ಮಹಾಭಾರತದ (Mahabharata) ಒಂದು ವಿಸ್ಮಯಕಾರಿ ಕಥೆ, ಇಳಾ ಎಂಬ ರಾಜನ/ರಾಣಿಯದು. ಇವನು ಏಕಕಾಲಕ್ಕೆ ಹೆಣ್ಣೂ ಆಗಿದ್ದ- ಗಂಡೂ ಆಗಿದ್ದ. ಇದು ಸಾಧ್ಯವೆ? ಆ ವಿಚಿತ್ರ ಕಥೆ ಇಲ್ಲಿದೆ. ಇದು ಶಿಖಂಡಿಯ ಕಥೆಗಿಂತಲೂ ಸ್ವಾರಸ್ಯಕರವಾಗಿದೆ.  

ಪಾಂಡವರು ಹಾಗೂ ಕೌರವರ ಮಹಾಕದನದ ಕೋಲಾಹಲದ ಕತೆಯಾದ ಮಹಾಭಾರತ (Mahabharata) ನಿಮಗೆ ಗೊತ್ತೇ ಇದೆ. ಆದರೆ ಈ ವಿಶಾಲ ಕತೆಯೊಳಗೇ ಇನ್ನೂ ಅನೇಕ ನಮ್ಮನ್ನು ವಿಸ್ಮಯಗೊಳಿಸುವಂಥ ಚಿಕ್ಕ ಚಿಕ್ಕ ಕಥೆಗಳಿವೆ. ಅದರಲ್ಲಿ ಒಂದು ಕಥೆ, ಪಾಂಡವರ ಪೂರ್ವಜ(ಜೆ?)ಯಾದ ಇಳಾನ ಕಥೆ. ಈ ಇಳಾ ಎಂಬವನು ಒಬ್ಬ ಮಹಾರಾಜ- ಇವನೂ ಹೌದು, ಇವಳೂ ಹೌದು. ಈತ/ಕೆಯದೊಂದು ವಿಚಿತ್ರ ಕಥೆ. ಮಹಾಭಾರತ, ಭಾಗವತ ಪುರಾಣ ಮತ್ತು ದೇವಿ ಭಾಗವತ ಪುರಾಣಗಳಲ್ಲಿಯೂ ಇವನ ಕತೆ ಬರುತ್ತದೆ. ಇದು ಪುರಾಣಗಳ ವಿಸ್ಮಯಕಾರಿ ಅತೀಂದ್ರಿಯ ಪ್ರಸಂಗಗಳಲ್ಲಿ ಒಂದು. ಭೀಷ್ಮನು ತನ್ನ ಬಾಣಗಳ ಹಾಸಿಗೆಯ ಮೇಲೆ ಮಲಗಿದ್ದಾಗ, ಯುಧಿಷ್ಠಿರನಿಗೆ ಈ ಕತೆಯನ್ನು ಹೇಳಿದ. ಜೊತೆಗೆ ರಾಜಧರ್ಮದ ಜಟಿಲತೆಯನ್ನೂ ವ್ಯಕ್ತಿಯ ಆತ್ಮದ ಸ್ವರೂಪವನ್ನೂ ಇದರಲ್ಲಿ ವಿವರಿಸಿದ.

