Asianet Suvarna News Asianet Suvarna News

ಉಡುಪಿ: ಹಿಂದೂ ಹಬ್ಬಕ್ಕೆ ಭತ್ತದ ತೆನೆ ನೀಡಿದ ಕ್ರಿಶ್ಚಿಯನ್, ಸೌಹಾರ್ದತೆ ಅಂದ್ರೆ ಇದುವೇ ನೋಡಿ..!

ಅಪರೂಪದ ಆಚರಣೆಗಳಿಂದಲೇ ಕರ್ನಾಟಕ ಕರಾವಳಿ ಸಂಸ್ಕೃತಿ ಸಂಪ್ರದಾಯಗಳ ಬೀಡು ಎನಿಸಿದೆ.

Christian Who Gave Paddy to Hindu Festival in Udupi grg
Author
First Published Oct 4, 2022, 9:30 PM IST

ವರದಿ-ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್, ಉಡುಪಿ

ಉಡುಪಿ(ಅ.04):  ಕೋಮು ವಿಚಾರಗಳಲ್ಲಿ ಅದೆಷ್ಟೇ ಭಿನ್ನಮತಗಳು ಕಂಡುಬಂದರೂ ಕರಾವಳಿ ಜಿಲ್ಲೆ ಉಡುಪಿಯ ಸೌಹಾರ್ದ ಪರಂಪರೆಗೆ ಒಂದಿನಿತೂ ಧಕ್ಕೆ ಆಗಿಲ್ಲ. ಭಿನ್ನ ಕೋಮಿನ ಜನರು ಪರಸ್ಪರರ ಆಚರಣೆಗಳನ್ನು ಗೌರವಿಸುವ ಸಂಪ್ರದಾಯ ಎಂದಿಗೂ ಚಾಲ್ತಿಯಲ್ಲಿದೆ. ಕರಾವಳಿಯ ಹಿಂದೂಗಳು ನವರಾತ್ರಿಯ ಸಂದರ್ಭದಲ್ಲಿ ಮನೆಯಲ್ಲಿ ಭತ್ತದ ತೆನೆ ಕಟ್ಟಿ ಹೊಸತು ಊಟ ಮಾಡುವ ಪದ್ಧತಿ ಇದೆ. ಹಿಂದೂಗಳ ಈ ಆಚರಣೆಗೆ ಕ್ರಿಶ್ಚಿಯನ್ ರೈತರೊಬ್ಬರು ತೆನೆಯನ್ನು ಕೊಟ್ಟು ಸಹಕರಿಸುತ್ತಾ ಬಂದಿದ್ದಾರೆ.

ಮಳೆಗಾಲ ಮುಗಿಯಿತು. ಬೆಳೆದು ನಿಂತ ಭತ್ತದ ಫೈರು ಗದ್ದೆಗಳಲ್ಲಿ ಕಂಗೊಳಿಸುತ್ತಿವೆ. ಕರಾವಳಿಯ ಜನರು ಹೊಸ ತೆನೆಯನ್ನು ತಂದು ಅದರೊಳಗಿಂದ ಅಕ್ಕಿಯನ್ನು ಸುಲಿದು, ಉಣ್ಣುವ ಅನ್ನಕ್ಕೆ ಹಾಕಿ. ಬಗೆ ಬಗೆಯ ತರಕಾರಿ ಖಾದ್ಯಗಳನ್ನು, ಪಾಯಸವನ್ನೂ ತಯಾರಿಸಿ ಹೊಸತು ಹಬ್ಬವನ್ನು ಆಚರಿಸುತ್ತಾರೆ. ನವರಾತ್ರಿಯ ಎಲ್ಲಾ ಶುಭ ದಿನಗಳಲ್ಲೂ ಒಂದಿಲ್ಲೊಂದು ಮನೆಯಲ್ಲಿ ತೆನೆಹಬ್ಬ ನಡೆಯುತ್ತದೆ. ಕೊರಳು ಕಟ್ಟುವುದು ಎಂದು ಕರೆಯಲಾಗುವ ಈ ಆಚರಣೆ, ಕರಾವಳಿ ಭಾಗದಲ್ಲಿ ಜನಜನಿತವಾಗಿದೆ.

