ಸಾಹಸಪ್ರಿಯರಾದ ಧನುರಾಶಿಯವರಿಗೆ ಎಂಥ ಜೀವನಸಂಗಾತಿ ಸೂಕ್ತ ?
ಸಾಹಸಿಗರು ಹಾಗೂ ಪ್ರಯಾಣಪ್ರಿಯರಾದ ಧನು ರಾಶಿಯವರ ಮೂಲಸ್ವಭಾವ ಗುಣಲಕ್ಷಣಗಳು ಹಾಗೂ ಇವರು ತಮ್ಮ ಭಾವಿ ಜೀವನ ಸಂಗಾತಿಗಳಲ್ಲಿ ಕಾಣಬಯಸುವ ಗುಣಗಳು ಈ ರೀತಿಯಲ್ಲಿವೆ.
ಜ್ಯೋತಿಷ್ಯಶಾಸ್ತ್ರದಲ್ಲಿ ಒಂಬತ್ತನೇ ರಾಶಿಚಕ್ರವಾದ ಧನುಸ್ಸು ರಾಶಿಯವರು ಸತ್ಯಾನ್ವೇಷಕರು, ಸಾಹಸಿಗರು ಹಾಗೂ ಪ್ರಯಾಣಪ್ರಿಯರು. ಈ ವ್ಯಕ್ತಿಗಳು ವಿನೋದ ಪ್ರಿಯರೂ ಮತ್ತು ಉತ್ತಮ ಜೊತೆಗಾರರಾಗುವವರು. ವಿಶ್ರಾಂತಿ ಪಡೆಯದೇ ಕುತೂಹಲದಿಂದ ಸತ್ಯವನ್ನು ಅನ್ವೇಷಿಸಲು ಸಿದ್ಧರಾಗಿರುವವರು. ಇವರ ಪ್ರಾಮಾಣಿಕತೆ ಮತ್ತು ಅನ್ವೇಷಣೆಯ ಬುದ್ಧಿವಂತಿಕೆಯನ್ನು ನೋಡಿದರೆ ಇವರು ಮುಖ ನೋಡಿ ಮಣೆ ಹಾಕುವವರಲ್ಲ.
ಬಿಲ್ಲು ಬಾಣವನ್ನು ಮೇಲಕ್ಕೆತ್ತಿರುವ ಇವರ ರಾಶಿಯ ಸಂಕೇತವು ಇವರ ಆಧ್ಯಾತ್ಮಿಕ ಪ್ರವೃತ್ತಿಯನ್ನು ಸೂಚಿಸುತ್ತದೆ. ಇವರು ಬಹಳ ಸಕಾರಾತ್ಮಕವಾಗಿ ಯೋಚಿಸುವವರು. ಜೀವನದಲ್ಲಿ ಒಳ್ಳೆಯದನ್ನೇ ನೋಡಲು ಬಯಸುತ್ತಾರೆ. ಇದರಿಂದಾಗಿ ಯಾವ ರೀತಿಯ ತೊಂದರೆಗೂ ಸಿಕ್ಕಿಹಾಕಿಕೊಳ್ಳಲು ಬಯಸುವುದಿಲ್ಲ. ಬಹಳ ಸಕ್ರಿಯವಾಗಿರುವ ಇವರು ಪ್ರಕೃತಿ, ಹೊರಾಂಗಣ ಚಟುವಟಿಕೆಗಳನ್ನು ಇಷ್ಟಪಡುತ್ತಾರೆ. ಎಲ್ಲ ರೀತಿಯ ಆಟೋಟ, ದೈಹಿಕ ಚಟುವಟಿಕೆಗಳಲ್ಲಿ ಮುಂದಿರುತ್ತಾರೆ. ಸಹಾನುಭೂತಿಯುಳ್ಳ ಇವರು ಪ್ರಾಮಾಣಿಕರೂ ಹೌದು. ತಮ್ಮ ಪ್ರೀತಿಪಾತ್ರರ ಸಮಸ್ಯೆಗಳನ್ನು ಬಗೆಹರಿಸಲು ಯಾವಾಗಲೂ ಮುಂದಿರುತ್ತಾರೆ.
ಬಚ್ಚಿಡುವ ಸ್ವಭಾವದ ವೃಶ್ಚಿಕ ರಾಶಿಯವರು ಸಂಗಾತಿ ಹೇಗಿರಬೇಕು ಎಂದು ಬಯಸುತ್ತಾರೆ ಗೊತ್ತೇ?
