Asianet Suvarna News Asianet Suvarna News

ಭಗ್ನಗೊಂಡ ದೇವರ ಫೋಟೋ ಮರದ ಬುಡದಲ್ಲಿಡೋದು ಸರೀನಾ?

ಭಗ್ನಗೊಂಡ ದೇವರ ಫೋಟೋಗಳಿಗೆ ಗೌರವಾನ್ವಿತ ವಿದಾಯ ಹೇಳಿ.. ಉಡುಪಿಯ ಛಾಯಾಗ್ರಾಹಕರಿಂದ 'ಛಾಯಾ ಧರ್ಮ ಜಾಗೃತಿ' ವಿಶಿಷ್ಟ ಅಭಿಯಾನಕ್ಕೆ ಚಾಲನೆ

Dispose idols photos of deities in a dignified manner says Udupi Photographers skr
Author
First Published Oct 22, 2022, 1:59 PM IST | Last Updated Oct 22, 2022, 1:59 PM IST

ಶಶಿಧರ್ ಮಾಸ್ತಿಬೈಲು, ಉಡುಪಿ
ನಮಗೆ ಕಷ್ಟ ಬಂದಾಗ ಸ್ಮರಿಸಿ ಪೂಜಿಸಿ ಆರಾಧಿಸುವ ದೇವರ ಮೂರ್ತಿಯನ್ನು , ಅವುಗಳು ಭಗ್ನಗೊಂಡಾಗ ಯಾವುದಾದರೂ ಮರದ ಬುಡದಲ್ಲಿ ಇಟ್ಟು ಬಿಡುವುದು ಸಾಮಾನ್ಯ . ಆದರೆ ಎಲ್ಲೆಂದರಲ್ಲಿ ಮರದ ಬುಡದಲ್ಲಿ ಎಸೆದು ಹೋಗುವ ಇಂತಹ ಫ್ರೇಂ ಫೊಟೋಗಳು ಅನಾಥವಾಗಿ ಬಿದ್ದಿರುವುದರಿಂದ ಜನರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುವುದೇ ಹೆಚ್ಚು . ಹಾಗಾದರೆ ಭಗ್ನಗೊಂಡ ಮೂರ್ತಿ, ಫೋಟೋ ಫ್ರೇಮ್ ಗಳನ್ನು ಏನು ಮಾಡಬೇಕು? ಉಡುಪಿಯ ಛಾಯಾಗ್ರಾಹಕರು ಈ ಬಗ್ಗೆ ವಿಶಿಷ್ಟ ಅಭಿಯಾನ ಒಂದನ್ನು ಆರಂಭಿಸಿದ್ದಾರೆ.

ಮನೆ ಮಂದಿರಗಳನ್ನು ನಿರ್ಮಿಸುವಾಗ ಇಷ್ಟಪಟ್ಟು ಹಾಕಿದ ನಮ್ಮ‌ನಂಬಿಕೆಯ ದೇವರ ಛಾಯಾ ಚಿತ್ರ ಮುಂತಾದ ಹತ್ತು ಹಲವು ಧಾರ್ಮಿಕ ಭಾವನೆಗಳುಳ್ಳ ಮೂರ್ತಿಗಳನ್ನು  ತಮ್ಮ ಗೃಹಗಳನ್ನು ನವೀಕರಿಸುವ ಸಂದರ್ಭದಲ್ಲಿ ಇಲ್ಲವೇ ಪೂಜಿಸುತ್ತಿದ್ದ ಮೂರ್ತಿಗಳ ಕೈ ಕಾಲುಗಳು ಭಗ್ನಗೊಂಡಾಗ ದಾರಿ ಬದಿ ಇಲ್ಲವೇ ಯಾವುದೇ ಮರದ ಬದಿ ಎಸೆಯಲಾಗುತ್ತೆ. ಇವುಗಳನ್ನು  ಸೂಕ್ತ ಸ್ಥಳಗಳಲ್ಲಿ, ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವುದು ಮುಖ್ಯ.

ಭಗ್ನಗೊಂಡ ಮೂರ್ತಿಗಳ ನಿರ್ವಹಣೆ ಧರ್ಮ ಜಾಗೃತಿ ಮಾತ್ರವಲ್ಲ, ಕರ್ತವ್ಯ ಕೂಡಾ ಎಂದು  ಉಡುಪಿಯ ಸೌತ್ ಕೆನರಾ ಫೋಟೋಗ್ರಾಫರ್ಸ್ ಎಸೋಸಿಯೇಷನ್ ಹೇಳಿದೆ. ಈ ಸಂಘಟನೆಯ  ಉಡುಪಿ ವಲಯ ಮತ್ತು ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ, ಉಡುಪಿ ಜಿಲ್ಲಾ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಸಂಯುಕ್ತವಾಗಿ 'ಛಾಯಾ ಧರ್ಮ ಜಾಗೃತಿ' ಎಂಬ ವಿನೂತನ ಪರಿಕಲ್ಪನೆಯ ಕಾರ್ಯಕ್ರಮ ನಡೆಸಿದ್ದಾರೆ.

