ಗಣನಾಯಕನ ಬಳಿ ಬಂದು ತಮ್ಮ ಮನೋಭಿಲಾಷೆ ಪೂರೈಸುವಂತೆ ಬೇಡಿಕೊಳ್ಳುವ ಭಕ್ತರು ಅದು ಈಡೇರಿದ ನಂತರ ಇಲ್ಲಿಗೆ ಬಂದು ತಮ್ಮ ಇಷ್ಟದ ಬಣ್ಣದಿಂದ ಈ ಶಿಲಾ ಗಣಪತಿಯನ್ನ ಅಲಂಕರಿಸುತ್ತಾರೆ. ಶತಮಾನಗಳಿಂದ ಈ ಬಣ್ಣ ಬಳಿಯುವ ಅಲಂಕಾರ ನಡೆದುಕೊಂಡು ಬಂದಿದೆ. ಹೀಗಾಗಿ ನೀವು ಒಮ್ಮೆ ಬಂದು ನೋಡಿರುವ ಗಣಪನ ಬಣ್ಣ ಮತ್ತೊಮ್ಮೆ ನಿಮ್ಮ ಭೇಟಿಯಲ್ಲಿ ಬದಲಾಗಿರುತ್ತದೆ.

ಗೋಕರ್ಣ ಮಹಾಗಣಪತಿ ದೇವಾಲಯಕ್ಕೆ ಒಮ್ಮೆಯಾದರೂ ಭೇಟಿ ನೀಡಬೇಕು!

ಒಂದೊಂದು ದಿನವಂತೂ ನಾಲ್ಕಾರು ಬಾರಿ ಈ ಗಣಪನ ಬಣ್ಣ ಬದಲಾದ ಉದಾಹರಣೆಗಳು ಇವೆ. ಏಕೆಂದರೆ ಒಂದೇ ದಿನ ಅಷ್ಟೊಂದು ಭಕ್ತರು ಬಂದು ಪೂಜೆ- ನೈವೇದ್ಯ ಮಾಡಿಕೊಂಡು ಬಣ್ಣದ ಅಲಂಕಾರ ಮಾಡಿರುತ್ತಾರೆ.

ಕಲಬುರಗಿ ಜಿಲ್ಲೆಯ ಶಹಾಬಾದ ತಾಲೂಕಿನ ಕಾಗಿಣಾ ನದಿ ತೀರದ ಭಂಕೂರ ಐತಿಹಾಸಿಕ ಊರು. ಭಂಕೂರ ಗ್ರಾಮದಿಂದ ಎಬಿಎಲ್‌ ಕಾಲೋನಿಗೆ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಗುಂಡು ಕಲ್ಲುಗಳಲ್ಲಿ ಸುಮಾರು 100 ವರ್ಷಗಳಿಗಿಂತಲು ಪುರಾತನವಾದ ಕೆಂಪು ಬಂಡೆಯ ಮೇಲೆ (ಕಲ್ಲಿನಲಿ) ದೊಡ್ಡ ಸ್ವಯಂ ಉದ್ಬವ ಗಣೇಶವನ್ನು ಕಾಣಬಹುದು. ಉದ್ಬವ ಗಣೇಶ ಮೊದಲಿಗೆ ಚಿಕ್ಕ ಗಾತ್ರದಾಗಿದು ಕಾಲಕ್ರಮೇಣ 10-12 ಅಡಿ ಎತ್ತರವಾಗಿ ಬೆಳೆದು ನಿಂತಿದ್ದಾನೆಂದು ಗ್ರಾಮದ ಹಿರಿಯರು ಹೇಳುತ್ತಾರೆ. ಈ ಗಣಪತಿ ಇರುವ ಸುತ್ತಲಿನ ಪ್ರದೇಶವನ್ನು ಗಣೇಶ ನಗರ ಎಂದೇ ಕರೆಯುತ್ತಾರೆ.

ಸೌತಡ್ಕದಲ್ಲಿ ಬಯಲು ಆಲಯ ಗಣಪತಿ ಬಗ್ಗೆ ತಿಳಿಯಿರಿ!

ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ದೇವರಿಗೆ ಹಲವು ಹರಕೆ ಹರಕೆ ಹೊರುವುದು ಸಂಪ್ರದಾಯ. ಆದರೆ, ಭಂಕೂರಿನ ಈ ಗಣೇಶನಿಗೆ ಬಣ್ಣ ಬಳಿಯುವ (ಹಚ್ಚುವ) ಹರಕೆ ಹೊರುವುದು ವಿಶಿಷ್ಟವಾಗಿದೆ. ತಮ್ಮ ಹರಕೆ ಈಡೇರಿದಾಕ್ಷಣ ದೊಡ್ಡ ಗಣೇಶನಿಗೆ ಬಣ್ಣ ಹಚ್ಚಿಸಿ ಪೂಜೆ ಸಲ್ಲಿಸುವ ವಾಡಿಕೆ ಇಲ್ಲಿ ನಡೆದುಕೊಂಡು ಬಂದಿದೆ. ಬಣ್ಣವನ್ನು ಸ್ಥಳೀಯ ಅನೇಕ ಪೇಂಟರ್‌ಗಳು ಹಚ್ಚುವರು. ಬಣ್ಣದ ಹರಕೆಗೆಂದೇ ಇಲ್ಲಿ ಪೇಂಟರ್‌ಗಳೂ ಹಲವರಿದ್ದಾರೆ.

ದಾರಿ: ಕಲಬುರಗಿಗೆ ಬಂದು ರಸ್ತೆ ಮಾರ್ಗವಾಗಿ ಶಹಾಬಾದ್‌ ಬಸ್ಸಲ್ಲಿ ಹೋಗಬಹುದು. ರೈಲಿನಲ್ಲಿ ಬಂದರೆ ನೇರವಾಗಿ ಶಹಾಬಾದ್‌ ನಿಲ್ದಾಣಕ್ಕಿಳಿದು ಸ್ಥಳೀಯ ಸಾರಿಗೆ ಸವಲತ್ತು ಪಡೆದು ಬಂಕೀರಿಗೆ ಹೋಗಿ ಗಣಪತಿ ದರುಶನ ಪಡೆಯಬಹುದು.