ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ₹155.95 ಕೋಟಿ ವಾರ್ಷಿಕ ಆದಾಯದೊಂದಿಗೆ ರಾಜ್ಯದ ಅಗ್ರ ಶ್ರೀಮಂತ ದೇವಾಲಯವಾಗಿದೆ. ನಾಗದೋಷ ಪರಿಹಾರಕ್ಕೆ ಪ್ರಸಿದ್ಧವಾದ ಈ ಕ್ಷೇತ್ರದಲ್ಲಿ ಸರ್ಪಸಂಸ್ಕಾರ, ನಾಗಪ್ರತಿಷ್ಠೆ ಮುಂತಾದ ಪೂಜೆಗಳು ಜನಪ್ರಿಯ. ಶಕ್ತಿ ಯೋಜನೆಯಿಂದಾಗಿ ಭಕ್ತರ ಸಂಖ್ಯೆ ಹೆಚ್ಚಳವಾಗಿ ಆದಾಯದಲ್ಲಿ ಏರಿಕೆ ಕಂಡುಬಂದಿದೆ. ವಾಸುಕಿಗೆ ಸಮರ್ಪಿತವಾದ ಈ ದೇವಾಲಯವು ಆದಿಶಂಕರರ ಕಾಲದಿಂದಲೂ ಪೂಜಿಸಲ್ಪಡುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ಈಗ ಮತ್ತೊಮ್ಮೆ ನಂಬರ್​ 1 ಸ್ಥಾನ ಪಡೆದುಕೊಂಡಿದೆ. ಇಲ್ಲಿ ಈಶ್ವರ ಪುತ್ರ ಷಣ್ಮುಖ ದೇವರನ್ನು ನಾಗ ರೂಪದಲ್ಲಿ ಸುಬ್ರಹ್ಮಣ್ಯ ಎಂಬ ಹೆಸರಿನಲ್ಲಿ ಆರಾಧಿಸಲಾಗುತ್ತದೆ. ನಾಗಾರಾಧನೆ ಇಲ್ಲಿ ಅತ್ಯಂತ ಮಹತ್ವವನ್ನು ಪಡೆದುಕೊಂಡಿರುವ ಕಾರಣ, ದೇಶ-ವಿದೇಶಗಳಿಂದ ಜನರು ಇಲ್ಲಿಗೆ ಆಗಮಿಸುತ್ತಾರೆ. ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷಬಲಿ ಹಾಗೂ ಇತರ ಪೂಜಾದಿಗಳನ್ನು ಸಲ್ಲಿಸಲು ಭಕ್ತರ ಗುಂಪು ಬರುತ್ತದೆ. ಕುಕ್ಕೆ ಸುಬ್ರಹ್ಮಣ್ಯ ನಾಗಗಳ ವಾಸಸ್ಥಾನವಾಗಿದೆ. ಇಲ್ಲಿ ಶ್ರೀ ಸುಬ್ರಹ್ಮಣ್ಯನಿಗೆ ಸಲ್ಲಿಸಿದ ಪೂಜೆಯು ಸರ್ಪರಾಜನಾದ ವಾಸುಕಿಗೆ ಸಲ್ಲುವುದು. ಹಾಗಾಗಿ ಈ ಸ್ಥಳವು ಎಲ್ಲಾ ತರಹದ ನಾಗದೋಷಗಳ ಪರಿಹಾರ ಸ್ಥಳವಾಗಿ ನಂಬಲಾಗಿದೆ. ಈ ಹಿನ್ನೆಲೆಯಲ್ಲಿ, ಕುಕ್ಕೆ ಸುಬ್ರಹ್ಮಣ್ಯ ಆದಾಯದ ವಿಷಯದಲ್ಲಿ ಅತ್ಯಂತ ಶ್ರೀಮಂತ ದೇಗುಲ ಎಂದು ಹೆಸರುವಾಸಿಯಾಗಿದೆ. ಇದೀಗ ಈ ವರ್ಷದ ಆದಾಯದಲ್ಲಿ ಭಾರಿ ಏರಿಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ನಂಬರ್​ 1 ಸ್ಥಾನವನ್ನು ಈ ಬಾರಿಯೂ ಭದ್ರಗೊಳಿಸಿಕೊಂಡಿದೆ ದೇಗುಲ. 