ನಗರದ ಪ್ರಮುಖ ಸ್ಥಳಗಳಲ್ಲಿರುವ ಬೃಹತ್ ಗಾತ್ರದ ಮರದ ಬುಡಗಳಲ್ಲಿ ರಾಶಿ ಹಾಕಿದ್ದ ಈ ರೀತಿಯ ಭಗ್ನಗೊಂಡ ಫೋಟೋ ಫ್ರೇಮ್ ಗಳನ್ನು ಛಾಯಾಗ್ರಾಹಕರೆಲ್ಲಾ ಸೇರಿ ತೆರವುಗೊಳಿಸಿದ್ದಾರೆ. ಶ್ರಮದಾನದ ರೀತಿಯಲ್ಲಿ ಈ ಅಭಿಯಾನ ನಡೆಸಲಾಗುತ್ತಿದ್ದು, ಸಂಗ್ರಹಿಸಲಾದ ಫ್ರೇಮ್ ಗಳನ್ನು ಫೋಟೋಗಳಿಂದ ಪ್ರತ್ಯೇಕಗೊಳಿಸಿ ಸೂಕ್ತ ವಿಲೇವಾರಿ ಮಾಡಲಾಗುತ್ತಿದೆ.

ಸೂರ್ಯ ಗ್ರಹಣ; ವಿಜ್ಞಾನ ಏನು ಹೇಳುತ್ತದೆ? ಗ್ರಹಣ ನೋಡೋದು ಹೇಗೆ?

ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ನಗರಸಭಾ ಸದಸ್ಯ ವಿಜಯ್ ಕೊಡವರು,  ತಮ್ಮ ವೃತ್ತಿಯನ್ನು ಪ್ರೀತಿಸಿ ಗೌರವಿಸುತ್ತಿರುವ ಛಾಯಾಗ್ರಾಹಕರು, ದೇವರ ಸ್ವರೂಪದಲ್ಲಿ ಪೂಜಿಸಲ್ಪಟ್ಟ ಚಿತ್ರಗಳನ್ನು ವಿಂಗಡಿಸಿ, ಗೌರವಾನ್ವಿತ ರೀತಿಯಲ್ಲಿ ವಿಲೇವಾರಿ  ಮಾಡಿರುವುದನ್ನು ಶ್ಲಾಘಿಸಿದರು.

ದೇವರ ತ್ಯಾಜ್ಯ ಫೋಟೊ ಸಮರ್ಪಕ ನಿರ್ವಹಣೆಯ ಧರ್ಮ ಜಾಗೃತಿ ಅಭಿಯಾನಕ್ಕೆ ಕಿನ್ನಿಮೂಲ್ಕಿ ವಾರ್ಡ್ ನಲ್ಲಿ ಹಿರಿಯ ಪತ್ರಕರ್ತ ಕಿರಣ್ ಮಂಜನಬೈಲು ಬಿತ್ತಿ ಚಿತ್ರ ಬಿಡುಗಡೆಗೊಳಿಸಿ ಚಾಲನೆ‌ ನೀಡಿದರು.

ಅಶ್ವತ್ಥ ವೃಕ್ಷ ಬುಡವೂ ಸೇರಿದಂತೆ ವಿವಿಧೆಡೆ ಎಸೆದ ದೇವರ ತ್ಯಾಜ್ಯ ಫೊಟೊಗಳನ್ನು ಆಯ್ದು, ಅದರ ಫ್ರೇಮ್ ಮತ್ತು ಗ್ಲಾಸ್ (ಗಾಜು)ನ್ನು ಪ್ರತ್ಯೇಕಿಸಿ ಸಮರ್ಪಕವಾಗಿ ವಿಲೇವಾರಿ ಮಾಡುವ ಅಸೋಸಿಯೇಶನ್ ಕಾರ್ಯ ಶ್ಲಾಘನೀಯ ಮತ್ತು ಮಾದರಿ. ನೈಸರ್ಗಿಕವಾಗಿ  ಗರಿಷ್ಠ  ಪ್ರಮಾಣದಲ್ಲಿ ಆಮ್ಲಜನಕ ಪೂರೈಸುವ ಅಶ್ವತ್ಥವೃಕ್ಷಗಳ ರಕ್ಷಣೆಯ ಜೊತೆಗೆ ದೇವರ ತ್ಯಾಜ್ಯ ಫೊಟೊಗಳನ್ನು ಎಲ್ಲೆಂದರಲ್ಲಿ ಎಸೆಯುವುದನ್ನು ತಡೆಯುವಲ್ಲಿ ಸಾಮಾಜಿಕ ಜಾಗೃತಿ ಕಾರ್ಯಕ್ರಮ ಔಚಿತ್ಯಪೂರ್ಣ ಮತ್ತು ಪ್ರಸ್ತುತ ಎಂದರು.

