ಸಾರ್ವಜನಿಕ ಗಣೇಶೋತ್ಸವಕ್ಕೆ ರಾಜ್ಯ ಕೊರೋನಾ ನಿರ್ವಹಣೆ ತಜ್ಞರ ಸಮಿತಿಯು ಬಹುತೇಕ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದು, ಸೋಂಕು ಹರಡುವುದನ್ನು ತಪ್ಪಿಸುವ ಸರಳ ಸೂತ್ರಗಳನ್ನು ಮಾತ್ರ ಪಾಲಿಸುವಂತೆ ಸೂಚಿಸಿದೆ.

ಜಯಪ್ರಕಾಶ್‌ ಬಿರಾದಾರ್‌

ಬೆಂಗಳೂರು (ಆ.19): ಸಾರ್ವಜನಿಕ ಗಣೇಶೋತ್ಸವಕ್ಕೆ ರಾಜ್ಯ ಕೊರೋನಾ ನಿರ್ವಹಣೆ ತಜ್ಞರ ಸಮಿತಿಯು ಬಹುತೇಕ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದು, ಸೋಂಕು ಹರಡುವುದನ್ನು ತಪ್ಪಿಸುವ ಸರಳ ಸೂತ್ರಗಳನ್ನು ಮಾತ್ರ ಪಾಲಿಸುವಂತೆ ಸೂಚಿಸಿದೆ. ಈ ಮೂಲಕ ಗಣೇಶ ಪ್ರತಿಷ್ಠಾಪನೆಗೆ ಇದ್ದ ವಿಘ್ನಗಳು ದೂರಾಗಿವೆ. ಇನ್ನೊಂದೆಡೆ ಸೋಂಕು ಪ್ರಕರಣಗಳು ಹೆಚ್ಚಿರುವ ಬೆಂಗಳೂರಿನಲ್ಲಿ ಒಂದಿಷ್ಟುನಿಗಾ ವಹಿಸಲು ತಜ್ಞರು ಸೂಚಿಸಿದೆ. ಹೀಗಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾತ್ರ ಈ ಬಾರಿಯೂ ಕೆಲ ನಿಯಮಗಳನ್ನು ಜಾರಿಗೊಳಿಸುವ ಸಾಧ್ಯತೆಗಳಿವೆ. ಕೊರೋನಾ ಹೆಚ್ಚಳ ಹಿನ್ನೆಲೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಆಗಸ್ಟ್‌ 5ರಂದು ಪತ್ರ ಬರೆದಿತ್ತು. 

ಹೀಗಾಗಿ ಗಣೇಶ ಹಬ್ಬ ಆಚರಣೆಗೆ ಅನುಮತಿ ನೀಡುವ ಕುರಿತು ರಾಜ್ಯ ಸರ್ಕಾರವು ಆರೋಗ್ಯ ಇಲಾಖೆ ವ್ಯಾಪ್ತಿಯ ಕೊರೋನಾ ತಾಂತ್ರಿಕ ಸಲಹಾ ಸಮಿತಿಯ ಅಭಿಪ್ರಾಯ ಕೇಳಿತ್ತು. ಸಮಿತಿಯ ತಜ್ಞರು ಸಭೆ ನಡೆಸಿ ವರದಿ ಸಿದ್ಧಪಡಿಸಿ ಆರೋಗ್ಯ ಇಲಾಖೆ ಮೂಲಕ ರಾಜ್ಯ ಸರ್ಕಾರಕ್ಕೆ ನೀಡಿದ್ದಾರೆ. ಈ ವರದಿಯಲ್ಲಿ ಕಳೆದ ವರ್ಷ ವಿಜೃಂಭಣೆಯಿಂದ ಹಬ್ಬ ಆಚರಿಸುವುದಕ್ಕೆ ಎದುರಾಗಿದ್ದ ಬಹುತೇಕ ನಿಯಮಗಳನ್ನು ಕೈಬಿಡಲಾಗಿದೆ. ಕೇವಲ ತೆರೆದ ಸ್ಥಳಗಳಲ್ಲಿ ಉತ್ಸವ ಆಯೋಜನೆ, ಮಾಸ್ಕ್‌, ಸ್ಯಾನಿಟೈಸರ್‌, ಸಾಮಾಜಿಕ ಅಂತರ ಪಾಲನೆಗೆ ಮಾತ್ರ ಸಲಹೆ ನೀಡಲಾಗಿದೆ ಎಂದು ತಜ್ಞರ ಸಮಿತಿ ಮೂಲಗಳು ತಿಳಿಸಿವೆ.

