ರಾಮಾಯಣದಲ್ಲಿ ಹನುಮಂತ ಏಕಮುಖಿ, ಆದರೆ ಪಂಚಮುಖಿ ಹನುಮನ ಕಥೆ ಏನು? ಅಹಿರಾವಣ ಮತ್ತು ಮಹಿರಾವಣರನ್ನು ಸೋಲಿಸಲು ಹನುಮಂತ ಪಂಚಮುಖಿ ಅವತಾರವನ್ನು ಏಕೆ ತಾಳಬೇಕಾಯಿತು?
ಹನುಮಂತನನ್ನು ಆರಾಧಿಸುತ್ತೇವೆ. ಪಂಚಮುಖಿ ಆಂಜನೇಯ ಬಹಳ ಪವರ್‌ಫುಲ್ ಅಂತ ಲೆಕ್ಕ. ಈತ ಭಕ್ತರು ಬೇಡಿದ್ದನ್ನು ಕೊಡುವುದು ಮಾತ್ರವಲ್ಲ, ವೈರಿಗಳನ್ನು ಬಹಳ ಭಯಂಕರವಾಗಿ ಬಗ್ಗು ಬಡಿಯುತ್ತಾನೆ ಎಂದೂ ಹೇಳಲಾಗುತ್ತದೆ. ರಾಮಾಯಣದಲ್ಲಿ ಹನುಮಂತ ಏಕಮುಖದವನೇ. ಆದರೆ ಪಂಚಮುಖಿ ಅದದ್ದು ಯಾವಾಗ ಎಂದು ಕುತೂಹಲ ನಿಮಗಿರಬಹುದು. ಅದಕ್ಕೊಂದು ಕತೆಯಿದೆ.
ಲಂಕೆಯಲ್ಲಿ ರಾಮನ ಪಡೆಗೂ ರಾವಣನ ಪಡೆಗೂ ಯುದ್ಧ ಶುರುವಾಯಿತು. ಒಂದು ರಾತ್ರಿ, ರಾವಣನು ತನ್ನ ಗೆಳೆಯರಾದ ಅಹಿರಾವ- ಮಹಿರಾವಣರ ನೆರವು ಕೋರಿದ. ಅವರು ಮಾಯಾವಿಗಳಾಗಿ ಬಂದು, ರಾತ್ರಿ ರಾಮ- ಲಕ್ಷ್ಮಣರು ಮಲಗಿದ್ದ ಡೇರೆಯ ಒಳಗಿಂದಲೇ ನೆಲ ಸಹಿತ ಕೊರೆದು ಎತ್ತಿ ಪಾತಾಳ ಲೋಕಕ್ಕೆ ಒಯ್ದರು.
ವಿಭೀಷಣನಿಗೆ ಈ ಘಟನೆ ತಿಳಿದ ಮೇಲೆ, ಅವರ ಹಿಂದೆ ಹನುಮನನ್ನು ಕಳುಹಿಸಿದ. ಹನುಮ ಪಕ್ಷಿಯ ರೂಪ ಧರಿಸಿ ನಿಕುಂಭಿಳಾ ನಗರ ತಲುಪಿದ. ಅಲ್ಲಿಗೆ ಹೋದಾಗ ಬಾಗಿಲಲ್ಲಿ ಒಬ್ಬ ಅದ್ಭುತ ಕಾವಲುಗಾರನನ್ನು ನೋಡಿದ. ಅವನ ಅರ್ಧ ಶರೀರ ಮನುಷ್ಯನದಾಗಿದ್ದರೆ, ಇನ್ನುಳಿದ ಅರ್ಧ ಮತ್ಸ್ಯದ್ದಾಗಿತ್ತು. ಆ ಕಾವಲುಗಾರ ಹನುಮನನ್ನು ತಡೆದು "ನನ್ನನ್ನು ಸೋಲಿಸದ ಹೊರತು ನಿನಗೆ ಒಳಗೆ ಪ್ರವೇಶವಿಲ್ಲ.." ಎಂದ.
