ಗಣೇಶನ ಹಬ್ಬಕ್ಕೆ ಇನ್ನೂ ಬಾರದ ಮಾರ್ಗಸೂಚಿ..!
ಗಣೇಶೋತ್ಸವ ಆಯೋಜಕರು, ಮೂರ್ತಿ ತಯಾರಕರು, ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾದ ಸರ್ಕಾರದ ಈ ನಡೆ
ಜಯಪ್ರಕಾಶ್ ಬಿರಾದಾರ್
ಬೆಂಗಳೂರು(ಆ.17): ಗಣೇಶ ಹಬ್ಬಕ್ಕೆ ಇನ್ನೆರಡು ವಾರಗಳಷ್ಟೇ ಬಾಕಿ ಇದ್ದು, ಈವರೆಗೂ ಅದ್ಧೂರಿ ಅಥವಾ ನಿರ್ಬಂಧದ ಆಚರಣೆ ಎಂಬುದರ ಬಗ್ಗೆ ಸರ್ಕಾರವು ಸ್ಪಷ್ಟ ನಿಲುವು ತಿಳಿಸಿಲ್ಲ. ಹಬ್ಬಕ್ಕೆ ಸಂಬಂಧಿಸಿದಂತೆ ಯಾವುದೇ ಮಾರ್ಗಸೂಚಿಯನ್ನೂ ಹೊರಡಿಸಿಲ್ಲ. ಸರ್ಕಾರದ ಈ ನಡೆಯು ಗಣೇಶೋತ್ಸವ ಆಯೋಜಕರು, ಮೂರ್ತಿ ತಯಾರಕರು, ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಒಂದೆಡೆ ಗಣೇಶ ಮೂರ್ತಿ ತಯಾರಕರು ‘ಕೊನೆಯ ದಿನಗಳಲ್ಲಿ ನಿರ್ಬಂಧಗಳನ್ನು ಒಳಗೊಂಡ ಮಾರ್ಗಸೂಚಿ ಬಿಡುಗಡೆ ಮಾಡಿ ನಮ್ಮ ಹೊಟ್ಟೆಮೇಲೆ ಹೊಡೆಯಬೇಡಿ’ ಎನ್ನುತ್ತಿದ್ದಾರೆ. ಇನ್ನೊಂದೆಡೆ ಗಣೇಶೋತ್ಸವ ಸಮಿತಿಗಳು ‘ಹಬ್ಬ ಇನ್ನೆರಡು ದಿನ ಇದ್ದಾಗ ಕಠಿಣ ನಿಯಮ ವಿಧಿಸಿ ಗೊಂದಲ ಸೃಷ್ಟಿಸುವುದು ಬೇಡ‘ ಎನ್ನುತ್ತಿವೆ. ಈ ನಡುವೆ ಕಳೆದ ಎರಡು ವರ್ಷಗಳಿಂದ ಕೊರೋನಾ ಹಿನ್ನೆಲೆ ವಿಧಿಸಿದ್ದ ಎಲ್ಲಾ ನಿಯಮಗಳನ್ನು ತೆಗೆದು ಅದ್ಧೂರಿ ಆಚರಣೆಗೆ ಅನುಮತಿ ನೀಡಲೇಬೇಕು ಎಂದು ಹಿಂದೂ ಸಂಘಟನೆಗಳು ಒತ್ತಾಯಿಸಿವೆ.
ಕೊರೋನಾ ಪೂರ್ವದಲ್ಲಿ ರಾಜಧಾನಿಯಲ್ಲಿ ವಾರ್ಡ್‌ಗೆ ಕನಿಷ್ಠ 50ರಂತೆ ಅಂದಾಜು 15 ಸಾವಿರಕ್ಕೂ ಅಧಿಕ ಕಡೆ ಕಡೆಗಳಲ್ಲಿ ಸಾರ್ವಜನಿಕವಾಗಿ ಹಾಗೂ ಮನೆಗಳಲ್ಲಿ 5 ಲಕ್ಷಕ್ಕೂ ಅಧಿಕ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿತ್ತು. ಆದರೆ, ಕೊರೋನಾದಿಂದ 2020ರಲ್ಲಿ ಸಾರ್ವಜನಿಕ ಪ್ರತಿಷ್ಠಾಪನೆಗೆ ಅನುಮತಿಯೇ ನೀಡಿರಲಿಲ್ಲ, 2021ರಲ್ಲಿ ವಾರ್ಡ್‌ಗೆ ಒಂದು ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡಲಾಗಿತ್ತು. ಆದರೆ, ಈ ಬಾರಿ ಕೊರೋನಾ ತಗ್ಗಿದ್ದು, ಕಳೆದೆರಡು ವರ್ಷ ಕೈತಪ್ಪಿದ್ದ ಹಬ್ಬವನ್ನು ಈ ಬಾರಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಉತ್ಸವ ಸಮಿತಿಗಳು, ಬಡಾವಣೆಗಳ ಯುವಕ ಮಂಡಳಿ, ಸಂಘ ಸಂಸ್ಥೆಗಳು ತುದಿಗಾಲಲ್ಲಿ ನಿಂತಿವೆ. ಆಗಸ್ಟ್ 31ಕ್ಕೆ ಹಬ್ಬವಿದ್ದು, ಸರ್ಕಾರ ಹಬ್ಬದ ಕುರಿತು ಯಾವುದೇ ನಿರ್ಧಾರ ಕೈಗೊಳ್ಳದಿರುವುದು ಬೇಸರಕ್ಕೆ ಕಾರಣವಾಗಿದೆ.
