ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು ಅಚಲಾ ಸಪ್ತಮಿಯನ್ನಾಗಿ ಆಚರಿಸಲಾಗುತ್ತಿದೆ. ಅಚಲಾ ಸಪ್ತಮಿಯನ್ನು ರಥ, ಭಾನು ಮತ್ತು ಆರೋಗ್ಯ ಸಪ್ತಮಿಯೆಂದು ಸಹ ಕರೆಯಲಾಗುತ್ತದೆ. ಈ ಬಾರಿ ಫೆಬ್ರುವರಿ 19ರ ಶುಕ್ರವಾರದಂದು ಅಚಲಾ ಸಪ್ತಮಿಯ ಆಚರಣೆ ನಡೆಯುತ್ತದೆ. ಶಾಸ್ತ್ರದ ಪ್ರಕಾರ ಅಚಲಾ ಸಪ್ತಮಿ ಅಂದರೆ ಮಾಘ ಮಾಸದ ಶುಕ್ಲಪಕ್ಷದ ಸಪ್ತಮಿ ತಿಥಿಯ ಭಾನುವಾರದಂದು ಬಂದರೆ ಅದನ್ನು ಅಚಲಾ ಭಾನು ಸಪ್ತಮಿ ಎಂದು ಕರೆಯಲಾಗುತ್ತದೆ.

ಪೌರಾಣಿಕ ಗ್ರಂಥಗಳ ಅನುಸಾರ ಸೂರ್ಯ ದೇವನ ಜನ್ಮ ಅಚಲಾ ಸಪ್ತಮಿಯಂದು ಆಗಿತ್ತು. ಹಾಗಾಗಿ ಈ ದಿನವನ್ನು ಸೂರ್ಯ ಜಯಂತಿ ಎಂದು ಸಹ ಕರೆಯಲಾಗುತ್ತದೆ. ಈ ದಿನ ಸೂರ್ಯ ದೇವನನ್ನು ಆರಾಧಿಸಿದರೆ ಏಳು ಜನ್ಮಗಳ ಪಾಪ ಕಳೆದು, ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. 

ಇದನ್ನು ಓದಿ: ವಾಸ್ತು ಪ್ರಕಾರ ಮನೆಗೆ ಅಡಿಪಾಯ ಹಾಕಿ, ಇಲ್ಲದಿದ್ರೆ ಕೇಡಾಗಬಹುದು..! 

ಅಚಲಾ ಸಪ್ತಮಿಯ ಶುಭ ಮುಹೂರ್ತ
ಸಪ್ತಮಿ ತಿಥಿಯು 18 ಫೆಬ್ರವರಿ 2021ರ ಗುರುವಾರ ಬೆಳಗ್ಗೆ 8 ಗಂಟೆ 17 ನಿಮಿಷಕ್ಕೆ ಆರಂಭವಾಗುತ್ತದೆ. 19  ಫೆಬ್ರವರಿ 2021ರ ಶುಕ್ರವಾರ ಬೆಳಗ್ಗೆ   10 ಗಂಟೆ 58 ನಿಮಿಷಕ್ಕೆ ಸಮಾಪ್ತಿಗೊಳುತ್ತದೆ.

ಅಚಲಾ ಸಪ್ತಮಿ ವ್ರತವನ್ನು ಯಾರು ಕೈಗೊಳ್ಳಬೇಕು ?
ಜ್ಯೋತಿಷ್ಯ ಶಾಸ್ತ್ರಜ್ಞರ ಪ್ರಕಾರ ಜಾತಕದಲ್ಲಿ ಸೂರ್ಯ ಗ್ರಹವು ನೀಚ ಸ್ಥಿತಿಯಲ್ಲಿದ್ದರೆ, ಶತ್ರು ಮನೆಯಲ್ಲಿದ್ದವರು ಈ ವ್ರತವನ್ನು ಕೈಗೊಳ್ಳಬೇಕು. ಅಷ್ಟೇ ಅಲ್ಲದೆ ಆರೋಗ್ಯ ಸ್ಥಿತಿ ಚೆನ್ನಾಗಿಲ್ಲದವರು, ಆಗಾಗ್ಗೆ ಆರೋಗ್ಯ ಹದಗೆಡುತ್ತಿದ್ದರೆ ಅಂಥವರು ಮತ್ತು ಶಿಕ್ಷಣದಲ್ಲಿ ತೊಂದರೆ ಅನುಭವಿಸುತ್ತಿರುವವರು ಈ ವ್ರತವನ್ನು ಮಾಡಿದಲ್ಲಿ ಒಳಿತಾಗುತ್ತದೆ. ಸಂತಾನಕ್ಕಾಗಿ ಹಂಬಲಿಸುತ್ತಿರುವವರು ಸಹ ಈ ವ್ರತವನ್ನು ಕೈಗೊಂಡರೆ ಇಷ್ಟಾರ್ಥ ಫಲಿಸುತ್ತದೆ. 

