*  ಎರಡು ದಿನದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ: ತುಳಸಿ ಮದ್ದಿನೇನಿ*  ಅದಮ್ಯ ಚೇತನದಿಂದ ಮನವಿ*  ದರ ಹೆಚ್ಚಳಕ್ಕೆ ಮನವಿ

ಬೆಂಗಳೂರು(ಮೇ.27): ಬಿಬಿಎಂಪಿ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್‌ಗಳಿಗೆ ಊಟ, ತಿಂಡಿ ಪೂರೈಕೆ ಗುತ್ತಿಗೆಯನ್ನು ಇಸ್ಕಾನ್‌ ಸಂಸ್ಥೆಗೆ ನೀಡುವಂತೆ ಎರಡು ದಿನದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಬಿಬಿಎಂಪಿ ಹಣಕಾಸು ಆಯುಕ್ತೆ ತುಳಸಿ ಮದ್ದಿನೇನಿ ತಿಳಿಸಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಸ್ಕಾನ್‌ ಸಂಸ್ಥೆಯ ‘ಅಕ್ಷಯ ಪಾತ್ರೆ’, ‘ಅಕ್ಷಯ ನಿಧಿ’ ಸೇರಿದಂತೆ ಮೂರು ಸಂಸ್ಥೆಗಳಿಂದ ಈಗಾಗಲೇ ಬಿಬಿಎಂಪಿಯ ಪೌರ ಕಾರ್ಮಿಕರು ಮತ್ತು ಶಾಲೆ-ಕಾಲೇಜುಗಳ ಮಕ್ಕಳಿಗೆ ಊಟ ಸರಬರಾಜು ಮಾಡಲಾಗುತ್ತಿದೆ. ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆ ಬಗ್ಗೆ ಸಾಕಷ್ಟುದೂರು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಪೂರೈಕೆದಾರರನ್ನು ಬದಲಾವಣೆಗೆ ತೀರ್ಮಾನಿಸಲಾಗಿದ್ದು, ಇಸ್ಕಾನ್‌ಗೆ ನೀಡಲು ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಈ ನಿಟ್ಟಿನಲ್ಲಿ 4ಜಿ ವಿನಾಯಿತಿ ನೀಡಿ ಇಸ್ಕಾನ್‌ ಸಂಸ್ಥೆಗೆ ಗುತ್ತಿಗೆ ನೀಡುವಂತೆ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. ಊಟದಲ್ಲಿ ಬೆಳ್ಳುಳ್ಳಿ ಹಾಕುವ ಬಗ್ಗೆ ಇಸ್ಕಾನ್‌ ಸಂಸ್ಥೆಗೆ ಯಾವುದೇ ಸೂಚನೆ ನೀಡಿಲ್ಲ. ಆದರೆ ಗುಣಮಟ್ಟಮತ್ತು ರುಚಿಯಲ್ಲಿ ರಾಜಿ ಉಂಟಾಗದಂತೆ ಕ್ರಮವಹಿಸಲು ಸೂಚಿಸಲಾಗಿದೆ ಎಂದ ವಿವರಿಸಿದರು.

'ಇಂದಿರಾ ಕ್ಯಾಂಟೀನ್‌ ಹೆಸರು ಬದಲಿಸಿದ್ರೆ ಬಿಜೆಪಿ ಇಟ್ಟಹೆಸರುಗಳಿಗೆ ಮಸಿ'

