Purpose of life: ಪುರುಷಾರ್ಥ- ಹಾಗೆಂದರೇನು ಗೊತ್ತಾ?
ಸಾಮಾನ್ಯವಾಗಿ ಎಲ್ಲರಿಗೂ ಒಂದಿಲ್ಲೊಮ್ಮೆ ತಮ್ಮ ಬದುಕಿನ ಅರ್ಥವೇನು, ಯಾಕಾಗಿ ಹುಟ್ಟಿದೆವು, ಯಾಕೆ ಬದುಕುತ್ತಿದ್ದೇವೆ ಎಂಬ ಪ್ರಶ್ನೆಗಳು ಕಾಡಿಯೇ ಇರುತ್ತವೆ. ಇದಕ್ಕೆಲ್ಲ ಉತ್ತರವೇ ಪುರುಷಾರ್ಥ.
ಯಾರಾದ್ರೂ ಏನಾದ್ರೂ ಉಪಯೋಗಕ್ಕೆ ಬಾರದ ಕೆಲಸ ಮಾಡಿದಾಗ, 'ಯಾವ ಪುರುಷಾರ್ಥಕ್ಕೆ ಇದೆಲ್ಲ ಮಾಡಿದ್ದಿ' ಎಂದು ಕೇಳುವುದು ಎಲ್ಲರ ಕಿವಿಗೆ ಬಿದ್ದೇ ಇರುತ್ತದೆ. ಆದರೆ, ಈ ಪುರುಷಾರ್ಥ ಎಂದರೇನೆಂದು ಎಂದಾದರೂ ಯೋಚಿಸಿದ್ದೀರಾ?
ಪುರುಷಾರ್ಥಕ್ಕೆ ಹಿಂದೂ ಧರ್ಮದಲ್ಲಿ ಅಗಾಧ ಅರ್ಥವಿದೆ. ಪುರುಷ ಎಂದರೆ ಮನುಷ್ಯ ಎಂದರ್ಥ. ಪುರುಷಾರ್ಥ ಅಂದರೆ, ಮನುಷ್ಯ ಜೀವನದ ಅರ್ಥ ಎಂದು. ಅಂದರೆ, ಜೀವನದ ಉದ್ದೇಶ ಎಂದರ್ಥ. ಹಿಂದೂವಾಗಿ ಅರ್ಥಬದ್ಧವಾಗಿ ಬದುಕನ್ನು ಕಳೆದು ಮೋಕ್ಷ ಸಾಧಿಸಲು ಏನು ಮಾಡಬೇಕೋ ಅವೇ ಪುರುಷಾರ್ಥಗಳು. ವೇದಗಳ ಪ್ರಕಾರ, ನಾಲ್ಕು ಪುರುಷಾರ್ಥಗಳಿವೆ. ಅವು ಯಾವೆಲ್ಲ ನೋಡೋಣ.
ಧರ್ಮ(Dharma)
ಧರ್ಮ ಎಂದರೆ ಸರಿಯಾದುದು(righteousness) ಎಂದರ್ಥ. ವ್ಯಕ್ತಿಗೆ ಕುಟುಂಬ, ಸಮಾಜ ಹಾಗೂ ಮಾನವತೆ ಕುರಿತಾಗಿ ಇರುವ ಕರ್ತವ್ಯಗಳೇ ಧರ್ಮ. ಹಾಗಾಗಿ, ವ್ಯಕ್ತಿಯು ತನ್ನ ಜೀವಿತಾವಧಿಯಲ್ಲಿ ತನ್ನ ಸಮಾಜದ ಕಟ್ಟಳೆಗಳನ್ನು ಪಾಲಿಸುತ್ತಾ, ಸರಿಯಾದುದನ್ನೇ ಮಾಡುತ್ತಾ, ಎಲ್ಲ ಕರ್ತವ್ಯಗಳನ್ನು ನಿಭಾಯಿಸುತ್ತಾ ಬದುಕಬೇಕು. ಧರ್ಮವು ಅರ್ಥ ಹಾಗೂ ಕಾಮಕ್ಕಿಂತ ಉನ್ನತವಾದುದಾಗಿದೆ.