ಇದನ್ನು ಓದಿ: ಕುಂಭ ರಾಶಿ ಪ್ರವೇಶಿಸುತ್ತಿರುವ ಸೂರ್ಯ- ಈ ರಾಶಿಗೆ ಸಿಗುತ್ತೆ ಸರ್ಕಾರಿ ಉದ್ಯೋಗ ...

ಅಚಲಾ ಸಪ್ತಮಿ ವ್ರತ ಕಥೆ
ಇಂದುಮತಿ ಎಂಬ ವೇಶ್ಯೆಯೊಬ್ಬಳು ವಸಿಷ್ಠ ಮುನಿಗಳ ಬಳಿ ಹೋಗಿ ಮುಕ್ತಿಮಾರ್ಗವನ್ನು ತಿಳಿಸಬೇಕೆಂದು ಕೇಳಿಕೊಳ್ಳುತ್ತಾಳೆ. ಆಗ ಮುನಿಗಳು ಅಚಲಾ ಸಪ್ತಮಿ ವ್ರತವನ್ನು ಕೈಗೊಂಡರೆ ಮುಕ್ತಿ ದೊರೆಯುತ್ತದೆ ಎಂದು ಹೇಳುತ್ತಾರೆ.  ಮಾಘಮಾಸದ ಶುಕ್ಲಪಕ್ಷದ ಸಪ್ತಮಿ ತಿಥಿಯಂದು ಈ ಅಚಲಾ ಸಪ್ತಮಿ ವ್ರತವನ್ನು ಆಚರಿಸಲಾಗುತ್ತದೆ. ಈ ದಿನ ವ್ರತವನ್ನು ಕೈಗೊಳ್ಳಬೇಕೆಂದು ವ್ರತದ ನಿಯಮಗಳನ್ನು ತಿಳಿಸಿಕೊಡುತ್ತಾರೆ. ಇಂದುಮತಿಯು ಮುನಿಗಳು ತಿಳಿಸಿದಂತೆ ವ್ರತವನ್ನು ಮಾಡುತ್ತಾಳೆ. ವ್ರತದ ಪುಣ್ಯ ಫಲದಿಂದ ಸಾವಿನ ಕಾಲ ಬಂದು ದೇಹವನ್ನು ತ್ಯಜಿಸಿದ ಬಳಿಕ ಇಂದ್ರನು ತನ್ನ ಆ ಸ್ಥಾನದಲ್ಲಿ ಅಪ್ಸರೆಯರ ನಾಯಕಿಯನ್ನಾಗಿ ಈಕೆಯನ್ನು ನೇಮಿಸುತ್ತಾನೆ. ಆಕೆಗೆ ಮುಕ್ತಿಯು ದೊರಕುತ್ತದೆ.ಅಷ್ಟೇ ಅಲ್ಲದೆ ಇನ್ನೊಂದು ವ್ರತ ಕಥೆಯು  ಪ್ರಚಲಿತದಲ್ಲಿದೆ. ಶ್ರೀ ಕೃಷ್ಣನ ಮಗ ಅಮ್ಮ ಸಾಂಬನಿಗೆ ತನ್ನ ಪರಾಕ್ರಮ ಮತ್ತು ರೂಪದ ಬಗ್ಗೆ ಭಾರಿ ಗರ್ವವಿತ್ತು. ಹಾಗಾಗಿ ಇದೇ ಮದದಿಂದ ದೂರ್ವಾಸ ಮುನಿಗಳ ಅಪಮಾನ ಮಾಡುತ್ತಾನೆ. ಇದರಿಂದ ಕುಪಿತರಾದ ದೂರ್ವಾಸ ಮುನಿಗಳು ಸಾಂಬನಿಗೆ ಕುಷ್ಠರೋಗ ಉಂಟಾಗಲಿ ಎಂದು ಶಾಪ ಕೊಡುತ್ತಾರೆ. ಈ ವಿಷಯವನ್ನು ಶ್ರೀಕೃಷ್ಣನಿಗೆ ತಿಳಿಸುತ್ತಾನೆ. ಅದಕ್ಕೆ ಶ್ರೀಕೃಷ್ಣನು ಸೂರ್ಯ ದೇವನ ಉಪಾಸನೆ ಮಾಡುವುದರಿಂದ ಕುಷ್ಠ ರೋಗ ಗುಣವಾಗುತ್ತದೆ ಎಂದು ಎಂದು ತಿಳಿಸುತ್ತಾನೆ. ಸಾಂಬನ ಸೂರ್ಯೋಪಾಸನೆಯಿಂದ ರೋಗವನ್ನು ಗುಣಪಡಿಸಿಕೊಳ್ಳುತ್ತಾನೆ. ಹಾಗಾಗಿ ಸೂರ್ಯ ಸಪ್ತಮಿಯಂದು ಸೂರ್ಯೋಪಾಸನೆಯಿಂದ ಸಕಲ ಕಷ್ಟಗಳು ರೋಗ-ರುಜಿನಗಳು ದೂರವಾಗುತ್ತವೆ.  

