ಕೊಡವರ ವಿಶೇಷ ಕೋವಿ ಹಬ್ಬ, ಪೂಜೆ ಮಾಡಿ ಗುಂಡು ಹೊಡೆದು ಶೌರ್ಯ
ಕೊಡಗಿನ ಜನರ ಆಚಾರ ವಿಚಾರಗಳು ಎಲ್ಲರಿಗಿಂತ ವಿಭಿನ್ನ. ಈ ಪುಟ್ಟ ಜಿಲ್ಲೆಯ ಹಬ್ಬದ ಆಚರಣೆಯಂತೂ ಎಂಥವರನ್ನೂ ಸೆಳೆಯುವಂತದ್ದು. ನಿಮ್ಗೆ ಗೊತ್ತಾ. ಕೋವಿಯನ್ನ ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡೋ ಇಲ್ಲಿನ ಜನರು ಕೋವಿಗೂ ಒಂದು ಹಬ್ಬ ಮಾಡ್ತಾರೆ. ಈ ಬಾರಿಯ ಕೊಡವರ ವಿಶೇಷ ಕೋವಿ ಹಬ್ಬ ಹೇಗಿತ್ತು ಅಂತ ನೀವೇ ತಿಳಿಯಿರಿ.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣನ್ಯೂಸ್
ಕೊಡಗು (ಡಿ.17): ಕೊಡಗಿನ ಜನರ ಆಚಾರ ವಿಚಾರಗಳು ಎಲ್ಲರಿಗಿಂತ ವಿಭಿನ್ನ. ಈ ಪುಟ್ಟ ಜಿಲ್ಲೆಯ ಹಬ್ಬದ ಆಚರಣೆಯಂತೂ ಎಂಥವರನ್ನೂ ಸೆಳೆಯುವಂತದ್ದು. ನಿಮ್ಗೆ ಗೊತ್ತಾ. ಕೋವಿಯನ್ನ ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡೋ ಇಲ್ಲಿನ ಜನರು ಕೋವಿಗೂ ಒಂದು ಹಬ್ಬ ಮಾಡ್ತಾರೆ. ಈ ಬಾರಿಯ ಕೊಡವರ ವಿಶೇಷ ಕೋವಿ ಹಬ್ಬ ಹೇಗಿತ್ತು ಅಂತ ನೀವೇ ನೋಡಿ. ಸಾಲು ಸಾಲಾಗಿ ಕೋವಿಗಳನ್ನು ಜೋಡಿಸಿರುವ ಜನರು, ಕೋವಿಗೂ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿ ನಮಿಸುತ್ತಿರುವ ಕೊಡವರು. ಕೋವಿಯನ್ನು ಹಿಡಿದು ಲಯಬದ್ದವಾಗಿ ಹೆಜ್ಜೆ ಹಾಕುತ್ತಿರುವ ಜನರು. ಅರೇ ಇದೇನು ಕೋವಿಗೂ ಯಾರಾದರೂ ಪೂಜೆ ಮಾಡ್ತಾ ಎಂದು ನಿಮಗೆ ಅಚ್ಚರಿ ಎನಿಸಬಹುದು. ಕೊಡಗಿನ, ಕೊಡವರ ಸಂಪ್ರದಾಯವೇ ಹಾಗೆ. ಕೋವಿ ಎಂದರೆ ಕೊಡವರಿಗೆ ಕೇವಲ ಅದೊಂದು ಆಯುಧವಲ್ಲ. ಬದಲಾಗಿ ಅದು ಪೂಜನೀಯ ಸ್ಥಾನಮಾನ ಹೊಂದಿರುವ ಪವಿತ್ರ ವಸ್ತು. ಇಲ್ಲಿ ಮಗುವೊಂದು ಹುಟ್ಟೆತ್ತೆಂದರೆ ಆಕಾಶಕ್ಕೆ ಒಂದು ಗುಂಡು ಹಾರಿಸಿ ಸಂಭ್ರಮಿಸುತ್ತಾರೆ. ಹಾಗೆ ಯಾರಾದರೂ ಸತ್ತರೆಂದರೂ ಶೂಟ್ ಮಾಡಿ ಶ್ರದ್ಧಾಂಜಲಿ ಅರ್ಪಿಸುತ್ತಾರೆ. ಹೀಗೆ ಒಳಿತು ಕೆಡುಕುಗಳಿಗೂ ಗನ್ ಬಳಕೆಯಾಗಲೇಬೇಕು. ಇಂತಹ ಕೋವಿಗೆ ಶನಿವಾರ ವಿಶ್ವ ಅಲ್ಪಸಂಖ್ಯಾತರ ದಿನದ ಅಂಗವಾಗಿ ಕೋವಿ ಹಬ್ಬ ನಡೆಯಿತು.
