ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಗುಡಿಗೆ ರಾಜ್ಯದ- ರಾಷ್ಟ್ರದ ಎಲ್ಲಿಲ್ಲಿಂದಲೂ ಲಕ್ಷಾಂತರ ಜನ ಭೇಟಿ ಕೊಡುತ್ತಾರೆ. ಆದರೆ ಈಗ ಲಾಕ್‌ಡೌನ್‌ನಿಂದಾಗಿ ಭಕ್ತರ ಭೇಟಿಗೆ ಅವಕಾಶವಿಲ್ಲ. ಆದರೆ, ನಿತ್ಯ ದೇವಿಗೆ ತ್ರಿಕಾಲ ಪೂಜೆ ತಪ್ಪುತ್ತಿಲ್ಲ. ನಿತ್ಯ ಸೀರೆ ಉಡಿಸಿ ಅಲಂಕಾರ, ಹೂವು ತೊಡಿಸಿ ಅಲಂಕಾರ ಮಾಡಲಾಗುತ್ತದೆ. ಈ ಅಲಂಕಾರದ ಫೋಟೋಗಳು ಪ್ರತಿನಿತ್ಯ ಲಕ್ಷಾಂತರ ಸಂಖ್ಯೆಯಲ್ಲಿ ಶೇರ್‌ ಅಗುತ್ತವೆ. ಅಂದರೆ ಭ್ರಮರಾಂಬಿಕೆಯ ಮೇಲೆ ಭಕ್ತರಿಗಿರುವ ಭಾವುಕ ಭಕ್ತಿಯ ಪರಾಕಾಷ್ಠೆಯನ್ನು ನೀವು ಊಹಿಸಬಹುದು.

ಇಲ್ಲಿ ಆರು ಯಕ್ಷಗಾನ ಮೇಳಗಳಿವೆ. ಎಲ್ಲ ಆರೂ ಮೇಳಗಳು ಕಳೆದ ಡಿಸೆಂಬರ್‌ನಲ್ಲಿ ತಿರುಗಾಟ ಆರಂಭಿಸಿದ್ದವು. ಆದರೆ ಈಗ ಎಲ್ಲ ಕಡೆ ಕೊರೊನಾದಿಂದಾಗಿ ಯಕ್ಷಗಾನ ಬಯಲಾಟ ಪ್ರದರ್ಶನಗಳು ನಿಂತಿವೆ. ಆದರೆ ಕಟೀಲಿನ ಮೇಳಗಳಲ್ಲಿ ಒಮ್ಮೆ ತಿರುಗಾಟ ಹೊರಟ ಮೇಲೆ ಚೌಕಿಪೂಜೆ ನಿಲ್ಲಬಾರದು ಎಂಬುದು ಸಂಪ್ರದಾಯ. ಹೀಗಾಗಿ ಪ್ರತಿನಿತ್ಯ ದೇವಿಯ ಮುಂದೆ ಪೂಜೆ, ನಾದಾರ್ಚನೆ ನಡೆಯುತ್ತದೆ. ಕಟೀಲಿನ ಅಮ್ಮ ಯಕ್ಷಗಾನ ಪ್ರಿಯೆ, ಪುಷ್ಪಪ್ರಿಯೆಯೂ ಹೌದು. ಅನ್ನದಾನ ಸೇವೆ, ಪಟ್ಟೆಸೀರೆ ಅರ್ಪಣೆಯ ಸೇವೆಗಳೂ ಈಕೆಗೆ ಅತ್ಯಂತ ಪ್ರಿಯ.

