ಜಾತಕದಲ್ಲಿ ರಾಶಿಗಳ ಗುಣಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಪ್ರತಿ ರಾಶಿಯೂ ವಿಶಿಷ್ಟ ಗುಣ-ಸ್ವಭಾವಗಳನ್ನು ಹೊಂದಿದ್ದು, ಅವುಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. 

ಜ್ಯೋತಿಷ್ಯ ಶಾಸ್ತ್ರದಲ್ಲಿರುವ ಹನ್ನೆರಡು ರಾಶಿಗಳಿಗೂ ಅದರದ್ದೇ ಆದ ಗುಣ, ಸ್ವಭಾವಗಳು ಮತ್ತು ಅಧಿಪತಿಗಳಿರುತ್ತಾರೆ. ವ್ಯಕ್ತಿಯ ರಾಶಿಯ ಆಧಾರದ ಮೇಲೆ ಗುಣ, ಸ್ವಭಾವ ಎಂಥದ್ದೆಂದು ಜ್ಯೋತಿಷಿಗಳು ನಿಖರವಾಗಿ ಹೇಳುತ್ತಾರೆ. 

ಅಗ್ನಿ,ಪೃಥ್ವಿ, ವಾಯು ಮತ್ತು ಜಲ ತತ್ತ್ವವೆಂದ ಎಲ್ಲ ರಾಶಿಗಳನ್ನೂ ವಿಂಗಡಿಸಲಾಗಿದೆ. ಪ್ರತಿ ರಾಶಿಯು ಒಂದೊಂದು ತತ್ತ್ವದಳಡಿ ಸೇರಿರುತ್ತವೆ. ಈ ತತ್ತ್ವಗಳೂ ರಾಶಿ ಗುಣ, ಸ್ವಭಾವಗಳ ಮೇಲೆ ನೇರ ಪರಿಣಾಮವನ್ನು ಬೀರುವುದರಲ್ಲೇ ಅನುಮಾನವೇ ಇಲ್ಲ. ಹಾಗೆಯೇ ಪ್ರತಿ ರಾಶಿಗೂ ಅಧಿಪತಿಯಾಗಿ ಒಂದೊಂದು ಗ್ರಹಗಳಿರುತ್ತವೆ. ಆ ಗ್ರಹಗಳೂ ರಾಶಿಯ ಗುಣವನ್ನು ನಿರ್ಧರಿಸುವಲ್ಲಿ ಸಹಾಯಕ. ಹಾಗಾದರೆ ಪ್ರತ್ಯೇಕ ರಾಶಿಗಳ ವಿಶೇಷ ಸ್ವಭಾವಗಳೇನು? 

ಮೇಷ ರಾಶಿ
ಸ್ವತಂತ್ರರಾಗಿರಲು ಬಯಸುತ್ತಾರೆ ಮೇಷ ರಾಶಿಯವರು. ಯಾವುದೇ ನಿರ್ಧಾರವನ್ನು ಸ್ವತಃ ತೆಗೆದು ಕೊಳ್ಳುಲು ಹಿಂದೆ ಮುಂದೆ ನೋಡುವುದಿಲ್ಲ, ಪರಿಶ್ರಮಿಗಳು ಇವರು. ಶಕ್ತಿವಂತರು. ತಮ್ಮ ಅಭಿಪ್ರಾಯವನ್ನು ಇತರರ ಮುಂದಿಡಲು ಹೆದರುವುದಿಲ್ಲ. ಮೇಷ ರಾಶಿಯವರಿಗೆ ಸಿಟ್ಟು ಬೇಗ ಬರುತ್ತದೆಂಬುದನ್ನು ಬಿಟ್ಟರೆ, ಅತ್ಯುತ್ತಮವಾದ ಗುಣಗಳಿರುತ್ತವೆ ಇವರಿಗೆ. 

