Asianet Suvarna News Asianet Suvarna News

ಸೂರ್ಯ ಗ್ರಹಣ; ವಿಜ್ಞಾನ ಏನು ಹೇಳುತ್ತದೆ? ಗ್ರಹಣ ನೋಡೋದು ಹೇಗೆ?

ಆಶ್ವಯುಜ ಮಾಸದ ಅಂತ್ಯದಲ್ಲಿ ಬರುವ ಅಮಾವಾಸ್ಯೆ, ಈ ವರ್ಷ ದೀಪಾವಳಿಯೊಂದಿಗೆ, ಅಕ್ಟೋಬರ್ 25ರಂದು ವರ್ಷದ 2ನೇ ಸೂರ್ಯ ಗ್ರಹಣವನ್ನು ತರುತ್ತಿದೆ. ಈ ಖಗೋಳ ವಿಸ್ಮಯವನ್ನು ಕಣ್ಣಾರೆ ನೋಡುವ ಮೂಲಕ ಅನುಭವಿಸಬಹುದು ಎಂದು ಖ್ಯಾತ ಖಗೋಳ ಶಾಸ್ತ್ರಜ್ಞ ಡಾ.ಎ.ಪಿ .ಭಟ್ ಹೇಳಿದ್ದಾರೆ.

what is the science behind Solar Eclipse how to watch skr
Author
First Published Oct 22, 2022, 1:29 PM IST

ಡಾ.ಎ.ಪಿ .ಭಟ್, ಖ್ಯಾತ ಖಗೋಳ ಶಾಸ್ತ್ರಜ್ಞ, ಉಡುಪಿ

ಚಂದ್ರನು, ಸೂರ್ಯ ಮತ್ತು ಭೂಮಿಯ ನಡುವಿನಲ್ಲಿ ಬರುವ ಕಾಲವನ್ನು ಸೂರ್ಯ ಗ್ರಹಣ ಎಂದು ಕರೆಯುತ್ತೇವೆ.  
ಪ್ರತಿ ಅಮಾವಾಸ್ಯೆಯ ದಿನ ಚಂದ್ರನು ಭೂಮಿ ಮತ್ತು ಸೂರ್ಯನ ಮಧ್ಯ ಹಾದು ಹೋಗುವಾಗ, ಈ ಮೂರು ಆಕಾಶಕಾಯಗಳು ಒಂದು ಸರಳರೇಖೆಯಲ್ಲಿರುವುದಿಲ್ಲ. ಚಂದ್ರನ ಭೂಮಿಯ ಸುತ್ತ ಚಲನೆಯ ಸಮತಲ ಹಾಗೂ, ಸೂರ್ಯನ ಸಮತಲ (ಭೂಮಿಯ ದ್ರಿಷ್ಟಿಯಿಂದ) ಗಳ ನಡುವಿನಲ್ಲಿ 5 ಡಿಗ್ರಿ ಗಳ ಅಂತರವಿರುವುದರಿಂದ ಪ್ರತಿ ಅಮಾವಾಸ್ಯೆಗೆ ಗ್ರಹಣ ಸಂಭವಿಸುವುದಿಲ್ಲ. ಚಂದ್ರನು ರಾಹು ಅಥವಾ ಕೇತು ಬಿಂದುವಿನಲ್ಲಿ ಬಂದಾಗ ಮಾತ್ರ, ಸೂರ್ಯ ಗ್ರಹಣ ಸಂಭವಿಸುವುದು. 

ಚಂದ್ರನು ಸೂರ್ಯನಿಗೆ ಅಡ್ಡ ಬಂದು, ಸೂರ್ಯನ ಒಂದು ಭಾಗವು ಮಾತ್ರ ಗೋಚರಿಸಿದರೆ, ಇದು ಪಾರ್ಶ್ವ ಸೂರ್ಯಗ್ರಹಣ(Partial Solar Eclipse) ಆಗಿರುತ್ತದೆ. ಅದೇ ರೀತಿ, ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಆವರಿಸಿದರೆ, ಅದು ಖಗ್ರಾಸ  ಸೂರ್ಯಗ್ರಹಣ ಎಂದು ಕರೆಯುತ್ತೇವೆ. 