ಗಣೇಶನ ಹಬ್ಬಕ್ಕೆ ಇನ್ನೂ ಬಾರದ ಮಾರ್ಗಸೂಚಿ..!

ಯಾವೆಲ್ಲಾ ನಿಯಮ ಕೊಕ್‌?: ‘ಗಣೇಶೋತ್ಸವ ಮಾಡುವ ಸುತ್ತಮುತ್ತ ಪ್ರದೇಶದಲ್ಲಿ ಪಾಸಿಟಿವಿಟಿ ದರ ಶೇ.2ಕ್ಕಿಂತ ಕಡಿಮೆ ಇರಬೇಕು. ಗ್ರಾಮ, ವಾರ್ಡ್‌ಗೊಂದು ಗಣೇಶ ಕೂರಿಸಲು ಆದ್ಯತೆ ನೀಡಬೇಕು, ಉತ್ಸವವನ್ನು 3-5 ದಿನಕ್ಕೆ ಸೀಮಿತ ಮಾಡಬೇಕು. ಅನ್ನ ದಾಸೋಹ, ಪ್ರಸಾದ ಆಯೋಜನೆ ಮಾಡಬಾರದು. ಆಯೋಜಕರು ಕೊರೋನಾ ಸೋಂಕು ಪರೀಕ್ಷೆ ನೆಗೆಟಿವ್‌ ಪ್ರಮಾಣ ಪತ್ರ ಮತ್ತು ಲಸಿಕೆಯ ಮೊದಲ ಡೋಸ್‌ ಪ್ರಮಾಣಪತ್ರ ಹೊಂದಿರಬೇಕು.

ಮೆರವಣಿಗೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿಷೇಧ ಹೇರಬೇಕು, ಸ್ಥಳೀಯ ಆರೋಗ್ಯ ಇಲಾಖೆ ಜತೆಗೂಡಿ ಕೊರೋನಾ ಪರೀಕ್ಷೆ ಕೇಂದ್ರ ಸ್ಥಾಪಿಸಬೇಕು, ಲಸಿಕಾ ಕೇಂದ್ರವನ್ನು ತೆರೆಯಬೇಕು. ಹೋಂ ಗಾರ್ಡ್‌, ಮಾರ್ಷಲ್‌ ನೇಮಿಸಬೇಕು, 20ಕ್ಕಿಂತ ಹೆಚ್ಚು ಮಂದಿ ಏಕಕಾಲದಲ್ಲಿ ಸೇರಬಾರದು’ ಎಂಬಿತ್ಯಾದಿ ಕೊರೋನಾ ತಡೆಗಟ್ಟಲು ವಿಧಿಸಿದ್ದ ನಿಯಮಗಳಿಗೆ ಈ ಬಾರಿ ತಜ್ಞರು ವಿನಾಯ್ತಿ ನೀಡಿದ್ದಾರೆ.

ಸೋಂಕು ಹೆಚ್ಚಿರುವ ಬೆಂಗಳೂರಲ್ಲಿ ನಿಗಾ?: ಕೊರೋನಾ ಪೂರ್ವದ ಗಣೇಶೋತ್ಸವದಲ್ಲಿ ಬೆಂಗಳೂರಿನಲ್ಲಿ 10 ರಿಂದ 12 ಸಾವಿರ ಕಡೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿತ್ತು. ಕಳೆದ ಎರಡು ವರ್ಷ ಉತ್ಸವ ಕೈಬಿಟ್ಟಿದ್ದ ಸಮಿತಿಗಳು ಕೂಡ ಈ ಬಾರಿ ವಿಜೃಂಭಣೆಯಿಂದ ಆಚರಿಸಲು ಮುಂದಾಗಿವೆ. ಇದರಿಂದ ಹೆಚ್ಚು ಕಡೆ ಮೆರವಣಿಗೆ, ಜನಜಂಗುಳಿ ಉಂಟಾಗುವ ಸಾಧ್ಯತೆಗಳಿವೆ. ಸದ್ಯ ರಾಜ್ಯದಲ್ಲಿ ಬೆಂಗಳೂರಿನಲ್ಲಿ ಕೊರೋನಾ ಹೆಚ್ಚಿದ್ದು, ಕಳೆದ ಎರಡು ವಾರಗಳಿಂದ ರಾಜ್ಯದ ಒಟ್ಟಾರೆ ಕೊರೋನಾ ಹೊಸ ಪ್ರಕರಣಗಳಲ್ಲಿ ಶೇ. 65 ರಿಂದ 70 ರಷ್ಟು ಬೆಂಗಳೂರಿನಲ್ಲಿ ಪತ್ತೆಯಾಗುತ್ತಿವೆ. 