ಇದನ್ನು ಓದಿ: ಶನಿ ಉದಯದಿಂದ ಶುಭ ಫಲಗಳನ್ನು ಪಡೆಯುವ ರಾಶಿಗಳಿವು..

ಅಚಲಾ ಸಪ್ತಮಿ, ರಥ ಸಪ್ತಮಿ ಅಥವಾ ಸೂರ್ಯ ಸಪ್ತಮಿಯ ಮಹತ್ವ
ಶಾಸ್ತ್ರಗಳಲ್ಲಿ ಮತ್ತು ಚಿಕಿತ್ಸಾ ಪದ್ಧತಿಯಲ್ಲಿ  ಸೂರ್ಯನನ್ನು ಆರೋಗ್ಯವನ್ನು ಕರುಣಿಸುವವನೆಂದು ಪರಿಗಣಿಸಲಾಗುತ್ತದೆ. ಧಾರ್ಮಿಕ ಮಾನ್ಯತೆಗಳ ಅನುಸಾರ ಸೂರ್ಯ ದೇವನ ಉಪಾಸನೆಯಿಂದ ಶರೀರವು ರೋಗಗಳಿಂದ ಮುಕ್ತಿ ಹೊಂದುತ್ತದೆ. ಈ ದಿನ ಸೂರ್ಯೋದಯಕ್ಕೆ ಮುಂಚೆ ಎದ್ದು ಸ್ನಾನ ಮಾಡಿ ನಂತರ ಉದಯಿಸುತ್ತಿರುವ ಸೂರ್ಯನಿಗೆ ಅರ್ಘ್ಯ ನೀಡುವ ಪದ್ಧತಿ ಇದೆ. ಸೂರ್ಯ ಸಪ್ತಮಿಯಂದು ಉದಯಿಸುತ್ತಿರುವ ಸೂರ್ಯನ ಕಡೆ ಮುಖಮಾಡಿ ಕುಳಿತು ಪೂಜಿಸುವುದರಿಂದ  ಚರ್ಮವ್ಯಾಧಿಗಳಿಂದ ಮುಕ್ತಿ ದೊರಕುತ್ತದೆ. ಜ್ಯೋತಿಷ್ಯದ ಪ್ರಕಾರ ಸೂರ್ಯನ ಉಪಾಸನೆಯಿಂದ ತಂದೆ ಮತ್ತು ಮಗನ ನಡುವಿನ ಬಾಂಧವ್ಯ ಗಟ್ಟಿಯಾಗುತ್ತದೆ. ಹಾಗಾಗಿ  ಅಚಲಾ ಸಪ್ತಮಿಯಂದು ಸೂರ್ಯನನ್ನು ಆರಾಧಿಸುವುದರಿಂದ ಕಷ್ಟಗಳಿಂದ ಮುಕ್ತಿ ದೊರೆಯುತ್ತದೆ.