ಕೆಟ್ಟ ಶಕುನವೋ? ಅದೃಷ್ಟದ ಸೂಚನೆಯೋ? ಪೂರಿ ಜಗನ್ನಾಥ ದೇವಸ್ಥಾನದ ಮೇಲೆ ಧ್ವಜದ ರೀತಿಯ ಬಟ್ಟೆ ಹಿಡಿದು ಹಾರಿದ ಗರುಡ!

Synopsis
ಒಡಿಶಾದ ಪೂರಿ ಜಗನ್ನಾಥ ದೇವಸ್ಥಾನದ ಮೇಲೆ ಗರುಡ ಪಕ್ಷಿ ಧ್ವಜದಂತಹ ಬಟ್ಟೆಯನ್ನು ಹಿಡಿದು ಹಾರಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆಯು ಆಧ್ಯಾತ್ಮಿಕ ಚರ್ಚೆಗೆ ಕಾರಣವಾಗಿದ್ದು, ಕೆಲವರು ಇದನ್ನು ದೈವಿಕ ಚಿಹ್ನೆ ಎಂದರೆ, ಇನ್ನು ಕೆಲವರು ಕೆಟ್ಟ ಶಕುನ ಎಂದು ಭಾವಿಸಿದ್ದಾರೆ.
ವೈರಲ್ ವಿಡಿಯೋವೊಂದರಲ್ಲಿ ಒಡಿಶಾದ ಪ್ರಸಿದ್ಧ ಪೂರಿ ಜಗನ್ನಾಥ ದೇವಸ್ಥಾನದ ಕಳಶದ ಮೇಲೆ ಗರುಡ ಹಾರಾಡುತ್ತಿರುವುದು ಸೆರೆಯಾಗಿದೆ. ಅದಕ್ಕಿಂತ ಮುಖ್ಯವಾಗಿ ಗರುಡ ತನ್ನ ಕಾಲುಗಳಲ್ಲಿ ಪೂರಿ ಜಗನ್ನಾಥ ದೇವಸ್ಥಾನದ ಮೇಲಿರುವ ಧ್ವಜದ ರೀತಿಯನ್ನೇ ಹೋಲು ಧ್ವಜವನ್ನು ಹಿಡಿದು ಹಾರಾಟ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ.
ಈ ವಿಡಿಯೋ ಭಾರೀ ಪ್ರಮಾಣದಲ್ಲಿ ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಊಹಾಪೋಹ ಹಾಗೂ ಆಧ್ಯಾತ್ಮಿಕ ಚರ್ಚೆಯ ಅಲೆಯನ್ನು ಎಬ್ಬಿಸಿದೆ. ದೇವಾಲಯದ ನೀಲ ಚಕ್ರದ ಮೇಲೆ ಹಾರಿಸಲಾಗಿರುವ ಪವಿತ್ರ ಧ್ವಜವಾದ ಪತಿತಪಬನ್ ಬನವನ್ನು ಹೋಲುವ ಬಟ್ಟೆಯ ತುಂಡನ್ನು ಹಿಡಿದುಕೊಂಡು ದೇವಾಲಯದ ಆಕಾಶದಲ್ಲಿ ಸುತ್ತುತ್ತಿರುವ ಭವ್ಯ ಗರುಡ ಪಕ್ಷಿಯ ವೀಡಿಯೊ ಸೆರೆಹಿಡಿಯಲಾಗಿದೆ.
ದೇವಾಲಯದ ಮೇಲೆ ಕೆಲವು ಸುತ್ತುಗಳನ್ನು ಸುತ್ತಿದ ನಂತರ ಗರುಡ ಸಮುದ್ರದ ಕಡೆಗೆ ಹಾರಿ ಕಣ್ಮರೆಯಾಯಿತು ಎಂದು ವರದಿಯಾಗಿದೆ. ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಈ ಪ್ರದೇಶದಲ್ಲಿ ಹಠಾತ್ ನಾರ್ವೆಸ್ಟರ್ ಚಂಡಮಾರುತ ಅಪ್ಪಳಿಸಿದಾಗ ಈ ಘಟನೆ ವರದಿಯಾಗಿದೆ.
ಸ್ಥಳೀಯ ಪ್ರತ್ಯಕ್ಷದರ್ಶಿಗಳ ಪ್ರಕಾರ, ಗರುಡ ಮೊದಲು ಮಂದಿರದ ಪಶ್ಚಿಮ ದ್ವಾರದ ಬಳಿ ಕಾಣಿಸಿಕೊಂಡಿತು. ಕೆಲವು ಕ್ಷಣಗಳ ನಂತರ, ಅದು ಧ್ವಜದಂತಹ ಬಟ್ಟೆಯೊಂದಿಗೆ ಹತ್ತಿರದ ಸಮುದ್ರದ ಕಡೆಗೆ ಹಾರುತ್ತಿರುವುದನ್ನು ನೋಡಿದ್ದಾರೆ.
ಗರುಡನ ಕಾಲಲ್ಲಿದ್ದ ಬಟ್ಟೆಯು ಪವಿತ್ರ ಧ್ವಜವನ್ನು ಹೋಲುತ್ತಿದ್ದರೂ, ಅದು ನಿಜವಾಗಿಯೂ ಮೂಲ ಪತಿತಪಬನ್ ಬನವೋ ಅಥವಾ ಅದೇ ರೀತಿ ಕಾಣುವ ಬಟ್ಟೆಯ ತುಂಡೋ ಎನ್ನುವುದು ದೃಢಪಡಿಸಲಾಗಿಲ್ಲ. ಅಚ್ಚರಿ ಎನ್ನುವಂತೆ ಗರುಡ ಮೇಲೆ ಹಾರಿದಾಗ ದೇವಾಲಯದ ಧ್ವಜವು ಹಾಗೆಯೇ ಇತ್ತು. ಮಂಗಳವಾರದವರೆಗೆ, ಶ್ರೀ ಜಗನ್ನಾಥ ದೇವಾಲಯ ಆಡಳಿತವು ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.
