ಮಹಾವಿಷ್ಣುವು ತನ್ನ ಭಕ್ತ ಪ್ರಹ್ಲಾದನನ್ನು ರಕ್ಷಿಸಲು ನರಸಿಂಹಾವತಾರವನ್ನು ತಾಳಿ, ರಾಕ್ಷಸ ಹಿರಣ್ಯಕಶ್ಯಪುವಿನ ಎದೆಯನ್ನು ಬಗೆದ ದಿನವಿಂದು- ನರಸಿಂಹ ಜಯಂತಿ. ನಮ್ಮ ನಾಡಿನಲ್ಲಿ ಶ್ರೀ ನರಸಿಂಹ ದೇವರ ಸಾನಿಧ್ಯ ಹಲವು ಕಡೆ ಇದೆ. ಈ ಪವಿತ್ರ ಕ್ಷೇತ್ರಗಳಲ್ಲಿ ನೆಲೆಸಿರುವ ನರಸಿಂಹ ದೇವರು ಮನದಲ್ಲಿ ನೆನೆದವರಿಗೆ ವರ ನೀಡುವ ಮಹಿಮಾವಂತರು.

ದೇವರಾಯನದುರ್ಗ: ತುಮಕೂರು ಜಿಲ್ಲೆಯ ದೇವರಾಯನದುರ್ಗದಲ್ಲಿರುವ ಬೆಟ್ಟದ ಮೇಲಿನ ಯೋಗನರಸಿಂಹ ಹಾಗೂ ಬೆಟ್ಟದ ಕೆಳಗಿನ ಭೋಗನರಸಿಂಹ ಗುಡಿಗಳು ಬೆಂಗಳೂರಿನ ಸುತ್ತಮುತ್ತಲಿನವರಿಗೆಲ್ಲ ಚಿರಪರಿಚಿತ. ಇಲ್ಲಿ ಬೆಟ್ಟಕ್ಕೆ ಸುತ್ತು ಸುತ್ತಿ ಹೋಗುವ ಹಾದಿ ಆನಂದದಾಯಕ. ಬೆಟ್ಟದ ಮೇಲಿನ ಪ್ರಶಾಂತ ವಾತಾವರಣದಲ್ಲಿ ನರಸಿಂಹ ದೇವರು ಬೇಡಿದ ಭಕ್ತರಿಗೆ ಅಬೀಷ್ಟದಾಯಕನಾಗಿ ನೆಲೆಯಾಗಿದ್ದಾನೆ. ಈ ದೇವರನ್ನು ದುರ್ವಾಸ ಮುನಿಯು ಪ್ರತಿಷ್ಠಾಪಿಸಿದರೆಂದು ಹೇಳಲಾಗುತ್ತದೆ.

ಮನೆಯಲ್ಲಿ ದುಡ್ಡು ಹೆಚ್ಚಾಗಲು ಏನು ಮಾಡಬೇಕು?

ಮಾರೇನಹಳ್ಳಿ: ಮಂಡ್ಯ ತಾಲೂಕಿನ ಮಾರೇನಹಳ್ಳಿ ಲಕ್ಷ್ಮಿನರಸಿಂಹ ಸ್ವಾಮಿ ದೇವಸ್ಥಾನ ಇಡೀ ರಾಜ್ಯಕ್ಕೇ ಪ್ರಖ್ಯಾತ. ಸುಮಾರು ಇನ್ನೂರು ವರ್ಷಗಳ ಹಿಂದೆ ಇದು ಸ್ಥಾಪನೆಯಾಗಿದೆ. ಸಾಮಾನ್ಯವಾಗಿ ನರಸಿಂಹನ ಉಗ್ರತೆಯನ್ನು ಕಡಿಮೆ ಮಾಡಲೆಂದು ಲಕ್ಷ್ಮಿದೇವಿಯನ್ನು ಸಹ ಜೊತೆಗೆ ಪ್ರತಿಷ್ಠಾಪಿಸಲಾಗುತ್ತದೆ.