ಆಗ ಹನುಮಾನನು ಹೇಳಿದ "ನನ್ನ ಸ್ವಾಮಿ ಶ್ರೀರಾಮ ಮತ್ತು ಅವರ ಸಹೋದರ ಲಕ್ಷ್ಮಣ ಇವರನ್ನು ಅಹಿರಾವಣ ಮತ್ತು ಮಹಿರಾವಣ ಬಲಿ ಕೊಡುವವರಿದ್ದಾರೆ. ನಾನು ಅವರನ್ನು ಕರೆದೊಯ್ಯಲು ಬಂದಿದ್ದೇನೆ". ದ್ವಾರಪಾಲಕ ಮಕರಧ್ವಜ ಹೇಳತೊಡಗಿದ "ನನಗೂ ನನ್ನ ಸ್ವಾಮಿ ಅಹಿರಾವಣನ ಆದೇಶದಂತೆ ದ್ವಾರದ ಸುರಕ್ಷೆಗಾಗಿ ನಾನಿಲ್ಲಿ ನಿಂತಿದ್ದೇನೆ. ಹೀಗಾಗಿ ನಾನು ನಿನಗೆ ಒಳ ಹೋಗಲು ಬಿಡಲಾರೆ." ಆಗ ಹನುಮನು ಮಕರಧ್ವಜನನ್ನು ತನ್ನ ಬಾಲದಲ್ಲಿ ಬಂಧಿಸಿ ಒಳಗೆ ಪ್ರವೇಶ ಮಾಡಿದನು.
ಅಲ್ಲಿ ಹನುಮನು ಮಾತೆ ಕಾಮಾಕ್ಷಿಯನ್ನು ಪ್ರಣಾಮ ಮಾಡಿದ. ಹಾಗೂ ಪ್ರಾರ್ಥಿಸಿದ "ಹೇ ಮಾತೇ, ನಿಜವಾಗಿಯೂ ನೀನು ನನ್ನ ಸ್ವಾಮಿ ಶ್ರೀ ರಾಮ ಮತ್ತು ಲಕ್ಷ್ಮಣರ ಬಲಿ ತೆಗೆದುಕೊಳ್ಳಲು ಇಚ್ಛಿಸುತ್ತಿಯೇನು..!?"
ಆಗ ಮಾತೆ ಕಾಮಾಕ್ಷಿಯು ಹೇಳುತ್ತಾಳೆ "ಪುತ್ರ..! ನಾನು ಅಹಿರಾವಣ ಮತ್ತು ಮಹಿ ರಾವಣ ಎರಡೂ ದೈತ್ಯ ಅಧರ್ಮಿ, ಅತ್ಯಾಚಾರಿ, ದುಷ್ಟ ರಾಕ್ಷಸರ ಬಲಿಪಡೆಯಲು ಇಚ್ಚಿಸುತ್ತೇನೆ." ಎಂದು ಹೇಳುತ್ತಾ ಹನುಮನಿಗೆ ಒಂದು ಮಾತನ್ನು ತಿಳಿಸಿದಳು. "ನನ್ನ ಗುಡಿಯಲ್ಲಿ ಅಹಿ ರಾವಣನು 5 ದೀಪಗಳನ್ನು ಉರಿಸಿದ್ದಾನೆ. ಯಾರಾದರೂ ಅವನ್ನು ಒಂದೇ ಸಲಕ್ಕೆ ಆರಿಸಿದರೆ ಆ ಸಮಯದಲ್ಲಿ ಆ ರಾಕ್ಷಸನ ಅಂತ್ಯವಾಗುವುದು."
ದೇವಿಯ ಮಾತನ್ನು ಕೇಳಿ ಹನುಮನು ಒಂದು ಉಪಾಯ ಮಾಡಿದ. ಅಹಿರಾವಣ ಮತ್ತು ಮಹಿರಾವಣ ಇಬ್ಬರೂ ಮಂದಿರ ಪ್ರವೇಶ ಮಾಡುವದರಲ್ಲಿದ್ದಾಗ ತಾನು ಒಬ್ಬ ಸ್ತ್ರೀಯ ಕಂಠದಲ್ಲಿ "ನಾನು ಕಾಮಾಕ್ಷಿ ದೇವಿ ಇಚ್ಚಿಸುತ್ತೇನೆ. ನೀವಿಬ್ಬರೂ ಇಂದು ನನ್ನನ್ನು ಕಿಟಕಿಯ ಮೂಲಕ ಪೂಜಿಸಿ" ಎಂದು ಹೇಳಿದ. ಅದರಂತೆ ಆ ಇಬ್ಬರೂ ಕಿಟಕಿಯ ಮೂಲಕವೇ ಪೂಜೆ ಮಾಡಿದರು. ಪೂಜೆಯ ಅಂತ್ಯದಲ್ಲಿ ಬಲಿ ಕೊಡಲು ಶ್ರೀ ರಾಮ ಲಕ್ಷ್ಮಣರನ್ನು ಕಿಟಕಿಯ ಮೂಲಕ ಒಳಗಡೆ ಬಿಸಾಕಿದರು. ಅವರಿಬ್ಬರೂ ಪ್ರಜ್ಞೆ ತಪ್ಪಿದ್ದರು ಹಾಗೂ ಬಂಧನದಲ್ಲಿದ್ದರು. ಆಗ ಹನುಮನು ಶ್ರೀರಾಮ ಲಕ್ಷ್ಮಣರನ್ನು ಬಂಧ ಮುಕ್ತರನ್ನಾಗಿಸಿದ.
