ಕ್ರಿಸ್ಟೋಫರ್ ಕೋಲಂಬಸ್‌ಗೆ ವರವಾದ ಚಂದ್ರಗ್ರಹಣ!
ಅರೆ ಚಂದ್ರಗ್ರಹಣಕ್ಕೂ ಕ್ರಿಸ್ಟೋಫರ್ ಕೋಲಂಬಸ್‌ಗೂ ಏನಪ್ಪಾ ಸಂಬಂಧ ಎಂದು ನಿಮಗೆ ಅಚ್ಚರಿಯಾಗಬಹುದು. ಆದರೆ, ಈ ಕತೆ ಬಹಳ ಸ್ವಾರಸ್ಯಕರವಾಗಿದೆ.
ಚಂದ್ರಗ್ರಹಣಕ್ಕೂ ಕ್ರಿಸ್ಟೋಫರ್ ಕೋಲಂಬಸ್(Christopher Columbus)ಗೂ ಸಂಬಂಧಿಸಿದ ಒಂದು ಸ್ವಾರಸ್ಯಕರ ಕತೆ ಇದೆ. ಅದನ್ನು ಕೇಳಿದಾಗ ಕೋಲಂಬಸ್‌ನ ಬುದ್ಧಿವಂತಿಕೆ ಬಗ್ಗೆ ಅಚ್ಚರಿಯೂ ಆಗುತ್ತದೆ, ಮುಗ್ಧ ಜನರ ನಂಬಿಕೆಗಳನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಬಗ್ಗೆ ದುಃಖವೂ ಆಗುತ್ತದೆ.. ಇಷ್ಟಕ್ಕೂ ಇತಿಹಾಸದುದ್ದಕ್ಕೂ ಮೇಲುಗೈ ಸಾಧಿಸಿದವರೆಲ್ಲ ಮಾಡಿದ್ದು ಅದೇ ಅಲ್ಲವೇ? ಜನರ ನಂಬಿಕೆ(ಮೂಢ?!)ಯ ಮೇಲೆ ಸವಾರಿ.
ಇನ್ನೇನು ಒಂದು ವಾರದಲ್ಲಿ ಅಂದರೆ ಮೇ 15ರಂದು ಚಂದ್ರಗ್ರಹಣವಿದೆ. ಈ ಸಂದರ್ಭದಲ್ಲಿ ಚಂದ್ರಗ್ರಹಣಕ್ಕೆ ಸಂಬಂಧಿಸಿದ ಕೋಲಂಬಸ್‌ನ ಈ ಕತೆ ನೆನಪಾಗುತ್ತದೆ. ಸಾಮಾನ್ಯವಾಗಿ ಗ್ರಹಣವೆಂದರೆ ಕೆಟ್ಟದ್ದು ಎಂದು ನಂಬುವವರು ನಾವು. ಆದರೆ, ಇದೇ ಗ್ರಹಣವು ಕೋಲಂಬಸ್ ಪಾಲಿಗೆ ವರವಾಗಿದ್ದು ಹೇಗೆ ನೋಡೋಣ.
ಅದು 1502, ಮೇ 11. ಪ್ರಖ್ಯಾತ ವಿಶ್ವ ಪರಿಶೋಧಕ ಕ್ರಿಸ್ಟೋಫರ್ ಕೋಲಂಬಸ್ ನಾಲ್ಕು ಹಡಗುಗಳೊಂದಿಗೆ ಸ್ಪೇನ್‌ನ ಕ್ಯಾಡಿಜ್‌ನಿಂದ ಹೊರಟು ಮುಂದಿನ ಮತ್ತು ನಾಲ್ಕನೇ ಪರ್ಯಟನೆ ಕೈಗೊಂಡಿದ್ದರು. ಈ ಸಂದರ್ಭದಗಲ್ಲಿ ಹಡಗು ಹುಳಗಳ(shipworms) ಸಾಂಕ್ರಾಮಿಕ ಕಾಯಿಲೆ(epidemic) ಶುರುವಾಯಿತು. ಅವು ಹಡಗಿನ ಫ್ಲೀಟ್‌ನ ಹಲಗೆಯಲ್ಲಿ ರಂಧ್ರಗಳನ್ನು ತಿನ್ನುವುದನ್ನು ಮುಂದುವರೆಸುತ್ತಲೇ ಹೋಗಿ ಅದೆಷ್ಟರ ಮಟ್ಟಿಗೆ ತಲೆನೋವು ತಂದವೆಂದರೆ ಕೋಲಂಬಸ್ ತನ್ನೆರಡು ಹಡಗುಗಳನ್ನು ಮಾರ್ಗ ಮಧ್ಯೆ ತ್ಯಜಿಸಬೇಕಾಯಿತು. ಹಡಗುಗಳು ಅಂತಿಮವಾಗಿ ಜೂನ್ 25, 1503 ರಂದು ಜಮೈಕಾ(Jamaica) ಎಂದು ಕರೆಯಲ್ಪಡುವ ದ್ವೀಪದ ಉತ್ತರ ಕರಾವಳಿಯಲ್ಲಿ ದಡ ಸೇರಿದವು.
