ಬೆಂಗಳೂರಲ್ಲಿ ಎರಡನೇ ಇಸ್ಕಾನ್: ಜೂ.14ರಂದು ರಾಷ್ಟ್ರಪತಿಗಳಿಂದ ಉದ್ಘಾಟನೆ
ಬೆಂಗಳೂರು ಉತ್ತರದಲ್ಲಿ ಎತ್ತರದಲ್ಲಿ ಇರುವ ಇಸ್ಕಾನ್ ಆಕರ್ಷಣೆಯ ಕೇಂದ್ರ. ಅಂಥದ್ದೊಂದು ಭಕ್ತಿಕೇಂದ್ರ ಬೆಂಗಳೂರು ದಕ್ಷಿಣದಲ್ಲೂ ಬೇಕು ಎಂಬ ಕೃಷ್ಣಭಕ್ತರ ಆಸೆ ಇದೀಗ ಈಡೇರಿದೆ. ತಿರುಪತಿ ದೇವಾಲಯದ ಪ್ರತಿರೂಪದಂತಿರುವ ದೇಗುಲವೊಂದು ಇದೇ ಮಂಗಳವಾರ ಉದ್ಘಾಟನೆಗೊಳ್ಳುತ್ತಿದೆ. ಇದು ಭಕ್ತರ ಸಂಭ್ರಮದ ಕಾಲ.
ರೌಂಡ್- ಬೆಂಗಳೂರಲ್ಲಿ ಎರಡನೇ ಇಸ್ಕಾನ್
ಸಿಲಿಕಾನ್ ಸಿಟಿಯ ನಡುವಿನ ಐತಿಹಾಸಿಕ ಗಿರಿ. ಅದರ ಮೇಲೊಂದು ಪಾರಂಪರಿಕ ದೇವಾಲಯ. ಅದರೊಳಗೆ ರಾಜಾಧಿರಾಜ ಗೋವಿಂದನ ವಾಸ.
- ಇದು ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ತಿರುಮಲ ತಿರುಪತಿಯ ಪ್ರತಿರೂಪದಲ್ಲೇ ಇಸ್ಕಾನ್ ನಿರ್ಮಿಸಿರುವ ‘ರಾಜಾಧಿರಾಜ ಗೋವಿಂದ’ ದೇವಸ್ಥಾನ ದೃಶ್ಯಗಳು.
ಇಸ್ಕಾನ್‌ನಿಂದ ಕನಕಪುರ ರಸ್ತೆಯ ವಸಂತಪುರ ಕ್ಷೇತ್ರದಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ತಿರುಪತಿ ತಿರುಮಲ ದೇವಸ್ಥಾನದ ಪ್ರತಿರೂಪವಾಗಿರುವ ‘ರಾಜಾಧಿರಾಜ ಗೋವಿಂದ’ ಮಂದಿರವು ಲೋಕಾರ್ಪಣೆಗೆ ಸಿದ್ಧವಾಗಿದೆ. ನೂತನ ದೇವಲಯವು ತಪೋಭೂಮಿಯಾದ ವೈಕುಂಠಗಿರಿಯ ಮೇಲ್ಭಾಗದಲ್ಲಿದ್ದು, 28 ಎಕರೆ ಜಾಗದಲ್ಲಿ ನಿರ್ಮಿಸಲಾಗಿದೆ. ದೇವಸ್ಥಾನದ ಹೊರಾಂಗಣ ವಿನ್ಯಾಸವು ತಿರುಪತಿಯ ಪ್ರತಿರೂಪದಂತಿದೆ. ಸದ್ಯ 150 ಕೋಟಿ ರು. ಯೋಜನಾ ವೆಚ್ಚವಾಗಿದ್ದು, ಭವಿಷ್ಯದಲ್ಲಿ ಕರ್ನಾಟಕದ ತಿರುಪತಿ ಎಂಬ ಖ್ಯಾತಿಯನ್ನು ಪಡೆದುಕೊಳ್ಳಲಿದೆ. ಯುವ ಪೀಳಿಗೆ ಹಾಗೂ ಕುಟುಂಬ ವರ್ಗದವರೆಲ್ಲರಿಗೂ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಶಿಕ್ಷಣವನ್ನು ಒದಗಿಸುವ ಕೇಂದ್ರವೂ ಆಗಲಿದೆ. ದೇವರುಗಳ ದರ್ಶನಕ್ಕೆ ಸರದಿಯಲ್ಲಿ ಕಾಯುವ ಭಕ್ತರಿಗಾಗಿ ಉತ್ತಮಸೌಲಭ್ಯಗಳುಳ್ಳ ‘ಕ್ಯೂಹಾಲ…’ನ ವ್ಯವಸ್ಥೆಯೂ ಸಹ ಮಾಡಲಾಗಿದೆ. ದೇವಾಲಯದ ದರ್ಶನಾರ್ಥಿಗಳ ಭೋಜನ ಪ್ರಸಾದ ವಿನಿಯೋಗಕ್ಕಾಗಿ ಉಚಿತ ಅನ್ನದಾನ ಛತ್ರವನ್ನು ನಿರ್ಮಿಸಲಾಗಿದೆ.
