ಹಿಂದೂ ಧರ್ಮದಲ್ಲಿ ಹಾವನ್ನು ದೇವರೆಂದು ಪೂಜಿಸುತ್ತೇವೆ. ಹಾಗೆ ಸರ್ಪ, ನಾಗನಿಗೆ ಸಂಬಂಧಿಸಿದ ಪ್ರಮುಖ ದೇವಾಲಯ ಸುಬ್ರಹ್ಮಣ್ಯಕ್ಕೆ ಬಾಲಿವುಡ್ ಖ್ಯಾತ ನಟಿ  ಕತ್ರೀನಾ ಕೈಫ್ ಭೇಟಿ  ಮಾಡಿದ್ದಾರೆಂದು ವರದಿಯಾಗಿದೆ. 

ನಾಗ ದೋಷ, ಸರ್ಪಹತ್ಯೆ, ಸಂಸ್ಕಾರ, ಮಗುವಾಗಲು ಸಮಸ್ಯೆ, ಮದುವೆಯಾಗಲು ಸಮಸ್ಯೆ ಹೀಗೇ ಬಹುತೇಕ ಸಮಸ್ಯೆಗಳಿಗೆ ಜ್ಯೋತಿಷಿಗಳು ಸಲಹೆ ಮಾಡೋದು ಸುಬ್ರಹ್ಮಣ್ಯಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬರಬೇಕೆಂದು. ಇಲ್ಲಿಗೆ ಗಣ್ಯಾತಿ, ಗಣ್ಯರು, ಕ್ರಿಕೆಟಿಗರು ಬಂದು ಸರ್ಪಸಂಸ್ಕಾರ ಮಾಡಿಸುತ್ತಾರೆ. 

ಈಗ ಬಾಲಿವುಡ್ ಖ್ಯಾತ ನಟಿ ಕತ್ರೀನಾ ಕೈಫ್ ರಾಜ್ಯದ ಪ್ರಸಿದ್ಧ ತೀರ್ಥಕ್ಷೇತ್ರ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಆಗಮಿಸಿದ್ದು ,ಇಂದು ಮತ್ತು ನಾಳೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕತ್ರೀನಾ ಸರ್ಪಸಂಸ್ಕಾರ ಪೂಜೆಯಲ್ಲಿ ಭಾಗಿಯಾಗಲಿದ್ದಾರೆ. ಇಂದು ಕುಕ್ಕೆ ಸುಬ್ರಹ್ಮಣ್ಯದಲ್ಲೆ ಉಳಿದುಕೊಳ್ಳಲಿರುವ ಬಾಲಿವುಡ್ ನಟಿ ನಾಳೆ ಸರ್ಪ ಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ. ಮಾಸ್ಕ್ ಹಾಕಿ, ತಲೆಗೆ ದುಪ್ಪಟ್ಟ ಹಾಕಿ ದೇವರ ದರ್ಶನದಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ವರದಿಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನಲ್ಲಿರುವ ಕುಕ್ಕೆಗೆ ಅದರದೆ ಆದ ಪ್ರತೀತಿ ಇದೆ ಸುಮಾರು 5000 ವರ್ಷಗಳ ಹಿಂದೆ ಸುಬ್ರಹ್ಮಣ್ಯ ದೇವಾಲಯವನ್ನು ಇಲ್ಲಿ ನಿರ್ಮಿಸಲಾಗಿದೆ ಎನ್ನಲಾಗುತ್ತದೆ. ಪುರಾಣದ ಕತೆಯಂತೆ, ಪವಿತ್ರವಾದ ಸರ್ಪವೆನಿಸಿರುವ ವಾಸುಕಿ ಹಾಗೂ ಇತರೆ ಹಾವುಗಳಿಗೆ ಗರುಡನು ಬೆದರಿಕೆ ಹಾಕಲು ಸುಬ್ರಹ್ಮಣ್ಯನು ಇಲ್ಲಿ ಸುರಕ್ಷಿತ ಸ್ಥಳ ನೀಡಿ ಕಾಪಾಡಿದನಂತೆ. ಸುಬ್ರಹ್ಮಣ್ಯನೆಂದರೆ ಕಾರ್ತಿಕೇಯನೇ ಆಗಿದ್ದಾನೆ. 

