ಭಸ್ಮಾಸುರನಿಗೆ ಉರಿಹಸ್ತ

ಈಶ್ವರ ಯಾವಾಗಲೂ ಭಸ್ಮಧಾರಣೆ ಮಾಡುವವನು. ಒಮ್ಮೆ ಭಸ್ಮದಲ್ಲಿ ಒಂದು ಕಲ್ಲು ಸಿಕ್ಕಿತು. ಅದನ್ನು ಎಸೆದುಬಿಟ್ಟ. ಅದರಿಂದ ಒಬ್ಬ ಅಸುರ ಹುಟ್ಟಿಕೊಂಡ. ಭಸ್ಮದಿಂದ ಹುಟ್ಟಿಕೊಂಡ ಕಾರಣ ಅವನಿಗೆ ಭಸ್ಮಾಸುರನೆಂದು ಹೆಸರಿಟ್ಟರು. ಆತನಿಗೆ ಭೂಮಿಯಿಂದ ಸತ್ತವರ ಭಸ್ಮ ತಂದು ನೀಡುವ ಹೊಣೆಗಾರಿಕೆ ವಹಿಸುತ್ತಾನೆ ಶಿವ. ನಿಧಾನವಾಗಿ ಭಸ್ಮಾಸುರನಿಗೆ ಪಾರ್ವತಿಯ ಅಂದದ ಮೇಲೆ ಬಯಕೆ ಮೊಳೆಯಿತು. ಅದಕ್ಕೆ ಕುತಂತ್ರ ರೂಪಿಸಿದ. ಒಂದು ದಿನ, ತನಗೆ ಯಾರ ಭಸ್ಮವೂ ಸಿಗಲಿಲ್ಲ ಎಂದು ಅಳುತ್ತಾ ಶಿವನ ಬಳಿ ಬಂದ. ಯಾರದಾದರೂ ತಲೆಯ ಮೇಲೆ ತಾನು ಕೈ ಇಟ್ಟರೆ ಅವರು ಭಸ್ಮವಾಗುವಂತೆ ವರ ನೀಡು ಎಂದು ಶಿವನ ಬಳಿ ಗೋಗರೆದ. ಭೋಳೇಶಂಕರ ಎಂದೇ ಖ್ಯಾತನಾದ ಶಿವ, ಪಾಪ, ಭಸ್ಮಾಸುರನ ಕುತಂತ್ರ ಅರಿಯದೆ ಆ ವರ ಕೊಟ್ಟೇಬಿಟ್ಟ. ಕೊಟ್ಟ ಕೂಡಲೇ ಅದರ ಪರೀಕ್ಷಾರ್ಥವಾಗಿ ಮೊದಲು ಈಶ್ವರನ ತಲೆಯ ಮೇಲೇ ಕೈಯನ್ನಿಡಲು ಬಂದ ಭಸ್ಮಾಸುರ. ಈಶ್ವರ ಸತ್ತೆನೋ ಕೆಟ್ಟೆನೋ ಎಂದು ಕೈಲಾಸದಿಂದ ಪರಾರಿಯಾದ. ದಾರಿಯಲ್ಲಿ ವಿಷ್ಣು ಸಿಕ್ಕಿದ. ವಿಷ್ಣುವಿನ ಬಳಿ ತನ್ನ ಗೋಳಿನ ಕತೆಯನ್ನು ಹೇಳಿದ ಶಿವ. ಮಹಾವಿಷ್ಣುವು ಮೋಹಿನಿಯ ರೂಪವನ್ನು ತಾಳಿ ಬಂದು, ಭಸ್ಮಾಸುರನ ಮುಂದೆ ಕಾಣಿಸಿಕೊಂಡು, ಆತ ತನ್ನ ಜೊತೆಗೆ ನರ್ತಿಸುವ ಹಾಗೆ ಮನವೊಲಿಸಿ, ನರ್ತನದ ಸಂದರ್ಭದಲ್ಲಿ ತನ್ನ ತಲೆಯ ಮೇಲೆ ತಾನೇ ಕೈ ಇಡುವಂತೆ ಮಾಡಿ ಭಸ್ಮವಾಗುವಂತೆ ಮಾಡಿದ. ಕಡೆಗೂ ಶಿವ ಪಾರಾದ.

