Asianet Suvarna News Asianet Suvarna News

ಭಾರತದಲ್ಲೇ ಮೊದಲ 'ಅಷ್ಟವಿನಾಯಕ ದೇವಸ್ಥಾನ' ಇರೋದು ಮಹಾರಾಷ್ಟ್ರ ಅಲ್ಲ, ಹುಬ್ಬಳ್ಳಿಯಲ್ಲಿ!

ಹುಬ್ಬಳ್ಳಿ ರೈಲು ನಿಲ್ದಾಣದ ಪಕ್ಕದಲ್ಲಿ ಕೂಗಳತೆಯ ದೂರದ ಗೂಡ್‌ಶೆಡ್‌ ರಸ್ತೆಯಲ್ಲಿರುವ ಅಷ್ಟವಿನಾಯಕ ದೇವಸ್ಥಾನ ಭಾರತದಲ್ಲಿಯೇ ಮೊದಲ ದೇವಸ್ಥಾನ ಎಂಬ ಖ್ಯಾತಿ ಹೊಂದಿದೆ. ಮಹಾರಾಷ್ಟ್ರದಲ್ಲಿ ಒಂದೊಂದು ವಿಶೇಷ ಗಣಪತಿಗಳು ಒಂದೊಂದು ದಿಕ್ಕಿನಲ್ಲಿವೆ. ಆದರೆ, ಹುಬ್ಬಳ್ಳಿಯಲ್ಲಿ ಒಂದೇ ದೇವಸ್ಥಾನದಲ್ಲಿ ಈ ಎಲ್ಲ ಅಷ್ಟ ವಿನಾಯಕರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.

Ganesh Chaturthi 2024 Indias first ashtavinayaka temple in Hubli rav
Author
First Published Sep 7, 2024, 7:59 AM IST | Last Updated Sep 7, 2024, 7:59 AM IST

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ (ಸೆ.7): ಮಹಾರಾಷ್ಟ್ರದಲ್ಲಿ ಅಷ್ಟವಿನಾಯಕ ದೇವಾಲಯಗಳು ಜಗತ್ಪಸಿದ್ಧಿ ಹೊಂದಿವೆ. ಇಲ್ಲಿನ ಅಷ್ಟದೇವಾಲಯಗಳ ದರ್ಶನ ಪಡೆದರೆ ಜೀವನ ಸಾರ್ಥಕ ಎಂಬ ಮಾತಿದೆ. ಈ ಎಲ್ಲ ವಿಘ್ನೇಶ್ವರರ ದರ್ಶನ ಪಡೆಯಬೇಕಾದಲ್ಲಿ 2-3 ದಿನಗಳ ವರೆಗೆ ನೂರಾರು ಕಿಮೀ ಪ್ರಯಾಣ ಮಾಡಬೇಕು. ಆದರೆ, ಹುಬ್ಬಳ್ಳಿಯಲ್ಲಿ ಒಂದೇ ದೇವಸ್ಥಾನದಲ್ಲಿ ಈ ಅಷ್ಟ ವಿನಾಯಕರ ದರ್ಶನ ಮಾಡಿಕೊಳ್ಳಬಹುದಾಗಿದೆ.

ಹೌದು ಇಲ್ಲಿನ ರೈಲು ನಿಲ್ದಾಣದ ಪಕ್ಕದಲ್ಲಿ ಕೂಗಳತೆಯ ದೂರದ ಗೂಡ್‌ಶೆಡ್‌ ರಸ್ತೆಯಲ್ಲಿರುವ ಅಷ್ಟವಿನಾಯಕ ದೇವಸ್ಥಾನ ಭಾರತದಲ್ಲಿಯೇ ಮೊದಲ ದೇವಸ್ಥಾನ ಎಂಬ ಖ್ಯಾತಿ ಹೊಂದಿದೆ. ಮಹಾರಾಷ್ಟ್ರದಲ್ಲಿ ಒಂದೊಂದು ವಿಶೇಷ ಗಣಪತಿಗಳು ಒಂದೊಂದು ದಿಕ್ಕಿನಲ್ಲಿವೆ. ಆದರೆ, ಹುಬ್ಬಳ್ಳಿಯಲ್ಲಿ ಒಂದೇ ದೇವಸ್ಥಾನದಲ್ಲಿ ಈ ಎಲ್ಲ ಅಷ್ಟ ವಿನಾಯಕರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.

ಗಣೇಶ ಚತುರ್ಥಿಯಂದು ಈ ರಾಶಿಗೆ ಅದೃಷ್ಟ, ಉದ್ಯೋಗ ಮತ್ತು ವ್ಯವಹಾರದಲ್ಲಿ ಯಶಸ್ಸು ಪಕ್ಕಾ

ಯಾವ ಯಾವ ಮೂರ್ತಿಗಳು?

