ದೇವಾಲಯಕ್ಕೆ ಹೋದಾಗ ಯಾಂತ್ರಿಕವಾಗಿ ಗಂಟೆ ಬಾರಿಸುತ್ತೀರಾ? ಹಾಗಾದರೆ ಅದರ ಹಿಂದಿನ ಆಧ್ಯಾತ್ಮಿಕ ಮಹತ್ವ ನಿಮಗೆ ತಿಳಿದಿಲ್ಲ ಎಂದರ್ಥ. ಅದನ್ನು ಇಲ್ಲಿ ತಿಳಿದುಕೊಳ್ಳಬಹುದು. ಜತೆಗೆ ದೇವಾಲಯದಿಂದ ಹೊರಡುವಾಗ ಗಂಟೆ ಬಾರಿಸಬಾರದೇಕೆ ಎಂಬುದೂ ಇಲ್ಲಿದೆ.
ದೇವಾಲಯದ ಒಳಗೆ ಹೋಗುವಾಗ ಪ್ರತಿಯೊಬ್ಬ ಹಿಂದೂ ಕೂಡ ಭಕ್ತಿಭಾವದಿಂದ ತಲೆಬಾಗುವುದಲ್ಲದೆ, ಅಲ್ಲಿ ತೂಗುಬಿಟ್ಟಿರುವ ಗಂಟೆಯನ್ನು ಬಾರಿಸುತ್ತಾನೆ. ಅದೇಕೆ ದೇವಾಲಯದಲ್ಲಿ ಗಂಟೆಗಳಿರುತ್ತವೆ? ಹಿಂದೂ ಧರ್ಮದಲ್ಲಿ ಇರುವ ಅನೇಕ ಅದ್ಭುತ ವಿಚಾರಗಳಲ್ಲಿ , ದೇವಾಲಯದಲ್ಲಿ ಗಂಟೆ ಬಾರಿಸುವುದು ಕೂಡ ಒಂದು. ಯಾವುದೇ ದೇವಸ್ಥಾನದಲ್ಲಾದರೂ ಖಂಡಿತ ಒಂದಾದರೂ ಘಂಟೆಯಿರುತ್ತದೆ. ದೇವಾಲಯಕ್ಕೆ ಹೋಗುವ ಪ್ರತಿಯೊಬ್ಬರೂ ಗಂಟೆ ಬಾರಿಸುತ್ತಾರೆ. ನೀವು ದೇವಾಲಯವನ್ನು ಪ್ರವೇಶಿಸಿದ ತಕ್ಷಣ, ನಿಮಗರಿವಿಲ್ಲದೇ ಗಂಟೆಯನ್ನು ಬಾರಿಸುತ್ತೀರಿ. ಆದರೆ ಇದನ್ನು ಏಕೆ ಮಾಡುತ್ತಾರೆಂದು ಅನೇಕ ಜನರಿಗೆ ತಿಳಿದಿರುವುದಿಲ್ಲ. ಹಾಗಾದರೆ ಇದಕ್ಕಿರುವ ಮಹತ್ವವೇನು?
ಆಗಮಾರ್ಥಂ ತು ದೇವಾನಾಂ ಗಮನಾರ್ಥಂ ತು ರಕ್ಷಸಾಮ್ | ಆದೌ ಘಂಟಾ ರವಂ ನಿತ್ಯಂ ದೇವತಾಹ್ವಾನಲಕ್ಷಣಮ್- ಎಂಬುದು ಪ್ರಾಚೀನ ಆಡುನುಡಿ. ಈದನ್ನು ಪೂಜೆಯ ಆರಂಭದಲ್ಲಿ ಘಂಟಾರವ ಮಾಡುವಾಗಲೂ ಹೇಳುತ್ತಾರೆ. ಅಂದರೆ ದೇವರ ಆಗಮನಕ್ಕೆ ಹಾಗೂ ರಾಕ್ಷಸರ ನಿರ್ಗಮನಕ್ಕೆ ದೇವರ ಪೂಜೆಯ ಮೊದಲು ಘಂಟೆಯನ್ನು ಬಾರಿಸಬೇಕು ಎಂದು ಅದರರ್ಥ.