Temple of Bangalore: ಬೆಂಗ್ಳೂರಲ್ಲೂ ಹಿಂಗೆಲ್ಲ ಇದ್ಯಾ ಅನ್ಸೋಂಥ ದೇವಾಲಯಗಳಿವು..
ಐದು ಮೂರ್ತಿ ಪ್ರತಿಷ್ಠಾಪನೆ:
ನೂತನ ದೇವಸ್ಥಾನದಲ್ಲಿ ರಾಜಾಧಿರಾಜ ಗೋವಿಂದ ಮುಖ್ಯ ದೇವರಾಗಿ ಪ್ರತಿಷ್ಠಾಪಿಸಲಾಗುತ್ತಿದೆ. ಜತೆಗೆ ಮಹಾಲಕ್ಷ್ಮೇ, ಲಕ್ಷ್ಮೇ ನರಸಿಂಹ, ದುದರ್ಶನ ನರಸಿಂಹ, ಇಸ್ಕಾನ್ ಸಂಸ್ಥಾಪಕ ಶ್ರೀಲ ಭಕ್ತಿ ವೇದಾಂತ ಪ್ರಭುಪಾದರ ಮೂರ್ತಿಗಳು ಇರಲಿವೆ. ಲೋಕಾರ್ಪಣಾ ಕಾರ್ಯಕ್ರಮದ ಹಿಂದಿನ ದಿನ (ಜೂ.13ರಂದು) ಐದು ಮೂರ್ತಿಗಳ ಪ್ರಾಣಪ್ರತಿಷ್ಠಾಪನೆ ನೆರವೇರಿಸಲಾಗುತ್ತಿದೆ.
ಇಸ್ಕಾನ್‌ನಂತೆಯೇ ಕಾರ್ಯಚಟುವಟಿಕೆ:
ಸದ್ಯ ರಾಜರಾಜಿನಗರದಲ್ಲಿರುವ ಇಸ್ಕಾನ್ ದೇವಾಲಯದಂತೆಯೇ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಈ ನೂತನ ದೇವಸ್ಥಾನದಲ್ಲಿಯೂ ನಡೆಯುತ್ತವೆ. ಹಬ್ಬ ಉತ್ಸವಗಳು, ವಿಶೇಷ ದಿನಗಳಂದು ವಿಶೇಷ ಪೂಜೆ, ಕಾರ್ಯಕ್ರಮಗಳನ್ನು ಕೂಡಾ ಹಮ್ಮಿಕೊಳ್ಳಲಾಗುವುದು. ಭಕ್ತಾಧಿಗಳಿಗೆ ಎಲ್ಲಾ ಇಸ್ಕಾನ್ ದೇವಾಲಯದಲ್ಲಿ ಲಭ್ಯವಿರುವಂತೆಯೇ ಸೇವಾಕಾರ್ಯಗಳು ಇಲ್ಲಿಯೂ ಕೂಡಾ ನಡೆಸಲಾಗುತ್ತದೆ ಎಂದು ಇಸ್ಕಾನ್ ಅಧಿಕಾರಿಗಳು ತಿಳಿಸಿದ್ದಾರೆ.
ಇಂದಿರಾ ಕ್ಯಾಂಟೀನ್‌ಗೆ ಇಸ್ಕಾನ್‌ನಿಂದ ಆಹಾರ?