PRAMODA DEVI WADIYAR: ರಾಜಮಾತೆ ಪ್ರಮೋದಾ ದೇವಿ ಜತೆ ವಿಶೇಷ ಸಂದರ್ಶನ

ಹಿಂದೂ ದೇವಸ್ಥಾನ, ಗರಡಿಗಳಿಗೆ ಹಬ್ಬಕ್ಕೆ ಕೊರಳು ಒದಗಿಸುತ್ತಿರುವ ಲೋರೆನ್ಸ್ ವಾಝ್ ಸದ್ಯ ಸೌಹಾರ್ದ ಪರಂಪರೆಯ ಸಾಕ್ಷಿಯಾಗಿದ್ದಾರೆ. ವರ್ಷಗಳು ಕಳೆದಂತೆ ಬೇಸಾಯ ಮಾಡುವವರ ಸಂಖ್ಯೆ ಕಡಿಮೆಯಾಗುತಿದೆ. ಇದರಿಂದ ನವರಾತ್ರಿ ಸಂದರ್ಭದಲ್ಲಿ ಕೊರಳ ಹಬ್ಬದ ಆಚರಣೆಗೂ ತೊಡಕಾಗುತ್ತಿದೆ. ಹಿಂದೆಲ್ಲ ಮನೆ ಅಥವಾ ಅಕ್ಕಪಕ್ಕದ ಮನೆಯವರ ಗದ್ದೆಯಿಂದ ಕೊರಳು ತಂದು ಹಬ್ಬವನ್ನು ಆಚರಿಸುವುದು ಸಾಮಾನ್ಯವಾಗಿತ್ತು, ಆದರೆ ಇತ್ತೀಚೆಗೆ ಬೇಸಾಯ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ . ಈ ಕಾರಣ ಮತ್ತು ಈ ವರ್ಷ ಹಬ್ಬ ಬೇಗ ಬಂದಿರುವುದರಿಂದ ಭತ್ತದ ತೆನೆ ಅಥವಾ ಕೊರಳು ಸಿಗುವುದು ಕಷ್ಟವಾಗಿದೆ. ಈ ಬಾರಿ ಅತಿಯಾದ ಮಳೆಯಿಂದ ಹೆಚ್ಚಿನ ಕಡೆ ಭತ್ತದ ಪೈರು ನಾಶವಾಗಿದೆ .

ಇಂತಹ ಸಂದರ್ಭದಲ್ಲಿ ಕಾರ್ಕಳ ಸಾಣೂರಿನ ಲೋರೆನ್ಸ್ ವಾಝ್  ತಮ್ಮ ಗದ್ದೆಯಲ್ಲಿ ಬೆಳೆದ ಕೊರಳನ್ನು ದೇವಸ್ಥಾನ ಮತ್ತು ಗರಡಿಗಳಿಗೆ  ನೀಡಿ ಸೌಹಾರ್ದತೆಗೆ  ಸಾಕ್ಷಿಯಾಗಿದ್ದಾರೆ. ಕೆಲವು ವರ್ಷಗಳಿಂದ ನಾನು ಕೊರಳನ್ನು ನೀಡುತ್ತಾ ಬಂದಿದ್ದೇನೆ. ಆದರೆ ಈ ವರ್ಷ ಅತೀ ಹೆಚ್ಚು ತೆನೆ ಹಂಚಿದ್ದೇನೆ ಅನ್ನುತ್ತಾರೆ ಲೋರೆನ್ಸ್. ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ವೇಣುಗೋಪಾಲ ದೇವಸ್ಥಾನ ಹೀಗೆ ಸುಮಾರು 8 ದೇವಸ್ಥಾನಗಳು ದೈವದ ಆರಾದನೆ ನಡೆಯುವ 2 ಗರಡಿಗಳು ಮತ್ತು 100 ಕ್ಕೂ ಹೆಚ್ಚು ಮನೆಯವರು ಇವರಿಂದ ಕೊರಳನ್ನು ಪಡೆದುಕೊಂಡು ಹೋಗಿದ್ದಾರೆ. 

