ಗಣೇಶ ಚತುರ್ಥಿ 2022: ವಿಗ್ರಹ ಕೊಳ್ಳುವಾಗ ಸೊಂಡಿಲು, ಬಣ್ಣ, ಭಂಗಿಯ ಬಗ್ಗೆ ಇರಲಿ ಎಚ್ಚರ
ಗಣೇಶನ ವಿಗ್ರಹ ಖರೀದಿಸುವಾಗ ಅವನ ಬಣ್ಣ, ಸೊಂಡಿಲ ದಿಕ್ಕು, ಮೂರ್ತಿಯ ಭಂಗಿ ಎಲ್ಲದರ ಬಗ್ಗೆ ವಿಶೇಷ ಎಚ್ಚರಿಕೆ ವಹಿಸಬೇಕು. ಏಕೆಂದರೆ ಪ್ರತಿಯೊಂದಕ್ಕೂ ಬೇರೆ ಬೇರೆ ಅರ್ಥಗಳೂ, ವಿಭಿನ್ನ ನಿಯಮಗಳೂ ಇರುತ್ತವೆ.
ನಗರ, ಪಟ್ಟಣಗಳ ಹಾದಿಬೀದಿಯಲ್ಲೂ ಗಣೇಶನ ವಿಗ್ರಹ ಮಾರಾಟ ಭರಾಟೆ ಜೋರಾಗಿದೆ. ಎಲ್ಲರೂ ತಮ್ಮ ಮನೆಗೆ ಬರುವ ಗಣೇಶನ ಮೂರ್ತಿ ಆಯ್ಕೆ ಮಾಡಲು ಉತ್ಸುಕರಾಗಿದ್ದಾರೆ. ಈ ಬಾರಿ ಕರ್ನಾಟಕದಲ್ಲಿ ಗಣೇಶನ ಕೈಲಿ ಪುನೀತ್ ರಾಜ್‌ಕುಮಾರ್ ಕುಳಿತಿರುವ ವಿಗ್ರಹ ಜೋರಾಗಿ ಮಾರಾಟ ಕಾಣುತ್ತಿದೆ. ಜನರು ತಮ್ಮ ಗಣೇಶ ಭಕ್ತಿಯ ಜೊತೆಗೆ ಅಪ್ಪುವಿನ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಲು ಈ ವಿಗ್ರಹಗಳ ಮೊರೆ ಹೋಗುತ್ತಿದ್ದಾರೆ. ಇದಲ್ಲದೆ, ಕುಳಿತಿರುವ ಗಣೇಶ, ನಿಂತಿರುವ ಗಣೇಶ, ಪಾರ್ವತಿ ಪರಮೇಶ್ವರರೊಂದಿಗಿರುವ ಗಣೇಶ, ಪಂಚಮುಖಿ ಗಣೇಶ - ಹೀಗೆ ನೂರಾರು ಅವತಾರಗಳ ಗಣೇಶ ವಿಗ್ರಹಗಳನ್ನು ಎಲ್ಲೆಡೆ ಕಾಣಬಹುದು.
ಭಾದ್ರಪದ ಶುಕ್ಲ ಪಕ್ಷದ ಚತುರ್ಥಿ ದಿನಾಂಕದಂದು ಅಂದರೆ ಆಗಸ್ಟ್ 31 ರಂದು ಗಣೇಶ ಚತುರ್ಥಿ. ಗಣೇಶೋತ್ಸವವು ದೇಶಾದ್ಯಂತ 10 ದಿನಗಳ ಕಾಲ ನಡೆಯಲಿದ್ದು, ಸೆ.9ರಂದು ಮೂರ್ತಿ ವಿಸರ್ಜನೆ ನಡೆಯಲಿದೆ. ನೀವೂ ಕೂಡ ನಿಮ್ಮ ಮನೆಯಲ್ಲಿ ಗಣಪತಿ ತರಲು ಹೊರಟಿದ್ದರೆ ಈ ಸುದ್ದಿ ನಿಮಗೆ ವಿಶೇಷವಾಗಿದೆ.