ಅಕ್ಟೋಬರ್ 25ರ ಸೂರ್ಯಗ್ರಹಣವು ಗೋಚರಿಸುವ ಎಲ್ಲ ಪ್ರದೇಶಗಳಲ್ಲಿ ಪಾರ್ಶ್ವ ಸೂರ್ಯಗ್ರಹಣವಾಗಿರುತ್ತದೆ. 
ಸಾಮಾನ್ಯವಾಗಿ ಪ್ರತಿ ಸೂರ್ಯಗ್ರಹಣದ ಮೊದಲು ಅಥವಾ ನಂತರ ಬರುವ ಹುಣ್ಣಿಮೆಯ ದಿನ ಚಂದ್ರ ಗ್ರಹಣ ಸಂಭವಿಸುತ್ತದೆ. ಈ ಬಾರಿ ಕೂಡ ನವೆಂಬರ್ 8 ರಂದು ಚಂದ್ರ ಗ್ರಹಣ (ಚಂದ್ರ ಮತ್ತು ಸೂರ್ಯನ ಮಧ್ಯ ಭೂಮಿ ಬರುವ ಸಂದರ್ಭ) ನೋಡಬಹುದು ಎಂದು ಡಾ. ಭಟ್ ತಿಳಿಸಿದ್ದಾರೆ.

ಈ 5 ರಾಶಿಯವರಿಗೆ ಶನಿ ಮಾರ್ಗಿಯಿಂದ ಆರ್ಥಿಕ ಆಘಾತ, ಎಚ್ಚರದಿಂದಿರಿ!

ಯಾವ ಪ್ರದೇಶಗಳಲ್ಲಿ ಗೋಚರ?
ಈ ಗ್ರಹಣವು ಭಾರತದ ಎಲ್ಲಾ ಪ್ರದೇಶಗಳಲ್ಲಿ ಹಾಗೂ ಯುರೋಪ್ ಮತ್ತು  ಏಷಿಯಾದ ಮಧ್ಯ ಭಾಗದ ವಿವಿಧ ದೇಶಗಳಲ್ಲಿ ಗೋಚರಿಸುತ್ತದೆ. 
ರಷ್ಯಾದಲ್ಲಿ ಈ ಗ್ರಹಣವು ಗೋಚರಿಸುವಾಗ ಚಂದ್ರನು ಸೂರ್ಯನನ್ನು 82 %ರಷ್ಟು ಆವರಿಸುತ್ತಾನೆ. ಭಾರತದಲ್ಲಿ ಈ ಗ್ರಹಣವು ಲೇಹ್ ಇಂದ ಕಂಡಾಗ ಸೂರ್ಯನು 54%ರಷ್ಟು ಹಾಗೂ ದೆಹಲಿಯಿಂದ 44%ರಷ್ಟು ಆವರಿಸಿರುತ್ತಾನೆ. 

ಕರ್ನಾಟಕದಲ್ಲಿ ಗೋಚರ?
ಕರ್ನಾಟಕದ ಎಲ್ಲ ಭಾಗಗಳಿಂದ ಈ ಗ್ರಹಣವನ್ನು ನೋಡಬಹುದು. ರಾಜ್ಯದ ನಾನಾ ಸ್ಥಳಗಳಲ್ಲಿ ಈ ಗ್ರಹಣವು ಸಂಜೆ 5 ರಿಂದ ಸುಮಾರು 6 ಗಂಟೆಗೆ ನಡೆಯಲಿರುವ ಸೂರ್ಯಾಸ್ತದವರೆಗೆ ಗೋಚರಿಸುತ್ತದೆ. ಪಶ್ಚಿಮ ಮತ್ತು ನೈಋತ್ಯ ದ ಕಡೆ ಕ್ಷಿತಿಜವು ಗ್ರಹಣ ವೀಕ್ಷಿಸಲು ಉತ್ತಮ ಸ್ಥಳವಾಗಿರುತ್ತದೆ. 
ಬೆಂಗಳೂರಿನಲ್ಲಿ ಈ ಗ್ರಹಣದಿಂದ ಸೂರ್ಯನ ಆವರಣೆ 10%ರಷ್ಟು ಗೋಚರಿಸುತ್ತದೆ. 

