Chamarajanagar: ಹಾವಿನ ಹುತ್ತಕ್ಕೆ ರಕ್ತಾಭಿಷೇಕ, ಮೊಟ್ಟೆ ನೈವೇದ್ಯದ ಸಂಪ್ರದಾಯ
ಷಷ್ಠಿ ಪಂಚಮಿ ಅಂದರೆ ಹಾವಿನ ಹುತ್ತಕ್ಕೆ ಹಾಲು, ತುಪ್ಪ ಎರೆಯುವುದು ಎಲ್ಲಾ ಭಾಗಗಳಲ್ಲಿ ಆಚರಣೆಯಲ್ಲಿರುವ ಸಂಪ್ರದಾಯ. ಅದರೆ ಹುತ್ತಕ್ಕೆ ಕೋಳಿ ಕೊಯ್ದು ರಕ್ತದ ನೈವೇಧ್ಯ ಮಾಡಿ, ಮೊಟ್ಟೆ ಹಾಕಿ ಹರಕೆ ತೀರಿಸುವ ವಿಭಿನ್ನ ಸಂಪ್ರದಾಯ ಚಾಮರಾಜನಗರ ಜಿಲ್ಲೆಯಲ್ಲಿನ ಹಿಂದುಳಿದ ಸಮುದಾಯಗಳಲ್ಲಿ ಅನಾದಿ ಕಾಲದಿಂದಲೂ ಚಾಲ್ತಿಯಲ್ಲಿದೆ.
ವರದಿ - ಪುಟ್ಟರಾಜು.ಆರ್.ಸಿ. ಐಷ್ಯಾನೆಟ್ ಸುವರ್ಣ ನ್ಯೂಸ್
ಚಾಮರಾಜನಗರ (ನ.29): ಷಷ್ಠಿ ಪಂಚಮಿ ಅಂದರೆ ಹಾವಿನ ಹುತ್ತಕ್ಕೆ ಹಾಲು, ತುಪ್ಪ ಎರೆಯುವುದು ಎಲ್ಲಾ ಭಾಗಗಳಲ್ಲಿ ಆಚರಣೆಯಲ್ಲಿರುವ ಸಂಪ್ರದಾಯ. ಅದರೆ ಹುತ್ತಕ್ಕೆ ಕೋಳಿ ಕೊಯ್ದು ರಕ್ತದ ನೈವೇಧ್ಯ ಮಾಡಿ, ಮೊಟ್ಟೆ ಹಾಕಿ ಹರಕೆ ತೀರಿಸುವ ವಿಭಿನ್ನ ಸಂಪ್ರದಾಯ ಚಾಮರಾಜನಗರ ಜಿಲ್ಲೆಯಲ್ಲಿನ ಹಿಂದುಳಿದ ಸಮುದಾಯಗಳಲ್ಲಿ ಅನಾದಿ ಕಾಲದಿಂದಲೂ ಚಾಲ್ತಿಯಲ್ಲಿದೆ. ಷಷ್ಠಿ ದಿನ ಹುತ್ತಕ್ಕೆ ಹಾಲು, ತುಪ್ಪದ ಜೊತೆಗೆ ಕೋಳಿ ಬಲಿ ನೀಡಿ ಹುತ್ತಕ್ಕೆ ರಕ್ತದ ಅಭಿಷೇಕವನ್ನ ಮಾಡುವ ಮೂಲಕ ಹರಕೆಯನ್ನ ತೀರಿಸುತ್ತಾರೆ.