ದಕ್ಷಿಣ ಬೆಂಗಳೂರಿಗರಿಗೆ ಅನುಕೂಲ:
ಬೆಂಗಳೂರಿನಲ್ಲಿ ಇಸ್ಕಾನ್‌ನಿಂದ ನಿರ್ಮಿಸುತ್ತಿರುವ ಎರಡನೇ ದೇವಸ್ಥಾನ ಇದಾಗಿದೆ. ಬೆಂಗಳೂರು ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಇಸ್ಕಾನ್ ಭಕ್ತಾದಿಗಳ ಸಂಖ್ಯೆಯೂ ಕೂಡಾ ಹೆಚ್ಚಳವಾಗುತ್ತಿದೆ. ಸದ್ಯ ರಾಜಾಜಿನಗರದಲ್ಲಿರುವ ಇಸ್ಕಾನ್ ದೇವಾಲಯದಲ್ಲಿ ವಾರಾಂತ್ಯದಲ್ಲಿ ಜನದಟ್ಟಣೆ ಹೆಚ್ಚಳವಾಗುತ್ತಿದ್ದು, ವಾಹನ ನಿಲುಗಡೆ ಸೇರಿದಂತೆ ದೊಡ್ಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸ್ಥಳಾವಕಾಶ ಇಲ್ಲದಂತಾಗಿದೆ. ಈ ಹಿನ್ನೆಲೆ ಮತ್ತೊಂದು ದೇವಸ್ಥಾನವನ್ನು ನಿರ್ಮಿಸಲಾಗಿದೆ. ಮುಂಬೈ, ದೆಹಲಿಯಂತಹ ಮೆಟ್ರೋ ನಗರಗಳಲ್ಲಿ ಈಗಾಗಲೇ ಒಂದಕ್ಕಿಂತ ಹೆಚ್ಚು ಇಸ್ಕಾನ್ ದೇವಸ್ಥಾನಗಳಿವೆ. ಇದೇ ರೀತಿ ಬೆಂಗಳೂರಿನಲ್ಲಿಯೂ ಮತ್ತೊಂದು ದೇವಸ್ಥಾನ ಬೇಕು ಎಂಬ ಬೇಡಿಕೆ ಭಕ್ತಾದಿಗಳಿಂದ ಕೇಳಿಬಂದಿತ್ತು. ಅದರಲ್ಲೂ ದಕ್ಷಿಣ ಬೆಂಗಳೂರಿನ ಇಸ್ಕಾನ್ ಭಕ್ತಾದಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಿರ್ಮಿಸಬೇಕು ಎಂಬ ಒತ್ತಾಯವಿತ್ತು. ಹೀಗಾಗಿ, ಕನಕಪುರ ರಸ್ತೆಯ ವೈಕುಂಠ ಗಿರಿಯಲ್ಲಿ ದೇವಸ್ಥಾನ ನಿರ್ಮಿಸಲಾಗಿದೆ ಎಂದು ಇಸ್ಕಾನ್ ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್14ಕ್ಕೆ ರಾಷ್ಟ್ರಪತಿಗಳಿಂದ ಲೋಕಾರ್ಪಣೆ:
ಜೂನ್ 14ರಂದು ಬೆಳಗ್ಗೆ 11ಕ್ಕೆ ರಾಷ್ಟ್ರಪತಿಗಳಾದ ರಾಮನಾಥ ಕೋವಿಂದ್ ಅವರು ದೇವಸ್ಥಾನ ಲೋಕಾರ್ಪಣೆ ಮಾಡಲಿದ್ದಾರೆ. ಅಂದಿನ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್, ಶಾಸಕ ಎಂ. ಕೃಷ್ಣಪ್ಪ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸಾರ್ವಜನಿಕರ ಪ್ರದೇಶ ನಿರ್ಬಂಧಿಸಲಾಗಿದೆ.