 

 ಶಿವರಾತ್ರಿಯಂದು ಈ ರಾಶಿಯವರು ವಾಹನ ಚಾಲನೆ ಮಾಡುವಾಗ ಎಚ್ಚರ

 

ಮದುವೆಯಲ್ಲಿ ದಿಗಂಬರನಾದ ಶಿವ

ಶಿವನ ವೇಷಭೂಷಣ ನಿಮಗೆ ಗೊತ್ತು ತಾನೆ. ಸೊಂಟದಲ್ಲಿ ಗಜ ಚರ್ಮ ಧರಿಸಿ, ಅದಕ್ಕೆ ಬೆಲ್ಟ್‌ನ ಹಾಗೆ ಸರ್ಪವನ್ನು ಸುತ್ತಿದ್ದಾನೆ ಅಲ್ಲವೇ. ಈ ಬಗ್ಗೆ ಒಂದು ಸ್ವಾರಸ್ಯಕರ ಕತೆಯಿದೆ. ಶಿವನಿಗೂ ಪಾರ್ವತಿಗೂ ಮದುವೆ ನಿಶ್ಚಯವಾಯಿತು. ದೇವಾನುದೇವತೆಗಳೆಲ್ಲ ಆ ಮದುವೆಗೆ ಬರತೊಡಗಿದರು. ಮಹಾವಿಷ್ಣುವೂ ಗರುಡನನ್ನು ಏರಿ ಬಂದ. ಗರುಡನನ್ನು ನೋಡಿ ಶಿವನ ಸೊಂಟದಲ್ಲಿ ಸುತ್ತಿದ್ದ ವಾಸುಕಿಗೆ ಪ್ರಾಣಭಯ ಶುರುವಾಯಿತು. ಥಟ್ಟನೆ ಶಿವನ ಸೊಂಟದಿಂದ ಇಳಿದು ಸಂದಿಗೊಂದಿ ನುಸುಳಿ ಎಲ್ಲೆಲ್ಲೋ ಪಾರಾಗಲು ಪ್ರಯತ್ನಿಸಿದ. ಸೊಂಟದ ಬೆಲ್ಟ್ ತಪ್ಪಿದ್ದೇ ತಡ ಶಿವ ಸೊಂಟಕ್ಕೆ ಸುತ್ತಿದ್ದ ಚರ್ಮ ಕೆಳಗೆ ಜಾರಿತು. ಶಿವ ದಿಗಂಬರನಾದ. ಆತನ ಶುಭ್ರ ಸ್ವರೂಪವನ್ನು ನೋಡಿ ದೇವತೆಗಳು ಪುನೀತರಾದರೆ. ಪಾರ್ವತಿದೇವಿ ನಾಚಿಕೊಂಡಳು. ಇಂಥ ಶಿವನು ನಮ್ಮನ್ನು ಪೊರೆಯಲಿ ಎನ್ನುತ್ತಾನೆ ಸಂಸ್ಕೃತದ ಕವಿಯೊಬ್ಬ.

 

ಮೈನಸ್ ಟೆಂಪರೇಚರ್‌ ಹಿಮದ ನಡುವೆ ಆ ಸಾಧು ಓಡಾಡಿದ ವಿಡಿಯೋ ನಿಜವಾ?

 