ಗಂಟೆಯ ಶಬ್ದವು ಓಂಕಾರವನ್ನು ಸೃಷ್ಟಿಸುತ್ತದೆ. ನೀವು ಗಮನ ಕೊಟ್ಟು ಕೇಳಿ. ಅದು ಓಂಕಾರವೇ ಹೊರತು ಬೇರೇನಲ್ಲ. ಓಂಕಾರಕ್ಕೆ ದುಷ್ಟ ಶಕ್ತಿಗಳು ಅಂಜುತ್ತವೆ. ದೇವತೆಗಳು ಆಕರ್ಷಿತರಾಗುತ್ತಾರೆ. ಹೀಗಾಗಿ ನಿಮ್ಮತ್ತ ದೇವತೆಗಳನ್ನು ಆಕರ್ಷಿಸಲು ಹಾಗೂ ದುಷ್ಟ ಶಕ್ತಿಗಳನ್ನು ಅಂದರೆ ರಾಕ್ಷಸರನ್ನು ದೂರ ಓಡಿಸಲು ಗಂಟೆಯನ್ನು ಮೊಳಗಿಸಲಾಗುತ್ತದೆ. ಗಂಟೆಯ ಶಬ್ದವು ದೇವರಿಗೆ ತುಂಬಾ ಪ್ರಿಯ. ಗಂಟೆ ಬಾರಿಸುವ ಮೂಲಕ ಭಕ್ತರು ದೇವಾಲಯಕ್ಕೆ ಪ್ರವೇಶಿಸಲು ಮತ್ತು ನಂತರ ಪೂಜಿಸಲು ದೇವರ ಅನುಗ್ರಹ ಪಡೆಯುತ್ತಾರೆ.
ದೇವಾಲಯದೊಳಕ್ಕೆ ಹೋಗುವಾಗ ನಾವು ಗಂಟೆ ಬಾರಿಸಿದರೆ, ಆ ಶಬ್ದವು ನಮ್ಮ ದೇಹದಲ್ಲಿನ ಎಲ್ಲಾ ನಕಾರಾತ್ಮಕ ಶಕ್ತಿಗಳನ್ನು ತೆಗೆದುಹಾಕುತ್ತದೆ. ದೇಹದಿಂದ ಎಲ್ಲಾ ರೀತಿಯ ನಕಾರಾತ್ಮಕ ಶಕ್ತಿಗಳನ್ನು ತೆಗೆದುಹಾಕಿದಾಗ ನಾವು ಏಕಾಗ್ರತೆಯಿಂದ ದೇವರನ್ನು ಪೂಜಿಸುತ್ತೇವೆ. ಗಂಟೆಯ ಶಬ್ದವು ದೇಹ ಮತ್ತು ಸುತ್ತಮುತ್ತಲಿನ ಪರಿಸರಕ್ಕೆ ಸಕಾರಾತ್ಮಕ ಶಕ್ತಿಯ ಹರಿವಿಗೆ ಸಹಾಯ ಮಾಡುತ್ತದೆ.
ನಾವು ದೇವಾಲಯಕ್ಕೆ ಹೋಗದಿರುವ ಸಮಯದಲ್ಲಿ ನಮ್ಮ ಮನಸ್ಸಿನಲ್ಲಿ ತಳಮಳ ಉಂಟಾಗುತ್ತಿರುತ್ತದೆ. ನಕಾರಾತ್ಮಕ ಆಲೋಚನೆಗಳೂ ಬರುತ್ತವೆ. ಆದರೆ ಪ್ರಾರ್ಥನೆಗೆ ಅಥವಾ ಪೂಜೆಗೆ ಮನಸ್ಸು ಶಾಂತವಾಗಿರಬೇಕಲ್ಲವೇ? ದೇವಾಲಯಕ್ಕೆ ಹೋಗುತ್ತಿದ್ದಂತೆ ಗಂಟೆ ಬಾರಿಸಿದ ತಕ್ಷಣ, ಮನಸಿನಲ್ಲಿರುವ ತಳಮಳ ಎಲ್ಲಾ ಹೋಗುತ್ತವೆ. ಶಂಖ ಮತ್ತು ಗಂಟೆಗಳ ದೈವಿಕ ಶಬ್ದವು ನಮ್ಮ ದೇಹದಿಂದ ನಕಾರಾತ್ಮಕ ಶಕ್ತಿ ಮತ್ತು ಆಲೋಚನೆಯನ್ನು ತೆಗೆದುಹಾಕುತ್ತದೆ. ಮನಸ್ಸನ್ನು ಶಾಂತಗೊಳಿಸಿ, ಪೂಜೆಗೆ ಹಾಗೂ ಪ್ರಾರ್ಥನೆಗೆ ಸಜ್ಜುಗೊಳಿಸುತ್ತದೆ.
