ನ.19 ರಿಂದ ನ.23ರವರೆಗೆ ಧರ್ಮಸ್ಥಳ ಲಕ್ಷದೀಪೋತ್ಸವ, ಸರ್ವಧರ್ಮ ಸಮ್ಮೇಳನಕ್ಕೆ ಕೇಂದ್ರ ಸಚಿವೆ ಇರಾನಿ
ರಾಜ್ಯದ ಪ್ರಸಿದ್ದ ಧಾರ್ಮಿಕ ಪುಣ್ಯ ಕ್ಷೇತ್ರ ಧರ್ಮಸ್ಥಳದಲ್ಲಿ ನವೆಂಬರ್ 19 ರಿಂದ ನವೆಂಬರ್ 23ರ ವರೆಗೆ ಲಕ್ಷ ದೀಪೋತ್ಸವ ಸಂಭ್ರಮ ಮೇಳೈಸಲಿದ್ದು, ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ನಡೆಯಲಿದೆ. ಇದಕ್ಕೆ ಕೇಂದ್ರ ಸಚಿವೆ ಸ್ಮತಿ ಇರಾನಿ ಬರಲಿದ್ದಾರೆ.

ಬೆಳ್ತಂಗಡಿ (ನ.17): ರಾಜ್ಯದ ಪ್ರಸಿದ್ದ ಧಾರ್ಮಿಕ ಪುಣ್ಯ ಕ್ಷೇತ್ರ ಧರ್ಮಸ್ಥಳದಲ್ಲಿ ನವೆಂಬರ್ 19 ರಿಂದ ನವೆಂಬರ್ 23ರ ವರೆಗೆ ಲಕ್ಷ ದೀಪೋತ್ಸವ ಸಂಭ್ರಮ ಮೇಳೈಸಲಿದ್ದು, ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನದ 90ನೇ ಅಧಿವೇಶನ ಸೇರಿ ಹಲವು ಕಾರ್ಯಕ್ರಮಗಳು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ನಡೆಯಲಿದೆ. ನ.22ರಂದು ಸಂಜೆ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯುವ ಸರ್ವಧರ್ಮ ಸಮ್ಮೇಳನವನ್ನು ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮತಿ ಇರಾನಿ ಉದ್ಘಾಟಿಸಲಿದ್ದಾರೆ. ಶಿವಮೊಗ್ಗದ ನ್ಯಾಯವಾದಿ ಎಂ.ಆರ್. ಸತ್ಯನಾರಾಯಣ ಅಧ್ಯಕ್ಷತೆ ವಹಿಸಲಿದ್ದಾರೆ. ಬಸ್ರಿಕಟ್ಟೆ ಧರ್ಮಗುರು ಫಾ| ಮಾರ್ಸೆಲ್ ಪಿಂಟೋ, ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಸಿಂಪೀರ ಇ ವಾಲೀಕಾರ, ವಿಶ್ರಾಂತ ಮುಖ್ಯೋಪಾಧ್ಯಾಯ ಮತ್ತು ವಾಗ್ಮಿ ಮೂಡುಬಿದಿರೆಯ ಮುನಿರಾಜ ರೆಂಜಾಳ ಉಪನ್ಯಾಸ ನೀಡಲಿದ್ದಾರೆ. ನವೆಂಬರ್ 19ರಂದು ವಸ್ತು ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಉದ್ಘಾಟಿಸಲಿದ್ದಾರೆ.
ನವೆಂಬರ್ 21ರಂದು ಅಮೃತವರ್ಷಿಣಿ ಸಭಾಭವನದಲ್ಲಿ ಲಲಿತಕಲಾಗೋಷ್ಠಿ ನಡೆಯಲಿದೆ. ರಾತ್ರಿ 8.30ರಿಂದ ವಿದುಷಿ ಡಾ. ಜಯಂತಿ ಮತ್ತು ಕುಮರೇಶ್ ಮತ್ತು ತಂಡದವರಿಂದ ಜುಗಲ್ ಬಂದಿ ಕಾರ್ಯಕ್ರಮ ನಡೆಯಲಿದೆ. ನವೆಂಬರ್ 23 ಕ್ಕೆ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಸಂಜೆ 5ಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ಶ್ರೇಷ್ಠ ಚಲನಚಿತ್ರ ನಿರ್ದೇಶಕ ಬೆಂಗಳೂರಿನ ಪಿ.ಶೇಷಾದ್ರಿ ಉದ್ಘಾಟಿಸಲಿದ್ದಾರೆ.
Dharmastala: 19ರಿಂದ ಲಕ್ಷ ದೀಪೋತ್ಸವ ಸಂಭ್ರಮ
ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ರಾಷ್ಟ್ರಪ್ರಶಸ್ತಿ ಪುರಸ್ಕೃತ ವಿದ್ವಾಂಸ ಡಾ. ಎಚ್.ವಿ. ನಾಗರಾಜ ರಾವ್ ಮೈಸೂರು ವಹಿಸಲಿದ್ದಾರೆ. ಬೆಂಗಳೂರಿನ ಸಾಹಿತ್ಯ ಪರಿಚಾರಕ ಮತ್ತು ಸುಶಿಕ್ಷಣ ಸೇವಾಪರ ಸಂಸ್ಥೆಯ ಸ್ಥಾಪಕ ಸತ್ಯೇಶ್ ಎನ್. ಬೆಳ್ಳೂರು, ಪತ್ರಕರ್ತ ರವೀಂದ್ರ ಭಟ್, ಲೇಖಕ ಡಾ. ಗೀತಾ ವಸಂತ ಮೊದಲಾದವರು ಉಪನ್ಯಾಸ ನೀಡಲಿದ್ದಾರೆ. ನವೆಂಬರ್ 24ರಂದು ಸಂಜೆ 6.30 ರಿಂದ ಶ್ರೀ ಚಂದ್ರನಾಥ ಸ್ವಾಮಿಯ ಬಸದಿಯಲ್ಲಿ ಬಾಹುಬಲಿ ಸೇವಾ ಸಮಿತಿ ಶ್ರಾವಕರಿಂದ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜಾ ಕಾರ್ಯಕ್ರಮ ನಡೆಯಲಿದೆ.
Mangaluru: 360 ಕಿ.ಮೀ ನಡೆದು ಗಿರ್ ಕರುವಿನ ಜೊತೆ ಧರ್ಮಸ್ಥಳ ತಲುಪಿದ ಯುವಕ!
ಶ್ರೀಮತ್ ಪುಷ್ಪದಂತ ಭೂತಬಲಿ ವಿರಚಿತ ಷಟ್ಖಂಡಾಗಮಾಧಾರಿತ ಸಿದ್ಧಾಂತ ಚಿಂತಾಮಣಿ-3 ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು, ಜೈನಸಾಹಿತ್ಯ ವಿಶಾರದೆ ವೀಣಾ ರಘುಚಂದ್ರ ಶೆಟ್ಟಿ ಸಮ್ಮಾನ ಕಾರ್ಯಕ್ರಮ ನಡೆಯಲಿದೆ. ಬಳಿಕ ಶ್ರಾವಕ-ಶ್ರಾವಕಿಯರಿಂದ ಜಿನಭಜನ ಕಾರ್ಯಕ್ರಮ ನಡೆಯಲಿದೆ.