Astrology Tips: ಮಂತ್ರಕ್ಕಿದೆ 108ರ ನಂಟು
ಮಂತ್ರ ಜಪಿಸಿ ಪೂಜೆ ಮಾಡುವುದು ನಮ್ಮ ಸಂಪ್ರದಾಯ. ಅನಾದಿಕಾಲದಿಂದಲೂ ಮಂತ್ರ ಪಠಣ ಮಾಡಲಾಗ್ತಿದೆ. 108 ಬಾರಿ ಮಂತ್ರ ಜಪಿಸುವಂತೆ ನಮಗೆ ಹಿರಿಯರು ಹೇಳ್ತಾರೆ. ಆದ್ರೆ 108 ಬಾರಿ ಏಕೆ ಮಂತ್ರ ಹೇಳ್ಬೇಕು ಎಂಬುದು ಅನೇಕರಿಗೆ ತಿಳಿದಿಲ್ಲ.
ದೇವರ ಪೂಜೆ ಮಾಡುವಾಗ ನಾವು ಮಂತ್ರವನ್ನು ಉಚ್ಚರಿಸುತ್ತೇವೆ. ಮಂತ್ರ ಜಪಿಸುವುದು ಈಗಿನ ಪದ್ಧತಿಯಲ್ಲ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮಂತ್ರ ಉಚ್ಚಾರಣೆಗೆ ಮಹತ್ವದ ಸ್ಥಾನವಿದೆ. ಪ್ರಾಚೀನ ಕಾಲದಿಂದಲೂ ನಾವು ಇದನ್ನು ನೋಡಬಹುದಾಗಿದೆ. ದೇವರ ನಾಮವನ್ನು ಜಪಿಸುತ್ತ ಪೂಜೆ ಮಾಡಿದ್ರೆ ಪುಣ್ಯ ದ್ವಿಗುಣಗೊಳ್ಳುತ್ತದೆ ಎನ್ನುವ ನಂಬಿಕೆ ನಮ್ಮಲ್ಲಿದೆ.
ಸಾಮಾನ್ಯವಾಗಿ ಬಹುತೇಕರು ಮಂತ್ರ (Mantra) ವನ್ನು ಹಾಗೆ ಜಪಿಸುತ್ತಾರೆ. ನೀವೂ ಮಂತ್ರವನ್ನು ಮಾಲೆಯಿಲ್ಲದೆ ಹೇಳ್ತಿದ್ದರೆ ಇಂದೇ ಅದನ್ನು ಬಿಟ್ಟುಬಿಡಿ. ಯಾಕೆಂದ್ರೆ ನೀವು ಮಾಲೆಯಿಲ್ಲದೆ ಅಸಂಖ್ಯಾತ ಮಂತ್ರ ಪಠಣ ಮಾಡಿದ್ರೂ ಪ್ರಯೋಜನ ಶೂನ್ಯ. ಮಂತ್ರದ ಫಲ ಸಿಗಬೇಕೆಂದ್ರೆ ನೀವು ಮಾಲೆ ಹಿಡಿದು ಜಪಿಸಬೇಕು ಎಂದು ನಮ್ಮ ಶಾಸ್ತ್ರಗಳಲ್ಲಿ ಹೇಳಲಾಗಿದೆ.