ಆಗಸ್ಟ್ 1 ರಂದು ಸಾರ್ವಜನಿಕ ಪ್ರವೇಶ:
ಜೂನ್ 14ರಂದು ಲೋಕಾರ್ಪಣೆಯಾದ ಬಳಿಕ ಸತತ 48 ದಿನಗಳ ಕಾಲ ಮಂಡಲ ಪೂಜೆ ನಡೆಸಲಾಗುತ್ತದೆ. ಆ ಸಂದರ್ಭದಲ್ಲಿ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಜುಲೈ 31ಕ್ಕೆ ಮಂಡಲ ಪೂಜೆ ಮುಕ್ತಾಯಗೊಳ್ಳಲಿದ್ದು, ಆ ಬಳಿಕ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ದೇವಸ್ಥಾನಕ್ಕೆ ಉಚಿತ ಪ್ರದೇಶ ಇರಲಿದ್ದು, ಬೆಳಿಗ್ಗೆ ಮತ್ತು ಸಂಜೆ ಎರಡು ಪಾಳಿಯಲ್ಲಿ ಭಕ್ತಾದಿಗಳಿಗೆ ದರ್ಶನಕ್ಕೆ ಅವಕಾಶವಿರಲಿದೆ.
ಬೆಂಗಳೂರಿನ ಬೃಹತ್ ಟವರ್ ನಿರ್ಮಾಣ:
ದೇವಸ್ಥಾನದ ಹಿಂಬದಿಯಲ್ಲಿ 700 ಅಡಿ ಎತ್ತರದ 70 ಅಂತಸ್ತಿನ ಬೃಹತ್ ಕಟ್ಟದಲ್ಲಿ ರಾಧಾಕೃಷ್ಣ ಥೀಮ್ ಪಾಕ್ ನಿರ್ಮಿಸಲಾಗುತ್ತಿದೆ. ಈ ಥೀಮ್ ಪಾರ್ಕ್ನಲ್ಲಿ ರಾಧಾಕೃಷ್ಣರ ಜೀವನ ಚರಿತ್ರೆ ಒಳಗೊಂಡ ತ್ರೀಡಿ ಕಲಾಕೃತಿಗಳಿರಲಿದ್ದು, ಟವರ್ ಕೊನೆಯ ಮಹಡಿಯಲ್ಲಿ ರಾಧಾಕೃಷ್ಣರ ದೇವಸ್ಥಾನ ಇರಲಿದೆ. ಇನ್ನು ಟವರ್ ಬೆಂಗಳೂರಿನ ಅತೀ ಎತ್ತರ ಕಟ್ಟಡವಾಗಲಿದೆ. 2025ರ ವೇಳೆಗೆ ಟವರ್ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದು ಇಸ್ಕಾನ್ ಅಧಿಕಾರಿಗಳು ತಿಳಿಸಿದ್ದಾರೆ.
ವೈಕುಂಠಗಿರಿಯ ಐತಿಹಾಸಿಕ ಹಿನ್ನೆಲೆ:
ತಿರುಪತಿ ತಿಮ್ಮಪ್ಪ ಪತ್ನಿ ಪದ್ಮಾವತಿಯೊಂದಿಗೆ ವಸಂತ ಕಾಲದಲ್ಲಿ ವೈಕುಂಠಗಿರಿಗೆ ಬಂದು ನೆಲೆಸುತ್ತಿದ್ದರು. ಅವರ ಬರುವಿಕೆಗಾಗಿ ಮುನಿ ಮಾಂಡವ್ಯ ಎಂಬುವವರು ಹಲವು ವರ್ಷಗಳ ಕಾಲ ತಪಸ್ಸು ಮಾಡಿದ್ದರು. ತಪೋ ಭೂಮಿ, ಜತೆಗೆ ತಿರುಪತಿ ತಿಮ್ಮಪ್ಪ ಸ್ವತಃ ಬಂದು ವಾಸವಿದ್ದ ಸ್ಥಳವಾಗಿದೆ. ಈ ಹಿನ್ನೆಲೆ ರಾಜಾಧಿರಾಜ ಗೋವಿಂದ ದೇವಸ್ಥಾನ ನಿರ್ಮಿಸಲಾಗುತ್ತಿದೆ.
