ಮುಂಬೈನಲ್ಲಿ ಹೆರಿಗೆ ನೋವು ಕಾಣಿಸಿಕೊಂಡ ಮುಸ್ಲಿಂ ಮಹಿಳೆ ನೂರ್ ಜಹಾನ್​ಗೆ ಟ್ಯಾಕ್ಸಿ ಚಾಲಕ ದಾರಿ ಮಧ್ಯೆ ಇಳಿಸಿ ಹೋದ. ಪತಿ ಇಲ್ಯಾಜ್​ ಶೇಖ್​ ಟ್ಯಾಕ್ಸಿ ಹುಡುಕಲು ಹೋದ 사이, ನೂರ್​ಗೆ ಗಣೇಶ ದೇವಸ್ಥಾನದಲ್ಲಿ ಮಹಿಳೆಯರು ಹೆರಿಗೆ ಮಾಡಿಸಿದರು. ಮಾನವೀಯತೆ ಮೆರೆದ ಈ ಘಟನೆಯಿಂದ ಭಾವುಕರಾದ ದಂಪತಿ ಮಗುವಿಗೆ ಗಣೇಶ ಎಂದು ಹೆಸರಿಡುವ ಇಂಗಿತ ವ್ಯಕ್ತಪಡಿಸಿದ್ದರು.

ಒಂದೆಡೆ ಎಲ್ಲೆಡೆ ಕೋಮು ಜ್ವಾಲೆ ಇಡೀ ಮಾನವ ಕುಲವನ್ನೇ ಕೆಂಗೆಡೆಸುತ್ತಿದೆ. ಧರ್ಮ, ಜಾತಿಗಳನ್ನು ತಮ್ಮ ವೋಟ್​ ಬ್ಯಾಂಕ್​ಗಾಗಿ ಬಳಸಿಕೊಳ್ತಿರೋ ರಾಜಕಾರಣಿಗಳಿಂದಲೇ ಅರ್ಧ ಈ ವಿಷಬೀಜ ಹರಡುತ್ತಲೇ ಇದ್ದು, ಶಾಂತಿ ಎನ್ನುವುದೇ ಸವಾಲಾಗಿ ಪರಿಣಮಿಸಿದೆ. ಅವರು ನಮ್ಮ ದೇವರು, ಇವರು ನಿಮ್ಮ ದೇವರು ಎಂದೆಲ್ಲಾ ಭಾವನೆ ಬರುವುದು ಎಲ್ಲವೂ ಚೆನ್ನಾಗಿದ್ದಾಗ ಮಾತ್ರ. ಆದರೆ ಮನುಷ್ಯರು ಸಾವಿನ ಅಂಚಿನಲ್ಲಿ ಇರುವಾಗ, ಇನ್ನೇನು ತಮ್ಮ ಪ್ರಾಣ ಹೋಗುತ್ತೆ ಎನ್ನುವಾಗಲೋ ಅಥವಾ ತಮ್ಮವರ ಪ್ರಾಣ ಕಾಪಾಡಲು ಯಾರಾದರೂ ಸಹಾಯಕ್ಕೆ ಧಾವಿಸುತ್ತಾರೋ ಎಂದು ನೆರವಿನ ಹಸ್ತಕ್ಕೆ ಕೈಚಾಚಿದಾಗಲೂ ಈ ಧರ್ಮ, ಜಾತಿಗಳು ಗಣನೆಗೆ ಬರುವುದೇ ಇಲ್ಲ. ಆ ಸಮಯದಲ್ಲಿ ಪ್ರಾಣ ಉಳಿದರೆ ಸಾಕಾಗಿರುತ್ತದೆ ಅಷ್ಟೇ. ಅಂಥದ್ದೇ ಒಂದು ಕುತೂಹಲದ ಘಟನೆ ಇಲ್ಲಿ ನಡೆದಿದೆ.

ಮುಂಬೈನಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಗಣೇಶ ದೇವಸ್ಥಾನದಲ್ಲಿ ತಮ್ಮ ಮಗುವಿಗೆ ಜನ್ಮ ನೀಡಿದ್ದಾರೆ. ಕೆಲ ವರ್ಷಗಳ ಹಿಂದಿನ ಘಟನೆ ಇದಾಗಿದ್ದು, ಕೋಮು ಜ್ವಾಲೆ ಎಲ್ಲೆಡೆ ಹರಡಿರುವ ಈ ಸಂದರ್ಭದಲ್ಲಿ ಮತ್ತೊಮ್ಮೆ ಈ ಸುದ್ದಿ ವೈರಲ್​ ಆಗುತ್ತಿದೆ. ಅಷ್ಟಕ್ಕೂ ಆಗಿದ್ದೇನೆಂದರೆ, ನೂರ್ ಜಹಾನ್ ತುಂಬು ಗರ್ಭಿಣಿ. ಅವರಿಗೆ ಮಧ್ಯರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದೆ. ಅವರ ಪತಿ ಇಲ್ಯಾಜ್ ಶೇಖ್ ಅವರಿಗೆ ಏನು ಮಾಡಬೇಕು ಎಂದು ತಿಳಿಯಲಿಲ್ಲ. ಅವರು ಸಿಯಾನ್ ಆಸ್ಪತ್ರೆಗೆ ತಲುಪಲು ಟ್ಯಾಕ್ಸಿ ಪಡೆದುಕೊಂಡರು. ಆದರೆ ಅವರ ನಸೀಬು ಕೆಟ್ಟಿತ್ತು. ವಿಜಯನಗರದ ಬಳಿ ರಸ್ತೆ ತುಂಬಾ ಕಿರಿದಾಗಿರುವುದ್ದರಿಂದ ಟ್ಯಾಕ್ಸಿ ಚಾಲಕನಿಗೆ ಗಂಟೆಗೆ 30 ಕಿಮೀ ವೇಗದಲ್ಲಿ ಓಡಿಸಲು ಸಹ ಸಾಧ್ಯವಾಗಲಿಲ್ಲ. ಆದರೆ ಹೆರಿಗೆ ನೋವಿನಿಂದ ನೂರ್ ಜಹಾನ್ ಬಳಲುತ್ತಿದ್ದರು. ಆಸ್ಪತ್ರೆಗೆ ತಲುಪಲು ಕನಿಷ್ಠ ಒಂದು ಗಂಟೆ ತೆಗೆದುಕೊಳ್ಳುತ್ತದೆ ಎಂದು ಚಾಲಕ ಹೇಳಿದಾಗ ಅವರಿಗೆ ಏನು ಮಾಡಬೇಕು ಎಂದು ತಿಳಿಯಲಿಲ್ಲ. ಪದೇ ಪದೇ ಚಾಲಕನಿಗೆ ಬೇಗ ತಲುಪುವುಂತೆ ಒತ್ತಾಯ ಮಾಡಿದಾಗ ಕೋಪಗೊಂಡ ಟ್ಯಾಕ್ಸಿ ಚಾಲಕ ಅವರನ್ನು ಅಲ್ಲಿಯೇ ಇಳಿಸಿ ಹೋಗಿಯೇ ಬಿಟ್ಟ! ಹೆರಿಗೆ ನೋವು ವಿಪರೀತವಾದ ಕಾರಣ ಇಲ್ಯಾಜ್​ ಅವರಿಗೆ ಮಾಡು ಇಲ್ಲವೇ ಮಡಿ ಸ್ಥಿತಿ ನಿರ್ಮಾಣವಾಗಿತ್ತು. 

ಒಂದೇ ಮಂಟಪದಲ್ಲಿ ಹಿಂದೂ- ಮುಸ್ಲಿಂ ಸ್ನೇಹಿತರ ಮದ್ವೆ: ಎಲ್ಲರ ಗಮನ ಸೆಳೀತಿದೆ ವಿಶೇಷ ಆಹ್ವಾನ ಪತ್ರಿಕೆ...

ಇನ್ನೊಂದು ಟ್ಯಾಕ್ಸಿಯನ್ನು ತರಿಸಲು ಅವರು ಓಡಿಹೋದರು. ಆದರೆ ಆ ರಸ್ತೆಯಲ್ಲಿ ಪತ್ನಿಯನ್ನು ಬಿಟ್ಟು ಹೋಗುವಂತೆ ಇರಲಿಲ್ಲ. ಆದ್ದರಿಂದ ಅಲ್ಲಿಯೇ ಸಮೀಪವಿದ್ದ ಗಣೇಶನ ದೇವಸ್ಥಾನದ ಎದುರಿಗೆ ಆಕೆಯನ್ನು ಮಲಗಿಸಿ ಹೋದರು. ಆದರೆ ಆ ಸಮಯದಲ್ಲಿ ನೂರ್‌ ಅವ ಹೆರಿಗೆ ನೋವು ಅಸಹನೀಯವಾಗಿತ್ತು. ಗಣೇಶನ ದೇಗುಲದ ಒಳಗೆ ಭಜನೆ ನಡೆಯುತ್ತಿದ್ದುರಿಂದ ಹಲವಾರು ಮಹಿಳೆಯರು ಅಲ್ಲಿದ್ದರು. ನೂರ್​ ಜಹಾನ್​ ಅವರು ನೋವಿನಿಂದ ಅಳುವುದನ್ನು ಕೇಳಿ, ಆಕೆಯನ್ನು ದೇವಾಲಯದ ಒಳಗೆ ಕರೆತಂದರು. ವೃದ್ಧೆಯೊಬ್ಬರ ಸಹಾಯ ಪಡೆದು ಅಲ್ಲಿಯೇ ಹೆರಿಗೆ ಮಾಡಲಾಯಿತು. ಆ ಸಮಯದಲ್ಲಿ ಅಲ್ಲಿರುವ ಮಹಿಳೆಯರು ಯಾರೂ ಈಕೆ ಯಾವ ಧರ್ಮದವಳು ಎಂದು ನೋಡಲಿಲ್ಲ. ಬದಲಿಗೆ ಅಲ್ಲಿ ಮಾನವೀಯತೆ ಮೆರೆದಿತ್ತು. ಓರ್ವ ಹೆಣ್ಣಿನ ನೋವು ಮಾತ್ರ ಅವರಿಗೆ ಕಂಡಿತ್ತು. ಹತ್ತಿರದ ಬೆಡ್‌ಶೀಟ್‌ಗಳು ಮತ್ತು ಸೀರೆಗಳನ್ನು ಪರದೆಗಳಾಗಿ ಬಳಸಿ ತಾತ್ಕಾಲಿಕ ಹೆರಿಗೆ ಕೋಣೆಯನ್ನು ಮಾಡಿದರು. ವಯಸ್ಸಾದ ಮಹಿಳೆಯರು ಜವಾಬ್ದಾರಿಯನ್ನು ವಹಿಸಿಕೊಂಡರು ಮತ್ತು ಕೆಲವೇ ನಿಮಿಷಗಳಲ್ಲಿ ದೇವಾಲಯವು ಮಗುವಿನ ಕೂಗಿನಿಂದ ತುಂಬಿತ್ತು.