ಪ್ರೀತಿಯಲ್ಲಿ ನಿಷ್ಠಾವಂತರು
ಪ್ರೀತಿಯಲ್ಲಿ ಖುಷಿಯಾಗಿರುತ್ತಾರೆ. ತಮ್ಮ ಸಂಗಾತಿಯೊಂದಿಗೆ ಖುಷಿಯಿಂದ ಕಾಲ ಕಳೆಯಲು ಬಯಸುತ್ತಾರೆ. ಇಂದ್ರಿಯ ಸುಖ ಬಯಸುವ, ಮುಕ್ತ ಹೃದಯದ, ಏನನ್ನಾದರೂ ಮಾಡಲು ಸಿದ್ಧವಿರುವ ಸಂಗಾತಿಯನ್ನೂ ಸಮಾನವಾಗಿ ಕಾಣುವ ಇವರು ಉತ್ತಮ ಸಂಗಾತಿಯಾಗಿರುತ್ತಾರೆ. ಇವರು ಪ್ರೀತಿ ಮತ್ತು ಲೈಂಗಿಕತೆಯ ಮಧ್ಯೆ ಅಡ್ಡಗೆರೆಯನ್ನು ಹಾಕಿರುತ್ತಾರೆ. ಪ್ರೀತಿಯ ವಿಷಯಕ್ಕೆ ಬಂದರೆ ತಮ್ಮನ್ನು ತಾವು ಪ್ರೀತಿಯಲ್ಲಿ ಅರ್ಪಿಸಿಕೊಳ್ಳುತ್ತಾರೆ. ಪ್ರೀತಿಯಲ್ಲಿ ನಿಷ್ಠಾವಂತರು ಹಾಗೂ ಸಮರ್ಪಣಾ ಮನೋಭಾವದವರು. ಇವರ ಸಂಗಾತಿಗಳಾಗಿರುವವರು ಬೌದ್ಧಿಕ, ಸೂಕ್ಷ್ಮ ಹಾಗೂ ಅಭಿವ್ಯಕ್ತಶೀಲರಾಗಿರಬೇಕು ಎಂದು ಬಯಸುತ್ತಾರೆ. ಸ್ನೇಹಿತರಾಗಿ ತುಂಬಾ ಪ್ರೋತ್ಸಾಹಿಸುವ, ಸ್ಪೂರ್ತಿದಾಯಕ ಮತ್ತು ಉದಾರ ಸ್ವಭಾವದವರು. ಸ್ನೇಹಿತರ ವಲಯದಲ್ಲಿ ಸಂತೋಷ ಮತ್ತು ನಗೆಯನ್ನು ಹರಡುತ್ತಾರೆ. ನಿಷ್ಠಾವಂತ ಸ್ನೇಹಿತರನ್ನೂ ಹೊಂದಿರುತ್ತಾರೆ. ಕೊನೆಯವರೆಗೂ ತಮ್ಮ ಗೆಳೆತನವನ್ನು ಉಳಿಸಿಕೊಂಡಿರುತ್ತಾರೆ.
ಉತ್ತಮ ಜೀವನಶೈಲಿಗೆ ಸಹಾಯ ಮಾಡಬೇಕು
ಧನುಸ್ಸು ರಾಶಿಯವರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡುವವರಾಗಿರುವುದಿಲ್ಲ. ಆದ್ದರಿಂಧ ಇವರ ಜೀವನ ಸಂಗಾತಿಯು ಇವರ ಆರೋಗ್ಯವನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯಬೇಕಾದೀತು. ಅತಿಯಾದ ಭೋಗಜೀವನ ಇವರ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಸೊಂಟ, ತೊಡೆ, ಹೊಟ್ಟೆ, ಕಾಲಿಗೆ ಸಂಬಂಧಿಸಿದ ಸಮಸ್ಯೆ ಉಂಟಾಗಬಹುದು. ಉತ್ತಮ ಜೀವನಶೈಲಿಯನ್ನು ಅಳವಡಿಸಲು ಸಂಗಾತಿಗಳು ಸಹಾಯ ಮಾಡಲೆಂದು ಬಯಸುತ್ತಾರೆ.
ಪರಿಪೂರ್ಣತೆ ಬಯಸುವ ಕನ್ಯಾ ರಾಶಿಯವರು ತಮ್ಮ ಬಾಳಸಂಗಾತಿಗಳಲ್ಲಿ ಏನಿಷ್ಟಪಡುತ್ತಾರೆ ಗೊತ್ತೇ?
ಸಾರ್ವಜನಿಕ ವ್ಯಕ್ತಿತ್ವದಲ್ಲಿ ಸಹಕಾರ
ಧನುಸ್ಸು ರಾಶಿಯವರು ತಮ್ಮ ಗುರಿಯನ್ನು ಸಾಧಿಸಲು ಸಿದ್ಧರಾಗುವ ಮೊದಲು ಎರಡು ಬಾರಿ ಯೋಚಿಸುತ್ತಾರೆ. ತಮ್ಮ ಬುದ್ಧಿವಂತಿಕೆ, ಹಾಸ್ಯಪ್ರಜ್ಞೆಯಿಂದ ಕೆಲಸದ ವಾತಾವರಣವನ್ನು ಉತ್ಸಾಹಭರಿತವಾಗಿಸುವುದರಿಂದ ಎಲ್ಲರೂ ಅವರೊಂದಿಗೆ ಕೆಲಸ ಮಾಡಲು ಆನಂದಿಸುತ್ತಾರೆ. ಕೌಟುಂಬಿಕವಾಗಿಯೂ ಇಂಥ ವಾತಾವರಣ ಕಾಪಾಡಿಕೊಳ್ಳಲು ಇಷ್ಟಪಡುತ್ತಾರೆ. ಇವರು ಕೆಲಸವನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ. ತಮ್ಮ ಸಂಗಾತಿಯೂ ಸವಾಲು ಎದುರಿಸುವ ಛಾತಿ ಉಳ್ಳವರಾಗಿರಬೇಕು ಎಂದು ಬಯಸುತ್ತಾರೆ.