Sudarshana Chakra: ಮಹಾವಿಷ್ಣುವಿನ ಕೈಯಲ್ಲಿನ ಸುದರ್ಶನ ಚಕ್ರ ಯಾಕೆ ಸದಾ ತಿರುಗುತ್ತಲೇ ಇರುತ್ತದೆ?
ಹಾಗಾದರೆ, ದೇವಾಲಯದಿಂದ ಹಿಂದಿರುಗುವಾಗ ಗಂಟೆ ಬಾರಿಸಬಾರದು ಎಂದು ಹೇಳುತ್ತಾರಲ್ಲ, ಅದ್ಯಾಕೆ? ಅದು ಹೀಗೆ. ನೀವು ದೇವಾಲಯದಲ್ಲಿ ದೇವರ ದರ್ಶನ ಮಾಡುತ್ತಿದ್ದಂತೆ, ಮನಸ್ಸು ಸಕಾರಾತ್ಮಕ ಶಕ್ತಿ ಮತ್ತು ಆಲೋಚನೆಗಳಿಂದ ಸ್ಪಂದಿಸುತ್ತದೆ. ಅದರ ನಂತರ, ನೀವು ಪ್ರೀತಿ ಮತ್ತು ಭಕ್ತಿಯಿಂದ ಹಿಂತಿರುಗಿದಾಗ, ಗಂಟೆ ಮತ್ತೆ ಬಾರಿಸಿದರೆ, ಸಕಾರಾತ್ಮಕ ಶಕ್ತಿಯು ಗಂಟೆಯ ಶಬ್ದದೊಂದಿಗೆ ನಿಮ್ಮಲ್ಲಿರುವ ಸ್ಪಂದನಗಳನ್ನು ನಿಮ್ಮಿಂದ ದೂರ ಹೋಗಿಸುತ್ತದೆ. ಆದ್ದರಿಂದ, ಸಕಾರಾತ್ಮಕ ಶಕ್ತಿಯನ್ನು ಕಾಪಾಡಿಕೊಳ್ಳಲು, ದೇವಾಲಯದಿಂದ ಹಿಂದಿರುಗುವಾಗ ಗಂಟೆ ಬಾರಿಸಬಾರದು.
ಸೃಷ್ಟಿ ಪ್ರಾರಂಭವಾದಾಗ ಪ್ರತಿಧ್ವನಿಸಿದ ಶಬ್ದವೇ ಈ ಘಂಟೆ ಶಬ್ದ ಎಂದು ಅನೇಕ ಜನರು ನಂಬುತ್ತಾರೆ. ಈ ಧ್ವನಿಯು ಓಂಕಾರ ಶಬ್ದದಂತೆ ಕೇಳಿಸುತ್ತದೆ. ಹ್ರೀಂಕಾರದಂತೆಯೂ ಕೇಳುತ್ತದೆ. ಇವೆರಡೂ ಸೃಷ್ಟಿಯ ಆದಿಯಲ್ಲಿ ಇದ್ದ ನಾದಗಳು. ಗಂಟೆ ಬಾರಿಸುವುದರಿಂದ ಓಂಕಾರ ಮಂತ್ರವನ್ನು ಪಠಿಸುವ ಸದ್ಗುಣ ಸಿಗುತ್ತದೆ ಎಂದು ಹೇಳಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಗಂಟೆ ಬಾರಿಸುವುದರಿಂದ ವಿಗ್ರಹಗಳಲ್ಲಿ ಆದಿಪ್ರಜ್ಞೆ, ದೈವಪ್ರಜ್ಞೆ ಜಾಗೃತವಾಗುತ್ತದೆ. ಅದು ನಿಮ್ಮನ್ನು ಆಶೀರ್ವದಿಸುತ್ತದೆ.
Mahabharat Story: ಮಹಾಭಾರತದಲ್ಲಿ ದ್ರೌಪದಿಗೆ ಒಬ್ಬ ಮಗಳಿದ್ದದ್ದು ನಿಮಗೆ ಗೊತ್ತೇ?