ಈ ಬಗ್ಗೆ ಮಾಹಿತಿ ಮತ್ತು ಅಭಿಯಾನಕ್ಕಾಗಿ ಈಗಾಗಲೇ ಕೆಲವು ಸ್ಥಳವನ್ನು ಗುರುತಿಸಲಾಗಿದೆ. ರಸ್ತೆ ಬದಿ ಇರುವ ಎಲ್ಲ ದೇವರ ಫೋಟೋಗಳನ್ನು ವ್ಯವಸ್ಥಿತವಾಗಿ ತೆರವು ಗೊಳಿಸಿ ಈ ಬಗ್ಗೆ ಮಾಹಿತಿ ಇರುವ ಬೋರ್ಡ್ ಅಳವಡಿಸಲಾಗಿದೆ. ಪ್ರತಿವಾರ ನಿರಂತರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎರಡು ದಿನದಲ್ಲಿ ಸುಮಾರು 20 ಕಟ್ಟೆಯಲ್ಲಿ ಇರಿಸಿದ್ದ ಫೋಟೋಗಳನ್ನು ತೆರವು ಗೊಳಿಸಲಾಗಿದೆ.ಈ ಮೂಲಕ ಕಟ್ಟೆಯನ್ನು ಶುಚಿಗೊಳಿಸಲಾಗಿದೆ. 

ಈ 5 ರಾಶಿಯವರಿಗೆ ಶನಿ ಮಾರ್ಗಿಯಿಂದ ಆರ್ಥಿಕ ಆಘಾತ, ಎಚ್ಚರದಿಂದಿರಿ!

ಫೋಟೋ ಫ್ರೇಮ್ ನಿಂದ ಚಿತ್ರಗಳನ್ನು ಪ್ರತ್ಯೇಕಗೊಳಿಸಿ ಮನೆಯ ಆವರಣದ ಶುಚಿಯಾದ ಸ್ಥಳದಲ್ಲಿ ಮಣ್ಣಿನಲ್ಲಿ ಹೂತು, ವಿಲೇವಾರಿ ಮಾಡಲು ಜನರನ್ನು ಈ ತಂಡ ಪ್ರೇರೇಪಿಸುತ್ತಿದೆ.

ಈ ಸಂದರ್ಭದಲ್ಲಿ ವಾಮನ ಪಡುಕೆರೆ ಸಂತೋಷ್ ಪಂದುಬೆಟ್ಟು, ಪ್ರವೀಣ್ ಕೊರೆಯ, ಸುಕೇಶ್ ಅಮೀನ್, ಸಂತೋಷ್ ಕೊರಂಗ್ರಪಾಡಿ, ಪೂರ್ಣಿಮಾಜನಾರ್ದನ್, ಶಿವಪ್ರಸಾದ್ ಬೆಳ್ಕಳೆ, ಸುಶಾಂತ್ ಕೆರೆಮಠ,  ಪ್ರಜ್ವಲ್ ಕಟಪಾಡಿ, ಪ್ರಕಾಶ್ ಕೊಡಂಕೂರು, ಕೆ. ವಾಸುದೇವ ರಾವ್, ನಿದೇಶ್ ಕುಮಾರ್, ಸಿದ್ಧಬಸಯ್ಯ ಸ್ವಾಮಿ ಚಿಕ್ಕ ಮಠ ಉಪಸ್ಥಿತರಿದ್ದರು. ಅಧ್ಯಕ್ಷ ಜನಾರ್ದನ್  ಕೊಡವೂರು ಸ್ವಾಗತಿಸಿದರು. ಛಾಯಾಧರ್ಮ ಜಾಗೃತಿಯ ಸಂಚಾಲಕ ಸುರಭಿ ರತನ್ ಧನ್ಯವಾದ ಸಮರ್ಪಿಸಿದರು.

Latest Videos
Follow Us:
Download App:
  • android
  • ios