ಮಹಾರಾಷ್ಟ್ರದಲ್ಲಿರುವ ಅಷ್ಟವಿನಾಯಕ ದೇವಸ್ಥಾನಗಳಾದ ಮೋರೆಗಾಂವ್‌ನ ಮಯೂರೇಶ್ವರ, ತೇವೂರ್‌ನ ಶ್ರೀ ಚಿಂತಾಮಣಿ, ಸಿದ್ಧಟೇಕ್‌ನ ಶ್ರೀ ಸಿದ್ಧಿ ವಿನಾಯಕ, ರಂಜನ್‌ಗಾಂವ್‌ನ ಶ್ರೀ ಮಹಾಗಣಪತಿ, ಓಝಾರ್‌ನ ಶ್ರೀ ವಿಜ್ಞೇ‍ಶ್ವರ, ಲೇನ್ಯಾದ್ರಿಯ ಶ್ರೀ ಗಿರಿಜಾತ್ಮಾಜ್, ಮಹಾಡ್‌ನ ಶ್ರೀ ವರದ ವಿನಾಯಕ, ಪಾಲಿಯ ಶ್ರೀ ಬಲ್ಲಾಳೇಶ್ವರ ಗಣಪತಿಗಳು ದೇಶಾದ್ಯಂತ ಪ್ರಸಿದ್ಧಿ ಪಡೆದಿವೆ. ಈ ಎಲ್ಲ ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸಲಾಗಿರುವ ಮೂರ್ತಿಗಳ ಮಾದರಿಯಲ್ಲಿಯೇ ಹುಬ್ಬಳ್ಳಿಯ ಗುಡ್‌ಶೆಡ್‌ನಲ್ಲಿರುವ ಶ್ರೀ ಅಷ್ಟವಿನಾಯಕ ದೇವಸ್ಥಾನವೊಂದರಲ್ಲಿಯೇ ದರ್ಶನದ ವ್ಯವಸ್ಥೆ ಮಾಡಲಾಗಿದೆ.

ದಗಡುಶೇಠ್‌ ಗಣಪ:

ಈ ದೇವಸ್ಥಾನದ ಟ್ರಸ್ಟ್‌ನ ಅಧ್ಯಕ್ಷ ಮದನ್‌ ಗೋಖಲೆ ಅವರು ಹುಬ್ಬಳ್ಳಿಯವರಾಗಿದ್ದು, ಈಗ ಪೂನಾದಲ್ಲಿ ನೆಲೆಸಿದ್ದಾರೆ. ಇವರ ಆಸಕ್ತಿಯ ಮೇರೆಗೆ ಈ ದೇವಸ್ಥಾನ ಪ್ರತಿಷ್ಠಾಪಿಸಲಾಗಿದೆ.

ಹುಬ್ಬಳ್ಳಿಯ ಗೂಡ್‌ಶೆಡ್‌ನಲ್ಲಿ 1980ರಿಂದಲೇ ಸಾರ್ವಜನಿಕ ಮೂರ್ತಿ ಪ್ರತಿಷ್ಠಾಪಿಸಿಕೊಂಡು ಬರಲಾಗುತ್ತಿತ್ತು. ಕಾಲಕ್ರಮೇಣ ಕಮಿಟಿಯ ಸದಸ್ಯರು ನಗರದಲ್ಲಿ ವಿಶೇಷವಾದ ದೇವಸ್ಥಾನ ನಿರ್ಮಾಣ ಮಾಡಬೇಕು ಎಂಬ ಸಂಕಲ್ಪ ತೊಟ್ಟರು. ನಂತರ ಮದನ್‌ ಗೋಖಲೆ ನೇತೃತ್ವದಲ್ಲಿ ಟ್ರಸ್ಟ್‌ನ ಸದಸ್ಯರೆಲ್ಲರೂ ಸೇರಿ ಮಹಾರಾಷ್ಟ್ರದಲ್ಲಿರುವ ಅಷ್ಟ ವಿನಾಯಕ ದೇವಸ್ಥಾನಗಳಿಗೆ ತೆರಳಿ ಮೂರ್ತಿಗಳ ಮಾಹಿತಿ ಸಂಗ್ರಹಿಸಿ ಅಲ್ಲಿ ಪ್ರತಿಷ್ಠಾಪಿಸಿರುವ ಗಣೇಶನ ಪ್ರತಿರೂಪ ಹೋಲುವ ಮೂರ್ತಿ ತಯಾರಿಸಲು ನಿರ್ಧರಿಸಿ 2000ರಲ್ಲಿ ದೇವಸ್ಥಾನ ನಿರ್ಮಾಣ ಮಾಡಲಾಯಿತು. ಇನ್ನು ಗರ್ಭಗುಡಿಯಲ್ಲಿ ಪೂನಾದಲ್ಲಿ ಪ್ರಖ್ಯಾತಿ ಹೊಂದಿರುವ ದಗಡುಶೇಠ್‌ (ಹಲವಾಯಿ) ಮಾದರಿಯ ಮೂರ್ತಿಯನ್ನು ಬಾಗಲಕೋಟೆಯ ಶಿಲ್ಪಿ ಎ.ಎ. ಬಡಿಗೇರ ಎಂಬುವವರಿಂದ ಸಿದ್ಧಪಡಿಸಿ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ.

