Asianet Suvarna News Asianet Suvarna News

ಯುಗಪುರುಷ ಸ್ವಾಮೀ ಚಿನ್ಮಯಾನಂದರಿಗೆ 108: ಸ್ವಾಮಿ ಆದಿತ್ಯಾನಂದರ ವಿಶೇಷ ಲೇಖನ

ಸ್ವಾಮೀ ಚಿನ್ಮಯಾನಂದರು ಸ್ಥಾಪಿಸಿದ ಸಂಸ್ಥೆ ಚಿನ್ಮಯ ಮಿಷನ್. ಮಾಡಿದ ಕಾರ್ಯ ಜ್ಞಾನ ಪ್ರಚಾರ. ಉಪನಿಷತ್, ಭಗವದ್ಗೀತೆ ಹಾಗೂ ಅನೇಕ ವ್ಯಕ್ತಿತ್ವ ನಿರ್ಮಾಣವನ್ನು ಬೋಧಿಸುವ ಗ್ರಂಥಗಳನ್ನು ಪ್ರಪಂಚದಾದ್ಯಂತ ತಲುಪಿಸಿದ ಹಿರಿಮೆ ಅವರದು.

A memory of the founder of Chinmaya Mission Article Written By Swamy Adityananda gvd
Author
First Published May 10, 2024, 6:52 AM IST

- ಸ್ವಾಮಿ ಆದಿತ್ಯಾನಂದ, ಚಿನ್ಮಯ ಮಿಷನ್‌, ಮಂಡ್ಯ

ಅದು 1977ರ ಇಸವಿ. ಚಿನ್ಮಯ ಸಂಸ್ಥೆಗೆ ರಜತ ಮಹೋತ್ಸವದ ಸಂಭ್ರಮ. ಜಗತ್ತಿನ ನಾನಾ ದೇಶಗಳಿಂದ ಶಿಷ್ಯರು ಹಾಗೂ ಭಕ್ತರು ಸಮಾವೇಶದಲ್ಲಿ ಭಾಗವಹಿಸಿದ್ದರು. ಮುಂಬೈ ನಗರದಲ್ಲಿ ಆಯೋಜಿಸಲ್ಪಟ್ಟಿದ್ದ ಈ ೨೫ರ ಸಂಭ್ರಮದಲ್ಲಿ ಅನೇಕ ಜನ ಪತ್ರಕರ್ತರೂ ಸಹ ಬಂದಿದ್ದರು. ಪತ್ರಕರ್ತನೊಬ್ಬ ಸಂಸ್ಥೆಯ ಸಂಸ್ಥಾಪಕರನ್ನು ಉದ್ದೇಶಿಸಿ, ‘ನಿಮ್ಮ ಸಂಸ್ಥೆಗೆ ರಜತ ಮಹೋತ್ಸವ. ಈ ೨೫ ವರ್ಷಗಳಲ್ಲಿ ನಿಮ್ಮಿಂದ ಉದ್ಧಾರವಾದವರು ಎಷ್ಟು ಮಂದಿ?’ ಎಂದು ಪ್ರಶ್ನಿಸಿದ. ಆತನ ಪ್ರಶ್ನೆಗೆ ಹಸನ್ಮುಖಿಯಾಗಿ ಉತ್ತರಿಸಿದ ಸಂಸ್ಥಾಪಕರು ಹೀಗೆಂದರು - ‘ಈ ೨೫ ವರ್ಷಗಳಲ್ಲಿ ಸಂಸ್ಥೆಯಿಂದ ಉದ್ಧಾರವಾದದ್ದು ಕೇವಲ ಒಬ್ಬ ವ್ಯಕ್ತಿ. ಅದು ನಾನೇ.’