ಶೃಂಗೇರಿ ಶಾರದಾಂಬೆ ಮಹಾತ್ಮೆ ತಿಳಿಯ ಬನ್ನಿ

ಕಟೀಲು ತಾಯಿಗೆ ತುಂಬಾ ಪ್ರಿಯವಾದ ಸೇವೆ ಎಂದರೆ ಹೂವಿನ ಪೂಜೆ. ಭಕ್ತಾದಿಗಳು ತಮಗೆ ಸಂಕಷ್ಟ ಒದಗಿದರೆ ಕಟೀಲು ದೇವಿಗೆ ಹೂವಿನ ಪೂಜೆ ಸಲ್ಲಿಸುತ್ತೇನೆ ಎಂದು ಹರಕೆ ಹೊತ್ತರೆ ಅವರ ಕಷ್ಟ ಕಾರ್ಪಣ್ಯ ಖಂಡಿತ ದೂರವಾಗುತ್ತದೆ ಎಂಬುದಕ್ಕೆ ನಿದರ್ಶನಗಳಿವೆ. ಸಾಕಷ್ಟು ಪವಾಡಗಳು ಈ ದೇವಿಯ ನಿಮಿತ್ತದಲ್ಲಿ ನಡೆದಿವೆ. ದೇವಿಗೆ ಅತ್ಯಂತ ಇಷ್ಟವಾದ ಹೂವೆಂದರೆ ಮಲ್ಲಿಗೆ. ಅದೇ ಆಕೆಗೆ ಆಭರಣ. ಈಕೆಯನ್ನು ಸಂಪೂರ್ಣವಾಗಿ ಮಲ್ಲಿಗೆಯಿಂದ ಅಲಂಕರಿಸಲಾಗುತ್ತದೆ. ಒಂದು ಲೆಕ್ಕಾಚಾರ ನೋಡಿ: ಕಳೆದ ವರ್ಷ ಒಟ್ಟಾರೆ ೫.೫ ಲಕ್ಷ ಹೂವಿನ ಪೂಜೆಗಳು ದೇವಿಗೆ ನಡೆದಿವೆಯಂತೆ! ಅದರೆ ದಿನಕ್ಕೆ ಸರಾಸರಿ ೧೬೦೦ ಹೂವಿನ ಪೂಜೆ! ಇದೊಂದು ದಾಖಲೆಯೇ ಸರಿ. ಕರ್ನಾಟಕದ ಮುಜರಾಯಿ ಇಲಾಖೆ ದೇವಾಲಯಗಳ ಪೈಕಿ ಕಟೀಲು ಅತಿ ಹೆಚ್ಚಿನ ಆದಾಯ ತರುವ ದೇವಾಲಯಗಳಲ್ಲಿ ಒಂದು ಕಳೆದ ವರ್ಷ ಇಲ್ಲಿನ ಆದಾಯ 25 ಕೋಟಿ ರೂ.

ದೇವಿಯ ಭ್ರಮರಾಂಬಿಕೆ ಅವತಾರದ ಹಿಂದೆ ಮನೋಹರವಾದ ಕತೆಯಿದೆ. ಹಿಂದೊಮ್ಮೆ ಭೂಲೋಕದಲ್ಲಿ ಬರ ಪರಿಸ್ಥಿತಿ ಬಂದಾಗ, ಅದನ್ನು ಹೋಗಲಾಡಿಸಲು ಜಾಬಾಲಿ ಮಹರ್ಷಿಗಳು ದೇವಲೋಕಕ್ಕೆ ಹೋಗಿ, ನಂದಿನಿ ಧೇನುವನ್ನು ಭೂಮಿಗೆ ಬರುವವಂತೆ ಕರೆದರು. ಆದರೆ ಆಕೆ ಭೂಮಿಗೆ ಬರಲೊಪ್ಪದೆ, ಮಾನವರನ್ನು ನಿಂದಿಸಿದಳು. ಇದರಿಂದ ಕುಪಿತರಾದ ಮಹರ್ಷಿ, ಭೂಲೋಕದಲ್ಲಿ ನದಿಯಾಗಿ ಹುಟ್ಟು ಎಂದು ಶಪಿಸಿದರು. ನಂದಿನಿ ತನ್ನ ತಪ್ಪನ್ನರಿತು ಜಾಬಾಲಿಯ ಕ್ಷಮೆ ಕೋರಿದಾಗ, ಶಾಂತರಾದ ಮಹರ್ಷಿ, ದೇವಿಯ ಕೃಪೆಯಿಂದ ನಿನ್ನ ಶಾಪ ನಿವಾರಣೆಯಾಗುವುದು ಎಂದು ಅಭಯವಿತ್ತರು. ನಂದಿನಿ ಭೂಲೋಕದಲ್ಲಿ ನಂದಿನಿ ಹೊಳೆಯಾಗಿ ಹರಿದಳು.

ಮೇ 3ರ ನಂತರ ಯಾವ ಕೆಲಸದಲ್ಲಿರೋರಿಗೆ ಏನು‌ ಭವಿಷ್ಯ? 