ಭಕ್ತರ ಇಷ್ಟಾರ್ಥ ಸಿದ್ಧಿ ಗಣಪ:

ಈ ಅಷ್ಟ ವಿನಾಯಕ ದೇವಸ್ಥಾನ ಇಷ್ಟಾರ್ಥ ಸಿದ್ಧಿಯ ಮಂದಿರವೆಂದೇ ಹೆಸರು ಪಡೆದಿದೆ. ಇಲ್ಲಿ ಆಗಮಿಸುವ ಭಕ್ತರು ಈ ಅಷ್ಟ ವಿನಾಯಕನಿಗೆ ಬೇಡಿಕೊಂಡು ತಮ್ಮ ಹೆಸರಿನಲ್ಲಿ ದೇವಸ್ಥಾನದಲ್ಲಿ ಕಾಯಿ ಸಮರ್ಪಿಸಿ ಹೋಗುತ್ತಾರೆ. ಅಂದುಕೊಂಡ ಕಾರ್ಯಗಳು 45 ದಿನಗಳೊಳಗೆ ಈಡೇರುತ್ತವೆ ಎಂಬ ನಂಬಿಕೆಯಿದೆ. ಬೇಡಿಕೆ ಈಡೇರಿದ ಬಳಿಕ ದೇವಸ್ಥಾನಕ್ಕೆ ಆಗಮಿಸುವ ಭಕ್ತರು ತಾವು ಇಟ್ಟಿರುವ ಕಾಯಿ ತೆರೆದು ಪೂಜೆ ಸಲ್ಲಿಸಿ ಮೋದಕ, ಲಾಡು ಸಮರ್ಪಿಸುವುದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ. ಈ ದೇವಸ್ಥಾನಕ್ಕೆ ಕರ್ನಾಟಕ ಅಷ್ಟೇ ಅಲ್ಲದೇ ಪಕ್ಕದ ಮಹಾರಾಷ್ಟ್ರ, ಗೋವಾ ಸೇರಿದಂತೆ ಹಲವು ರಾಜ್ಯಗಳಿಂದ ಭಕ್ತರು ಆಗಮಿಸಿ ದರ್ಶನ ಪಡೆಯುತ್ತಾರೆ ಎಂದು ಶ್ರೀ ಅಷ್ಟ ವಿನಾಯಕ ದೇವಸ್ಥಾನ ಟ್ರಸ್ಟ್‌ ಕಮಿಟಿಯ ಸಹ ಕಾರ್ಯದರ್ಶಿ ಯಶವಂತ ಜಾಧವ ಕನ್ನಡಪ್ರಭಕ್ಕೆ ತಿಳಿಸಿದರು.

ಈ ಬಾರಿ ಗಣೇಶ ವಿಸರ್ಜನೆಗೆ ಕ್ಯುಆರ್‌ ಕೋಡ್‌ ಗೈಡ್‌..!

ಹುಬ್ಬಳ್ಳಿಯಲ್ಲಿ ಮಾತ್ರ:

ಹುಬ್ಬಳ್ಳಿಯಲ್ಲಿ ವೈಶಿಷ್ಟ್ಯಪೂರ್ಣವಾಗಿರುವ ದೇವಸ್ಥಾನ ನಿರ್ಮಿಸಬೇಕು ಎಂಬ ಕನಸಿತ್ತು. ಟ್ರಸ್ಟ್‌ ಎಲ್ಲ ಪದಾಧಿಕಾರಿಗಳು ಸೇರಿ ಈ ದೇವಸ್ಥಾನ ನಿರ್ಮಿಸಲಾಗಿದೆ. ಭಾರತದಲ್ಲಿ ಅಷ್ಟ ವಿನಾಯಕ ದೇವಸ್ಥಾನ ಹೊಂದಿರುವುದು ಹುಬ್ಬಳ್ಳಿಯಲ್ಲಿ ಮಾತ್ರ.

ಎಂ. ಗುಣಶೇಖರ, ಶ್ರೀ ಅಷ್ಟ ವಿನಾಯಕ ದೇವಸ್ಥಾನ ಟ್ರಸ್ಟ್‌ ಕಮೀಟಿ ಕಾರ್ಯದರ್ಶಿ

Latest Videos
Follow Us:
Download App:
  • android
  • ios