ವರ್ಷದಿಂದ ವರ್ಷಕ್ಕೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆದಾಯದಲ್ಲಿ ಭಾರಿ ಹೆಚ್ಚಳವಾಗುತ್ತಿದೆ. ಕಳೆದ ವರ್ಷವೂ ಪ್ರಥಮ ಸ್ಥಾನದಲ್ಲಿತ್ತು. 2024-25ನೇ ಸಾಲಿನ ವಾರ್ಷಿಕ ಆದಾಯ 155.95 ಕೋಟಿ ರೂ. ಏರಿಕೆ ಆಗಿದೆ. ಸರ್ಪ ಸಂಸ್ಕಾರ ಸೇರಿದಂತೆ ವಿವಿಧ ಸೇವೆ ಹಾಗೂ ಇತರ ಮೂಲಗಳಿಂದ ಒಟ್ಟು 155.95 ಕೋಟಿ ರೂ ಆದಾಯವಾಗಿದೆ. ಕಳೆದ ವರ್ಷ ವಾರ್ಷಿಕ ಆದಾಯ 146.01 ಕೋಟಿ ರೂ. ಆಗಿತ್ತು. ಅಂದರೆ ಕಳೆದ ವರ್ಷಕ್ಕಿಂತ ಈ ಬಾರಿ 9.94 ಕೋಟಿ ರೂ. ಆದಾಯ ಏರಿಕೆ ಆಗಿದೆ. ಇದಕ್ಕೆ ಹಲವಾರು ಕಾರಣಗಳು ಇದ್ದರೂ ಕರ್ನಾಟಕದ ಶಕ್ತಿ ಯೋಜನೆ ಪರಿಣಾಮವೂ ಒಂದು ಎನ್ನಲಾಗಿದೆ. ಉಚಿತ ಬಸ್​ ಸೌಕರ್ಯ ಇದ್ದ ಹಿನ್ನೆಲೆಯಲ್ಲಿ ಮಹಿಳೆಯರು ಕುಕ್ಕೆ ದೇವಸ್ಥಾನಕ್ಕೆ ಭಾರಿ ಪ್ರಮಾಣದಲ್ಲಿ ಹೋಗಿದ್ದರ ಪರಿಣಾಮವಾಗಿ ಆದಾಯದಲ್ಲಿ ಹೆಚ್ಚಳ ಸಾಧ್ಯತೆ ಇರಬಹುದು ಎನ್ನಲಾಗುತ್ತಿದೆ.

ಗರ್ಭಿಣಿ ಮುಸ್ಲಿಂ ಮಹಿಳೆಯ ಪ್ರಾಣ ಕಾಪಾಡಿದ ಗಣಪ! ಮಗುವಿಗೂ ಗಣೇಶನ ಹೆಸರೇ...

 ಇನ್ನು ಇದರ ಆದಾಯದ ಲೆಕ್ಕಾಚಾರ ಹೇಳುವುದಾದರೆ; 2020-21ರಲ್ಲಿ 68.94 ಕೋಟಿ ರೂ; 2021-22 ರಲ್ಲಿ 72.73 ಕೋಟಿ ರೂ; 2022-23ರಲ್ಲಿ 123 ಕೋಟಿ ರೂ; 2023-24ರಲ್ಲಿ 146.01 ಕೋಟಿ ರೂ; 2024-25ರಲ್ಲಿ 155.95 ಕೋಟಿ ರೂಗಳಾಗಿವೆ. ಕುಕ್ಕೆ ಸುಬ್ರಹ್ಮಣ್ಯ ರಾಜ್ಯದ ನಂಬರ್​ 1 ಶ್ರೀಮಂತ ದೇಗುಲ ಎನ್ನಿಸಿದರೆ, ಎರಡನೆಯ ಸ್ಥಾನದಲ್ಲಿ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ದೇವಸ್ಥಾನ ಇದೆ. ಈ ದೇವಸ್ಥಾನದ ಆದಾಯ 31 ಕೋಟಿ ರೂಪಾಯಿಯಾಗಿದ್ದು, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನವು 20 ಕೋಟಿ ರೂ.ಗಳ ಅಂದಾಜು ಆದಾಯದೊಂದಿಗೆ ಮೂರನೇ ಸ್ಥಾನದಲ್ಲಿದೆ.

