ಮಹಾಭಾರತ ಕತೆಯನ್ನು ಮನೆಮನೆಯಲ್ಲೂ ಕುಳಿತು ನೋಡುತ್ತಿದ್ದಾರೆ. ಆದರೆ, ನಿಮಗೆ ಇನ್ನೂ ಹೆಚ್ಚಿನ ವಿವರಣೆಗಲು ಬೇಕು ಎಂದರೆ ನೀವದರ ಬಗ್ಗೆ ಓದಿಯೇ ತಿಳಿದುಕೊಳ್ಳಬೇಕು. ಸಿಕ್ಕಾಪಟ್ಟೆ ತಿರುವುಗಳು, ಎಲ್ಲ ಕತೆಗೂ ಹಿನ್ನೆಲೆ, ಶಾಪ, ಬಹುಮುಖಿ ವ್ಯಕ್ತಿತ್ವಗಳು, ಆದರ್ಶಗಳು, ದುರಾಸೆ,  ನ್ಯಾಯ- ಹೀಗೆ ಜೀವನದ ಎಲ್ಲ ಮಜಲುಗಳನ್ನೂ ಮಹಾಭಾರತ ಹೊಂದಿದೆ. ಎಲ್ಲ ಪಾತ್ರಗಳಲ್ಲೂ ಒಳಿತು ಕೆಡುಕುಗಳೆರಡನ್ನೂ ಕಾಣಬಹುದು. ಇವೆರಡೂ ಮನುಷ್ಯ ಸಹಜ ಗುಣವಾಗಿವೆ ಎಂಬುದನ್ನು ಮಹಾಭಾರತದ ಪಾತ್ರಗಳೂ ನಿರೂಪಿಸುತ್ತವೆ. ಹಾಗೆಯೇ ಬಹುಜನರು ವಿಲನ್ ಎಂದು ಬಗೆಯುವ, ಕುತಂತ್ರ ಬುದ್ಧಿಗೆ ಉದಾಹರಣೆಯಾಗಿ ನಿಲ್ಲುವ ಶಕುನಿಗೆ ಕೂಡಾ ದೇವಾಲಯವಿದೆ ಎಂದರೆ ನಂಬುತ್ತೀರಾ? ಎಲ್ಲ ಪಾತ್ರಗಳಂತೆ ಶಕುನಿ ಕೂಡಾ ಒಳಿತು ಕೆಡುಕುಗಳನ್ನು ಹೊಂದಿದ್ದಾನೆ. ಶಕುನಿ ಕುರಿತ ಕೆಲ ಆಸಕ್ತಿಕರ ವಿಷಯಗಳನ್ನು ಇಲ್ಲಿ ಕೊಡಲಾಗಿದೆ. 

ಈ ರಾಶಿಯವರು ಸೆಕ್ಸ್, ಲವಲ್ಲಿ ಭಲೇ ಹುಷಾರ್!

ಭೀಷ್ಮ ಪಿತಾಮಹನ ಶತ್ರು
ತನ್ನ ಸಹೋದರಿ ಗಾಂಧಾರಿಯು ಕುರುಡ ದೃತರಾಷ್ಟ್ರನನ್ನು ವಿವಾಹವಾಗುವಂತೆ ಮಾಡಿದ್ದಕ್ಕಾಗಿ ಶಕುನಿಗೆ ಭೀಷ್ಮರ ಮೇಲೆ ಇನ್ನಿಲ್ಲದ ಕೋಪವಿತ್ತು. ಎಲ್ಲೆಡೆ ಬಿಂಬಿಸುವಂತೆ ಶಕುನಿಗೆ ಪಾಂಡವರ ವಿರುದ್ಧ ಸೇಡಿರಲಿಲ್ಲ. ಆತನ ಗುರಿಯೇನಿದ್ದರೂ ಭೀಷ್ಮರ ಸಂಪೂರ್ಣ ಕುಟುಂಬವನ್ನು ಧ್ವಂಸ ಮಾಡುವುದಾಗಿತ್ತು. 