ಭೂಲೋಕದಲ್ಲಿ ಅರುಣಾಸುರ ಎಂಬ ರಕ್ಕಸನು ಹುಟ್ಟಿಕೊಂಡು ಬಹಳ ಕಾಟವನ್ನು ಕೊಡುತ್ತಿದ್ದ. ಬ್ರಹ್ಮನನ್ನು ತಪಿಸಿ, ಅವನಿಂದ, ದೇವತೆಗಳಿಂದ ಮನುಷ್ಯರಿಂದ ಪ್ರಾಣಿಗಳಿಂದ ತನಗೆ ಮರಣ ಬಾರದಂತೆ ವರವನ್ನು ಪಡೆದ. ವರಬಲದಿಂದ ಕೊಬ್ಬಿ ಭೂಲೋಕವನ್ನೇ ತನ್ನ ಅಟ್ಟಹಾಸಕ್ಕೆ ಆಡುಂಬೊಲವನ್ನಾಗಿಸಿದ. ದೇವತೆಗಳು ಹೋಗಿ ದೇವಿಯಲ್ಲಿ ಮೊರೆಯಿಟ್ಟರು. ಅರುಣಾಸರ ಗಾಯತ್ರಿ ಮಂತ್ರದ ಉಪಾಸಕನೂ ಆಗಿದ್ದರಿಂದ ಆತನನ್ನು ಸೋಲಿಸುವುದು ಸುಲಭವಾಗಿರಲಿಲ್ಲ. ಅದಕ್ಕಾಗಿ ದೇವಿಯು ಬೃಹಸ್ಪತಿಯನ್ನು ಕಳುಹಿಸಿ, ನೀನೇ ಮಹಾಬಲಶಾಲಿಯಾಗಿರುವುದರಿಂದ ನಿನಗಿನ್ನು ಗಾಯತ್ರಿ ಮಂತ್ರದ ಉಪಾಸನೆ ಅಗತ್ಯವಿಲ್ಲವೆಂದು ಅರುಣಾಸುರನಿಗೆ ಹೇಳಿಸುತ್ತಾಳೆ. ಅರುಣಾಸುರ ಗಾಯತ್ರಿ ಉಪಾಸನೆ ಕೈಬಿಡುತ್ತಾನೆ. ನಂತರ ದೇವಿಯು ಮೋಹಿನಿ ರೂಪವನ್ನು ತಾಳಿ ಅರುಣಾಸುರನ ಉದ್ಯಾನದಲ್ಲಿ ಸುತ್ತಾಡಲಾರಂಭಿಸಿದಳು. ಇವಳ ಬಗ್ಗೆ ಕೇಳಿ ತಿಳಿದು ಅಲ್ಲಿಗೆ ಬಂದ ಅರುಣಾಸುರ, ತನ್ನ ಒಡೆಯರಾದ ಶುಂಭ ನಿಶುಂಭರನ್ನು ಕೊಂದವಳು ಅವಳೇ ಎಂದು ತಿಳಿದು ಆಕೆಯ ಮೇಲೆ ದಾಳಿ ಮಾಡಿದ. ದೇವಿಯು ಒಂದು ದೊಡ್ಡದಾದ ದುಂಬಿಯ ರೂಪ ತಾಳಿ ಅರುಣಾಸುರನನ್ನು ಕೊಂದು ಹಾಕಿದಳು.

ಇಂದ್ರಜಿತು ಸಾಮಾನ್ಯನಲ್ಲ! ಅವನನ್ನು ಕೊಲ್ಲೋಕೆ ಲಕ್ಷ್ಮಣ ಏನು ಮಾಡಿದ್ದ ಗೊತ್ತಾ?

ನಂತರ ಜಾಬಾಲಿ ಮಹರ್ಷಿಗಳು ದೇವಿಗೆ ಎಳನೀರಿನಿಂದ ಅಭಿಷೇಕ ಮಾಡಿ, ಆಕೆಯನ್ನು ಶಾಂತಳಾಗಲು ಬೇಡಿಕೊಂಡರು. ದೇವಿಯು ಶಾಂತಳಾಗಿ, ಅಲ್ಲೇ ಹರಿಯುತ್ತಿದ್ದ ನಂದಿನಿ ನದಿಯ ಮಧ್ಯಭಾಗದಲ್ಲಿ ಲಿಂಗರೂಪದಲ್ಲಿ ನೆಲೆಸಿದಳು. ಭ್ರಮರ ರೂಪದಲ್ಲಿ ಅವತಾರ ತಾಳಿದ್ದರಿಂದ ಭ್ರಮರಾಂಬಿಕೆ ಎಂಬ ಹೆಸರನ್ನೂ ಹೊಂದಿದಳು. ಈಕೆಯ ಆಶೀರ್ವಾದದದಿಂದ ನಂದಿನಿ ಶಾಪಮುಕ್ತಳಾದಳು. ಇಂದಿಗೂ ನಂದಿನಿ ನದಿಯ ನಡುವೆ, ಪ್ರಶಾಂತವಾದ ಹಸಿರಿನ ಪರಿಸರದ ನಡುವೆ ನೆಲೆಸಿರುವ ಭ್ರಮರಾಂಬಿಕೆ ಭಕ್ತರ ಕಷ್ಟಗಳ ನೀಗಿ, ವರವನ್ನು ಪ್ರಸಾದಿಸುವ ತಾಯಿ ಎನಿಸಿದ್ದಾಳೆ.