ಆರಂಭದಲ್ಲಿ ಸ್ಥಳೀಯ ಜನರು ಈ ಬಿಳಿಯರನ್ನು ಪಾಪ, ದಾರಿ ತಪ್ಪಿದ್ದಾರೆ ಎಂದು ಬಹಳ ಆದರದಿಂದ ನಡೆಸಿಕೊಂಡರು. ಅವರಿಗೆ ವಸತಿ ಊಟಗಳನ್ನು ನೀಡಿದರು. ಆದರೆ ಆರು ತಿಂಗಳಾದರೂ ಕೋಲಂಬಸ್ ಮತ್ತವನ ಜೊತೆಯವರು ಅಲ್ಲಿಯೇ ಠಿಕಾಣಿ ಹೂಡಿದಾಗ ಸ್ಥಳೀಯರು ಇವರನ್ನು ಅನುಮಾನಿಸಲಾರಂಭಿಸಿದರು. ಅವರಿಗೆ ಊಟ, ವಸತಿ ನೀಡುವುದನ್ನು ನಿಲ್ಲಿಸಿದರು. ಆಗ ಕೊಲಂಬಸ್‌ನ ಅರ್ಧದಷ್ಟು ಸಿಬ್ಬಂದಿ ವಿರುದ್ಧ ದಂಗೆಯೆದ್ದ ಸ್ಥಳೀಯರು ಇವರನ್ನು ದರೋಡೆ ಮಾಡಿದರು ಮತ್ತು ಕೊಂದರು. ಇಂಥ ಸಂದರ್ಭದಲ್ಲಿ ಕೋಲಂಬಸ್‌ಗೆ ವರಾವಗಿದ್ದೇ ಚಂದ್ರಗ್ರಹಣ(lunar eclipse)!
Name Astrology: ಈ ಹೆಸರಿನ ಹುಡುಗಿ ಕೈ ಹಿಡಿದ್ರೆ ಅದೃಷ್ಟವೋ ಅದೃಷ್ಟ!
ಕೋಲಂಬಸ್ ಆ ಸಮಯದಲ್ಲಿ ಒಂದು ವೈಜ್ಞಾನಿಕ ಪುಸ್ತಕ ಓದುತ್ತಿದ್ದ. ಅದರಲ್ಲಿ 1475-1506ರವರೆಗಿನ ಗ್ರಹಕಾಯಗಳ ಚಲನೆ ವಿವರವಿತ್ತು. ಎಲ್ಲ ನೌಕಾಯಾತ್ರಿಗಳು ಇದನ್ನು ತಮ್ಮೊಂದಿಗಿಟ್ಟುಕೊಂಡು ಅದರ ಆಧಾರದ ಮೇಲೆ ಸಮುದ್ರದಲ್ಲಿ ಚಲನೆ ನಡೆಸುತ್ತಿದ್ದರು. ಇದರಿಂದ ಅವರು ಸಾಕಷ್ಟು ಅಪಾಯಗಳಿಂದ ಪಾರಾಗಲು ಸಾಧ್ಯವಾಗಿತ್ತು. ಅಂದು 1504ರ ಫೆ.29ರಂದು ಚಂದ್ರ ಹುಟ್ಟುವ ಸಮಯದಲ್ಲಿ ಪೂರ್ಣ ಚಂದ್ರಗ್ರಹಣ ಆಗುವ ಬಗ್ಗೆ ಪುಸ್ತಕಗದಲ್ಲಿತ್ತು. ಅದಕ್ಕಿನ್ನು ಮೂರೇ ದಿನ ಬಾಕಿಯಿತ್ತು. ಕೋಲಂಬಸ್ ಸ್ಥಳೀಯರನ್ನು ಸಭೆ ಕರೆದು, ತಮ್ಮನ್ನು ಸ್ಥಳೀಯರು ನಡೆಸಿಕೊಳ್ಳುತ್ತಿರುವ ರೀತಿ ಬಗ್ಗೆ ಕ್ರಿಶ್ಚಿಯನ್ ದೇವರಿಗೆ ಬಹಳ ಕೋಪ ಬಂದಿದೆ, ಇನ್ನು ಮೂರು ದಿನಗಳಲ್ಲಿ ಆ ಕೋಪವನ್ನು ಸೂಚನೆ ರೂಪದಲ್ಲಿ ಆಕಾಶದಲ್ಲಿ ತೋರಿಸುತ್ತಾನೆ, ಆಗ ಚಂದ್ರನು ಕೆಂಪಗೆ ಕೋಪದಿಂದ ಕುದಿಯುತ್ತಾನೆ ಎಂದು ಹೇಳಿದನು.