ನೀವು ಕೂಡಾ ಮನೆಯಲ್ಲಿ ಗಣೇಶನನ್ನು ಕೂರಿಸುವವರಾಗಿದ್ದರೆ ಗಣೇಶನನ್ನು ತರುವ ಮುನ್ನ ಕೆಲ ವಿಷಯಗಳ ಬಗ್ಗೆ ವಿಶೇಷ ಗಮನ ಹರಿಸಬೇಕು. ಗಣಪತಿಯ ಸೊಂಡಿಲಿನಿಂದ ಹಿಡಿದು ಆತನ ಬಣ್ಣದವರೆಗೆ ಮತ್ತು ಯಾವ ದಿಕ್ಕು ಸ್ಥಾಪನೆಗೆ ಸರಿಯಾದ ದಿಕ್ಕು (direction) ಎಂಬುದರ ಬಗ್ಗೆಯೆಲ್ಲ ಸರಿಯಾಗಿ ತಿಳಿದಿರಬೇಕು. ಗಣೇಶನ ವಿಗ್ರಹ ಖರೀದಿಸುವ ಮುನ್ನ ನೀವು ನೆನಪಿನಲ್ಲಿಡಬೇಕಾದ ವಿಷಯಗಳಿವು.
Ganesh Chaturthi 2022; ಗಣೇಶ ಕೂರಿಸಲು ಹತ್ತು ಹಲವು ನಿಬಂಧನೆ ಸಿದ್ಧಪಡಿಸಿದ ಪೊಲೀಸ್
1. ಗಣೇಶನ ಮೂರ್ತಿ ಹೇಗಿರಬೇಕು?
ಗಣಪತಿಯ ವಿಗ್ರಹವನ್ನು ತೆಗೆದುಕೊಳ್ಳುವಾಗ, ಅವನ ಭಂಗಿಯನ್ನು ನೆನಪಿನಲ್ಲಿಡಿ. ಲಲಿತಾಸನದಲ್ಲಿ ಅಂದರೆ ಕುಳಿತುಕೊಳ್ಳುವ ಭಂಗಿಯಲ್ಲಿರುವ ವಿಗ್ರಹವನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಅಂಥ ವಿಗ್ರಹವು ಮನೆಗೆ ಸಂತೋಷ, ಸಮೃದ್ಧಿ ಮತ್ತು ಶಾಂತಿಯನ್ನು ತರುತ್ತದೆ. ಇದಲ್ಲದೆ, ಮಲಗಿರುವ ಭಂಗಿಯಲ್ಲಿರುವ ಗಣಪತಿಯ ವಿಗ್ರಹವನ್ನು ತರುವುದು ಕೂಡ ಮಂಗಳಕರವೆಂದು ಪರಿಗಣಿಸಲಾಗಿದೆ.
2. ಗಣಪತಿಯ ಸೊಂಡಿಲಿನ ದಿಕ್ಕು
ಗಣಪತಿಯ ಸೊಂಡಿಲಿನ (trunk) ದಿಕ್ಕು ಎಡಕ್ಕೆ ವಾಲಿರಬೇಕು. ಅಂಥ ವಿಗ್ರಹವನ್ನು ಸ್ಥಾಪಿಸುವುದರಿಂದ ಸಂತೋಷ ಮತ್ತು ಸಮೃದ್ಧಿಯೊಂದಿಗೆ ಯಶಸ್ಸು ಸಿಗುತ್ತದೆ. ಮತ್ತೊಂದೆಡೆ, ಬಲಭಾಗದ ಸೊಂಡಿಲು ಅಂದರೆ ಬಲಮುರಿ ಗಣೇಶನನ್ನು ಬಹಳ ಮಡಿ ಮೈಲಿಗೆಯಿಂದ ನೋಡಿಕೊಳ್ಳಬೇಕಾಗಿದೆ. ಸಾಕಷ್ಟು ನಿಯಮಗಳನ್ನ ಆಚರಿಸಬೇಕಾಗಿದೆ. ಹಾಗಾಗಿ, ಇದನ್ನು ಕೆಲ ದೇವಾಲಯಗಳಲ್ಲಿ ಮಾತ್ರ ಇಡಲಾಗುತ್ತದೆ.