ಚಾಮರಾಜಪೇಟೆ ಈದ್ಗಾ ವಿವಾದ: ದಿನಕ್ಕೊಂದು ರೂಪ ಪಡೆಯುತ್ತಿರುವ ಗಣೇಶೋತ್ಸವ ಗಲಾಟೆ
ಸರ್ಕಾರ ಏನು ನಿಯಮ ಮಾಡುತ್ತೆ ಎಂಬ ಆತಂಕ
ಕಳೆದ ಎರಡು ವರ್ಷ ವ್ಯಾಪಾರವಿಲ್ಲದೆ ಕಂಗೆಟ್ಟಿರುವ ಗಣೇಶ ಮೂರ್ತಿ ತಯಾರಕರು, ಕಲಾವಿದರು ಈ ಬಾರಿ ಸರ್ಕಾರ ನಿರ್ಧಾರಕ್ಕೆ ಕಾದು ಕುಳಿತಿದ್ದಾರೆ. ‘ಸರ್ಕಾರ ಸಂಪೂರ್ಣ ಅನುಮತಿ ಕೊಟ್ಟರೆ ಹೆಚ್ಚು ಮೂರ್ತಿಗಳು ಬೇಕಾಗುತ್ತದೆ. ಸದ್ಯ ಕೊರೋನಾ ಕಡಿಮೆಯಾಗಿದ್ದು, ಸರ್ಕಾರ ಅನುಮತಿ ಕೊಡಬಹುದು ಎಂದು ಹೆಚ್ಚು ಮೂರ್ತಿಗಳನ್ನು ತಯಾರಿ ಆ ಬಳಿಕ ಸರ್ಕಾರದ ನಿರ್ಬಂಧ ವಿಧಿಸಿದರೆ ದೊಡ್ಡ ನಷ್ಟ ಉಂಟಾಗುತ್ತದೆ. ಕಳೆದ ವರ್ಷ ಹಬ್ಬ 3-4 ದಿನವಿದ್ದಾಗ ವಾರ್ಡ್‌ಗೊಂದು ಗಣೇಶ ಪ್ರತಿಷ್ಠಾಪನೆ ಎಂಬ ನಿಯಮ ವಿಧಿಸಿದ್ದರಿಂದ ಸಾಕಷ್ಟುಮೂರ್ತಿಗಳು ಉಳಿದು ಬಾರೀ ನಷ್ಟಅನುಭವಿಸಿದ್ದೇವೆ. ಜತೆಗೆ ರಾಸಾಯನಿಕ ಬಣ್ಣಲೇಪಿತ ಗಣೇಶ, ಐದು ಅಡಿಗಿಂತ ಹೆಚ್ಚು ಎತ್ತರದ ಮೂರ್ತಿಗಳನ್ನು ನಿಷೇಧಿಸಲಾಗಿತ್ತು. ಈ ಬಾರಿಯೂ ತಡವಾಗಿ ಮಾರ್ಗಸೂಚಿ ಮಾಡಿ ನಮ್ಮನ್ನು ಮತ್ತಷ್ಟುಸಂಕಷ್ಟಕ್ಕೀಡು ಮಾಡಬೇಡಿ. ನಮ್ಮ ಹೊಟ್ಟೆಮೇಲೆ ಹೊಡೆಯಬೇಡಿ ಎಂದು ಕಲಾವಿದರು, ವ್ಯಾಪಾರಿಗಳ ಅಳಲು ತೋಡಿಕೊಂಡರು.
ಗಣೇಶ ಹಬ್ಬದ ಕುರಿತು ಕಾಡುತ್ತಿರುವ ಗೊಂದಲಗಳಿವು
*ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪನೆಗೆ ದಿನಗಳ ಮಿತಿ ಎಷ್ಟು?
*ಮೂರ್ತಿ ಎತ್ತರ ಮಿತಿ ಇದೆ?
*ವಾರ್ಡ್‌ಗೆ ಎಷ್ಟುಸಂಘ ಸಂಸ್ಥೆಗೆ ಅವಕಾಶ ನಿಡಲಾಗುತ್ತದೆ?
