ಗಣೇಶ ಚತುರ್ಥಿ ವ್ರತ ಕಥೆ ಶ್ರವಣ ಮಾತ್ರದಿಂದ ಕಷ್ಟಗಳು ದೂರವಾಗುತ್ತೆ..!
ಹಿಂದೂ ಧರ್ಮದಲ್ಲಿ ಅತ್ಯಂತ ಮಹತ್ವವಾದ ಹಬ್ಬಗಳಲ್ಲಿ ಗಣೇಶ ಚತುರ್ಥಿಯು ಒಂದಾಗಿದೆ. ಈ ದಿನ ಗಣೇಶನನ್ನು ಪೂಜಿಸಿ ಆರಾಧಿಸಿ ವ್ರತೋಪಾಸನೆಗಳನ್ನು ಮಾಡಲಾಗುತ್ತದೆ. ಗಣೇಶ ಚತುರ್ಥಿಯ ವ್ರತ ಕಥೆಯನ್ನು ಕೇಳುವುದರಿಂದ ಸಕಲ ಕಷ್ಟಗಳು ದೂರವಾಗುತ್ತವೆ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಗಣೇಶ ಚತುರ್ಥಿಯ ವ್ರತಕಥೆ ಮತ್ತು ಅದರ ಮಹತ್ವದ ಬಗ್ಗೆ ತಿಳಿಯೋಣ.
ಹಿಂದೂ ಸಂಸ್ಕೃತಿಯಲ್ಲಿ ಹಬ್ಬ ಹರಿದಿನಗಳ ಆಚರಣೆಗೆ ವಿಶೇಷ ಮಹತ್ವವಿದೆ. ಶಾಸ್ತ್ರಗಳಲ್ಲಿ ಉಲ್ಲೇಖಿಸಿದಂತೆ ಗಣೇಶ ಚತುರ್ಥಿಯು ವಿಶೇಷವಾದ ಹಬ್ಬವಾಗಿದೆ. ಯಾವುದೇ ಶುಭ ಕಾರ್ಯಗಳ ಮೊದಲು ವಿಘ್ನ ನಿವಾರಕನಾದ ಗಣೇಶನನ್ನು ಪೂಜಿಸುವುದು ಸಂಪ್ರದಾಯವಾಗಿದೆ. ಅದೇ ರೀತಿ ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿ ತಿಥಿಯಂದು ಗಣೇಶ ಚತುರ್ಥಿಯನ್ನಾಗಿ ಆಚರಿಸಲಾಗುತ್ತದೆ. ಈ ಆಚರಣೆಗೆ ವಿಶೇಷವಾದ ಮಹತ್ವವಿದೆ. ಸ್ಕಂದ ಪುರಾಣ, ನಾರದ ಪುರಾಣ ಮತ್ತು ಬ್ರಹ್ಮ ವೈವರ್ತ ಪುರಾಣಗಳಲ್ಲಿ ಗಣೇಶನ ಬಗ್ಗೆ ವರ್ಣಿಸಲಾಗಿದೆ.
ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿ ತಿಥಿಯಂದು ಕೈಲಾಸ ಪರ್ವತದಿಂದ ಪಾರ್ವತಿ ದೇವಿಯೊಂದಿಗೆ ಗಣೇಶನ ಆಗಮನವಾಗಿತ್ತೆಂದು ಪುರಾಣಗಳಲ್ಲಿ ಉಲ್ಲೇಖವಿದೆ. ಹಾಗಾಗಿ ಈ ದಿನವನ್ನು ಗಣೇಶ ಚತುರ್ಥಿಯನ್ನಾಗಿ ಆಚರಿಸಲಾಗುತ್ತದೆ.
ಇದನ್ನು ಓದಿ: ಹಸ್ತದಲ್ಲಿ ಶನಿ ಪರ್ವತ ಉಬ್ಬಾಗಿದ್ದರೆ ಅದೃಷ್ಟ..!