Great Sages: ಸಪ್ತರ್ಷಿಗಳೆಂದರೆ ಯಾರು, ಅವರ ವಿಶೇಷತೆಗಳೇನು?
ಅರ್ಥ(Artha)
ಅರ್ಥ ಎಂದರೆ ಸಂಪತ್ತು ಅಥವಾ ಹಣ ಗಳಿಸುವುದಕ್ಕೆ ಸಂಬಂಧಿಸಿದ ವಿಷಯಗಳು. ಇದರರ್ಥ ಹಿಂದೂ ಧರ್ಮ(Hinduism)ವು ಹಣ ಸಂಪತ್ತು ಕೂಡಿಡುವುದನ್ನೇ ಉತ್ತೇಜಿಸುತ್ತದೆ ಎಂದಲ್ಲ. ಆದರೆ, ಹಣ ಸಂಪಾದನೆಯೂ ವ್ಯಕ್ತಿಯ ಬದುಕಿನಲ್ಲಿ ಮುಖ್ಯವಾಗಿದೆ ಎಂಬುದನ್ನು ಹಿಂದೂ ಧರ್ಮ ಅರ್ಥ ಮಾಡಿಕೊಂಡಿದೆ. ಸಂತೋಷದ ಜೀವನ ನಡೆಸಲು ಹಣ ಬೇಕಾಗುತ್ತದೆ. ಆದರೆ, ಈ ಹಣವನ್ನು ಕಷ್ಟ ಪಟ್ಟು, ಪ್ರಾಮಾಣಿಕ(honest) ದಾರಿಗಳಲ್ಲೇ ಸಂಪಾದಿಸಬೇಕು. ಧರ್ಮ ಹಾಗೂ ಅರ್ಥದ ನಡುವೆ ಗೊಂದಲ, ಸಮಸ್ಯೆ ಉಂಟಾಗುತ್ತಿದೆ ಎಂದರೆ ಧರ್ಮಕ್ಕೇ ಮೊದಲ ಪ್ರಾಶಸ್ತ್ಯ ಕೊಡಬೇಕು.
2022 Happy year ಆಗ್ಬೇಕಂದ್ರೆ ಈ ರಾಶಿಯವರು ಹೀಗ್ ಮಾಡ್ಲೇಬಾರ್ದು...
ಕಾಮ(Kama)
ಕಾಮ ಎಂದರೆ ಸಂತೋಷ ಹಾಗೂ ಆಸೆಗಳು. ವಿಶೇಷವಾಗಿ ಲೈಂಗಿಕ ಸಂತೋಷ. ಅದಲ್ಲದೆ ಕ್ರೀಡೆ, ಕ್ರಿಯಾತ್ಮಕ ಚಟುವಟಿಕೆಗಳು, ಸಂಸ್ಕೃತಿ ನೀಡುವ ಸಂತೋಷಗಳೂ ಜೀವನವನ್ನು ಅನುಭವಿಸಲು ಬೇಕಾಗಿದೆ. ಹಿಂದೂ ಧರ್ಮವು ಆಧ್ಯಾತ್ಮಕ್ಕೆ ಎಷ್ಟು ಮಹತ್ವ ನೀಡುತ್ತದೋ ಜೀವನದ ಪ್ರಾಯೋಗಿಕತೆಗೂ ಅಷ್ಟೇ ಮಹತ್ವ ನೀಡುತ್ತದೆ. ದೇವರು ಮನುಷ್ಯನಿಗೆ ನೀಡಿದ ಸಂತೋಷಗಳಲ್ಲಿ ಅತಿ ಉನ್ನತವಾದುದು ಕಾಮ ಎಂಬುದನ್ನು ಹಿಂದೂ ಧರ್ಮ ಒಪ್ಪುತ್ತದೆ. ಮನುಷ್ಯನ ಜೀವನದಲ್ಲಿ ಕಾಮವು ಬಹಳ ಮುಖ್ಯವಾದುದಾಗಿದ್ದು, ಜೀವನದ ವಿಕಾಸಕ್ಕೂ ಇದು ಬೇಕೇ ಬೇಕಾಗಿದೆ. ಹಾಗಾಗಿ, ವ್ಯಕ್ತಿಯು ಕಾಮವನ್ನೂ ಸಂಪೂರ್ಣವಾಗಿ ಒಪ್ಪಿಕೊಂಡು ಬದುಕಬೇಕು. ಪ್ರತಿ ಮನುಷ್ಯನಿಗೂ ಈ ಕುರಿತ ತನ್ನ ಸಂತೋಷಗಳನ್ನು ಗಳಿಸಿಕೊಳ್ಳುವ ಹಕ್ಕಿದೆ.