ಜನರು ರುದ್ರಾಕ್ಷಿ ಮಾಲೆ, ತುಳಸಿ ಮಾಲೆ ಸೇರಿದಂತೆ ವಿವಿಧ ವಸ್ತುಗಳಿಂದ ತಯಾರಿಸಿದ ಮಾಲೆ ಹಿಡಿದು ಮಂತ್ರ ಪಠಿಸುವುದನ್ನು ನೀವು ನೋಡಿರಬಹುದು. ಹಾಗೆ ಮಂತ್ರ ಪಠಣಕ್ಕೆ ಸಂಖ್ಯೆ ಕೂಡ ನಿಗಧಿಪಡಿಸಲಾಗಿದೆ. ಮಾಲೆ ಹಿಡಿದು 108 ಬಾರಿ ಮಂತ್ರ ಜಪಿಸಬೇಕು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಮಂತ್ರಕ್ಕೂ, 108ಕ್ಕೂ ಏನು ಸಂಬಂಧ ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತದೆ. ಮಂತ್ರ ಪಠಣ, ಮಾಲೆಯ ಮಣಿ ಹಾಗೂ ಮಂತ್ರದ ಸಂಖ್ಯೆ ಎಲ್ಲಕ್ಕೂ ಒಂದು ಸಂಬಂಧವಿದೆ. ಯಾಕೆ ಮಾಲೆಯಲ್ಲಿ 108 ಮಣಿ ಇರುತ್ತೆ ಹಾಗೆ ಯಾಕೆ 108 ಮಂತ್ರವನ್ನು ಹೇಳಬೇಕು?
ಮಂತ್ರವನ್ನು 108 ಬಾರಿ ಏಕೆ ಜಪಿಸಬೇಕು? : 108 ಸಾಮಾನ್ಯ ಸಂಖ್ಯೆಯಲ್ಲ. ಜ್ಯೋತಿಷ್ಯ (Astrology) ದ ಪ್ರಕಾರ 108ರ ಸಂಖ್ಯೆ ಮಂಗಳಕರ ಸಂಖ್ಯೆಯಾಗಿದೆ. 108 ಬಾರಿ ಮಂತ್ರವನ್ನು ಪಠಿಸದೆ ಯಾವುದೇ ಪೂಜೆ ಮಾಡಿದ್ರೂ ಅದನ್ನು ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಮಂತ್ರಗಳ ಮೂಲ ವೇದ ಎನ್ನುವುದು ನಿಮಗೆಲ್ಲ ತಿಳಿಸಿದೆ. ವೇದ (Veda) ಗಳು ಸಂಸ್ಕೃತದ ಜೊತೆ ಸಂಬಂಧ ಹೊಂದಿವೆ. ನಾವು ಪಠಿಸುವ ಎಲ್ಲ ಮಂತ್ರಗಳು ಸಂಸ್ಕೃತದಲ್ಲಿರುತ್ತವೆ.
ಸಂಗಾತಿ ತಮ್ಮನ್ನು ಹೊಗಳಲಿ ಎಂದು ಬಯಸುವ Zodiac Signs!
ಎಲ್ಲಾ ಭಾಷೆಗೆ ಮೂಲ ಸಂಸ್ಕೃತ. 108ರ ಸಂಖ್ಯೆಗೂ ಹಾಗೂ ಸಂಸ್ಕೃತಕ್ಕೂ ಏನು ನಂಟು ಎಂದು ನೀವು ಕೇಳಬಹುದು. ಸಂಸ್ಕೃತ ಭಾಷೆಯಲ್ಲಿ 54 ವರ್ಣಮಾಲೆಗಳಿವೆ. ಪ್ರತಿ ವರ್ಣಮಾಲೆಯನ್ನು ಸ್ತ್ರೀಲಿಂಗ ಮತ್ತು ಪುಲ್ಲಿಂಗ ಎಂದು ಎರಡು ಭಾಗ ಮಾಡಲಾಗಿದೆ. ಈ ಎರಡು ಭಾಗವನ್ನು ಶಿವ ಮತ್ತು ಶಕ್ತಿ ರೂಪದಲ್ಲಿ ನೋಡಲಾಗುತ್ತದೆ. ನೀವು 54ರ ಸಂಖ್ಯೆಯನ್ನು 2 ಸಂಖ್ಯೆಯಿಂದ ಗುಣಿಸಿದ್ರೆ 108 ಬರುತ್ತದೆ. ಹಾಗಾಗಿಯೇ 108ರ ಸಂಖ್ಯೆಯನ್ನು ಮಂಗಳಕರವೆಂದು ಭಾವಿಸಲಾಗುತ್ತದೆ. ಇದೇ ಕಾರಣಕ್ಕೆ ಪ್ರತಿ ಮಂತ್ರವನ್ನು 108 ಬಾರಿ ಜಪಿಸಬೇಕು ಎನ್ನಲಾಗುತ್ತದೆ. ಜ್ಯೋತಿಷ್ಯದಲ್ಲಿ ಈ ಸಂಖ್ಯೆಗೆ ಇನ್ನೊಂದು ವಿಶೇಷ ಪ್ರಾಮುಖ್ಯತೆ ಇದೆ. ನಮ್ಮಲ್ಲಿ ಒಟ್ಟೂ 12 ರಾಶಿಗಳಿವೆ. ಹಿಂದೂ ಧರ್ಮದಲ್ಲಿ 9 ಗ್ರಹಗಳಿವೆ. 12 ರಾಶಿಯನ್ನು 9 ಗ್ರಹಗಳಿಂದ ಗುಣಿಸಿದರೆ 108 ಸಂಖ್ಯೆ ಬರುತ್ತದೆ.
