Asianet Suvarna News Asianet Suvarna News

ಚಂದ್ರಗ್ರಹಣ ಹಿನ್ನೆಲೆ; ನ.8ರಂದು ಈ ದೇವಾಲಯಗಳು ಬಂದ್

ಖಗ್ರಾಸ ಚಂದ್ರ ಗ್ರಹಣ ಹಿನ್ನೆಲೆ
ನಾಡಿನೆಲ್ಲಡೆ ಹಲವು ಪ್ರಮುಖ ದೇವಾಲಯಗಳು ಬಂದ್
ದೇವರ ದರ್ಶನಕ್ಕೆ ಸೀಮಿತ ಸಮಯದ ಅವಕಾಶ
ಪ್ರಸಾದ, ಅನ್ನ ಸಂತರ್ಪಣೆ ಇರದು

Lunar eclipse 2022 popular temples will be having restricted darshan timings skr
Author
First Published Nov 7, 2022, 5:03 PM IST | Last Updated Nov 7, 2022, 5:03 PM IST

ನವೆಂಬರ್ 8ರಂದು ಗ್ರಸ್ತೋದಯ ಖಗ್ರಾಸ ಚಂದ್ರಗ್ರಹಣ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಹಲವು ಪ್ರಮುಖ ದೇವಾಲಯಗಳ ಬಾಗಿಲು ಮುಚ್ಚಿರುತ್ತದೆ. ಯಾವ ದೇವಾಲಯಗಳು ಬಂದ್ ಆಗಿರುತ್ತವೆ ಎಂಬ ವಿವರ ಇಲ್ಲಿದೆ..

ಕಾರವಾರ, ಉತ್ತರಕನ್ನಡ
ಚಂದ್ರಗ್ರಹಣ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ದರ್ಶನ ಮಾತ್ರವಿರುತ್ತದೆ. ಆದರೆ, ಪೂಜೆ- ಪುನಸ್ಕಾರ, ಅನ್ನ ಸಂತರ್ಪಣೆ ವ್ಯವಸ್ಥೆಯಿರುವುದಿಲ್ಲ. ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿ ಚಂದ್ರಗ್ರಹಣದ ಹಿನ್ನೆಲೆ ದೇವರ ದರ್ಶನದ ವೇಳೆಯಲ್ಲಿ ಬದಲಾವಣೆ ಮಾಡಲಾಗಿದೆ. ನವೆಂಬರ್ 8, ಮಂಗಳವಾರ ಬೆಳಗ್ಗೆ 6ರಿಂದ 9 ಗಂಟೆಯವರೆಗೆ ದೇವರ ಸ್ಪರ್ಶ ದರ್ಶನಕ್ಕೆ ಅವಕಾಶವಿರುತ್ತದೆ. ಮಧ್ಯಾಹ್ನ 2.30ರಿಂದ ಸಂಜೆ 6.30 ರವರೆಗೆ ಅಂದರೆ ಗ್ರಹಣ ಕಾಲದಲ್ಲೂ ಭಕ್ತರಿಗೆ ದೇವರ ಸ್ಪರ್ಶ ದರ್ಶನಕ್ಕೆ  ಅವಕಾಶವಿರುತ್ತದೆ. ಆದರೆ, ಈ ದಿನ ಮಧ್ಯಾಹ್ನ ಮತ್ತು ಸಂಜೆ ಭಕ್ತರಿಗೆ ನೀಡುವ ಪ್ರಸಾದ ಭೋಜನ ವ್ಯವಸ್ಥೆಯಿರುವುದಿಲ್ಲ. 

ಗ್ರಹಣ ಹಿನ್ನೆಲೆ ಮುರುಡೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಯಾವುದೇ ಪೂಜೆ- ಪುನಸ್ಕಾರ, ಅನ್ನಪ್ರಸಾದವಿರುವುದಿಲ್ಲ. ಬೆಳಗ್ಗೆ 6ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಾಗೂ  ಮಧ್ಯಾಹ್ನ 3ರಿಂದ ರಾತ್ರಿ 8.30ರವರೆಗೆ ದರ್ಶನಕ್ಕೆ ಮಾತ್ರ ಅವಕಾಶವಿರುತ್ತದೆ. ಗ್ರಹಣ ಬಿಟ್ಟ ನಂತರ ಮಹಾಪೂಜೆ, ತೀರ್ಥ, ಪ್ರಸಾದ ವಿತರಣೆ ಇರುವುದು.

Lunar eclipse 2022: ಗ್ರಹಣ ಕಾಲದಲ್ಲಿ ಆಹಾರ ಸೇವನೆ ನಿಯಮವೇನು?