ಶಕುನಿ ಹೇಡಿಯಲ್ಲ
ಪಾಂಡವರು ಅಜ್ಞಾತವಾಸ ಮುಗಿಸಿ ಬರುವ ಹೊತ್ತಿಗಾಗಲೇ ಗಾಂಧಾರ ದೇಶಕ್ಕೆ ಮರಳಿ ಪುತ್ರ ಉಲೂಕನೊಡನೆ ರಾಜ್ಯಭಾರ ಮಾಡುವ ಎಲ್ಲ ಅವಕಾಶಗಳೂ ಶಕುನಿಗಿದ್ದವು. ಆದರೆ, ಆತ ಕೌರವರ ನಡುವೆಯೇ ಇದ್ದು ಭೀಷ್ಮ ಪಿತಾಮಹರ ಇಡೀ ಕುಟುಂಬ ಹಾಳುಗೆಡವಲು ಸಂಚು ರೂಪಿಸಿದ್ದ. ಆತ ಹೇಡಿಯಾಗಿದ್ದರೆ, ಗಾಂಧಾರಕ್ಕೆ ಹೋಗಿ ಆರಾಮವಾಗಿ ಉಳಿಯುತ್ತಿದ್ದ. 

ಶಿವಭಕ್ತ
ವಿಲನ್‌ಗಳೆಲ್ಲ ದೆವ್ವವನ್ನೇ ಆರಾಧಿಸುವವರು ಎಂದು ನೀವಂದುಕೊಂಡಿದ್ದರೆ ಅದು ಖಂಡಿತಾ ತಪ್ಪು. ಗಾಂಧಾರಿ ತನ್ನ ಶತ್ರುಗಳ ಕಡೆಗಿದ್ದ ಕೃಷ್ಣನನ್ನು ಆರಾಧಿಸುತ್ತಿದ್ದರೆ, ಆಕೆಯ ಸಹೋದರ ಶಕುನಿ ಶಿವನ ಆರಾಧನೆ ಮಾಡುತ್ತಿದ್ದ. 

ಕೃಷ್ಣನಿಲ್ಲದಾಗಲೇ ತಂತ್ರ
ಕೃಷ್ಣನ ಉಪಸ್ಥಿತಿ ಇರುವಾಗ ಏನೇ ಯೋಜಿಸಿದರೂ ಅದು ಮಣ್ಣು ಕಚ್ಚುತ್ತದೆ ಎಂಬುದು ಶಕುನಿಗೆ ಚೆನ್ನಾಗಿಯೇ ತಿಳಿದಿತ್ತು. ಹಾಗಾಗಿ, ಆತ ಕೃಷ್ಣನಿಲ್ಲದಾಗಲೇ ತನ್ನ ಸಂಚಿನ ಬಾಣಗಳನ್ನೆಲ್ಲ ಪ್ರಯೋಗಿಸುವ ಜಾಣತನ ತೋರಿಸುತ್ತಿದ್ದ.  

ದ್ವಾಪರಯುಗಕ್ಕೆ ಕಾರಣ
ಅಣ್ಣತಮ್ಮಂದಿರು ತಮ್ಮತಮ್ಮಲ್ಲೇ ಕಾದಾಡುವ ದ್ವಾಪರ ಯುಗ ಹಾಗೆ ನಡೆಯಲು ಶಕುನಿಯ ಪಾತ್ರವೇ ಮಹತ್ವದ್ದು. ಪಾಂಡವರು ಹಾಗೂ ಕೌರವರ ನಡುವಿನ ದ್ವೇಷದ ಫಲಿತಾಂಶ ಕುರುಕ್ಷೇತ್ರವಾಗಿದ್ದರೆ, ಆ ದ್ವೇಷಕ್ಕೆ ತುಪ್ಪ ಸುರಿಯುತ್ತಾ, ದ್ವೇಷದ ಜ್ವಾಲೆ ಜೋರಾಗಿ ಏಳುವಂತೆ ನೋಡಿಕೊಂಡಿದ್ದು ಶಕುನಿ. ಆತನಿಲ್ಲದಿದ್ದಲ್ಲಿ ಕುರುಕ್ಷೇತ್ರ ಯುದ್ಧ ಬಹುಷಃ ನಡೆಯುತ್ತಿರಲಿಲ್ಲ. 