ವೀರ ಶೂರರ ನಾಡೆಂದು ಕರೆಸಿಕೊಳ್ಳೋ ಇಲ್ಲಿನ ಜನರ ಪ್ರತಿಯೊಂದು ಹಬ್ಬಕ್ಕೂ ಪ್ರಕೃತಿಗೂ ಸಂಬಂಧ ಇದ್ದೇ ಇರುತ್ತೆ. ಈ ಸಂದರ್ಭ ಮಾತನಾಡಿದ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು ನಾಚಪ್ಪ ಮಾತನಾಡಿ ಇಂಡಿಯನ್ ಆರ್ಮ್ಸ ಆಕ್ಟ್ ಸೆಕ್ಷನ್ ಮೂರರ ಪ್ರಕಾರ ಇಲ್ಲಿನ ಜನರಿಗೆ ಕೋವಿ ಬಳಸಲು ವಿನಾಯಿತಿ ಕೂಡ ಇದೆ. ಕೊಡಗಿನ ಜನರ ಹಬ್ಬ ಹರಿದಿನ, ಹುಟ್ಟು ಸಾವು ಎಲ್ಲದರಲ್ಲಿಯು ಕೋವಿಗೆ ವಿಶೇಷ ಸ್ಥಾನವಿದೆ. ಪ್ರತಿಮನೆಯಲ್ಲಿಯೂ ಹಬ್ಬ ಹರಿದಿನಗಳಂದು ದೇವರಂತೆಯೇ ಕೋವಿಗೂ ಪೂಜೆ ಸಲ್ಲುತ್ತೆ,ಇದೆಲ್ಲದರ ಸಂಕೇತವಾಗಿ ಕೋವಿ ಹಬ್ಬವನ್ನ ಸಾರ್ವಜನಿಕವಾಗಿ ಆಚರಣೆ ಮಾಡೋ ಮೂಲಕ ಇಲ್ಲಿಯ ಜನರು ಸಂಭ್ರಮಿಸುತ್ತಾರೆ ಎಂದರು.
ಕಳೆದ 13 ವರ್ಷದಿಂದ ಕೊಡವ ನ್ಯಾಷನಲ್ ಕೌನ್ಸಿಲ್ (ಅಓಅ) ಸಂಘಟನೆ ಕೊಡಗಿನಲ್ಲಿ ಕೋವಿ ಹಬ್ಬವನ್ನ ಆಚರಿಸಿಕೊಂಡು ಬರುತ್ತಿದೆ. ಈಗಿನ ಯುವ ಪೀಳಿಗೆಗೆ ಕೋವಿಗೂ ಕೊಡಗಿನ ಜನರಿಗೂ ಇರೋ ಅವಿನಾಭಾವ ಸಂಬಂಧದ ಪರಂಪರೆಯನ್ನು ತಿಳಿಸಲು ಈ ಕೋವಿ ಉತ್ಸವ ಮಹತ್ವ ಪಡೆದಿದೆ. ಇನ್ನೂ ಈ ಭಾರಿ ಕೋವಿ ಹಬ್ಬವನ್ನ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಶ್ರಿಮಂಗಲ ಸಮೀಪದ ಅಜ್ಜಮಾಡ ಕುಟುಂಬದ ಐನ್ ಮನೆಯಲ್ಲಿ ನಡೆಸಲಾಯಿತು.
ಕೊಡಗಿನಾದ್ಯಂದ ಹುತ್ತರಿ ಹಬ್ಬ: ಧಾನ್ಯಲಕ್ಷ್ಮಿಯ ಮನೆ ತುಂಬಿಕೊಂಡ ಜನರು
ಸಾಂಪ್ರದಾಯಿಕ ಉಡುಪಿನಲ್ಲಿ ಭಕ್ತಿಪೂರ್ವಕವಾಗಿ ಮೆರವಣಿಗೆಮಾಡಿ ಕೋವಿಯನ್ನು ತಂದು ಪೂಜಿಸಲಾಯ್ತು. ನಂತರ ಪುರುಷ ಮಹಿಳೆ ಎಂಬ ಭೇದವಿಲ್ಲದೆ, ಎಲ್ಲರೂ ತೆಂಗಿನಕಾಯಿಗೆ ಗುಂಡು ಹಾರಿಸೋ ಸ್ಪರ್ಧೆಯಲ್ಲಿ ಪಾಳ್ಗೊಂಡು ಸಂಭ್ರಮಿಸಿದ್ರು. ಬಂದೂಕು ಸಮೇತ ಮೆರವಣಿಗೆ ನಡೆಸಿದ ಸಾಂಪ್ರದಾಯಿಕ ಉಡುಗೆತೊಟ್ಟ ಜನರು ಮೈದಾನದಲ್ಲಿ ಜಮಾಯಿಸಿ ಬಂದೂಕು ತಮ್ಮ ಹಕ್ಕು ಎಂಬುದನ್ನ ಸಾರಿದ್ರು. ಇದಾದ ಬಳಿಕ ಉತ್ಸವದಲ್ಲಿ ಪಾಲ್ಗೊಂಡಿದ್ದವರು ತಮ್ಮ ತಮ್ಮ ಕೋವಿಗಳೊಂದಿಗೆ ಕೊಡಗಿನ ಸಾಂಪ್ರದಾಯಿಕ ವಾಲಗಕ್ಕೆ ಹೆಜ್ಜೆ ಹಾಕಿದರು. ಈ ವಿಶಿಷ್ಟ ಆಚರಣೆಯಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು.
Kodagu: ಮ್ಯಾಂಡೌಸ್ ಪರಿಣಾಮ ಅಕಾಲಿಕ ಮಳೆ: ಅಪಾರ ಬೆಳೆ ನಷ್ಟ
ನಾವು ಹಲವು ಬಗೆಯ ಉತ್ಸವಗಳನ್ನ ನೋಡಿರ್ತೀವಿ, ಆದರೆ ಕೊಡಗಿನಲ್ಲಿ ನಡೆಯುವ ಕೋವಿ ಉತ್ಸವ ನಿಜಕ್ಕೂ ವಿಶೇಷ. ಕೋವಿ ಬಳಸೋದು ಪ್ರಾಣ ರಕ್ಷಣೆಗಾಗಿ ಅಲ್ಲ ಬದಲಾಗಿ ಕೋವಿಗೆ ಕೊಡಗಿನಲ್ಲಿ ಪೂಜ್ಯಭಾವನೆ ಇದೆ ಅನ್ನೋದನ್ನ ಈ ಹಬ್ಬ ಸಾರಿದಂತು ನಿಜ.