Rahu Remedies: ಈ ಸಿಂಪಲ್ ಪರಿಹಾರ ರಾಹುದೋಷದಿಂದ ಪಾರು ಮಾಡುತ್ತದೆ!
ಅದಾಗಿ ಮೂರು ದಿನಗಳಲ್ಲಿ ಬೆಳ್ಳಗೆ ಬರಬೇಕಾಗಿದ್ದ ಹುಣ್ಣಿಮೆ ಚಂದ್ರನು ಗ್ರಹಣ ಕಾರಣದಿಂದ ಕೆಂಪಾಗಿ ಕಂಡನು. ಇದರೊಂದಿಗೆ ಗ್ರಹಣ ಕಾಲದ ಬದಲಾವಣೆಗಳೆಲ್ಲವೂ ಸೇರಿ ಅಂದಿನ ರಾತ್ರಿ ಆಕಾಶ ಬೇರೆ ರೀತಿಯೇ ಕಂಡಿತು. ಇದನ್ನು ಕಂಡು ಬೆದರಿದ ಜಮೈಕಾದ ಮುಗ್ಧ ಸ್ಥಳೀಯರು ಎಲ್ಲ ದಿಕ್ಕುಗಳಿಂದಲೂ ಕೋಲಂಬಸ್ ಬಳಿ ಓಡಿ ಹೋದರು. ನಂತರ ಅವರ ದೇವರ ಕೋಪ ಕರಗಿಸುವಂತೆ, ತಮ್ಮದು ತಪ್ಪಾಯ್ತೆಂದು ಹೇಳಲು ಬೇಡಿಕೊಂಡರು. ಆಗ ಕೋಲಂಬಸ್ ತನ್ನ ದೇವರಲ್ಲಿ ಪ್ರಾರ್ಥನೆ ಮಾಡುವಂತೆ ನಟನೆ ಮಾಡುತ್ತಾ ಕುಳಿತ. ಒಂದೆರಡು ಗಂಟೆಗಳಲ್ಲೇ ಗ್ರಹಣ ಹೋಗಿ ಎಲ್ಲವೂ ಸಹಜ ಸ್ಥಿತಿಗೆ ಬಂದಿತು. ಆಗ ಹೊರಬಂದ ಕೋಲಂಬಸ್ ದೇವರನ್ನು ಸಮಾಧಾನಿಸಿದ್ದೇನೆ, ಇನ್ನು ಮುಂದೆ ಆಹಾರ ನೀಡುವಲ್ಲಿ ಸಮಸ್ಯೆಯಾಗಬಾರದು ಎಂದನು. ಪಾಪ, ಅದನ್ನು ಕೇಳಿದ ಜಮೈಕಾದ ಜನ ನೆಮ್ಮದಿಯ ನಿಟ್ಟುಸಿರಿಟ್ಟು ಕೋಲಂಬಸ್ ಹೇಳಿದಂತೆ ಕೇಳತೊಡಗಿದರು.
ಅಂತೂ ಚಂದ್ರಗ್ರಹಣವೊಂದು ಕೋಲಂಬಸ್ ಮತ್ತು ಸಹಚರರ ಪಾಲಿಗೆ ವರವಾಯಿತು.