ಮೇಲುಕೋಟೆ: ಮಂಡ್ಯ ಜಿಲ್ಲೆಯ ಪಾಂಡವಪುರದ ಮೇಲುಕೋಟೆ ದೇಗುಲಗಳ ನಾಡು ಎಂದೇ ಪ್ರಸಿದ್ಧ. ಇಲ್ಲಿ ಸುಂದರವಾದ ಚೆಲುವನಾರಾಯಣ, ಯೋಗಾನರಸಿಂಹ ಮುಂತಾದ ಗುಡಿಗಳಿವೆ. ಸಾಲು ಸಾಲು ದೇವಾಲಯಗಳು, ಪುಷ್ಕರಿಣೀಗಳಿಂದ ಈ ಊರು ಶ್ರೀಮಂತವಾಗಿದೆ . ಇಲ್ಲಿನ ಯೋಗಾನರಸಿಂಹನ ಸ್ಥಾಪನೆಯಾದದ್ದು ಪ್ರಹ್ಲಾದನಿಂದ ಎಂದು ಕತೆ. ಕನ್ನಡದ ವರಕವಿ ಪುತಿನ ಈ ಯೋಗಾನರಸಿಂಹ ದೇವರ ಅತೀವ ಭಕ್ತರಾಗಿದ್ದರು.

ಸಾಲಿಗ್ರಾಮ: ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿರುವ ಶ್ರೀ ಗುರು ನರಸಿಂಹಸ್ವಾಮಿಯ ದೇವಸ್ಥಾನದಲ್ಲಿರುವ ನರಸಿಂಹನ ಸ್ವರೂಪ ಉಗ್ರವಾಗಿದೆ. ಈ ಪುಟ್ಟ ಮೂರ್ತಿ ನಾಲ್ಕನೇ ಶತಮಾನದ್ದಾಗಿದ್ದು, ನಾರದರಿಂದ ಪ್ರತಿಷ್ಠಾಪನೆಯಾಗಿದೆ ಎನ್ನಲಾಗಿದೆ. ಕದಂಬ ರಾಜರು ಇದಕ್ಕೆ ಹೊಸ ರೂಪ ನೀಡಿದರು. ಇದರ ಉಗ್ರ ಸ್ವರೂಪ ತಡೆಯಲು ಎದುರಿಗೆ ಆಂಜನೇಯನನ್ನು ಪ್ರತಿಷ್ಠಾಪಿಸಲಾಗಿದೆ.

ಸಾವನದುರ್ಗ: ಮಾಗಡಿ ತಾಲೂಕಿನ ಸಾವನದುರ್ಗ ಬೆಟ್ಟ ಬೆಂಗಳೂರಿನ ಚಾರಣಪ್ರಿಯರಿಗೆಲ್ಲ ಪರಿಚಿತ. ಈ ಬೆಟ್ಟದ ಬುಡದಲ್ಲಿ ಪ್ರಾಕೃತಿಕವಾಗಿ ಸುಂದರವಾದ ಪ್ರದೇಶದಲ್ಲಿ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಗುಡಿಯಿದೆ. ಕಲ್ಲಿನಲ್ಲಿ ನೈಸರ್ಗಿಕವಾಗಿ ಮೂಡಿದ ನರಸಿಂಹ ಹಾಗೂ ಪಕ್ಕದಲ್ಲಿ ಲಕ್ಷ್ಮೀದೇವಿಯ ಗುಡಿ.