ಇವನು ಚಂದ್ರವಂಶದ ಧೈರ್ಯಶಾಲಿ ಮತ್ತು ನ್ಯಾಯಯುತ ರಾಜ. ಇಲ, ಸುದ್ಯುಮ್ನ, ಯುವನಾಶ್ವ ಎಂದೂ ಕರೆಯಲ್ಪಡುತ್ತಾನೆ. ಇವನು ವೈವಸ್ವತ ಮನುವಿನ ಪುತ್ರ. ವೈವಸ್ವತ ಮನು ಮತ್ತು ಅವನ ಪತ್ನಿ ಶ್ರದ್ಧಾ ಮದುವೆಯಾಗಿ ಹಲವಾರು ವರ್ಷಗಳ ನಂತರವೂ ಮಕ್ಕಳಾಗಲಿಲ್ಲ. ಮನು ಋಷಿ ವಸಿಷ್ಠರನ್ನು ಗಂಡು ಮಗುವನ್ನು ಪಡೆಯಲು ಯಜ್ಞ ನಡೆಸುವಂತೆ ಕೇಳಿಕೊಂಡನು. ಯಜ್ಞದ ಪರಿಣಾಮವಾಗಿ ವೈವಸ್ವತ ಮನು ಮತ್ತು ಅವನ ಪತ್ನಿ ಶ್ರದ್ಧಾಗೆ ಒಂದು ಹೆಣ್ಣುಮಗಳು ಜನಿಸಿದಳು. ನವಜಾತ ಶಿಶುವಿಗೆ ಇಳಾ ಎಂದು ಹೆಸರಿಡಲಾಯಿತು. ವೈವಸ್ವತ ಮನು ತನ್ನ ರಾಜ್ಯವನ್ನು ವಹಿಸಿಕೊಳ್ಳುವ ಮಗನನ್ನು ಬಯಸಿದನು. ಆದ್ದರಿಂದ ಅವನು ಋಷಿ ವಸಿಷ್ಠರಿಗೆ ದೂರು ನೀಡಿದ. ಅವರು ತಕ್ಷಣ ಹುಡುಗಿಯನ್ನು ಗಂಡು ಮಗುವನ್ನಾಗಿ ಬದಲಾಯಿಸಿದರು ಮತ್ತು ಅವನನ್ನು ಸುದ್ಯುಮ್ನ ಎಂದು ಕರೆಯಲಾಯಿತು.

ಒಮ್ಮೆ ಯುವ ಸುದ್ಯುಮ್ನ ಕೈಲಾಸದ ಬಳಿಯ ಕುಮಾರವನದ ಶಾಪಗ್ರಸ್ತ ಕಾಡನ್ನು ಪ್ರವೇಶಿಸಿದನು. ಈ ಕಾಡಿಗೆ ಶಿವ ಮತ್ತು ಪಾರ್ವತಿ ಒಡೆಯರು. ಒಮ್ಮೆ ಶಿವ ಮತ್ತು ಪಾರ್ವತಿ ಪ್ರೀತಿಸುತ್ತಿದ್ದಾಗ ಋಷಿ ಸುನಕ ಮತ್ತು ಇತರರು ಕಾಡಿಗೆ ಪ್ರವೇಶಿಸಿದ್ದರು. ದೈವಿಕ ದಂಪತಿಗಳು ಈ ಹಸ್ತಕ್ಷೇಪವನ್ನು ಸಹಿಸಲಿಲ್ಲ. ಹೀಗಾಗಿ, ಭವಿಷ್ಯದಲ್ಲಿ ಈ ಕಾಡಿಗೆ ಪ್ರವೇಶಿಸುವ ಪುರುಷರು ಮಹಿಳೆಯರಾಗಲಿ ಎಂದು ಶಪಿಸಿದರು. ಶಾಪದ ಪರಿಣಾಮವಾಗಿ ಯುವ ಸುದ್ಯುಮ್ನ ಮಹಿಳೆಯಾದಳು. ಅವಳು ಮತ್ತೆ ಇಲಾ ಎಂಬ ಹೆಸರನ್ನು ಪಡೆದಳು. ನವಗ್ರಹಗಳಲ್ಲಿ ಒಬ್ಬನಾದ, ಚಂದ್ರನ ಪುತ್ರ ಬುಧ ಈಕೆಯನ್ನು ನೋಡಿ ಪ್ರೀತಿಸಿದ. ಇಬ್ಬರೂ ಕೂಡಿದರು. ವಿವಾಹವಾದರು. ಅವರಿಗೆ ಪುರೂರವ ಎಂಬ ಮಗನು ಜನಿಸಿದನು. 