ಮೋಕ್ಷ(Moksha)
ಮೋಕ್ಷ ಎಂದರೆ ಈ ಜೀವನದ ದೊಂಬರಾಟದಿಂದ ಸಂಪೂರ್ಣ ಮುಕ್ತಿ ಎಂದರ್ಥ. ಹುಟ್ಟು ಸಾವುಗಳ ಸುರುಳಿಯಿಂದ ಆತ್ಮಕ್ಕೆ ಮುಕ್ತಿ ಕೊಡುವುದೇ ಮೋಕ್ಷ. ಹಿಂದೂ ಧರ್ಮವು ಪುನರ್ಜನ್ಮ(reincarnation)ದಲ್ಲಿ ನಂಬಿಕೆ ಇರಿಸಿದೆ. ನಾವಿಂದು ಏನಾಗಿದ್ದೇವೋ ಅದು ನಮ್ಮ ಹಿಂದಿನ ಜನ್ಮದ ಕರ್ಮದ ಫಲ. ಈ ಜನ್ಮದಲ್ಲಿ ಏನು ಮಾಡುತ್ತೇವೆ, ಹೇಗಿರುತ್ತೇವೆ ಎಂಬುದರ ಮೇಲೆ ಮುಂದಿನ ಜನ್ಮದ ಫಲ ಇರುತ್ತದೆ. ಅಂದರೆ ನಮ್ಮ ಆತ್ಮ ಮತ್ತೆ ಮತ್ತೆ ಹುಟ್ಟು ಸಾವಿನ ಸುರುಳಿಯಲ್ಲಿ ಸುತ್ತತ್ತಲೇ ಇರುತ್ತದೆ. ಆದರೆ, ಮೋಕ್ಷ ಸಿಕ್ಕಿದ ಮೇಲೆ ಈ ಸುರುಳಿಯಲ್ಲಿ ಸುತ್ತಬೇಕಾಗಿಲ್ಲ. ಹೀಗಾಗಿ, ಜೀವನದ ಅಂತಿಮ ಗುರಿ ಮೋಕ್ಷ ಸಾಧಿಸುವುದು.
ಹಿಂದೂ ಧರ್ಮವು ಕೇವಲ ಜೀವನದ ಉದ್ದೇಶಗಳನ್ನು ಹೇಳುವುದಿಲ್ಲ. ಅವುಗಳನ್ನು ಸಾಧಿಸುವುದು ಹೇಗೆಂದು ಕೂಡಾ ಹೇಳುತ್ತದೆ. ಹಾಗಾಗಿಯೇ ಹಿಂದೂಗಳ ಜೀವನವನ್ನು ನಾಲ್ಕು ಭಾಗವಾಗಿ ವಿಭಾಗಿಸಲಾಗಿದೆ. ಅವೇ ಬ್ರಹ್ಮಚರ್ಯ, ಗೃಹಸ್ಥಾಶ್ರಮ, ವಾನಪ್ರಸ್ಥ ಹಾಗೂ ಸನ್ಯಾಸತ್ವ. ಈ ಆಶ್ರಮಗಳ ಆಚರಣೆಯಿಂದ ಪುರುಷಾರ್ಥ ಸಾಧನೆ ಸುಲಭವಾಗುತ್ತದೆ.