ಸೋಮನಾಥಪುರ: ಇಲ್ಲಿನ ಸೋಮನಾಥಪುರ ದೇವಸ್ಥಾನ ಪ್ರಖ್ಯಾತವಾದದ್ದು. ಇದರ ಹಿಂಬದಿಯಲ್ಲೇ ಶ್ರೀ ಕುಬೇರ ನರಸಿಂಹ ಸ್ವಾಮಿ ಗುಡಿಯಿದೆ. ಈ ನರಸಿಂಹ ದೇವರ ವಿಶಿಷ್ಟತೆ ಏನೆಂದರೆ, ಇಡೀ ವಿಗ್ರಹ ತನ್ನ ಕಾಲಿನ ಕಿರುಬೆರಳ ಮೇಲೆ ನಿಂತಿದೆ. ಪಕ್ಕದಲ್ಲಿ ಲಕ್ಷ್ಮೀದೇವಿ ಹಾಗೂ ಕುಬೇರರ ಗುಡಿಯೂ ಇರುವುದು ವಿಶೇಷ. ಅದ್ಭುತ ವಾಸ್ತುಶಿಲ್ಪಕ್ಕೆ ಸೋಮನಾಥಪುರ ಹೆಸರಾಗಿದೆ.

ಕೃಷ್ಣನೊಂದಿಗೆ ಪ್ರೀತಿಗೆ ಬೀಳಲು ಗೋಪಿಯಾದ ಅರ್ಜುನ! 

ಘಾಟಿ ನರಸಿಂಹ: ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದ ಬಗ್ಗೆ ನೀವು ಕೇಳಿಯೇ ಇರುತ್ತೀರಿ. ಅಲ್ಲೇ ಶ್ರೀ ನರಸಿಂಹ ದೇವರ ಗುಡಿಯೂ ಇದೆ. ಪೂರ್ವಾಭಿಮುಖವಾಗಿ ಸುಬ್ರಹ್ಮಣ್ಯನೂ ಪಶ್ಚಿಮಾಭಿಮುಖಿಯಾಗಿ ನರಸಿಂಹನೂ ಇದ್ದಾರೆ. ಸೊಂಡೂರಿನ ಅರಸು ಮನೆತನದವರಿಂದ ಪ್ರತಿಷ್ಠಾಪಿತವಾಗಿರುವ ಈ ನರಸಿಂಹನು ಬೇಡಿದ ವರಗಳನ್ನು ನೀಡಬಲ್ಲವನೆಂದೇ ಪ್ರತೀತಿ.

ಝರಣೀ ನರಸಿಂಹ: ಬೀದರಿನಲ್ಲಿರುವ ಒಂದು ಅಪರೂಪದ ಕ್ಷೇತ್ರವಿದು. ಗುಹೆಯೊಳಗೆ ಈ ದೇವರಿದ್ದಾನೆ. ಗುಹೆಯಲ್ಲಿ ನಿಂತಿರುವ ಎದೆಮಟ್ಟದ ನೀರಿನಲ್ಲಿ ನಡೆದು ದೇವರ ದರ್ಶನ ಮಾಡಿ ಹಾಗೇ ಮರಳಬೇಕು. ಮೈ ನವಿರೇಳಿಸುವ ಈ ಅನುಭವ ಅದ್ಭುತವಾದುದು.

ಇಂದು ನರಸಿಂಹ ಜಯಂತಿ: ನರಸಿಂಹ ಅವತಾರದ ಮಹತ್ವದ ಬಗ್ಗೆ ಇಲ್ಲಿದೆ ನೋಡಿ!

ತೊರವಿ ನರಸಿಂಹ: ವಿಜಯಪುರ ಜಿಲ್ಲೆಯ ತೊರವಿಯಲ್ಲಿರುವ ಈ ದೇವಾಲಯ ಕೂಡ ಒಂದು ಗುಹಾಲಯ. ನಾಲ್ಕು ಅಡಿ ಜಾಗದಲ್ಲಿ ಮೆಟ್ಟಿಲು ಇಳಿದು ಸುರಂಗದಲ್ಲಿ ಸಾಗಿದರೆ ಈ ದೇವರ ದರ್ಶನವಾಗುತ್ತದೆ. ಮೂರಡಿ ಎತ್ತರದ ಈ ನರಸಿಂಹನಿಗೆ ಎಂಟು ಭುಜ. ಹತ್ತನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯರು ರಚಿಸಿದ ತಾಣವಿದು.