ಸೂರ್ಯನಿಗೂ ಇದೆ ಸಂಬಂಧ : ಇನ್ನೊಂದು ಕಡೆಯಿಂದ ನೋಡಿದ್ರೆ ಸೂರ್ಯನ ವ್ಯಾಸವು ಭೂಮಿಯ ವ್ಯಾಸಕ್ಕಿಂತ 108 ಪಟ್ಟು ಹೆಚ್ಚಿರುತ್ತದೆ. ಹಾಗೆ ಸೂರ್ಯನು ವರ್ಷವಿಡೀ 21,600 ಕಾಲಗಳನ್ನು ಬದಲಾಯಿಸುತ್ತಾನೆ. ಇದನ್ನು ಉತ್ತರಾಯಣ ಮತ್ತು ದಕ್ಷಿಣಾಯನ ಎಂದು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. 21600ನ್ನು ಎರಡು ಭಾಗ ಮಾಡಿದ್ರೆ ಸಂಖ್ಯೆ 10800 ಆಗುತ್ತದೆ. ಅದನ್ನು ಚಿಕ್ಕದು ಮಾಡಿದ್ರೆ 108ರ ಸಂಖ್ಯೆಗೆ ಬಂದು ನಿಲ್ಲುತ್ತದೆ.
Hindu Wedding: ಗೋಧೂಳಿ ಮದ್ವೆ ಮಹೂರ್ತ ಯಾಕಿಡ್ತಾರೆ ಗೊತ್ತಾ?
ವೈಜ್ಞಾನಿಕ ಕಾರಣ : ನಾವು 108ರ ಸಂಖ್ಯೆಯನ್ನು ವೈಜ್ಞಾನಿಕವಾಗಿ ನೋಡಿದಾಗ, ನಾವು 24 ಗಂಟೆಯಲ್ಲಿ 21 ಸಾವಿರದ 6 ನೂರು ಬಾರಿ ಉಸಿರಾಟ ಮಾಡ್ತೆವೆ. ದಿನದಲ್ಲಿ ನಾವು 12 ಗಂಟೆ ಸಕ್ರಿಯವಾಗಿದ್ದರೆ ಉಳಿದ 12 ಗಂಟೆ ವಿಶ್ರಾಂತಿಗೆ ನೀಡ್ತೆವೆ. ಹಾಗಾಗಿ ಈ 21600ನ್ನು ನೀವು ಅರ್ಧ ಮಾಡಿದ್ರೆ 10,800 ಬರುತ್ತದೆ. ಯಾವುದೇ ವ್ಯಕ್ತಿ ಪ್ರತಿ ದಿನ 10800 ಬಾರಿ ಮಂತ್ರ ಜಪಿಸಲು ಸಾಧ್ಯವಿಲ್ಲ. ಹಾಗಾಗಿ ಅದನ್ನು 108ಕ್ಕೆ ಇಳಿಸಲಾಗಿದೆ.