ಕುಟುಂಬದಲ್ಲಿ ಯಾವಾಗಲೂ ಕಲಹ

ಶಿವನ ಕುಟುಂಬದಲ್ಲಿ ಯಾವಾಗಲೂ ಕಲಹವಂತೆ. ಅದು ಹೇಗೆ? ಹೇಗೆಂದರೆ, ಶಿವನ ವಾಹನ ನಂದಿ. ಪಾರ್ವತಿಯ ದೇವಿಸ್ವರೂಪಳಾದುದರಿಂದ ಆಕೆಯ ವಾಹನ ಸಿಂಹ, ಸಿಂಹದ ಆಹಾರ ಎತ್ತು. ಹೀಗಾಗಿ ಸಿಂಹಕ್ಕೂ ನಂದಿಗೂ ಮುಖಾಮುಖಿಯಾದ ಕೂಡಲೇ ಸಿಟ್ಟು ಕೆರಳುತ್ತಿತ್ತು. ಇದೇ ರೀತಿ, ಶಿವನು ಸೊಂಟಕ್ಕೆ ಸುತ್ತಿದ ಸರ್ಪಕ್ಕೆ, ಗಣಪತಿಯ ವಾಹನವಾದ ಇಲಿಯ ಮೇಲೆ ಕಣ್ಣು. ಅದನ್ನು ಸ್ವಾಹಾ ಮಾಡಲು ಹಾತೊರೆಯುತ್ತದೆ. ಹೀಗಾಗಿ ಗಣಪತಿಗೆ ಸರ್ಪದ ಮೇಲೆ ಕಂಪ್ಲೇಂಟು. ಇತ್ತ ಶಿವ ಹಾಗೂ ಗಣಪತಿ ಸೊಂಟಕ್ಕೆ ಸುತ್ತಿಕೊಂಡ ಸರ್ಪಗಳ ಮೇಲೆ, ಷಣ್ಮುಖನ ವಾಹನವಾದ ಮಯೂರ ಅರ್ಥಾತ್‌ ನವಿಲಿಗೆ ಕಣ್ಣು. ಹೀಗಾಗಿ ಒಂದನ್ನು ಕಂಡರೆ ಇನ್ನೊಂದಕ್ಕೆ ಆಗದು. ಆದರೆ ಶಿವನ ಸಾನಿಧ್ಯದಲ್ಲಿ ಇವೆಲ್ಲವೂ ಸಹಿಷ್ಣುಗಳಾಗಿ ವರ್ತಿಸುತ್ತವೆ, ಇದೇನು ಸೋಜಿಗ ಎನ್ನುತ್ತಾನೆ ಇನ್ನೊಬ್ಬ ಸಂಸ್ಕೃತ ಕವಿ.

 

ಗಣಪತಿಯ ತುಂಟತನ!

ಒಮ್ಮೆ ತುಂಟ ಗಣಪತಿ ತನ್ನ ತಂದೆ ತಾಯಿಯರಿಬ್ಬರನ್ನೂ ಅಕ್ಕಪಕ್ಕ ಕೂರಿಸಿಕೊಂಡು, ಮಧ್ಯದಲ್ಲಿ ಕುಳಿತ. ಇಬ್ಬರೂ ಕಣ್ಣು ಮುಚ್ಚಿಕೊಂಡು, ನಾನು ಹೂಂ ಎಂದಾಗ ನನ್ನ ಕೆನ್ನೆಗೆ ಮುತ್ತು ಕೊಡಿ ಎಂದ. ಶಿವ ಪಾರ್ವತಿ ಒಪ್ಪಿಕೊಂಡು ಕಣ್ಣು ಮುಚ್ಚಿಕೊಂಡರು. ಗಣಪತಿ ಹೂಂ ಎಂದು ಹೇಳಿ, ಥಟ್ಟನೆ ತನ್ನ ಮುಖವನ್ನು ಹಿಂದಕ್ಕೆ ತೆಗೆದುಕೊಂಡ. ಶಿವಪಾರ್ವತಿ ಥಟ್ಟನೆ ಮುಂದಕ್ಕೆ ಬಾಗಿ ಗಣಪತಿಯ ಮುಖವನ್ನು ಚುಂಬಿಸಿದರು. ಆದರೆ ಅಲ್ಲಿ ಗಣಪತಿಯ ಮುಖವೇ ಇರಲಿಲ್ಲ. ಬದಲಾಗಿ ಶಿವಪಾರ್ವತಿಯರಿಬ್ಬರೂ ಪರಸ್ಒರ ತಾವೇ ಮುತ್ತಿಟ್ಟುಕೊಂಡಿದ್ದರು! ತುಂಟ ಗಣಪತಿ ಹಿಂದೆ ಕುಳಿತು ನಗುತ್ತಿದ್ದ!