ಅದೇ ಸುಂದರ ಪ್ರಾಕೃತಿಕ ದೃಶ್ಯದೊಂದಿಗೆ ಕಡಲ ತೀರಕ್ಕೆ ಸಮೀಪವಾಗಿರುವ ಉಡುಪಿಯು ಈ ಗ್ರಹಣ ವೀಕ್ಷಿಸಲು ಉತ್ತಮ ಪ್ರದೇಶ. ಉಡುಪಿಯಲ್ಲಿ ಈ ಗ್ರಹಣವು ಸಂಜೆ 5:8ಕ್ಕೆ ಪ್ರಾರಂಭಗೊಂಡು ಸುಮಾರು 5:50ಕ್ಕೆ ಗರಿಷ್ಠ  ಗ್ರಹಣ ಗೋಚರಿಸುತ್ತದೆ. 

ಸೂರ್ಯಗ್ರಹಣ 2022: ಯಾವ ರಾಶಿಗೆ ಲಾಭ, ಯಾವ ರಾಶಿಗೆ ಸಂಕಷ್ಟ?

ಈ ಗ್ರಹಣದ ವಿಶೇಷತೆ ಏನು?
ಉಡುಪಿಯಲ್ಲಿ ಈ ಗ್ರಹಣವು ಮುಗಿಯುವ ಸಮಯ 06:28 ಆದರೆ, ಸೂರ್ಯಾಸ್ತವು 06:06ಕ್ಕೆ ಆಗುವುದು. ಹಾಗಾಗಿ, 25 ಅಕ್ಟೋಬರ್ ರಂದು ಅಸ್ತವಾಗುವ ಸೂರ್ಯನು ಗ್ರಹಣ  ಹಿಡಿದ ಸೂರ್ಯನಾಗಿರುತ್ತಾನೆ. ಇದು ಒಂದು ಅಪರೂಪದ ದೃಶ್ಯ.

ನೋಡುವುದು ಹೇಗೆ?
ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘವು (PAAC) ಪ್ರತಿ ಗ್ರಹಣದಂತೆಯೇ ಈ ಗ್ರಹಣವನ್ನು ಕೂಡ ವೀಕ್ಷಿಸಲು ಶಾಲಾ ವಿದ್ಯಾರ್ಥಿಗಳಿಗೆ ಹಾಗು ಜನಸಾಮಾನ್ಯರಿಗೆ ಮಲ್ಪೆ ಅಭಿವೃದ್ಧಿ ಸಮಿತಿಯ ಸಹಯೋಗದೊಂದಿಗೆ ಅವಕಾಶ ಒದಗಿಸುತ್ತಿದೆ.  
ಆಸಕ್ತ ಶಾಲಾ ಕಾಲೇಜುಗಳು ಹಾಗು ಅನ್ಯರು, ಈ ಗ್ರಹಣವನ್ನು ನಮ್ಮೊಂದಿಗೆ ಮಲ್ಪೆ ಬೀಚ್ ನಲ್ಲಿ ಸಂಜೆ ೫ರಿಂದ ಸೂರ್ಯಾಸ್ತದವರೆಗೆ ನೋಡಬಹುದು. 
ಈ ಸುಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿಯ ಜಿಲ್ಲಾಧಿಕಾರಿಗಳಾದ ಶ್ರೀಯುತ ಕೂರ್ಮರಾವ್, ಜಿಲ್ಲಾ ಶಾಸಕರಾದ ಶ್ರೀಯುತ ರಘಪತಿ ಭಟ್ ಹಾಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ನ ಅಧ್ಯಕ್ಷರಾದ  ಶ್ರೀಯುತ ಯಶ್ಪಾಲ್ ಸುವರ್ಣರವರು ಉಪಸ್ಥಿತರಿರುತ್ತಾರೆ. ಗೌರವಾನ್ವಿತ ಅತಿಥಿಗಳಾಗಿ ಡಾ . ಎ . ಪಿ . ಭಟ್ , ಖಗೋಳ ತಜ್ಞರು ಹಾಗೂ ನಿವೃತ್ತ ಪ್ರಾಂಶುಪಾಲರು, ಪೂರ್ಣಪ್ರಜ್ಞ ಕಾಲೇಜು, ಶ್ರೀಯುತ ಸುದೇಶ್ ಶೆಟ್ಟಿ, ಅಧ್ಯಕ್ಷರು, ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ಇವರು ಉಪಸ್ಥಿತರಿರುತ್ತಾರೆ. ಹಾಗೂ ಸಂಘವು ಇವರೊಂದಿಗೆ, ಓರ್ವ ವಿಜ್ಞಾನಿಯನ್ನು  ಮುಖ್ಯ ಅತಿಥಿಯಾಗಿ ಆಮಂತ್ರಿಸಲು  ನಿರ್ಧರಿಸಿರುತ್ತದೆ.

ಸೂರ್ಯಗ್ರಹಣ: ಕರಾವಳಿ ದೇವಳದಲ್ಲಿ ದೇವರ ದರ್ಶನ, ಸೇವೆಗಳಲ್ಲಿ ವ್ಯತ್ಯಯ

ಎಚ್ಚರಿಕೆ!
ಯಾವುದೇ ಸೂರ್ಯಗ್ರಹಣವನ್ನು ಬರಿಗಣ್ಣಿನಿಂದ ನೋಡಬಾರದು. ಟೆಲಿಸ್ಕೋಪ್, ದುರ್ಬೀನ್, ಕ್ಯಾಮೆರಾ ಗಳಿಂದ ಕೂಡ ಸೂರ್ಯ ಗ್ರಹಣ ವನ್ನು ನೋಡುವುದು ಹಾನಿಕಾರಕ. ಸೂರ್ಯಗ್ರಹಣವನ್ನು ಯಾವಾಗಲೂ ವಿಶೇಷವಾದ ಗ್ರಹಣ-ವೀಕ್ಷಣಾ ಕನ್ನಡಕಗಳಿಂದ ಮಾತ್ರ ನೋಡಬೇಕು. ಪಿನ್-ಹೋಲ್ ಗಳ ಮೂಲಕ ಸೂರ್ಯನ ಪ್ರಕ್ಷೇಪಣ ವನ್ನು ಯಾವುದೇ ಹಾನಿಯಿಲ್ಲದೆ ನೋಡಬಹುದು. ಎಕ್ಸ್-ರೇ ಹಾಳೆ ಗಳಿಂದ ಕೂಡ ಗ್ರಹಣವನ್ನು ನೋಡಬಾರದು. 
ನಮ್ಮೊಂದಿಗೆ ಉಸಸ್ಥಿತರಿರಲು ಆಗದಿದ್ದಲ್ಲಿ  ಸಂಘದ ಯೂ-ಟ್ಯೂಬ್ ಚಾನೆಲ್ ಮೂಲಕ  ನೇರ ಪ್ರಸಾರದಲ್ಲಿ ವೀಕ್ಷಿಸಬಹುದು. 
ಆದರೆ, ಅನನ್ಯವಾದ ಅಪರೂಪದ ಈ ಗ್ರಹಣವನ್ನು ವೀಕ್ಷಿಸಲು ಪೂರ್ಣಪ್ರಜ್ಞ ಹಳೆ ವಿದ್ಯಾರ್ಥಿ ಸಂಘದ ಸಹಾಯದಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗು ಉಪಸ್ಥಿತರಿರುವವರಿಗೆ ಅವಕಾಶ ಒದಗಿಸುತ್ತಿದೆ, ಆಸಕ್ತರು ಬಂದು ಗ್ರಹಣವನ್ನು ನಮ್ಮೊಂದಿಗೆ ಸುರಕ್ಷಿತವಾಗಿ ವೀಕ್ಷಿಸ ಬೇಕು ಎಂದು ಕಲ್ಪಿಸಿರುತ್ತೇವೆ ಎಂದು ಡಾ. ಎ.ಪಿ. ಭಟ್ ಹೇಳಿದ್ದಾರೆ.

Follow Us:
Download App:
  • android
  • ios