ಕಾಶ್ಮೀರದ ದೇವಾಲಯಕ್ಕೆ ಶೃಂಗೇರಿಯಿಂದ ಪಂಚಲೋಹ ಮೂರ್ತಿ ಹಸ್ತಾಂತರ

ಇದೊಂದು ದೇವರ ಕೆಲಸ. ಹಾಗಾಗಿ ಕೊರಳನ್ನು ನೀಡಲು ನನಗೆ ತುಂಬಾ ಖುಷಿ ಮತ್ತು ಹೆಮ್ಮೆಯಾಗುತ್ತದೆ. ಮುಂದೆಯೂ ನೀಡುತ್ತೇನೆ ಎನ್ನುತ್ತಾರೆ ಲಾರೆನ್ಸ್. ಯಾರಾದರೂ ಬಂದು ತೆನೆಯನ್ನು ಕೇಳಿದರೆ ಕೊಡುವುದಿಲ್ಲ ಎಂದು ಹೇಳುವ ಸಂಪ್ರದಾಯ ಕರಾವಳಿಯಲ್ಲಿ ಯಾವತ್ತೂ ಕಂಡು ಬಂದಿಲ್ಲ. ಅವರಾಗಿಯೇ ಬಂದು ಮತ್ತೊಬ್ಬರ ಗದ್ದೆಯಲ್ಲಿ ತೆನೆಯನ್ನು ತೆಗೆದರೂ ಯಾರೂ ಪ್ರಶ್ನಿಸುವುದಿಲ್ಲ. ಈ ಪದ್ಧತಿಯಿಂದ ಪ್ರಭಾವಿತರಾಗಿರುವ ಲಾರೆನ್ಸ್, ತಾನೇ ಸ್ವತಃ ಬಂದು ನಿಂತು ತೆನೆಯನ್ನು ತೆಗೆದು ಊರವರಿಗೆ ನೀಡುತ್ತಿದ್ದಾರೆ.

ಪರಸ್ಪರ ಭಿನ್ನ ಆಚರಣೆಯನ್ನು ಗೌರವಿಸುವುದರ ಮೂಲಕ, ಕರಾವಳಿ ಗೊಂದಲಗಳ ನಡುವೆಯೂ ಸೌಹಾರ್ಧ ಪರಂಪರೆಯನ್ನು ಉಳಿಸಿಕೊಂಡಿದೆ. ಕೇವಲ ಹಿಂದುಗಳು ಮಾತ್ರವಲ್ಲ ಕ್ರಿಶ್ಚಿಯನ್ ಸಮುದಾಯದವರು ಕೂಡ ವರ್ಷದಲ್ಲಿ ಒಂದು ದಿನ ತೆನೆ ಹಬ್ಬ ಆಚರಿಸುತ್ತಾರೆ. ಆ ದಿನ ಯಾವುದೇ ಮಾಂಸಹಾರ ಮಾಡದೆ ಕೇವಲ ಸಸ್ಯ ಮತ್ತು ತರಕಾರಿಗಳಿಂದ ಮಾಡಿದ ಖಾದ್ಯಗಳನ್ನು ಸೇವಿಸುತ್ತಾರೆ. ಊರು- ಹೊರ ಊರುಗಳಲ್ಲಿ ಇರುವವರೆಲ್ಲ ಬಂದು ಮನೆಯಲ್ಲಿ ಜೊತೆಯಾಗಿ ಕುಳಿತು ಊಟ ಮಾಡುತ್ತಾರೆ. ಹೊರದೇಶಗಳಲ್ಲಿರುವ ಕುಟುಂಬದ ಸದಸ್ಯರಿಗೂ ತೆನೆಯನ್ನು ಪ್ರಸಾದವಾಗಿ ಕಳುಹಿಸುತ್ತಾರೆ. ಇಂತಹ ಅಪರೂಪದ ಆಚರಣೆಗಳಿಂದಲೇ ಕರ್ನಾಟಕ ಕರಾವಳಿ ಸಂಸ್ಕೃತಿ ಸಂಪ್ರದಾಯಗಳ ಬೀಡು ಎನಿಸಿದೆ.
 

Follow Us:
Download App:
  • android
  • ios