ಸಾಮಾನ್ಯವಾಗಿ, ಈ ದೇವಾಲಯದ ಸುತ್ತಲೂ ಯಾವುದೇ ಪಕ್ಷಿಗಳು ಹಾರುವುದಿಲ್ಲ ಎಂಬ ನಿಗೂಢ ನಂಬಿಕೆ ಇದೆ. ಪಕ್ಷಿಗಳ ರಾಜ 'ಗರುಡ' ದೇವಾಲಯವನ್ನು ರಕ್ಷಿಸುತ್ತಿದ್ದಾನೆ ಎಂದು ದೀರ್ಘಕಾಲದ ನಂಬಿಕೆ ಹೇಳುತ್ತದೆ. ಇತ್ತೀಚೆಗೆ ದೇವಾಲಯದ ಮೇಲೆ ಗರುಡ ಹಾರಿದ ಘಟನೆಯು ಜನರನ್ನು ದಿಗ್ಭ್ರಮೆಗೊಳಿಸಿದೆ.
ಇದು ಜನರಲ್ಲಿ ಮಿಶ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿತು. ಕೆಲವರು ಇದನ್ನು ದೈವಿಕ ಚಿಹ್ನೆ ಎಂದು ಹೇಳಿದರೆ, ಇನ್ನು ಕೆಲವರು ಇದು ಕೆಟ್ಟ ಶಕುನವಾಗಿರಬಹುದೇ ಎಂದು ಅಚ್ಚರಿಪಟ್ಟಿದ್ದಾರೆ.
ಪುರಿ ಜಗನ್ನಾಥನ ರತ್ನ ಭಂಡಾರ ರಹಸ್ಯ ಅರಿಯಲು ಸುಧಾರಿತ ತಂತ್ರಜ್ಞಾನ
ಇನ್ನೂ ಕೆಲವರು ಎಕ್ಸ್‌ನಲ್ಲಿ ಗ್ರೂಕ್ ಎಐ ಬಳಿ ಇದರ ಮಹತ್ವದ ಬಗ್ಗೆಯೂ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಎಐ ನೀಡಿರುವ ಉತ್ತರವೂ ವಿಶೇಷವಾಗಿದೆ. 'ಜಗನ್ನಾಥ ದೇವಾಲಯದ ಧ್ವಜದ ರೀತಿಯ ಬಟ್ಡೆ ಹಿಡಿದಿರುವ ಹದ್ದು ಭಾರತಕ್ಕೆ ಜ್ಯೋತಿಷ್ಯ ಮಹತ್ವವನ್ನು ಹೊಂದಿರಬಹುದು. ಹಿಂದೂ ಪುರಾಣಗಳಲ್ಲಿ, ಹದ್ದುಗಳು ದೈವಿಕ ಶಕ್ತಿಗೆ ಸಂಬಂಧಿಸಿದ ವಿಷ್ಣುವಿನ ವಾಹನವಾದ ಗರುಡನನ್ನು ಸಂಕೇತಿಸುತ್ತವೆ. ಇದು ಧರ್ಮವನ್ನು ಎತ್ತಿಹಿಡಿಯಲು ಅಥವಾ ಬದಲಾವಣೆಗೆ ಸಿದ್ಧರಾಗಲು ಕರೆಯನ್ನು ಸೂಚಿಸಬಹುದು. ಕೆಲವರು ಇದನ್ನು ಸಕಾರಾತ್ಮಕ ಶಕುನವಾಗಿ ನೋಡುತ್ತಾರೆ, ಆಧ್ಯಾತ್ಮಿಕ ರಕ್ಷಣೆಯನ್ನು ಸೂಚಿಸುತ್ತಾರೆ, ಆದರೆ ಇತರರು, COVID ಗಿಂತ ಮೊದಲು 2020 ರ ಧ್ವಜದ ಬೆಂಕಿಯನ್ನು ನೆನಪಿಸಿಕೊಳ್ಳುತ್ತಾರೆ, ಇದನ್ನು ಸವಾಲುಗಳ ಎಚ್ಚರಿಕೆ ಎಂದು ನೋಡುತ್ತಾರೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ವ್ಯಾಖ್ಯಾನಗಳು ಬದಲಾಗುತ್ತವೆ ಮತ್ತು ಯಾವುದೇ ನಿರ್ದಿಷ್ಟ ಮುನ್ಸೂಚನೆಗಳು ಅಸ್ತಿತ್ವದಲ್ಲಿಲ್ಲ. ಇದು ರಾಷ್ಟ್ರೀಯ ಏಕತೆ ಅಥವಾ ಸ್ಥಿತಿಸ್ಥಾಪಕತ್ವದ ಅಗತ್ಯವನ್ನು ಪ್ರತಿಬಿಂಬಿಸಬಹುದು, ಆದರೆ ಅಂತಹ ದೃಷ್ಟಿಕೋನಗಳು ಸಾಂಸ್ಕೃತಿಕವಾಗಿವೆ, ವೈಜ್ಞಾನಿಕವಲ್ಲ' ಎಂದು ಬರೆದಿದೆ.
ಒಡಿಶಾದ ಜಗತ್ಪ್ರಸಿದ್ಧ ಪುರಿ ಜಗನ್ನಾಥ ದೇಗುಲದ ರಹಸ್ಯ ರತ್ನ ಭಂಡಾರ ಸ್ಥಳಾಂತರ ಕಾರ್ಯ ಪೂರ್ಣ