ಇನ್ನು ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಇತಿಹಾಸದ ಕುರಿತು ಹೇಳುವುದಾದರೆ, ಇದು ಆದಿ ಶಂಕರರ ಕಾಲದಿಂದ ಸ್ಥಾನಿಕ ಸ್ಮಾರ್ತ ಮೊರೋಜ (ಮೋರ-ಮೈಯೂರ ಓಜಜಾಚಾರ್ಯ) ಮನೆತನದ ಆಡಳಿಕೆ ಒಳಪಟ್ಟಿದ್ದ ದೇವಾಲಯವಾಗಿದೆ. ಹಿಂದೆ ಸ್ಮಾರ್ತ ಬ್ರಾಹ್ಮಣರಿಂದ ಪೂಜೆಗೊಳ್ಳುತ್ತಿದ್ದ ಸುಬ್ರಹ್ಮಣ್ಯ ಈಗ ಮಾಧ್ವ ಬ್ರಾಹ್ಮಣರ ಪೂಜಾಧೀನದಲ್ಲಿ ಈ ದೇವಾಲಯವಿದೆ. ಸದ್ಯ ಈಗ ಕರ್ನಾಟಕ ಸರಕಾರದ ಮುಜರಾಯಿ ಇಲಾಖೆಗೆ ಒಳಪಟ್ಟಿದೆ. ಗರ್ಭಗುಡಿಯ ಮಧ್ಯಭಾಗದಲ್ಲಿ ಶ್ರೀ ದೇವರ ಮೂರ್ತಿಯಿದೆ. ಅದರ ಮೇಲಿನ ಹಂತದಲ್ಲಿ ಶ್ರೀ ಸುಬ್ರಹ್ಮಣ್ಯ ಮೂರ್ತಿ ಮತ್ತು ವಾಸುಕಿ ಹಾಗೂ ಕೆಳ ಹಂತದಲ್ಲಿ ಆದಿಶೇಷನ ಮೂರ್ತಿಗಳಿವೆ. ಇನ್ನು ಪೌರಾಣಿಕ ಹಿನ್ನೆಲೆ ಹೇಳುವುದಾದರೆ, ಶ್ರೀ ಕ್ಷೇತ್ರವು ಕುಮಾರಧಾರ ನದಿ ತೀರದಲ್ಲಿದೆ. ದುಷ್ಟ ರಾಕ್ಷಸರ ದಮನಕ್ಕಾಗಿ ಜನ್ಮವೆತ್ತಿದ ಕುಮಾರಸ್ವಾಮಿಯು ತಾರಕಾದಿ ಅಸುರರನ್ನು ಯುದ್ಧದಲ್ಲಿ ಸಂಹರಿಸಿ, ಸೋದರ ಗಣಪತಿಯ ಜೊತೆ ಕುಮಾರಪರ್ವತಕ್ಕೆ ಬಂದಾಗ ದೇವೇಂದ್ರನು ತನ್ನ ಮಗಳಾದ ದೇವಸೇನೆಯನ್ನು ಕುಮಾರಸ್ವಾಮಿಗೆ ಕುಮಾರಧಾರ ತೀರ್ಥದ ತಟದಲ್ಲಿ ಮಾರ್ಗಶಿರ ಶುದ್ಧ ಷಷ್ಠಿಯ ದಿನ ವಿವಾಹ ಮಾಡಿಕೊಟ್ಟನು. ಅದೇ ವೇಳೆ ಅಲ್ಲಿಯೇ ತಪಸ್ಸನ್ನಾಚರಿಸುತ್ತಿದ್ದ ನಾಗರಾಜನಾದ ವಾಸುಕಿಯ ಪ್ರಾರ್ಥನೆಯನ್ನು ಮನ್ನಿಸಿ ಸುಬ್ರಹ್ಮಣ್ಯನು ತಾನು ದೇವಸೇನಾ ಸಮೇತನಾಗಿ ಒಂದಂಶದಿಂದ ಅವನಲ್ಲಿ ನಿತ್ಯ ಸನ್ನಿಹಿತನಾಗಿ ಈ ಕ್ಷೇತ್ರದಲ್ಲಿ ನೆಲೆಸುವುದಾಗಿ ವಾಸುಕಿಯನ್ನು ಹರಸುತ್ತಾನೆ.

ಮಾತು ಬಾರದ ಅರ್ಚಕ ನನಗೆ ನಾಣ್ಯ ತೋರಿಸಿದ್ರು, ಕಾರಣ ತಿಳಿದು ಶಾಕ್​ ಆಯ್ತು; ಘಟನೆ ನೆನೆದ ಲಕ್ಷ್ಮೀ ಬಾರಮ್ಮ ನಟಿ