ಜತೆಗೆ ರಾಜ್ಯದ ಸಕ್ರಿಯ ಪ್ರಕರಣಗಳ ಒಂಬತ್ತು ಸಾವಿರ ಸಕ್ರಿಯ ಪ್ರಕರಣಗಳ ಪೈಕಿ 6 ಸಾವಿರ ಬೆಂಗಳೂರು ಒಂದರಲ್ಲಿವೆ. ಅಲ್ಲದೆ, ನಗರದಲ್ಲಿ ಪಾಸಿಟಿವಿಟಿ ದರ ಶೇ.7 ಆಸುಪಾಸಿನಲ್ಲಿದೆ. ಆದ್ದರಿಂದ ತಜ್ಞರು ಬೆಂಗಳೂರಿನಲ್ಲಿ ಒಂದಿಷ್ಟು ನಿಗಾವಹಿಸಲು ತಜ್ಞರು ಸೂಚಿಸಿದ್ದಾರೆ. ಹೀಗಾಗಿ, ಕಳೆದ ವರ್ಷದಂತೆ ರಾಜ್ಯಕ್ಕೆ ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತ್ಯೇಕ ಮಾರ್ಗಸೂಚಿ ಜಾರಿಗೊಳ್ಳುವ ಸಾಧ್ಯತೆಗಳಿದ್ದು, ಕೆಲ ನಿಯಮಗಳನ್ನು ಬೆಂಗಳೂರಿಗೆ ವಿಧಿಸಬಹುದು.

ಬೆಂಗಳೂರಿಗೆ ಯಾವ ನಿಯಮಗಳಿರಬಹುದು?: ಸಾರ್ವಜನಿಕ ಸ್ಥಳಗಳಲ್ಲಿ 5 ಅಥವಾ 9 ದಿನಕ್ಕೆ ಗಣೇಶೋತ್ಸವ ಸೀಮಿತ. ಬೃಹತ್‌ ಮೆರವಣಿಗೆ, ಡಿಜೆ ನಿಷೇಧ. ಸೋಂಕು ಹೆಚ್ಚಿರುವ ವಾರ್ಡ್‌ಗಳಲ್ಲಿ ಸೀಮಿತ ಸಂಘ ಸಂಸ್ಥೆಗಳಿಗೆ ಅವಕಾಶ ನೀಡುವ ಸಾಧ್ಯತೆಗಳಿವೆ.

ಏನಿರುತ್ತೆ?
- ಅನ್ನದಾಸೋಹ, ಪ್ರಸಾದ ವಿತರಣೆ
- ಎಷ್ಟು ಮಂದಿ ಬೇಕಾದರೂ ಸೇರಬಹುದು
- ಗಣೇಶ ವಿಸರ್ಜನೆ ವೇಳೆ ಬೃಹತ್‌ ಮೆರವಣಿಗೆ
- ಉತ್ಸವ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳು
- ಮಾಸ್ಕ್‌, ಸ್ಯಾನಿಟೈಸರ್‌ ನಿಯಮ ಅನ್ವಯ

ಮಣ್ಣಿನ ಗಣಪನಾ? ಪಿಓಪಿ ಗಣೇಶನಾ? ಗೊಂದಲದಲ್ಲಿ ಭಕ್ತರು!

ಏನಿರಲ್ಲ?
- ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಗಣೇಶ ಕೂರಿಸುವಂತಿಲ್ಲ
- ರಾಸಾಯನಿಕ ಮಿಶ್ರಿತ ಬಣ್ಣ ಬಳಸುವಂತಿಲ್ಲ
- ವಾರ್ಡ್‌, ಗ್ರಾಮಕ್ಕೊಂದೇ ಗಣೇಶ ನಿಯಮ ಇಲ್ಲ