ಇಡಗುಂಜಿ ಮಹಾಗಣಪತಿ ದೇವಸ್ಥಾನದಲ್ಲಿ ಗ್ರಹಣ ಹಿನ್ನೆಲೆ ಬೆಳಗ್ಗೆ 10 ಗಂಟೆಗೆ ದೇವಸ್ಥಾನದ ಬಾಗಿಲು ಮುಚ್ಚಲಾಗುವುದು. ಸಂಜೆ ಗ್ರಹಣ ಬಿಟ್ಟ ಬಳಿಕವೇ ದೇವಸ್ಥಾನ ತೆರೆಯಲಾಗುವುದು. ಈ ಸಂದರ್ಭದಲ್ಲಿ ಕೇವಲ ದರ್ಶನಕ್ಕೆ ಅವಕಾಶವಿದ್ದು, ಯಾವುದೇ ಸೇವೆ ಹಾಗೂ ಊಟ ವ್ಯವಸ್ಥೆ ಇರುವುದಿಲ್ಲ. 

ಶಿರಸಿ ಮಾರಿಕಾಂಬಾ ದೇವಸ್ಥಾನದಲ್ಲಿ ಬೆಳಗ್ಗೆ 8 ಗಂಟೆಗೆ ಮಾರಿಕಾಂಬೆಗೆ ಮಹಾಪೂಜೆ ನಡೆಯುವುದು. ನಂತರ ಬೆಳಗ್ಗೆ 11 ಗಂಟೆಯವರೆಗೆ ಮಾತ್ರ ದೇವಿಯ ದರ್ಶನಕ್ಕೆ ಅವಕಾಶ ಇರುವುದು. 11 ಗಂಟೆಯ ಬಳಿಕ ಗ್ರಹಣ ಮೋಕ್ಷ‌ ಕಾಣುವವರೆಗೂ ದೇವಳ ಕ್ಲೋಸ್ ಆಗಿರುತ್ತದೆ. ಗ್ರಹಣ ಮೋಕ್ಷದ ಬಳಿಕ ರಾತ್ರಿ 9 ಗಂಟೆಗೆ ಮಹಾಪೂಜೆ ನಡೆಯಲಿದೆ. 

ತುಮಕೂರು
ರಾಹು ಗ್ರಸ್ಥ ಚಂದ್ರಗ್ರಹಣ ಹಿನ್ನೆಲೆ ಇಲ್ಲಿನ ಕೊರಟಗೆರೆ ತಾಲ್ಲೂಕಿನ ಪ್ರಸಿದ್ಧ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಮುಚ್ಚಲಾಗಿರುತ್ತದೆ. ಮಂಗಳವಾರ ಸಂಜೆ 5 ಗಂಟೆಯಿಂದ ಬುಧವಾರ ಬೆಳಗ್ಗೆ 6:30 ರವರೆಗೆ ಭಕ್ತಾದಿಗಳ ದರ್ಶನಕ್ಕೆ ದೇವಾಲಯ ಬಂದ್ ಆಗಿರುವುದು. ಇನ್ನು, ದೇವರಾಯನದುರ್ಗ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ ಕೂಡಾ ಮಂಗಳವಾರ ಮಧ್ಯಾಹ್ನ 1 ಗಂಟೆಯಿಂದ ಬುಧವಾರ ಬೆಳಗ್ಗೆವರೆಗೂ ಬಂದ್ ಆಗಿರುತ್ತದೆ. 

ಕೊಪ್ಪಳ
ಗ್ರಸ್ತೋದಯ ಚಂದ್ರಗ್ರಹಣ ಹಿನ್ನಲೆ ನ.8ರಂದು ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಕೇಂದ್ರವೆನಿಸಿದ ಶ್ರೀಹುಲಿಗೆಮ್ಮ ದೇವಿಯ ದರ್ಶನ ಇರುವುದಿಲ್ಲ. ಕೊಪ್ಪಳ ತಾಲೂಕಿನ ಹುಲಿಗಿಯ ಶ್ರೀಹುಲಿಗೆಮ್ಮ ದೇವಿ ದೇವಸ್ಥಾನವನ್ನು ಮಂಗಳವಾರ ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 8 ಗಂಟೆಯವರೆಗೂ ಬಂದ್ ಮಾಡಲಾಗುತ್ತದೆ. ಇಲ್ಲಿ ಹುಣ್ಣಿಮೆ ಹಾಗೂ ಮಂಗಳವಾರದಂದು ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ನಾಳೆ ಹುಣ್ಣಿಮೆಯೂ ಆಗಿದ್ದು, ಮಂಗಳವಾರ ಕೂಡಾ ಹೌದಾದರೂ ಗ್ರಹಣ ಹಿನ್ನೆಲೆಯಲ್ಲಿ ಮಧ್ಯಾಹ್ನದವರೆಗೆ ಮಾತ್ರ ದೇವಿ ದರ್ಶನ ಇರುವುದು. 

ಈ ಬಾರಿಯ ಚಂದ್ರ ಗ್ರಹಣ ಕರ್ನಾಟಕದಲ್ಲಿ ಎಷ್ಟೊತ್ತಿಗೆ ಗೋಚರವಾಗುತ್ತದೆ?