ಇತ್ತ ಟ್ಯಾಕ್ಸಿ ತರಲು ಹೋದ ಇಲ್ಯಾಜ್ ಶೇಖ್ ಅವರಿಗೆ ಟ್ಯಾಕ್ಸಿ ಸಿಗಲೇ ಇಲ್ಲ. ಏನು ಮಾಡುವುದು ಎಂದು ತೋಚದೆ ಪತ್ನಿಯನ್ನು ಅರಸಿ ಬಂದಾಗ, ಅಲ್ಲಿ ಅದಾಗಲೇ ಮಗುವಿಗೆ ಜನ್ಮ ನೀಡಿರುವುದು ತಿಳಿಯಿತು. ಅಮ್ಮ-ಮಗು ಇಬ್ಬರೂ ಸುರಕ್ಷಿತವಾಗಿರುವುದನ್ನು ಕಂಡು ಅವರು ಕಣ್ತುಂಬಿಕೊಂಡರು. ಈ ಬಗ್ಗೆ ಮಿಡ್​- ಡೇಗೆ ಮಾಹಿತಿ ನೀಡಿದ ನೂರ್ ಜಹಾನ್ ಅವರು, “ನಾನು ರಸ್ತೆಯ ಮಧ್ಯದಲ್ಲಿ ಹೆರಿಗೆಯ ಹತ್ತಿರದಲ್ಲಿದ್ದಾಗ ನಾನು ಉದ್ವಿಗ್ನನಾಗಿದ್ದೆ. ಆದರೆ ಅಲ್ಲಿ ಒಂದು ದೇವಾಲಯವಿದೆ ಎಂದು ನಾನು ನೋಡಿದಾಗ, ದೇವರು ಸ್ವತಃ ನಮ್ಮನ್ನು ನೋಡುತ್ತಿದ್ದಾನೆ ಎಂದು ನಾನು ಅರಿತುಕೊಂಡೆ. ಗಣಪತಿಯ ಮುಂದೆ ಹೆರಿಗೆ ಆಗುವುದಕ್ಕಿಂತ ಉತ್ತಮವಾದದ್ದು ಇನ್ನೊಂದಿಲ್ಲ ಎನ್ನಿಸಿತು ಎಂದಿದ್ದಾರೆ. ಜೊತೆಗೆ, ನಾವು ಮಗುವಿಗೆ ಗಣೇಶ ಎಂದು ಹೆಸರಿಸಲಿದ್ದೇವೆ ಎಂದರು. ಮುಂದೆ ಏನು ನಾಮಕರಣವಾಯಿತೋ ತಿಳಿದಿಲ್ಲ. ಅದೇ ರೀತಿ ಮುಸ್ಲಿಂ ಮಹಿಳೆಯೊಬ್ಬರು, ತಮ್ಮ ಮಗುವಿನ ಪ್ರಾಣ ಕಾಪಾಡುವ ಸಲುವಾಗಿ ದೇವಸ್ಥಾನಕ್ಕೆ ಬಂದಿರುವ ಫೋಟೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಇದೀಗ ವೈರಲ್​ ಆಗುತ್ತಿದೆ. 

Viral Video: ಕಾಶಿಯಲ್ಲಿ ಕುತೂಹಲದ ರಾಮನವಮಿ- ವಕ್ಫ್​ ಮಸೂದೆ ಅಂಗೀಕಾರಕ್ಕೆ ಸಂತಸದಿಂದ ಮುಸ್ಲಿಂ ಮಹಿಳೆಯರ ಆರತಿ

View post on Instagram