ಆಮೆ ಉಂಗುರ ಧರಿಸಿದರೆ ಏನಾಗುತ್ತದೆ? ಯಾರು ಅದನ್ನು ಧರಿಸಲೇಬಾರದು
ಇನ್ನು ಉಳಿದದ್ದು ಅಹಿರಾವಣ ಮತ್ತು ಮಹಿರಾವಣರನ್ನು ಮಾತೆಯ ಇಚ್ಛೆಯಂತೆ ಬಲಿ ಕೊಡುವ ಕೆಲಸ ಬಾಕಿ ಉಳಿದಿತ್ತು. ಹನುಮನು ಆ ಇಬ್ಬರು ರಾಕ್ಷಸರೊಂದಿಗೆ ಯುದ್ಧಕ್ಕೆ ನಿಂತ. ಅಹಿರಾವಣ ಮತ್ತು ಮಹಿರಾವಣ ಸತ್ತರೂ ಪುನಹ 5 ರೂಪಗಳಲ್ಲಿ ಜೀವಿತರಾಗುತ್ತಿದ್ದರು. ಆಗ ಹನುಮನಿಗೆ ಕಾಮಾಕ್ಷಿ ಅಮ್ಮನ ಮಾತು ನೆನಪಾಯಿತು. ಮಂದಿರದಲ್ಲಿ ಉರಿಯುವ ಐದು ದೀಪಗಳನ್ನು ಒಂದೇ ಸಲಕ್ಕೆ ಆರಿಸಿದರೆ ಈ ಇಬ್ಬರು ರಾಕ್ಷಸರ ಅಂತ್ಯವಾಗುವುದು!
ಹನುಮನು ಆಗ ಉತ್ತರದ ದಿಕ್ಕಿನಲ್ಲಿ ವರಾಹ ಮುಖ, ದಕ್ಷಿಣ ದಿಕ್ಕಿನಲ್ಲಿ ನರಸಿಂಹನ ಮುಖ, ಪಶ್ಚಿಮದಲ್ಲಿ ಗರುಡ, ಪೂರ್ವದಲ್ಲಿ ವಾನರ ಮತ್ತು ಆಕಾಶಕ್ಕೆ ಹಯಗ್ರೀವನ ಮುಖವನ್ನು ಪ್ರತ್ಯಕ್ಷೀಕರಿಸಿಕೊಂಡ. ನಂತರ ಹನುಮನು ತನ್ನ ಈ ಪಂಚಮುಖಗಳಿಂದ ಕಾಮಾಕ್ಷಿ ಗುಡಿಯಲ್ಲಿನ ಆ ಐದು ದೀಪಗಳನ್ನು ಒಂದೇ ಬಾರಿಗೆ ಆರಿಸಿದ. ನಂತರ ಆ ಇಬ್ಬರೂ ರಾಕ್ಷಸರನ್ನು ವಧಿಸಿದನು. ಇದೇ ಹನುಮನ ಪಂಚಮುಖಿ ಅವತಾರವಾಯಿತು.
ಚಾಣಕ್ಯ ನೀತಿ: ಹೆಂಡತಿ ನಿಜವಾಗಿಯೂ ಪ್ರೀತಿಸುತ್ತಾಳೋ? ನಾಟಕ ಮಾಡ್ತಾಳೋ? ಗೊತ್ತಾಗೋದು ಯಾವಾಗ?