ವೃಷಭ ರಾಶಿ
ಶಾಂತ ಸ್ವಭಾವಕ್ಕೇ ಮತ್ತೊಂದು ಹೆಸರೇ ವೃಷಭ. ಇವರಿಗೆ ತಮ್ಮ ಜವಾಬ್ದಾರಿ ಮತ್ತು ಕರ್ತವ್ಯಗಳ ಅರಿವು ಸ್ಪಷ್ಟವಾಗಿರುತ್ತದೆ. ಹಾಗಾಗಿ ಮನೆಯಲ್ಲಿ ಎಲ್ಲರೂ ಈ ರಾಶಿಯವರಿದ್ದರೆ ಇಷ್ಟಪಡುತ್ತಾರೆ. ಹಣ ಮತ್ತು ಪ್ರಸಿದ್ಧಿ ಮೇಲೆ ವಿಪರೀತ ಮೋಹ ಇವರಿಗೆ. 

ಮಿಥುನ ರಾಶಿ
ಈ ರಾಶಿಯವರು ಉತ್ತಮ ಮಾತುಗಾರರು. ಹಲವು ಭಾಷೆಗಳ ಮೇಲೆ ಪ್ರಭುತ್ವ ಸಾಧಿಸಿರುತ್ತಾರೆ. ಇವರ ಸ್ವಭಾವ ಆಗಾಗ ಬದಲಾಗುವ ಕಾರಣ ಇವರನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. 

ಕರ್ಕಾಟಕ ರಾಶಿ
ಪರಿಶುದ್ಧ ಹೃದಯ ಮತ್ತು ಸ್ವಚ್ಛ ಮನಸ್ಸು ಹೊಂದಿರುವ ರಾಶಿಯವರು. ತನ್ನವರನ್ನು ಅಪಾರ ಪ್ರೀತಿಸುತ್ತಾರೆ. ರಾಜಕೀಯ ವಿಷಯಗಳಲ್ಲಿ ಹೆಚ್ಚು ಪ್ರಾವೀಣ್ಯತೆ ಇವರ ಶಕ್ತಿ. 

ಸಿಂಹ ರಾಶಿ
ಸೂರ್ಯನ ಪ್ರಭಾವಕ್ಕೊಳಪಡುವ ಸಿಂಹ ರಾಶಿಯವರಿಗೆ ಬಾಲ್ಯದಿಂದಲೂ ನಾಯಕತ್ವದ ಗುಣವಿರುತ್ತದೆ. ಸಾಹಸಿಗಳು ಮತ್ತು ಶಕ್ತಿವಂತರೂ ಹೌದು. ರಾಜನಂತೆ ಜೀವನ ನಡೆಸುತ್ತಾರೆ. ಅಹಂಕಾರ ಮತ್ತು ಸಿಟ್ಟು ಇವರ ಅವಗುಣಗಳು. 

ಕನ್ಯಾ ರಾಶಿ
ಈ ರಾಶಿಯವರು ಜ್ಞಾನಿಗಳೂ, ವಿನಯವಂತರೂ ಹೌದು. ಕೆಲವು ಬಾರಿ ವ್ಯಂಗ್ಯ ಮತ್ತು ವಿಷಯವನ್ನು ದೊಡ್ಡದು ಮಾಡುವ ಗುಣವೂ ಇವರಲ್ಲಿರುತ್ತದೆ. ಅಂದು ಕೊಂಡಂತೆ ಕೆಲಸವನ್ನು ಮಾಡಿ ಮುಗಿಸುವವರೆಗೂ ಪಟ್ಟು ಬಿಡುವುದು ಇವರ ಸ್ವಭಾವವಲ್ಲ. ಇದು ಈ ರಾಶಿಯವರ ವಿಶೇಷ ಗುಣವೂ ಹೌದು. 

ತುಲಾ ರಾಶಿ
ನೋಡಲು ಆಕರ್ಷಕವಾಗಿರುವ ತುಲಾ ರಾಶಿಯವರು ಭಾವನೆಗಳನ್ನು ಹೊರ ಜಗತ್ತಿಗೆ ತೋರಿಸಿಕೊಳ್ಳುವುದಿಲ್ಲ. ದುಬಾರಿ ಮತ್ತು ಬ್ರಾಂಡೆಡ್ ವಸ್ತುಗಳೆಂದರೆ ಇವರಿಗೆ ಎಲ್ಲಿಲ್ಲದ ಪ್ರೀತಿ. ವಾದ-ವಿವಾದಗಳಲ್ಲಿ ಇತರರನ್ನು ಗೊಂದಲಕ್ಕೆ ಗುರಿ ಮಾಡಿ ಬಿಡುತ್ತಾರೆ.