ತಿರುಪತಿ ತಿರುಮಲ ಪ್ರತಿರೂಪ:
ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ವೆಂಕಟೇಶ್ವರ ದೇವರ ಭಕ್ತಾಧಿಗಳ ಸಂಖ್ಯೆ ಹೆಚ್ಚಿದೆ. ಅವರುಗಳಿಗೆ ಬೆಂಗಳೂರಿನಲ್ಲಿ ಚಿಕ್ಕ ತಿರುಪತಿ ನಿರ್ಮಿಸಬೇಕು ಎಂಬ ಉದ್ದೇಶ ಇಸ್ಕಾನ್ ಹೊಂದಿತ್ತು. ಈ ಹಿನ್ನೆಲೆ ನೂತನ ದೇವಸ್ಥಾನದ ಗೋಪುರ, ವಾಸ್ತುಶಿಲ್ಪ, ಹೊರಾಗಂಣ ವಿನ್ಯಾಸವನ್ನು ತಿರುಮಲ ತಿರುಪತಿಯ ವೆಂಕಟೇಶ್ವರ ದೇವಸ್ಥಾನದ ಮಾದರಿಯಲ್ಲಿಯೇ ನಿರ್ಮಿಸಲಾಗಿದೆ. ರಾಜಾಧಿರಾಜ ಗೋವಿಂದ ಮೂರ್ತಿಯೂ ಕೂಡಾ ತಿರುಪತಿಯ ವೆಂಕಟೇಶ್ವರ ಮೂರ್ತಿಯಷ್ಟೇ ಎತ್ತರ, ಉದ್ದವಿದೆ. ಇನ್ನು ದೇವಸ್ಥಾನ ಸಂಪೂರ್ಣ ವಾಸ್ತುಶಿಲ್ಪವನ್ನು ಇಸ್ಕಾನ್ ಬೆಂಗಳೂರು ಅಧ್ಯಕ್ಷ ಮಧುಪಂಡಿತ ದಾಸರು ಮಾಡಿದ್ದಾರೆ.
ಮೆಟ್ರೊ ನಿಲ್ದಾಣದಿಂದ ಒಂದು ಕಿ.ಮೀ ನೇರ ಸ್ಕೈವಾಕ್:
ವೈಕುಂಠಗಿರಿಯ ಈ ದೇವಸ್ಥಾನವು ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣದಿಂದ 900 ಮೀ. ದೂರದಲ್ಲಿದೆ. ಮೆಟ್ರೋ ದ್ವಾರದಿಂದ ಗಿರಿ ಮೇಲಿರುವ ದೇವಸ್ಥಾನ ತಲುಪಲು ಹೆಚ್ಚುಕಡಿಮೆ ಒಂದು ಕಿ.ಮೀ ಸ್ಕೈವಾಕ್ ನಿರ್ಮಿಸಲಾಗುತ್ತಿದೆ. ಮೆಟ್ರೊದಲ್ಲಿ ಬರುವ ಭಕ್ತಾಧಿಗಳು, ವಾಹನಗಳಲ್ಲಿ ಬರುವವರು ಈ ಸ್ಕೈವಾಕ್ ಅನುಕೂಲವಾಗಲಿದೆ. ಗಿರಿಯ ಕೆಳಭಾಗದಲ್ಲಿ ಬಹುಮಹಡಿಯ ವಾಹನ ನಿಲುಗಡೆ ತಾಣ (ಪಾರ್ಕಿಂಗ್) ನಿರ್ಮಿಸಲಾಗಿದ್ದು, 500ಕ್ಕೂ ಅಧಿಕ ಕಾರುಗಳನ್ನು ನಿಲ್ಲಿಸಬಹುದಾಗಿದೆ.
ಗಿರಿಯಿಂದ ರಾಜಾಜಿನಗರ ಇಸ್ಕಾನ್ ದೇವಾಲಯ ಕಾಣಲಿದೆ!
ವೈಕುಂಠಗಿರಿಯ ಮೇಲೆ ನಿರ್ಮಾಣವಾಗಿರುವ ನೂತನ ರಾಜಾಧಿರಾಜ ಗೋವಿಂದ ದೇವಸ್ಥಾನದಿಂದ ಭಕ್ತಾಧಿಗಳಿಗೆ ರಾಜಾಜಿನಗರದಲ್ಲಿರುವ ಇಸ್ಕಾನ್ ದೇವಸ್ಥಾನ ಕಾಣಲಿದೆ. ಎರಡೂ ದೇವಸ್ಥಾನಗಳ ನಡುವೆ 25 ಕಿ.ಮೀ ದೂರವಿದೆ. ಇದು ಎರಡೂ ದೇವಸ್ಥಾನದ ನಡುವಿನ ವೈಶಿಷ್ಟ್ಯವಾಗಿದೆ ಎನ್ನುತ್ತಾರೆ ಇಸ್ಕಾನ್ ಅಧಿಕಾರಿಗಳು.