ಇನ್ನು ಕೊಪ್ಪಳ ನಗರದಲ್ಲಿರುವ ಪ್ರಸಿದ್ಧ ಗವಿಸಿದ್ದೇಶ್ವರ ಮಠದ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಇಲ್ಲಿ ಗ್ರಹಣದ ಸಮಯದಲ್ಲಿಯೂ ಭಕ್ತರಿಗೆ ದರ್ಶನವಿದ್ದು, ಚಂದ್ರಗ್ರಹಣ ಮುಕ್ತಾಯದ ಬಳಿಕ ಅಭಿಷೇಕ ನೆರವೇರಿಸಲಾಗುವುದು.

ಇದೇ ಕಾರಣದಿಂದಾಗಿ ಅಂಜನಾದ್ರಿ ಬೆಟ್ಟದ ದರ್ಶನ ಕೂಡಾ ಇರುವುದಿಲ್ಲ. ನ.8ರಂದು ಬೆಳಗ್ಗೆ 7ರಿಂದ ಮಧ್ಯಾಹ್ನ 1 ಗಂಟೆವರೆಗೆ ದೇವಸ್ಥಾನದ ದರ್ಶನ ಪಡೆಯಲು ಅವಕಾಶವಿದ್ದು, ನಂತರ ದೇವಸ್ಥಾನ ಬಂದ್ ಮಾಡಲು ಆಡಳಿತಾಧಿಕಾರಿ ಆದೇಶ ನೀಡಿದ್ದಾರೆ. 

ಬೆಂಗಳೂರು ಗ್ರಾಮಾಂತರ
ಐತಿಹಾಸಿಕ ಘಾಟಿ ಸುಬ್ರಮಣ್ಯ ದಲ್ಲಿ ನ.8ರಂದು ಬೆಳಿಗ್ಗೆ 10.30ರವರೆಗೆ ಮಾತ್ರ ದರ್ಶನಕ್ಕೆ ‌ಅವಕಾಶವಿರುತ್ತದೆ. ಬಳಿಕ ಸಂಜೆ 7.30ರವರೆಗೆ ದೇವಾಲಯ ‌ಬಂದ್ ಆಗಿರಲಿದ್ದು, ಸಂಜೆ ದೇವಾಲಯ ಶುದ್ದೀಕರಣ ಮಾಡಿದ ಬಳಿಕ ದರ್ಶನಕ್ಕೆ ಅವಕಾಶ ನೀಡಲಾಗುವುದು. 

ನವಗ್ರಹಗಳನ್ನೇ ಬಂಧಿಸಿದ್ದ ರಾವಣ! ಆಂಜನೇಯ ಭಕ್ತರಿಗೆ ಶನಿ ಕಾಡದಿರಲು ಇಲ್ಲಿದೆ ಕಾರಣ

ದಕ್ಷಿಣ ಕನ್ನಡ
ದ‌.ಕ ಜಿಲ್ಲೆಯ ಕಡಬ ತಾಲೂಕಿನ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲೂ ಚಂದ್ರ ಗ್ರಹಣ ಹಿನ್ನೆಲೆ ಸೇವೆಗಳ ಜೊತೆಗೆ ಅನ್ನದಾನವೂ ನ.8ರಂದು ಸ್ಥಗಿತವಾಗಲಿದೆ. ಅರ್ಚಕರ ನಿರ್ದೇಶನದಂತೆ ದೇವರ ದರ್ಶನದ ಸಮಯದಲ್ಲೂ ವ್ಯತ್ಯಯವಾಗಲಿದ್ದು, ಬೆಳಗ್ಗೆ 9 ಗಂಟೆಯಿಂದ 11.30ರ ತನಕ ದರ್ಶನಕ್ಕೆ ಅವಕಾಶ ಇರಲಿದೆ. ರಾತ್ರಿ 7.30ರಿಂದ 9ರ ತನಕ ಶ್ರೀ ದೇವರ ದರ್ಶನಕ್ಕೆ ಅವಕಾಶ ಇರುವುದು. 

ಚಾಮರಾಜನಗರ
ಸೇವೆ ಅಬಾಧಿತ
ಗ್ರಹಣ ವೇಳೆ ಮಲೆಮಹದೇಶ್ಚರ ಬೆಟ್ಟದಲ್ಲಿ ದೇಗುಲ ಬಂದ್ ಇರೋದಿಲ್ಲ. ಭಕ್ತರಿಗೆ ಎಂದಿನಂತೆ ದರ್ಶನಾವಕಾಶ ಹಾಗೂ ಎಂದಿನಂತೆ ಪ್ರಸಾದ ವ್ಯವಸ್ಥೆಯು ಇರಲಿದೆ. ಸೇವೆಗಳು ಅಬಾಧಿತವಾಗಿರಲಿವೆ ಎಂದು ಮಲೆ ಮಹದೇಶ್ವರ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಕಾತ್ಯಾಯಿನಿದೇವಿ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios