Dharmasthala Laksha Deepotsava: ರಾಜ್ಯಮಟ್ಟದ ವಸ್ತುಪ್ರದರ್ಶನ ಉದ್ಘಾಟನೆ
ಧರ್ಮಸ್ಥಳದಲ್ಲಿ ಪೌಢಶಾಲಾ ವಠಾರದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಆಯೋಜಿಸಲಾದ ರಾಜ್ಯಮಟ್ಟದ ವಸ್ತುಪ್ರದರ್ಶನವನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸಿ ಶುಭ ಹಾರೈಸಿದರು. ಅಮೃತವರ್ಷೀಣಿ ಸಭಾ ಭವನದ ಬಳಿ ಸಿರಿ ಮಳಿಗೆಯನ್ನು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಮೊಮ್ಮಗಳು ಕುಮಾರಿ ಮಾನ್ಯ ಉದ್ಘಾಟಿಸಿದರು. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಉಜಿರೆ: ರಾಜ್ಯದ ಪ್ರಸಿದ್ದ ಧಾರ್ಮಿಕ ಪುಣ್ಯ ಕ್ಷೇತ್ರ ಧರ್ಮಸ್ಥಳದಲ್ಲಿ (Dharmasthala) ನಿನ್ನೆಯಿಂದ ಲಕ್ಷ ದೀಪೋತ್ಸವ (Laksha Deepotsava) ಆರಂಭಗೊಂಡಿದೆ. ನವೆಂಬರ್ 23ರ ವರೆಗೆ ಸಂಭ್ರಮ ಮೇಳೈಸಲಿದೆ. ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನದ 90ನೇ ಅಧಿವೇಶನ ಸೇರಿ ಹಲವು ಕಾರ್ಯಕ್ರಮಗಳು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ನಡೆಯಲಿದೆ. ಧರ್ಮಸ್ಥಳದಲ್ಲಿ ಪೌಢಶಾಲಾ ವಠಾರದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಆಯೋಜಿಸಲಾದ ರಾಜ್ಯಮಟ್ಟದ ವಸ್ತುಪ್ರದರ್ಶನವನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸಿ (Inaguration) ಶುಭ ಹಾರೈಸಿದರು. ಬಿದಿರಿನ ತುಂಡಿಗೆ ಬಟ್ಟೆ ಸುತ್ತಿದ ದೀಪ (ತುಳು: ಕೊಳ್ತುರಿ) ಹಚ್ಚುವ ಮೂಲಕ ಹಾಗೂ ಬಿದಿರಿನಿಂದ ಮಾಡಿದ ಸರಂಗೋಲು (ತುಳು: ತಡಮೆ) ಸರಿಸುವ ಮೂಲಕ ತುಳುನಾಡಿನ ಶೈಲಿಯಲ್ಲಿ ವಸ್ತುಪ್ರದರ್ಶನ (Exhibition) ಉದ್ಘಾಟಿಸಲಾಯಿತು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಯೋಗಗಳು ಹಾಗೂ ಆದ ಪರಿವರ್ತನೆ, ವಿವಿಧ ಮಳಿಗೆಗಳು, ಕೃಷಿ, ವಾಣಿಜ್ಯ, ಬ್ಯಾಂಕ್‌ಗಳು, ವ್ಯಾಪಾರಿ ಮಳಿಗೆಗಳಿದ್ದು ಎಲ್ಲರೂ ಕುಟುಂಬ ಸಮೇತರಾಗಿ ಲಕ್ಷದೀಪೋತ್ಸವಕ್ಕೆ ಬಂದು ಮಾಹಿತಿ, ಮನೋರಂಜನೆ ಹಾಗೂ ವಿಶೇಷ ಜ್ಞಾನಸಂಗ್ರಹ ಮಾಡಿಕೊಳ್ಳಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು. ಲಕ್ಷದೀಪೋತ್ಸವದಿಂದ ಬದುಕಿನಲ್ಲಿ ಹೊಸಬೆಳಕಿನೊಂದಿಗೆ ನವ ಚೈತನ್ಯ, ಉತ್ಸಾಹ ಮೂಡಿ ಬರಲಿ ಎಂದು ಅವರು ಹಾರೈಸಿದರು.
ನ.19 ರಿಂದ ನ.23ರವರೆಗೆ ಧರ್ಮಸ್ಥಳ ಲಕ್ಷದೀಪೋತ್ಸವ, ಸರ್ವಧರ್ಮ ಸಮ್ಮೇಳನಕ್ಕೆ ಕೇಂದ್ರ ಸಚಿವೆ ಇರಾನಿ
ಸಿರಿ ಮಳಿಗೆ ಉದ್ಘಾಟನೆ: ಅಮೃತವರ್ಷೀಣಿ ಸಭಾ ಭವನದ ಬಳಿ ಸಿರಿ ಮಳಿಗೆಯನ್ನು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಮೊಮ್ಮಗಳು ಕುಮಾರಿ ಮಾನ್ಯ ಉದ್ಘಾಟಿಸಿದರು. ಮಹಿಳೆಯರ (Women) ಸ್ವಾವಲಂಬಿ ಜೀವನಕ್ಕೆ ಸಿರಿ ಸಂಸ್ಥೆ ಪ್ರೇರಕವಾಗಿದ್ದು
ಮಹಿಳೆಯರೆ ತಯಾರಿಸಿದ ಉತ್ಪನ್ನಗಳನ್ನು ಸಿರಿಯಲ್ಲಿ ಮಾರಾಟ ಮಾಡುತ್ತಿದ್ದು ರಾಜ್ಯದಲ್ಲಿ 13 ಕಡೆ ಮಾರಾಟ ಮಳಿಗೆಗಳಿದ್ದು ಇದು 14 ನೆ ಮಳಿಗೆಯಾಗಿದೆ. ಗ್ರಾಹಕರು (Customers) ಸಿರಿ ಉತ್ಪನ್ನಗಳನ್ನು ಖರೀದಿಸಿ ಸಹಕರಿಸುವಂತೆ ಹೆಗ್ಗಡೆಯವರು ಕೋರಿದರು.
ಹೆಗ್ಗಡೆಯವರ ಮೊಮ್ಮಗಳು ಕುಮಾರಿ ಮಾನ್ಯ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಎಸ್. ಸತೀಶ್ಚಂದ್ರ, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್, ಸಿ.ಇ.ಒ. ಅನಿಲ್ ಕುಮಾರ್, ಸಿರಿ ಸಂಸ್ಥೆಯ ಆಡಳಿತ ನಿರ್ದೇಶಕ ಕೆ.ಎನ್. ಜನಾರ್ದನ್ ಮೊದಲಾದವರು ಉಪಸ್ಥಿತರಿದ್ದರು.
Dharmasthala Laksha Deepotsava: ಸಮೀಪದಲ್ಲಿರೋ ಸುಂದರ ತಾಣಗಳಿಗೂ ವಿಸಿಟ್ ಮಾಡಿ
ವಸ್ತುಪ್ರದರ್ಶನ ಇದೇ 24ರ ವರೆಗೆ ಪ್ರತಿದಿನ ಬೆಳಿಗ್ಯೆ 9 ಗಂಟೆಯಿಂದ ರಾತ್ರಿ ಹತ್ತು ಗಂಟೆ ವರೆಗೆ ತೆರೆದಿದ್ದು ಉಚಿತ ಪ್ರವೇಶಾವಕಾಶವಿದೆ (Free entry). ಪ್ರತಿದಿನ ಸಂಜೆ ಮನೋರಂಜನಾ ಕಾರ್ಯಕ್ರಮಗಳಿವೆ. ಧರ್ಮಸ್ಥಳಕ್ಕೆ ಕುಡಿಯುವ ನೀರು ಸರಬರಾಜು ಯೋಜನೆಗೆ ಶಿಲಾನ್ಯಾಸ ನಾಳೆ ನಡೆಯಲಿದೆ. ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಸೋಮವಾರ ಬೆಳಗ್ಯೆ ಹತ್ತು ಗಂಟೆಗೆ ಧರ್ಮಸ್ಥಳದಲ್ಲಿ ಕುಡಿಯುವ ನೀರು (Drinking water) ಸರಬರಾಜು ಕಾಮಗಾರಿಗೆ ಶಿಲಾನ್ಯಾಸ ಮಾಡುವರು.
ಲಕ್ಷದೀಪೋತ್ಸವಕ್ಕೆ ಮೆರಗು ನೀಡಿದ ನೃತ್ಯರೂಪಕ
ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ ಸಮಿತಿಯು, ಶನಿವಾರ ವಸ್ತುಪ್ರದರ್ಶನ ಮಂಟಪದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ರೂಪಕದ ಮೂಲಕ ಪ್ರೇಕ್ಷಕರನ್ನು ಮೂಕವಿಸ್ಮಿತಗೊಳಿಸುವಲ್ಲಿ ಆರಾಧನಾ ನೃತ್ಯ ತಂಡ ಯಶಸ್ವಿಯಾಯಿತು. ಕರ್ನಾಟಕ ಕಲಾ ಪ್ರಶಸ್ತಿ ಪುರಸ್ಕೃತ ವಿದ್ವಾನ್ ನಾಗಭೂಷಣ ಅವರ ತಂಡದಿಂದ ನೃತ್ಯ ರೂಪಕ ಕಾರ್ಯಕ್ರಮ ನಡೆಯಿತು. ವಿದುಷಿ ಹರ್ಷಿತಾ ಸುಧೇಶ್ ನೇತೃತ್ವದ ಒಟ್ಟು 16 ಕಲಾವಿದರ ತಂಡವು, ಪುರಾಣದ ಅನೇಕ ಸನ್ನಿವೇಶಗಳನ್ನು ಭರತನಾಟ್ಯದ ಮೂಲಕ ವಿನೂತನವಾಗಿ ಪ್ರಸ್ತುತ ಪಡಿಸಿದರು.
ನೃತ್ಯಕ್ಕೆ ಹಿನ್ನೆಲೆಯಾಗಿ ಗಾಯನ ಮತ್ತು ನಟ್ವಾಂಗದಲ್ಲಿ, ವಿದ್ವಾನ ನಾಗಭೂಷಣ, ಮೃದಂಗದಲ್ಲಿ ನಾಗರಾಜ, ವಯೋಲಿನ್‌ನಲ್ಲಿ ಹೊಸಳ್
ವೆಂಕಟರಮಣ ಮತ್ತು ಕೊಳಲಿನಲ್ಲಿ ರಾಹುಲ್ ಸಾಥ್ ನೀಡಿದರು. ಶ್ರೀ ಗಣೇಶ ಸ್ತುತಿಯೊಂದಿಗೆ ಪ್ರಾರಂಭಿಸಿ, ಮೋಹನರಾಗದಲ್ಲಿ ನಮ್ಮಮ್ಮ
ಶಾರದೆ, ರೇವತಿ ರಾಗದಲ್ಲಿ ಶಿವಶಂಭೂಲ ನೃತ್ಯ ರೂಪಕ ಸಾದರ ಪಡಿಸಿದರು. ನಾಗಮಾಲಿಕ ರಾಗದ ಸಮುದ್ರ ಮಥನ ಮತ್ತು ಮಧ್ಯಮಾವತಿ ರಾಗದ ಶಿವದರ್ಶನ ರೂಪಕವು ಕಲಾಭಿಮಾನಿಗಳಿಗೆ ಮುದ ನೀಡಿತು. ವಿದುಷಿ ಹರ್ಷಿತಾ ಸುಧೇಶ್‌ರವರ ಏಕವ್ಯಕ್ತಿ ನೃತ್ಯ ರೂಪಕದಲ್ಲಿ ಮೂಡಿಬಂದ ಶ್ರೀಕೃಷ್ಣ ಲೀಲೆಯು ಅವರ ವಿಶೇಷ ಅಭಿನಯ ಮತ್ತು ಹಾವ-ಭಾವಗಳಿಂದ ಕಲಾ ಆರಾಧಕರನ್ನು ಮಂತ್ರಮುಗ್ಧರನ್ನಾಗಿಸಿತು.
ವರದಿ: ಸುಚೇತಾ ಹೆಗ್ಡೆ, ಎಸ್.ಡಿ.ಎಂ, ಉಜಿರೆ
ಚಿತ್ರಗಳು: ಅರ್ಪಿತ್ ಇಚ್ಛೆ, ಶಶಿಧರ್ ಮತ್ತು ಗ್ಲೆನ್ ಮೋನಿಸ್, ಎಸ್.ಡಿ.ಎಂ ಉಜಿರೆ