದರೆ ಪರಸ್ಪರ ಮಾತನಾಡಿ ಬಗೆಹರಿಸಿಕೊಳ್ಳುವುದು ಉತ್ತಮ. ಹಣ ಕೊಟ್ಟು-ತೆಗೆದು ಕೊಳ್ಳುವ ವಿಚಾರದಲ್ಲಿ ಜಾಗರೂಕರಾಗಿರುವುದು ಉತ್ತಮ.
ಧನು ರಾಶಿ
ಈ ರಾಶಿಯಿಂದ ಹನ್ನೊಂದನೇ ಮನೆಯಲ್ಲಿ ಬುಧನ ಗೋಚಾರ ಉತ್ತಮ ಫಲವನ್ನು ನೀಡುತ್ತದೆ. ವ್ಯಾಪಾರ - ವ್ಯವಹಾರಗಳಲ್ಲಿ ಕೆಲವು ತೊಡಕುಗಳು ಬರುವ ಸಾಧ್ಯತೆ ಕಂಡರೂ ಅದನ್ನು ದಾಟಿ ಉತ್ತಮ ಫಲವನ್ನು ಪಡೆಯಬಹುದಾಗಿದೆ. ಪರಿವಾರದ ಹಿರಿಯರು ಮತ್ತು ಪ್ರಮುಖ ವ್ಯಕ್ತಿಗಳೊಂದಿಗಿನ ಬಾಂಧವ್ಯ ಕೆಡದಂತೆ ಎಚ್ಚರ ವಹಿಸುವುದು ಉತ್ತಮ. ವ್ಯಾಪಾರಸ್ಥರಿಗೆ ಉತ್ತಮ ಸಮಯ ಇದಾಗಿದೆ. ವಿವಾಹಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಯಶಸ್ಸನ್ನು ಕಾಣಬಹುದು.
ಮಕರ ರಾಶಿ
ಬುಧ ಗ್ರಹದ ರಾಶಿ ಪರಿವರ್ತನೆಯು ಮಕರ ರಾಶಿಯವರಿಗೆ ಗೌರವ ಮತ್ತು ಪ್ರತಿಷ್ಟೆಯು ವೃದ್ಧಿಸುತ್ತದೆ. ಕೇಂದ್ರ ಅಥವಾ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಕಾರ್ಯಗಳು ಸುಲಭವಾಗಿ ಮುಗಿಯುತ್ತವೆ. ತಂದೆ-ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ. ವಿದೇಶಿ ಕಂಪನಿಗಳಿಗೆ ಸಂಬಂಧ ಪಟ್ಟ ಕಾರ್ಯಗಳನ್ನು ಪೂರ್ಣಗೊಳಿಸಲು ಉತ್ತಮ ಸಮಯವಾಗಿದೆ. ಸ್ನೇಹಿತರು ಮತ್ತು ಸಂಬಂಧಿಗಳೊಂದಿಗೆ ಉತ್ತಮ ಬಾಂಧವ್ಯ ಏರ್ಪಡುತ್ತದೆ.
ಕುಂಭ ರಾಶಿ
ಬುಧ ಗ್ರಹದ ರಾಶಿ ಪರಿವರ್ತನೆಯು ಕುಂಭ ರಾಶಿಯವರಿಗೆ ಮೊದಲಿಗೆ ಅಡ್ಡಿ-ಆತಂಕಗಳನ್ನು ತಂದೊಡ್ಡಿದರೂ ನಂತರದಲ್ಲಿ ಉತ್ತಮ ಫಲವನ್ನು ನೀಡುತ್ತದೆ. ವಿದ್ಯಾರ್ಥಿಗಳ ಪ್ರಗತಿಗೆ ಉತ್ತಮ ಸಮಯವಾಗಿದೆ. ಧಾರ್ಮಿಕ ಕಾರ್ಯಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವಿರಿ. ಸಂತಾನ ಸಂಬಂಧಿ ಸಮಸ್ಯೆ ನಿವಾರಣೆಯಾಗುತ್ತದೆ. ನಿಮ್ಮಿಂದ ಮಾಡಲ್ಪಟ್ಟ ಕಾರ್ಯಗಳು ಪ್ರಶಂಸೆಗೆ ಪಾತ್ರವಾಗುತ್ತವೆ. ನಿಮ್ಮ ಶಕ್ತಿ ಮತ್ತು ಸಾಮರ್ಥ್ಯವನ್ನು ಉತ್ತಮ ಕಾರ್ಯಗಳಿಗೆ ಬಳಸಿ.
ಇದನ್ನು ಓದಿ: ಅಧಿಕ ಮಾಸದಲ್ಲಿ ಈ ಕಾರ್ಯಗಳನ್ನು ಮಾಡಿ, ಅದೃಷ್ಟವಂತರಾಗಿ..!
ಮೀನ ರಾಶಿ
ರಾಶಿಯಿಂದ ಎಂಟನೇ ಮನೆಯಲ್ಲಿ ಬುಧನ ಗೋಚಾರವಾಗುವ ಕಾರಣ ಸ್ವಾಸ್ಥ್ಯ ಸಂಬಂಧಿ ಸಮಸ್ಯೆಗಳು ಎದುರಾಗುವ ಸಾಧ್ಯತೆ ಹೆಚ್ಚು. ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಲಭಿಸಿದರೂ ಕುತಂತ್ರದಿಂದ ಪಾರಾಗುವುದು ಕಷ್ಟಕರವಾಗುವುದು. ಜಗಳ ಮತ್ತು ವಿವಾದಗಳಿಂದ ದೂರವಿರುವುದು ಉತ್ತಮ. ಕೋರ್ಟ್ ವಿವಾದಗಳಿದ್ದರೆ ಪರಸ್ಪರ ಮಾತನಾಡಿ ಬಗೆಹರಿಸಿಕೊಳ್ಳುವುದು ಉತ್ತಮ. ಕೊಟ್ಟ ಹಣ ವಾಪಸ್ ಸಿಗುವ ಸಾಧ್ಯತೆ ಇದೆ. ದುಬಾರಿ ವಸ್ತುವನ್ನು ಕೊಳ್ಳುವ ಸಾಧ್ಯತೆ ಇದೆ.