ಬಾಕಿ ಬಿಲ್‌ ಪಾವತಿ

ಈವರೆಗೆ ಇಂದಿರಾ ಕ್ಯಾಂಟೀನ್‌ಗಳಿಗೆ ಊಟ ಮತ್ತು ಉಪಹಾರ ಪೂರೈಕೆ ಮಾಡಲಾಗುತ್ತಿದ್ದ ಸಂಸ್ಥೆಗಳಿಗೆ ಬಾಕಿ ಇದ್ದ ಬಿಲ್‌ ಪಾವತಿಸಲಾಗಿದೆ. ಪ್ರತಿನಿತ್ಯ ಊಟ ಸರಬರಾಜು ಮಾಡುತ್ತಿದ್ದ ಮಾಹಿತಿಯನ್ನು ಪಾಲಿಕೆಯ ಮಾರ್ಷಲ್‌ಗಳು ವರದಿ ನೀಡಿದ್ದಾರೆ. ಈ ಆಧಾರದಲ್ಲಿ ಗುತ್ತಿಗೆ ಸಂಸ್ಥೆಗಳಿಗೆ ಬಿಲ್‌ ಪಾವತಿಸಲಾಗಿದೆ. ಗುತ್ತಿಗೆ ಸಂಸ್ಥೆಗಳು ನೀಡಿದ ಊಟ ಸರಬರಾಜು ಲೆಕ್ಕ ಮತ್ತು ಮಾರ್ಷಲ್‌ಗಳು ನೀಡಿದ ಲೆಕ್ಕದಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಅದನ್ನು ಪರಿಶೀಲನೆ ಮಾಡಿ ಬಿಲ್‌ ಪಾವತಿ ಮಾಡುವುದಾಗಿ ಆದೇಶಿಸಲಾಗಿದೆ ಎಂದು ತಿಳಿಸಿದರು.

ದರ ಹೆಚ್ಚಳಕ್ಕೆ ಮನವಿ

ಇಂದಿರಾ ಕ್ಯಾಂಟೀನ್‌ ಆರಂಭಿಸಿದ 2017ರಲ್ಲಿ ಒಂದು ದಿನದ ಊಟಕ್ಕೆ (2 ಊಟ, 1 ಉಪಹಾರ) 55.30 ರು. ದರ ನಿಗದಿ ಪಡಿಸಲಾಗಿತ್ತು, ಅದರಲ್ಲಿ ಫಲಾನುಭವಿಗಳು 25 ರು. (ಬೆಳಗ್ಗೆ ತಿಂಡಿಗೆ 5 ರು. ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ತಲಾ 10 ರೂ.) ಪಾವತಿಸುತ್ತಿದ್ದಾರೆ. ಉಳಿದ ಹಣವನ್ನು ಬಿಬಿಎಂಪಿ ಮತ್ತು ಸರ್ಕಾರ ಗುತ್ತಿಗೆದಾರರಿಗೆ ನೀಡುತ್ತಿತ್ತು. ಕಳೆದ ಮೂರು ವರ್ಷಗಳಿಂದ ಎಲ್ಲ ದಿನಬಳಕೆ ವಸ್ತುಗಳ ಬೆಲೆಯಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ಒಂದು ದಿನದ ಒಬ್ಬ ವ್ಯಕ್ತಿಯ ಆಹಾರ ಸರಬರಾಜಿಗೆ 78 ರು ನೀಡುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಅದಮ್ಯ ಚೇತನದಿಂದ ಮನವಿ

ಪಾಲಿಕೆ ವ್ಯಾಪ್ತಿಯಲ್ಲಿ ಮೊಬೈಲ್‌ ಕ್ಯಾಂಟೀನ್‌ಗಳು ಒಳಗೊಂಡಂತೆ ಒಟ್ಟು 178 ಇಂದಿರಾ ಕ್ಯಾಂಟೀನ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಇದರಲ್ಲಿ ಮೇ.ಶೆಫ್‌ಟಾಕ್‌, ಮೆ.ರಿವಾರ್ಡ್ಸ್ ಮತ್ತು ಅದಮ್ಯ ಚೇತನ ಸಂಸ್ಥೆಗಳು ಕೆಲವು ವಲಯಗಳಲ್ಲಿ ಆಹಾರ ಪೂರೈಕೆಯ ಗುತ್ತಿಗೆ ಪಡೆದಿವೆ. ಕೆಲವು ಇಂದಿರಾ ಕ್ಯಾಂಟೀನ್‌ಗಳ ನಿರ್ವಹಣಾ ಜವಾಬ್ದಾರಿ ನೀಡುವಂತೆ ಅದಮ್ಯ ಚೇತನ ಸಂಸ್ಥೆ ಸರ್ಕಾರಕ್ಕೆ ಮನವಿ ಮಾಡಿದೆ. ಈ ಬಗ್ಗೆ ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿ ಮಾಹಿತಿ ನೀಡಿದರು.