ಚಾಮರಾಜನಗರ ಜಿಲ್ಲೆಯಲ್ಲಿ ಆಚರಿಸುವ ಷಷ್ಠಿ ಹಬ್ಬ ಬೇರೆ ಜಿಲ್ಲೆಗಳಿಗಿಂತ ಭಿನ್ನ. ಸಾಮಾನ್ಯವಾಗಿ ಷಷ್ಠಿ ಹಬ್ಬ ಬಂದರೆ ಜಿಲ್ಲೆಯ ಕೆಲ ಪುರಷರು ಗ್ರಾಮದ ಹೊರಭಾಗದಲ್ಲಿರುವ ಹುತ್ತಗಳನ್ನ ಗುದ್ದಲಿಗಳಿಂದ ಸ್ವಚ್ಚಗೊಳಿಸಿ, ಪೊರಕೆ ಹಿಡಿದು ಸ್ವಚ್ಚಗೊಳಿಸುತ್ತಾರೆ. ಇನ್ನೂ ಮಹಿಳೆಯರು ಹುತ್ತದ ಸುತ್ತ ರಂಗೋಲಿ ಬಿಟ್ಟು ಶೃಂಗರಿಸುತ್ತಾರೆ. ನಂತರ ಗ್ರಾಮಸ್ಥರು ಹುತ್ತದ ಬಳಿ ಬಂದು ಬಾಳೆ ಎಲೆ ಇಟ್ಟು ಅದರ ಮೇಲೆ ಸಂಪ್ರದಾಯದಂತೆ ಐದು ಕಲ್ಲುಗಳನ್ನ ಇಟ್ಟು ಅವುಗಳಿಗೆ ಅರಿಶಿಣ ಕುಂಕುಮ, ಬಾಳೆ ಹಣ್ಣು ಇಟ್ಟು ಕಾಯಿ ಒಡೆದು ಪೂಜಿಸುತ್ತಾರೆ. ನಂತರ ಮಹಿಳೆಯರು ತಂದಿದ್ದ ಹಾಲು, ತುಪ್ಪ, ಮೊಟ್ಟೆಗಳನ್ನ ಹುತ್ತದ ತೂತಗಳಿಗೆ ಹಾಕಿ ಒಳ್ಳೆಯದು ಮಾಡು ಎಂದು ನಾಗಪ್ಪನಲ್ಲಿ ಪ್ರಾರ್ಥಿಸಿಕೊಳ್ಳುತ್ತಾರೆ. ಮತ್ತೊಂದು ಕಡೆ ಕೋಳಿ ಕೂಯ್ದು ಹುತ್ತಕ್ಕೆ ರಕ್ತದ ಅಭಿಷೇಕ ಮಾಡಲಾಗುತ್ತದೆ.
Panchanga: ಇಂದು ಷಷ್ಠಿ, ಸುಬ್ರಹ್ಮಣ್ಯನೇ ನಾಗನೇ? ಅಥವಾ ಅವರು ಇಬ್ಬರೇ?
ಅನಾದಿಕಾಲದಿಂದ ಪದ್ದತಿ ಮುಂದುವರಿಕೆ: ಒಂದು ವರ್ಷದಿಂದ ತಾವುಗಳೇ ಸಾಕಿದ ಹುಂಜ(ಗಂಡು ಕೋಳಿ)ವನ್ನ ಬಲಿ ಕೊಡಲಾಗುತ್ತದೆ. ದಂಪತಿಗಳ ಸಮೇತ ಆಗಮಿಸಿ ಕೋಳಿ ಬಲಿಕೊಡುತ್ತಾರೆ. ಹುತ್ತಕ್ಕೆ ಕೋಳಿ ಬಲಿ ಕೊಡುವಾಗ ಬಹಳ ಶ್ರದ್ಧೆ ಭಕ್ತಿಯಿಂದ ಇರಬೇಕಾಗುತ್ತದೆ. ಮಧ್ಯಾಹ್ನದವರೆಗೆ ಉಪವಾಸ ವಿದ್ದು ನಂತರ ಹುತ್ತಕ್ಕೆ ಕೋಳಿಯ ಬಲಿ ಕೊಡಲಾಗುತ್ತದೆ. ಈ ಸಂಪ್ರದಾಯ ಪರಿಶಿಷ್ಟರು ಮತ್ತು ಹಿಂದುಳಿದ ವರ್ಗಗಳಲ್ಲಿ ಆಚರಿಸುತ್ತಾರೆ. ಹುತ್ತಕ್ಕೆ ಕೋಳಿ ರಕ್ತ, ಕೋಳಿ ತಲೆ, ಮೊಟ್ಟೆ ಹಾಕುವ ಪದ್ದತಿ ಇಂದಿನದಲ್ಲ. ಆನಾದಿ ಕಾಲದಿಂದಲೂ ರೂಡಿಯಲ್ಲಿದೆ. ದಿನ ಕಳೆದತಂತೆ ಕೆಲವೊಂದು ಮಾರ್ಪಾಡುಗಳಾಗಿದ್ದರೂ ಹುತ್ತಕ್ಕೆ ಕೋಳಿ ಬಲಿ ಕೊಡುವ ಸಂಪ್ರದಾಯ ಮಾತ್ರ ಇಂದಿಗೂ ಇದೆ. ಷಷ್ಠಿ ದಿನದಂದು ಕೋಳಿ ಬಲಿ ನೀಡಿ ಹುತ್ತಕ್ಕೆ ರಕ್ತದ ನೈವೇಧ್ಯ ಮಾಡುವ ಸಂಪ್ರದಾಯವನ್ನ ಉತ್ತಳ್ಳಿ, ಮೂಡ್ಲುಪುರ, ಯಡಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕಂಡುಬರುತ್ತದೆ.