ಚಾತುರ್ಮಾಸದಲ್ಲಿ ವಿಶೇಷ ಪುಣ್ಯಫಲ ಪಡೆಯಲು ಹೀಗೆ ಮಾಡಿ!

ಶಕುನಿಗೂ ಉಂಟು ದೇವಾಲಯ
ಹೌದು, ಮಹಾಭಾರತದ ಯಾವ ಪಾತ್ರಗಳೂ ಪೂರ್ತಿ ಕೆಟ್ಟವಲ್ಲ, ಪೂರ್ತಿ ಒಳ್ಳೆಯವಲ್ಲ. ಶಕುನಿಯನ್ನು ಕೂಡಾ ಉತ್ತಮ ಎಂದು ನಂಬುವವರಿದ್ದಾರೆ. ಅದೇ ಕಾರಣಕ್ಕೆ ಕೇರಳದಲ್ಲಿ ಶಕುನಿಗೆ ಒಂದು ದೇವಾಲಯವಿದೆ. 

ಪಗಡೆಯಲ್ಲಿ ಪಂಟ
ಶಕುನಿ ಪಗಡೆಯಲ್ಲಿ ಪಂಟನೆಂಬುದು ಎಲ್ಲರಿಗೂ ಗೊತ್ತು. ಆತ ಪಗಡೆ ದಾಳಗಳನ್ನು ತನ್ನ ತಂದೆಯ ಕಾಲುಗಳ ಮೂಳೆಯಿಂದ ತಯಾರಿಸಿಟ್ಟುಕೊಂಡಿದ್ದ ಎಂದು ಕೆಲವರೆಂದರೆ, ತಂದೆಯ ಅಸ್ಥಿಯಿಂದ ತಯಾರಿಸಲಾಗಿತ್ತು ಎಂದು ಮತ್ತೆ ಕೆಲವರು ನಂಬಿದ್ದಾರೆ. ಅದೇನೇ ಇರಲಿ, ಪಗಡೆ ದಾಳಗಳನ್ನು ಬೇಕೆಂದಂತೆ ಬಳಸುವ, ಹಾಕುವ ಕಲೆ ಶಕುನಿಗಿತ್ತು. ನೀವು ಆತನನ್ನು ಇಷ್ಟ ಪಡಿ ಅಥವಾ ದ್ವೇಷಿಸಿ, ಆದರೆ ಕಡೆಗಣಿಸಲಂತೂ ಸಾಧ್ಯವಿಲ್ಲದಂತಾ ವ್ಯಕ್ತಿತ್ವ ಆತನದು. 

ಬೇರೆ ಹೆಸರೂ ಇದೆ
ಶಕುನಿಗೆ ಅಕ್ಕನ ಮಕ್ಕಳು ಹೇಗೆ 100 ಮಂದಿ ಇದ್ದರೋ (ಕೌರವರು), ಹಾಗೆಯೇ ಸೋದರರೂ 100 ಜನ ಇದ್ದರು. ಆತ ಎಲ್ಲರಿಗಿಂತ ಕಿರಿಯನಾಗಿದ್ದು, ರಾಜ ಸುಬಲನ 100ನೇ ಹಾಗೂ ಬದುಕುಳಿದ ಏಕೈಕ ಪುತ್ರ. ಸುಬಲನ ಪುತ್ರ ಹಾಗೂ 100ನೇ ಪುತ್ರನಾಗಿದ್ದರಿಂದ ಆತನಿಗೆ ಸೌಬಲ ಎಂಬ ಹೆಸರೂ ಇತ್ತು.