ಎಷ್ಟೇ ಸವಾಲು ಎದುರಾದರೂ ಕೊನೆಯವರೆಗೂ ಬಿಟ್ಟುಕೊಡದ ಸ್ವಭಾವದವರು. ಬಹಳ ಸ್ಪೂರ್ತಿದಾಯಕ ನಾಯಕರಾಗಿರುತ್ತಾರೆ. ಇವರು ಹೊಸ ಜನರನ್ನು ಭೇಟಿ ಮಾಡಲು ಮತ್ತು ಸಂಸ್ಕೃತಿಗಳನ್ನು ಅನ್ವೇಷಿಸಲು ಇಷ್ಟಪಡುವುದರಿಂದ ತಮ್ಮ ಸಂಗಾತಿ ಇದರಲ್ಲೆಲ್ಲ ಸಹಕರಿಸಬೇಕು ಎಂದುಕೊಳ್ಳುತ್ತಾರೆ. ಇವರು ಉತ್ತಮ ರಾಜಕಾರಣಿಗಳು, ಮಾನವಸಂಪನ್ಮೂಲ ವ್ಯವಸ್ಥಾಪಕರು, ಕಾರ್ಯಕರ್ತರು, ಶಿಕ್ಷಕರು, ದಾರ್ಶನಿಕರು, ಚಿಕಿತ್ಸಕರು ಹಾಗೂ ವೈದ್ಯ ವೃತ್ತಿಯನ್ನೂ ಮಾಡಬಹುದು. ಸಾರ್ವಜನಿಕ ವ್ಯಕ್ತಿಗಳಾಗಿರುವುದರಿಂದ ಇವರ ಸಾಂಗತ್ಯದ ಕೊರತೆಯನ್ನು ಸಂಗಾತಿಗಳು ಅನುಭವಿಸಬೇಕಾಗಬಹುದು.
ಧೈರ್ಯಶಾಲಿಗಳು ಆಗಿರಬೇಕು
ಧೈರ್ಯಶಾಲಿಗಳಾದ ಇವರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ಜೀವನದಲ್ಲಿ ಅತ್ಯಂತ ಕಷ್ಟಕರ ಸವಾಲುಗಳನ್ನು ಸ್ವೀಕರಿಸಬಹುದು. ಹೀಗಾಗಿ ಇವರ ಸಂಗಾತಿಗಳೂ ಧೈರ್ಯಶಾಲಿಗಳು, ಆತ್ಮವಿಶ್ವಾಸಿಗಳು ಆಗಿರುವುದು ಅನಿವಾರ್ಯ. ಇತರ ರಾಶಿಯವರಿಗಿಂತ ಹೆಚ್ಚು ಇವರು ಧನಾತ್ಮಕ ಮನೋಭಾವದವರು. ಯಾಕೆಂದರೆ ಇವರದು ಮುಕ್ತ ಮನಸ್ಸು. ಇವರು ಸ್ವತಂತ್ರವಾಗಿರಲು ಬಯಸುವವರು.
ಸೌಂದರ್ಯ, ಕಲೆ ಎಂದರೆ ತುಲಾ ರಾಶಿಯವರಿಗಿಷ್ಟ, ಜೀವನಸಂಗಾತಿಯಲ್ಲಿ ಏನಿಷ್ಟ?
ಪ್ರಾಮಾಣಿಕರು, ಸತ್ಯ ನುಡಿಯುವವರು, ನ್ಯಾಯೋಚಿತ, ಉದಾರತೆ, ದೂರದೃಷ್ಟಿ, ದಾರ್ಶನಿಕ ದೃಷ್ಟಿಯವರು, ವಿಶ್ವಾಸಾರ್ಹರು, ಸ್ವಾವಲಂಬಿತರು, ಖುಷಿ ಸ್ವಭಾವದವರು, ಬುದ್ಧಿವಂತರು ಮುಂತಾದ ಗುಣಗಳುಳ್ಳ ಸಂಗಾತಿಗಳನ್ನು ಬಯಸುತ್ತಾರೆ. ಆತ್ಮಶ್ಲಾಘನೆ, ಅತಿಯಾದ ಆತ್ಮವಿಶ್ವಾಸ, ಕಟುವಾದ, ಮೊಂಡುತನ, ಆಕ್ರಮಣಕಾರಿತನ, ಉಡಾಫೆ ಸ್ವಭಾವದ ಜನರನ್ನು ಇಷ್ಟಪಡುವುದಿಲ್ಲ.