ಈ ದಿನ ಗಣಪತಿಯನ್ನು ಭಕ್ತಿ, ಶ್ರದ್ಧೆಗಳಿಂದ ಪೂಜಿಸಿ, ಆರಾಧನೆ ಮಾಡುವುದರಿಂದ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಗಣೇಶ ಚತುರ್ಥಿಯ ವ್ರತಕಥೆಯ ಶ್ರವಣ ಮಾತ್ರದಿಂದ ಅಂದರೆ ಆಲಿಸುವುದರಿಂದ ಸಮಸ್ತ ಕಷ್ಟಗಳು ದೂರವಾಗಿ ಮನೆಯಲ್ಲಿ ಸುಖ ಸಮೃದ್ಧಿ ನೆಲೆಸುತ್ತದೆ.
ಗಣೇಶ ಚತುರ್ಥಿ ವ್ರತ ಕಥೆ:
ಗಣೇಶ ಚತುರ್ಥಿಯ ಬಗ್ಗೆ ಅನೇಕ ಪೌರಾಣಿಕ ಕಥೆಗಳು ಪ್ರಚಲಿತದಲ್ಲಿವೆ. ಈ ವ್ರತ ಕಥೆಗಳ ಶ್ರವಣಮಾತ್ರದಿಂದಲೇ ಕಷ್ಟಗಳೆಲ್ಲ ದೂರವಾಗುತ್ತವೆ ಎಂದು ಹೇಳಲಾಗುತ್ತದೆ.
ಇದನ್ನು ಓದಿ: ಅಶ್ವಿನಿ, ಭರಣಿ, ಕೃತಿಕಾ, ರೋಹಿಣಿ ನಕ್ಷತ್ರದವರು ಹೇಗೆ ಗೊತ್ತಾ..?
ಒಮ್ಮೆ ಸಮಸ್ತ ದೇವತೆಗಳು ಸಂಕಟದಲ್ಲಿದ್ದರು. ಅಂತಹ ಸಮಯದಲ್ಲಿ ಸಂಕಟ ನಿವಾರಣೆಗಾಗಿ ಎಲ್ಲ ದೇವತೆಗಳು ಪರಶಿವ ಮತ್ತು ಪಾರ್ವತಿಯ ಬಳಿ ಬರುತ್ತಾರೆ. ಆ ಸಮಯದಲ್ಲಿ ಮಕ್ಕಳಾದ ಗಣೇಶ ಮತ್ತು ಕಾರ್ತಿಕೇಯ ಅಲ್ಲೇ ಇರುತ್ತಾರೆ. ದೇವತೆಗಳ ಸಂಕಟವನ್ನು ಆಲಿಸಿದ ಶಿವನು ಮಕ್ಕಳಲ್ಲಿ ಪ್ರಶ್ನಿಸುತ್ತಾ, ದೇವತೆಗಳ ಸಂಕಟವನ್ನು ಯಾರು ಪರಿಹರಿಸುತ್ತೀರಿ? ಎಂದು ಕೇಳುತ್ತಾನೆ. ಅದಕ್ಕೆ ಗಣೇಶ ಮತ್ತು ಕಾರ್ತಿಕೇಯರ ಇಬ್ಬರು ನಾವು ಮಾಡುತ್ತೇವೆ ಎಂದು ಒಮ್ಮೆಲೇ ಹೇಳುತ್ತಾರೆ. ಇದರಿಂದ ಗೊಂದಲಕ್ಕೊಳಗಾದ ಶಿವ ಪಾರ್ವತಿಯರು, ಯಾರಿಗೆ ಈ ಜವಾಬ್ದಾರಿಯನ್ನು ಒಪ್ಪಿಸಬೇಕೆಂದು ಯೋಚಿಸಲಾರಂಭಿಸುತ್ತಾರೆ. ನಂತರ ಶಿವನು ಯಾರು ಪೃಥ್ವಿಯನ್ನು ಸುತ್ತಿ ಮೊದಲು ಬರುತ್ತಾರೋ ಅವರಿಗೆ ಈ ಕೆಲಸವನ್ನು ಒಪ್ಪಿಸುವುದಾಗಿ ತಿಳಿಸುತ್ತಾನೆ.