ಇಳ ಋಷಿ ವಸಿಷ್ಠನನ್ನು ಭೇಟಿಯಾಗಿ ತಾನು ಹೇಗೆ ಮತ್ತೆ ಪುರುಷನಾಗುವುದು ಎಂದು ಕೇಳಿದಳು. ಋಷಿ ವಸಿಷ್ಠ ಅವಳನ್ನು ಶಿವನ ತಪಸ್ಸು ಮಾಡಲು ಹೇಳಿದ. ಅವಳ ಭಕ್ತಿಗೆ ಮೆಚ್ಚಿದ ಶಿವ, ಪ್ರತಿ ಎರಡು ತಿಂಗಳು ಅವಳು ಪುರುಷನಾಗುವ ಮತ್ತು ಇತರ ತಿಂಗಳುಗಳಲ್ಲಿ ಮಹಿಳೆಯಾಗುವ ವರವನ್ನು ನೀಡಿದನು. ಹೀಗಾಗಿ, ಅವನು ಪ್ರತಿ ಎರಡು ತಿಂಗಳು ಸುದ್ಯುಮ್ನನಾಗಿ ರಾಜ್ಯವನ್ನು ಆಳಿದ. ಮತ್ತು ಅವಳು ಇಳ ಆಗಿದ್ದಾಗ ಬುಧನ ಹೆಂಡತಿಯಾಗಿ ಅವನೊಂದಿಗೆ ಇರುತ್ತಿದ್ದಳು. ಇದು ಪುರೂರವ ರಾಜನಾಗುವವರೆಗೂ ಮುಂದುವರೆಯಿತು.

ನಿಮ್ಮ ಕನಸುಗಳಿಗೂ ನಿಮ್ಮ ಜನ್ಮರಾಶಿಗೂ ಸಂಬಂಧವಿದೆ ಗೊತ್ತಾ!

ನಂತರ ಇಳ ವಾನಪ್ರಸ್ಥ ಸ್ವೀಕರಿಸಿ ಕಾಡಿಗೆ ಹೋದಳು. ಅಲ್ಲಿ ನಾರದ ಮುನಿ ಅವಳಿಗೆ ನವಾಕ್ಷರಿ ಮಂತ್ರವನ್ನು ಕಲಿಸಿದನು. ಇಳಾ ಕಾಡಿನಲ್ಲಿ ಶಕ್ತಿ ದೇವಿಯನ್ನು ಪೂಜಿಸಿದಳು. ಅವಳ ಭಕ್ತಿಯಿಂದ ಮೆಚ್ಚಿದ ತಾಯಿ ದೇವಿಯು ಅವಳಿಗೆ ಮೋಕ್ಷವನ್ನು ನೀಡಿದಳು. ಈಕೆಯ ಮಗ ಪುರೂರವ ಮುಂದೆ ಅಪ್ಸರೆ ಊರ್ವಶಿಯನ್ನು ಮದುವೆಯಾದ. ಇದು ಅಂತಿಮವಾಗಿ ಪಾಂಡವರ ಜನನಕ್ಕೆ ಕಾರಣಯಿತು. 

ಈ ಕತೆಯನ್ನು ಕೇಳಿದ ಧರ್ಮರಾಯ, "ಪುರುಷ ಮತ್ತು ಮಹಿಳೆ ಇಬ್ಬರೂ ಆಗಿ ಧರ್ಮದ ಹಾದಿಯಲ್ಲಿ ನಡೆಯಲು ಸಾಧ್ಯವೇ?" ಎಂದು ಭೀಷ್ಮನನ್ನು ಪ್ರಶ್ನಿಸುತ್ತಾನೆ. "ಆತ್ಮಕ್ಕೆ ಲಿಂಗ ಎಂಬುದಿಲ್ಲ ಮಗನೇ. ಗಂಡು ಮತ್ತು ಹೆಣ್ಣು ಎಂಬುದು ದೇಹದ ಅಸ್ಥಿರ ಸ್ಥಿತಿಗಳು. ಆತ್ಮವು ಬ್ರಹ್ಮ. ಅದು ರೂಪವನ್ನು ಮೀರಿದೆ" ಎಂದರು ಭೀಷ್ಮರು.

ರಾವಣ ರಾಕ್ಷಸ…ಇದು ಎಲ್ಲರಿಗೂ ಗೊತ್ತು… ಆದ್ರೆ ಆತನ ಒಳ್ಳೆಯ ಗುಣಗಳ ತಿಳಿದ್ರೆ ಅಚ್ಚರಿಯಾಗೋದು ಖಂಡಿತಾ!