December 2022: ವರ್ಷದ ಕೊನೆಯ ತಿಂಗಳು ಎಷ್ಟೆಲ್ಲ ವ್ರತ, ಹಬ್ಬ ಇದೆ ಗೊತ್ತಾ?
ಹಾವುಗಳು ಕಚ್ಚಬಾರದೆಂದು ವಿಶೇಷ ಪೂಜೆ: ರೈತರು ಭೂಮಿಯನ್ನ ದೇವರ ರೀತಿಯಲ್ಲಿ ಪೂಜಿಸಿ ಆರಾಧಿಸುತ್ತಾರೆ. ಪ್ರತಿನಿತ್ಯ ಜಮೀನೊಂದಿಗೆ ಭಾಂದವ್ಯ ಹೊಂದಿರುವ ಮಣ್ಣಿನ ಮಕ್ಕಳು ಜಮೀನಿಗೆ ತೆರಳುವಾಗ, ಜಮೀನಲ್ಲಿ ಕೆಲಸ ಮಾಡುವಾಗ ಹಾವುಗಳು ಕಾಣಿಸಿಬಾರದು, ಕಚ್ಚಬಾರದು ಎಂಬ ಉದ್ದೇಶದಿಂದ ಷಷ್ಠಿ ದಿನದಂದು ಹುತ್ತಕ್ಕೆ ಕೋಳಿ ರಕ್ತದ ನೈವೇಧ್ಯ ಮಾಡುಲಾಗುತ್ತದೆ. ಜಮೀನಲ್ಲಿ ಹಾವು ಕಾಣಿಸಿಕೊಂಡಿದ್ದ ಸಂದರ್ಭದಲ್ಲಿ ಮನೆಯ ಹಿರಿಯವರು ಇನ್ನು ಮುಂದೆ ಯಾರಿಗೂ ಕಾಣಿಸಿಕೊಳ್ಳಬೇಡ, ತೊಂದರೆ ಕೊಡಬೇಡ ನಾಗಪ್ಪ ಎಂದು ಹರಕೆ ಹೊತ್ತುಕೊಳ್ಳುತ್ತಾರೆ. ಆ ದಿನವೇ (ಹುಂಜ) ಗಂಡು ಕೋಳಿಯನ್ನ ಹರಕೆ ತೀರಿಸಲು ಬಿಡಲಾಗುತ್ತದೆ. ತಾವು ಹರಕೆ ಹೊತ್ತು ಕೊಂಡಂತೆ ಶ್ರದ್ಧೆಯಿಂದ ಷಷ್ಠಿ ದಿನದಂದು ಕೋಳಿ ರಕ್ತವನ್ನ ಹುತ್ತಕ್ಕೊ ನೈವೇಧ್ಯ ಮಾಡಲಾಗುತ್ತದೆ. ಎಲ್ಲಾ ಹರಕೆ ತೀರಿಸಿದ ನಂತರ ನಾಗಪ್ಪ ಯಾವುದೇ ರೀತಿ ತೊಂದರೆ ಕೊಡುವುದಿಲ್ಲ ಎಂಬ ನಂಬಿಕೆ ಹಳ್ಳಿಗರದ್ದಾಗಿದೆ.
ಹಳ್ಳಿಗಳು ಸಂಪ್ರದಾಯದ ತಾಣಗಳು: ಜಗತ್ತು ಎಷ್ಟೇ ಶರವೇಗದಲ್ಲಿ ಬದಲಾವಣೆಯಾಗುತ್ತಿದ್ದರೂ ಹಳ್ಳಿಗಳಲ್ಲಿ ಸಂಪ್ರದಾಯಗಳು ಜೀವಂತವಾಗಿಯೇ ಎಂಬುದಕ್ಕೆ ಇದೊಂದು ನಿದರ್ಶನ. ಗ್ರಾಮೀಣ ಭಾಗದ ಜನರು ಇದು ಮೂಡನಂಬಿಕೆ ಎಂದು ಗೊತ್ತಿದ್ದರೂ ಇಂತಹ ಸಂಪ್ರದಾಯ ಆಚರಿಸುತ್ತಿರುವುದನ್ನ ನೋಡಿದರೆ ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಮುಗ್ದತೆ ಇದೆ ಎಂಬುದನ್ನ ತೋರಿಸುತ್ತದೆ.