ಸುಬ್ರಹ್ಮಣ್ಯ ಕ್ಷೇತ್ರವು ಧಾರಾ ನದಿಯ ಪುಣ್ಯ ತಟದಲ್ಲಿದೆ. ಧಾರಾ ನದಿಯ ಮೂಲವು ಕುಮಾರ ಪರ್ವತವಾಗಿದೆ. ಹಾಗಾಗಿ, ಇದಕ್ಕೆ ಕುಮಾರ ಧಾರಾ ಎಂದೂ ಕರೆಯಲಾಗುತ್ತದೆ. ದೇವಾಲಯಕ್ಕೆ ಪ್ರವೇಶಿಸುತ್ತಿದ್ದಂತೆ, ಗರ್ಭಗುಡಿ ಹಾಗೂ ಮುಖ್ಯದ್ವಾರದ ನಡುವೆ ಬೆಳ್ಳಿಯ ಗರುಡಗಂಬವನ್ನು ಕಾಣಬಹುದು. ಗರ್ಭಗುಡಿಯೊಳಗಿರುವ ವಾಸುಕಿಯ ಉಸಿರಾಟದಿಂದ ಹೊಮ್ಮುವ ವಿಷಗಾಳಿಯಿಂದ ಭಕ್ತರನ್ನು ರಕ್ಷಿಸುವ ಸಲುವಾಗಿ ಈ ಗರುಡಗಂಬ ನಿಲ್ಲಿಸಲಾಗಿದೆ ಎನ್ನಲಾಗುತ್ತದೆ.

ಈ ದೇವಾಲಯದಲ್ಲಿ ಮೊದಲು ಸ್ಥಾನಿಕ ತುಳು ಬ್ರಾಹ್ಮಣರಾದ ಮೊರೋಜಾ ಕುಟುಂಬ ಅರ್ಚಕ ವೃತ್ತಿಯನ್ನು ನಡೆಸುತ್ತಿತ್ತು. 1845ರವರೆಗೂ ಅವರೇ ಮುಖ್ಯ ಅರ್ಚಕರು ದೇವಾಲಯವನ್ನು ನಡೆಸುತ್ತಿದ್ದರು. ನಂತರದಲ್ಲಿ ದೇಗುಲದ ಹತೋಟಿಯನ್ನು ಮಾಧ್ವರು ತೆಗೆದುಕೊಂಡರು. ದೇವಾಲಯದ ಪಕ್ಕದಲ್ಲಿ ಮಠವನ್ನೂ ಕಟ್ಟಿದರು. 

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ಮುಖ್ಯವಾಗಿ ಹೆಸರಾಗಿರುವುದೆ ನಾಗ ದೋಷ ಸಂಬಂಧಿ ಪೂಜೆಗಳಿಗಾಗಿ. ಅದರಲ್ಲೂ ಆಶ್ಲೇಷ ಬಲಿ ಹಾಗೂ ಸರ್ಪ ಸಂಸ್ಕಾರ ಇಲ್ಲಿ ನಡೆಸಿದಾಗ ಮಾತ್ರ ನಿಜವಾದ ಫಲ ಸಿಗುವುದು ಎಂಬ ನಂಬಿಕೆ ಇದೆ. ಒಳ್ಳೆಯ ಹಾವನ್ನು ಸಾಯಿಸಿದರೆ, ಅಥವಾ ಅದು ಸತ್ತು ಬಿದ್ದಿದ್ದನ್ನು ನೋಡಿದರೆ ಅದಕ್ಕೆ ಸಂಪೂರ್ಣ ಸಂಸ್ಕಾರ ಕ್ರಿಯೆ ಮಾಡಲೇಬೇಕು. ಇಲ್ಲದಿದ್ದಲ್ಲಿ ಸರ್ಪಹತ್ಯೆ ದೋಷ ಉಂಟಾಗುತ್ತದೆ ಎಂಬ ನಂಬಿಕೆ ಹಿನ್ನೆಲೆಯಲ್ಲಿ ಸರ್ಪ ಸಂಸ್ಕಾರ ನಡೆಸಲಾಗುತ್ತದೆ. 

ಬಟಾಟೆಯಲ್ಲಿ ಮೂಡಿಬಂದ ದೇವರ ರೂಪ : ಕಲ್ಕಿ ಅವತಾರವೆಂದು ನೋಡಲು ಮುಗಿಬಿದ್ದ ಜನ