ಕೋಡಿಮಠದ ಶ್ರೀಗಳು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಮುಂದಿನ ದಿನಗಳಲ್ಲಿ ಕೆಲವು ಸಮಸ್ಯೆಗಳು ಎದುರಾಗಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಯುದ್ಧಗಳು ಮುಂದುವರೆಯುತ್ತವೆ ಮತ್ತು ಭಾರತಕ್ಕೆ ಒಂದು ದೊಡ್ಡ ಆಘಾತ ಕಾದಿದೆ ಎಂದು ಅವರು ಎಚ್ಚರಿಸಿದ್ದಾರೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ದೊಡ್ಡಬೇಲಾಳು ಗ್ರಾಮದ ಕೋಡಿಮಠದ ಶ್ರೀಗಳು ಮಹತ್ವದ ಭವಿಷ್ಯವಾಣಿ ನುಡಿದಿದ್ದಾರೆ. ಮೈಸೂರಿನ ನಮನ್ ಫೌಂಡೇಶನ್ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಹೊಸ ಧ್ಯಾನ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಭವಿಷ್ಯದ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಂಡರು. ರಾಜ್ಯ ಮತ್ತು ಕೇಂದ್ರ ಸರಕಾರಗಳಲ್ಲಿ ಅಧಿಕಾರದಲ್ಲಿರುವವರಿಗೆ ಮುಂದಿನ ದಿನಗಳಲ್ಲಿ ಕೆಲವು ತೊಂದರೆಗಳು ಎದುರಾಗಬಹುದು ಎಂದು ಶ್ರೀಗಳು ತಿಳಿಸಿದ್ದಾರೆ. ಈ ಸಮಸ್ಯೆಗಳನ್ನು ಈಗಿನಿಂದಲೇ ಗುರುತಿಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತ ಎಂದು ಅವರು ಸಲಹೆ ನೀಡಿದರು.
ಶ್ರೀಗಳು ತಮ್ಮ ಭವಿಷ್ಯವಾಣಿಯಲ್ಲಿ ಹೇಳಿದ್ದೇನು?
ಯುದ್ಧಗಳು ಮುಂದುವರೆಯುತ್ತವೆ. ಯುದ್ಧಗಳು ನಿಲ್ಲುವುದು ಮನಸ್ಸುಗಳು ನಿಂತಾಗ ಮಾತ್ರ. ಒಂದಾದ ದಿನ ವಿಶ್ವವೇ ತಿರುಗಿ ನೋಡುವಂತಹ ಆಘಾತ ಭಾರತಕ್ಕೆ ಕಾದಿದೆ. ಅದಷ್ಟೇ ಅಲ್ಲದೆ, ಮಾನವನ ಜೀವನ, ಪ್ರಕೃತಿ, ಮತ್ತು ಆಧ್ಯಾತ್ಮದ ಕುರಿತು ಶ್ರೀಗಳು ತಮ್ಮ ವಿಶಿಷ್ಟ ಅಭಿಪ್ರಾಯಗಳನ್ನು ಹಂಚಿಕೊಂಡರು.
ಮನುಷ್ಯ ಮೌನವಾಗಿದ್ದರೆ ಹೆಚ್ಚು ಜ್ಞಾನವನ್ನು ಸಂಪಾದಿಸಬಹುದು. ಪ್ರಕೃತಿ ಮತ್ತು ವೃಕ್ಷಗಳಿಗೆ ಅಪಾರ ಶಕ್ತಿ ಇದೆ. ಮರಣವನ್ನು ಗೆಲ್ಲುವ ಶಕ್ತಿ ಗಿಡಮೂಲಿಕೆ ಔಷಧಿಗಳಲ್ಲಿದೆ. ಪಂಚತಾರಾ ವೃಕ್ಷಗಳಲ್ಲಿ ಹೆಚ್ಚಿನ ಪ್ರಮಾಣದ ಆಮ್ಲಜನಕ ಉತ್ಪತ್ತಿ ಆಗುತ್ತದೆ. ಇವು ದೈವವೃಕ್ಷಗಳೆಂದು ಪರಿಗಣಿಸಲ್ಪಟ್ಟಿವೆ. 84 ಲಕ್ಷ ಜೀವ ರಾಶಿಗಳಲ್ಲಿ ಆತ್ಮ ಕೇವಲ ಮಾನವನಲ್ಲಿಯೇ ಅಂತ್ಯಗೊಂಡಿದ್ದು, ಮಾನವನಿಗೆ ಜ್ಞಾನ ಮತ್ತು ವಿವೇಕವನ್ನು ನೀಡಲಾಗಿದೆ. ಅದನ್ನು ಸನ್ಮಾರ್ಗದಲ್ಲಿ ಉಪಯೋಗಿಸಿದಾಗ ಮಾತ್ರ ಮೋಕ್ಷವನ್ನು ಪಡೆಯಲು ಸಾಧ್ಯ. ಧ್ಯಾನ ಕೇಂದ್ರಗಳು ಆಧ್ಯಾತ್ಮಿಕ ಹಾಗೂ ಧಾರ್ಮಿಕ ಬೆಳವಣಿಗೆಗೆ ಬಹಳಷ್ಟು ಸಹಕಾರಿ ಎಂದು ಅವರು ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ.