3. ಇಲಿ ಮತ್ತು ಮೋದಕ
ಗಣಪತಿಯ ವಿಗ್ರಹದಲ್ಲಿ ಕೆಳಗೆ ಇಲಿ (mouse) ಮತ್ತು ಕೈಯಲ್ಲಿ ಮೋದಕ ಇರಬೇಕು. ಏಕೆಂದರೆ ಮೋದಕವು ದೇವರಿಗೆ ತುಂಬಾ ಪ್ರಿಯವಾಗಿದೆ ಮತ್ತು ಇಲಿಯು ಗಣೇಶನ ವಾಹನವಾಗಿದೆ.
4. ಈ ಬಣ್ಣದ ವಿಗ್ರಹವನ್ನು ತನ್ನಿ
ವಾಸ್ತು ಶಾಸ್ತ್ರದ ಪ್ರಕಾರ, ಆತ್ಮವಿಶ್ವಾಸದ ಪ್ರತೀಕವಾಗಿ ಕೆಂಪು ಸಿಂಧೂರ ಬಣ್ಣದ ಗಣೇಶನ ಮೂರ್ತಿಯನ್ನು ಮನೆಗೆ ತರಬೇಕು. ಸಂತೋಷ, ಸಮೃದ್ಧಿ ಮತ್ತು ಶಾಂತಿಗಾಗಿ ಬಿಳಿ ಬಣ್ಣದ ಗಣೇಶನ ಮೂರ್ತಿಯನ್ನು ಮನೆಗೆ ತರಬೇಕು. ಇದೆಲ್ಲಕ್ಕಿಂತ ಹೆಚ್ಚಾಗಿ ಪ್ರಕೃತಿಗೆ ಹಾನಿ ಮಾಡದ ಮಣ್ಣಿನ ಗಣೇಶ ವಿಗ್ರಹ ನೀವು ಮನೆಗೆ ತಂದರೆ ಗಣೇಶನಿಗೆ ಸಂತಸವಾಗುತ್ತದೆ. ಆತ ಕೂಡಾ ಪ್ರಕೃತಿ ಪ್ರಿಯನಾಗಿದ್ದಾನೆ. ಹಾಗಾಗಿ, ಆತ ಮಣ್ಣಿನಮೂರ್ತಿಯಾಗಿದ್ದರೇ ಒಳಿತು.
ಶನಿ ಅಮಾವಾಸ್ಯೆ 2022: 14 ವರ್ಷದ ಬಳಿಕ ಇಂಥದೊಂದು ಶುಭದಿನ, ದೋಷ ಕಳೆದುಕೊಳ್ಳಿ..
5. ಗಣೇಶ ಮೂರ್ತಿಯನ್ನು ಈ ದಿಕ್ಕಿನಲ್ಲಿ ಸ್ಥಾಪಿಸಿ
ಗಣೇಶನ ವಿಗ್ರಹವನ್ನು ಸ್ಥಾಪಿಸುವಾಗ, ದಿಕ್ಕನ್ನು ಸರಿಯಾಗಿ ನೋಡಿಕೊಳ್ಳಿ. ಗಣೇಶನ ವಿಗ್ರಹವನ್ನು ಉತ್ತರ ದಿಕ್ಕಿನಲ್ಲಿ ಇರಿಸಿ. ಏಕೆಂದರೆ ಈ ದಿಕ್ಕಿನಲ್ಲಿ ತಾಯಿ ಲಕ್ಷ್ಮಿಯೊಂದಿಗೆ ಶಿವನೂ ನೆಲೆಸಿದ್ದಾನೆ. ಇದರೊಂದಿಗೆ ಗಣೇಶನ ಮುಖವು ಮನೆಯ ಮುಖ್ಯ ಬಾಗಿಲಿನ ಕಡೆಗೆ ಇರುವುದು ಉತ್ತಮ.