ಇದನ್ನು ಆಲಿಸಿದ ಕಾರ್ತಿಕೇಯ ತಕ್ಷಣ ವಾಹನವಾದ ನವಿಲನ್ನೇರಿ ಪೃಥ್ವಿ ಪ್ರದಕ್ಷಿಣೆಗೆ ತೆರಳುತ್ತಾನೆ. ಗಣೇಶ ತನ್ನ ವಾಹನವಾದ ಮೂಷಕವನ್ನೇರಿ ಎಷ್ಟು ದೂರ ಕ್ರಮಿಸಲು ಸಾಧ್ಯ? ಎಂದು ಯೋಚಿಸುತ್ತಾ ಕೂರುತ್ತಾನೆ. ಯೋಚಿಸಿ ನಿರ್ಧಾರಕ್ಕೆ ಬಂದವನಂತೆ ಎದ್ದು ತಂದೆ-ತಾಯಿಯರಾದ ಶಿವ ಪಾರ್ವತಿಯರನ್ನು ಏಳು ಬಾರಿ ಪ್ರದಕ್ಷಿಣೆ ಹಾಕಿ, ನಂತರ ಕಾರ್ತಿಕೇಯನ ಬರುವಿಕೆಗೆ ಕಾಯುತ್ತಾನೆ.
ಇದನ್ನು ಓದಿ: ಈ ರಾಶಿಯ ಹುಡುಗಿಯರಿಗೆ ವಿಪರೀತ ಕೋಪ....ನಿಮ್ಮದ್ಯಾವ ರಾಶಿ?
ಇದನ್ನು ನೋಡಿದ ದೇವತೆಗಳು ಆಶ್ಚರ್ಯಚಕಿತರಾಗುತ್ತಾರೆ. ಆಗ ಪರಶಿವನು ಗಣೇಶನನ್ನು ಪೃಥ್ವಿ ಪ್ರದಕ್ಷಿಣೆ ಮಾಡದೇ ಇದ್ದದ್ದಕ್ಕೆ ಕಾರಣವನ್ನು ಕೇಳುತ್ತಾನೆ. ಅದಕ್ಕೆ ಗಣೇಶ ಉತ್ತರಿಸುತ್ತಾ – ತಂದೆ-ತಾಯಿಯ ಚರಣದಲ್ಲೇ ಸಮಸ್ತ ಲೋಕವಿದೆ ಎಂದು ಹೇಳುತ್ತಾನೆ. ಇದನ್ನು ಕೇಳಿದ ದೇವತೆಗಳು ಸಂತೋಷಗೊಳ್ಳುತ್ತಾರೆ ಮತ್ತು ಶಿವ ಪಾರ್ವತಿಯರು ಪ್ರಸನ್ನರಾಗುತ್ತಾರೆ. ನಂತರ ಶಿವನು ದೇವತೆಗಳ ಸಂಕಷ್ಟವನ್ನು ನಿವಾರಿಸುವ ಕಾರ್ಯವನ್ನು ಗಣೇಶನಿಗೆ ಒಪ್ಪಿಸುತ್ತಾನೆ. ಅಷ್ಟೇ ಅಲ್ಲದೆ ಭಾದ್ರಪದ ಶುಕ್ಲ ಚತುರ್ಥಿಯ ದಿನದಂದು ಗಣೇಶನನ್ನು ಪೂಜಿಸುವವರಿಗೆ ಇಷ್ಟಾರ್ಥ ಸಿದ್ಧಿಯಾಗಲಿ ಎಂದು ವರ ನೀಡುತ್ತಾನೆ. ಗಣೇಶ ಚತುರ್ಥಿಯಂದು ವ್ರತ ಮತ್ತು ಉಪಾಸನೆಗಳಿಂದ ಗಣೇಶನನ್ನು ಆರಾಧಿಸಿ ಪೂಜಿಸಿದವರಿಗೆ ಕಷ್ಟಗಳು ನಿವಾರಣೆಯಾಗಿ ಸುಖ-ಸಮೃದ್ಧಿ ನೆಲೆಸುತ್ತದೆ.
ಗಣೇಶ ಚತುರ್ಥಿಯಂದು ಪೂಜೆ ಮತ್ತು ಉಪಾಸನೆಯ ಜತೆಗೆ ವ್ರತಕಥೆಯನ್ನು ಪಠಿಸುವುದರಿಂದ ಮತ್ತು ಆಲಿಸುವುದರಿಂದ ಎಲ್ಲ ಕಷ್ಟಗಳು ನಿವಾರಣೆಯಾಗುತ್ತವೆ. ಜೀವನದಲ್ಲಿ ನೆಮ್ಮದಿ ನೆಲೆಸುತ್ತದೆ. ಎಲ್ಲರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.