ವೃಶ್ಚಿಕ ರಾಶಿ
ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುವ ವೃಶ್ಚಿಕ ರಾಶಿಯವರು ತಮ್ಮ ಭಾವನೆಗಳನ್ನೇ ಬಚ್ಚಿಟ್ಟುಕೊಳ್ಳುವ ಸ್ವಭಾವವನ್ನೂ ಹೊಂದಿರುತ್ತಾರೆ. ಹಾಗಾಗಿ ಈ ರಾಶಿಯವರನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಉತ್ಸಾಹ ಮತ್ತು ಸಾಹಸಿ ಗುಣಗಳು ಇವರು ಹುಟ್ಟಿನಿಂದಲೇ ಜೊತೆಯಾಗಿರುತ್ತವೆ. 

ಧನು ರಾಶಿ
ಈ ರಾಶಿಯವರು ಬೃಹಸ್ಪತಿಯಂತೆ ಜ್ಞಾನಿಗಳಾಗಿರುತ್ತಾರೆ. ಪ್ರಾಮಾಣಿಕರು, ಸತ್ಯವಂತರು, ಕರ್ತವ್ಯನಿಷ್ಠರು ಮತ್ತು ವಿಶ್ವಾಸಕ್ಕೆ ಅರ್ಹ ವ್ಯಕ್ತಿತ್ವ ಇವರದ್ದು. ಸಿಟ್ಟು ಮತ್ತು ಹಿಂಸಾ ಗುಣವೂ ಇವರಿಗೆ ರಕ್ತಗತ. 

ಮಕರ ರಾಶಿ
ಈ ರಾಶಿಯವರು ಆಳವಾದ ಚಿಂತನೆಯನ್ನು ಮಾಡುವ ಸ್ವಭಾವದವರು. ತಮ್ಮ ಜವಾಬ್ದಾರಿಗಳನ್ನು ಚೆನ್ನಾಗಿ ಅರಿತು ನಿಭಾಯಿಸುತ್ತಾರೆ. ಕೈಗೆ ಬಂದ ಕೆಲಸವನ್ನು ಪೂರ್ತಿ ಮಾಡುವವರೆಗೂ ಸಮಾಧಾನದಿಂದ ಕೂರುವ ಜಾಯಮಾನ ಇವರದ್ದಲ್ಲ. ಬೇರೆಯವರನ್ನು ಅನುಮಾನದಿಂದ ನೋಡುವ ಗುಣವೂ ಇವರದ್ದು. 

ಕುಂಭ ರಾಶಿ
ನಿಧಾನಿಗಳು ಮತ್ತು ದಯಾವಂತರು. ಇವರ ಬುದ್ಧಿವಂತಿಕೆ, ಚಾತುರ್ಯ ಮತ್ತು ತರ್ಕ ಮಾಡುವ ಕ್ಷಮತೆಯಿಂದ ಕುಂಭ ರಾಶಿಯವರನ್ನು ಬೇರೆಯವರು ಮೆಚ್ಚುವಂತಿರುತ್ತದೆ. ಮಾತಿನ ಚಾತುರ್ಯದಿಂದ ಎಂಥವರನ್ನೂ ಸ್ನೇಹಿತರನ್ನಾಗಿ ಮಾಡಿಕೊಳ್ಳುತ್ತಾರೆ.

ಮೀನ ರಾಶಿ
ಬಹುಮುಖ ಪ್ರತಿಭೆಯುಳ್ಳ ಮೀನ ರಾಶಿಯವರು ತಮ್ಮ ಮಾತನ್ನು ಉಳಿಸಿಕೊಳ್ಳುವ ತರ್ಕ, ವಿವಾದಗಳಲ್ಲಿ ನಿಸ್ಸೀಮರಾಗಿರುತ್ತಾರೆ. ಹತ್ತಿರದವರನ್ನು ಅಪ್ಯಾಯತೆಯಿಂದ ನೋಡಿಕೊಳ್ಳುತ್ತಾರೆ.