*ಪಿಒಪಿ ಗಣೇಶ, ಬಣ್ಣಲೇಪಿತ ಗಣೇಶ ಮೂರ್ತಿ ನಿರ್ಬಂಧವಿದೆಯೇ?
*ಕೊರೋನಾ ನಿರ್ಬಂಧಗಳಿವೆಯೇ?
*ಮೆರವಣಿಗೆ ನಿಯಮಗಳೇನು?
*ಡಿಜೆ, ಸ್ಪೀಕರ್ ಬಳಸಬಹುದೇ?
*ಅನುಮತಿ ಯಾವ ಯಾವ ಇಲಾಖೆ ಬಳಿ ಪಡೆಯಬೇಕು?
ಹುಬ್ಬಳ್ಳಿ ಈದ್ಗಾ ಮೈದಾನಕ್ಕೂ ಕಾಲಿಟ್ಟ ಗಣೇಶೋತ್ಸವ ವಿವಾದ
ಶೀಘ್ರದಲ್ಲೇ ಮಾರ್ಗಸೂಚಿ ರೂಪಿಸಿ
ಕೊರೋನಾ ಪೂರ್ವದಲ್ಲಿ ಅದ್ಧೂರಿಯಾಗಿ ಆಚರಣೆ ಮಾಡಲು ಸಂಘ ಸಂಸ್ಥೆಗಳು ನಿರ್ಧರಿಸಿವೆ. ಕೊನೆಯ ಹಂತದ ನಿಯಮಗಳಿಂದ ಉತ್ಸವ ಆಯೋಜನೆ ಮಾಡುವವರಿಗೆ ಸಾಕಷ್ಟುಸಮಸ್ಯೆಯಾಗುತ್ತದೆ. ನಿಯಮಗಳು ಅರ್ಥವಾಗುವುದಿಲ್ಲ, ಪಾಲನೆ ಮಾಡುವುದಕ್ಕೂ ಕಷ್ಟವಾಗುತ್ತದೆ. ಸರ್ಕಾರ ಶೀಘ್ರದಲ್ಲಿಯೇ ಗಣೇಶ ಹಬ್ಬ ಆಚರಣೆ ಬಗ್ಗೆ ತೀರ್ಮಾನ ಮಾಡಬೇಕು ಅಂತ ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ ಪ್ರಕಾಶ್ ರಾಜು ತಿಳಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟಕ್ಕೂ ಹಬ್ಬ ನೆರವು
ಗಣೇಶ ಉತ್ಸವಗಳು ಕೂಡಾ ಸ್ವಾತಂತ್ರ್ಯ ಹೋರಾಟಕ್ಕೆ ನೆರವಾಗಿದ್ದವು. ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭದಲ್ಲಿ ಗಣೇಶ ಹಬ್ಬ ಆಚರಣೆಗೆ ಸರ್ಕಾರ ಯಾವುದೇ ನಿರ್ಬಂಧ ವಿಧಿಸದೇ ಅನುಮತಿ ನೀಡಬೇಕು. ಪ್ರತಿ ಬಾರಿಯೂ ಹಬ್ಬದ ಸಂದರ್ಭದಲ್ಲಿ ಗೊಂದಲ ಸೃಷ್ಟಿಸಿ ಹಿಂದುಗಳನ್ನು ಕೆಣಕುವ ಪ್ರಯತ್ನ ಮಾಡಬಾರದು. ಸರ್ಕಾರ ಕಾಯಿಸದೇ ಅನುಮತಿ ನೀಡಬೇಕು ಅಂತ ಹಿಂದೂ ಜನ ಜಾಗೃತಿ ಸಮಿತಿ ವಕ್ತಾರ ಮೋಹನ್ ಗೌಡ ತಿಳಿಸಿದ್ದಾರೆ.
ಕೊನೆ ಕ್ಷಣದ ನಿಯಮ ನಿಷ್ಪ್ರೋಯೋಜಕ
ಸರ್ಕಾರ ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸುವ ಉದ್ದೇಶದಿಂದ ಜಾರಿ ಮಾಡುವ ನಿಯಮಗಳನ್ನು ಶೀಘ್ರದಲ್ಲಿಯೇ ತಿಳಿಸಿದರೆ ಮೂರ್ತಿ ತಯಾರಿಕರಿಗೆ, ಆಯೋಜನರಿಗೆ ಅನುಕೂಲವಾಗುತ್ತದೆ. ಪಿಒಪಿ, ರಾಸಾಯನಿಕ ಬಣ್ಣದ ಮೂರ್ತಿ ತಯಾರಾದ ಮೇಲೆ ಮಾರ್ಗಸೂಚಿ ನೀಡಿದರೆ ಪ್ರಯೋಜನವಿಲ್ಲ ಅಂತ ಪರಿಸರ ತಜ್ಞ ಯಲ್ಲಪ್ಪ ರೆಡ್ಡಿ ತಿಳಿಸಿದ್ದಾರೆ.