ಆ ವ್ಯಕ್ತಿ ಮತ್ತಾರೂ ಅಲ್ಲ, ಸ್ವಾಮೀ ಚಿನ್ಮಯಾನಂದರು. ಸ್ಥಾಪಿಸಿದ ಸಂಸ್ಥೆ ಚಿನ್ಮಯ ಮಿಷನ್. ಮಾಡಿದ ಕಾರ್ಯ ಜ್ಞಾನ ಪ್ರಚಾರ. ಉಪನಿಷತ್, ಭಗವದ್ಗೀತೆ ಹಾಗೂ ಅನೇಕ ವ್ಯಕ್ತಿತ್ವ ನಿರ್ಮಾಣವನ್ನು ಬೋಧಿಸುವ ಗ್ರಂಥಗಳನ್ನು ಪ್ರಪಂಚದಾದ್ಯಂತ ತಲುಪಿಸಿದ ಹಿರಿಮೆ ಪೂಜ್ಯ ಸ್ವಾಮೀ ಚಿನ್ಮಯಾನಂದರಿಗೆ ಸಲ್ಲುತ್ತದೆ. ಹೇಗೆ ಒಂದು ಬೀಜವು ಮೊಳಕೆಯೊಡೆದು ಹಲವಾರು ಶಾಖೆವುಳ್ಳದ್ದಾಗಿ, ಆ ಶಾಖೆಗಳಿಂದ ಸಾವಿರಾರು ಬೀಜಗಳನ್ನು ಸೃಷ್ಟಿಸುತ್ತದೆಯೋ, ಹಾಗೆಯೇ ಸ್ವಾಮೀ ಚಿನ್ಮಯಾನಂದರೆಂಬ ಜ್ಞಾನಬೀಜ ಜಗತ್ತಿನಾದ್ಯಂತ ತನ್ನ ಬೀಜಗಳ ಮುಖಾಂತರ ಇಂದಿಗೂ ಜ್ಞಾನ ಪ್ರಚಾರವನ್ನು ಮಾಡುತ್ತಿದೆ. 

ಪ್ರಧಾನಿ ಮೋದಿಗೆ ಸುಶಿಕ್ಷಿತ ಮತದಾರರಿಂದ ಬೆಂಬಲ: ಭಾರತದಲ್ಲಿ ವಿಶ್ವಕ್ಕೆ ವಿರುದ್ಧ ಟ್ರೆಂಡ್‌

ಇಂದು ಜಗತ್ತಿನಲ್ಲಿ ಯಾರೇ ಆಗಲಿ, ಗೀತೆಯನ್ನು ಕುರಿತು ಉಪನ್ಯಾಸವನ್ನು ನೀಡುತ್ತಿದ್ದಾರೆ ಎಂದರೆ, ಅವರ ಮೂಲ ಹೇಗೋ ಒಂದು ರೀತಿಯಲ್ಲಿ ಸ್ವಾಮೀ ಚಿನ್ಮಯಾನಂದರೊಂದಿಗೆ ಸಂಬಂಧವನ್ನು ಹೊಂದಿರುತ್ತದೆ. ನೀಡಿದಷ್ಟೂ ಹೆಚ್ಚಾಗುವಂಥದ್ದು ಈ ಜಗತ್ತಿನಲ್ಲಿರುವುದು ಒಂದೇ, ಅದೇ ಜ್ಞಾನ. ಸ್ವಾಮೀಜಿಯವರು ಉಪನಿಷತ್ ಹಾಗೂ ಗೀತೆಯ ಪ್ರವಚನವನ್ನು ಜೀವನಪರ್ಯಂತವಾಗಿ ಮಾಡಿದರು. ಕಲಿಸುವಾಗ ಮೊದಲು ಕಲಿಯುವುದು ಕಲಿಸಿದಾತ. ಇದನ್ನರಿತಿದ್ದ ಸ್ವಾಮೀಜಿ ಸುಮಾರು ೫೦೦ಕ್ಕೂ ಹೆಚ್ಚು ಗೀತಾಜ್ಞಾನಯಜ್ಞಗಳನ್ನು ತಮ್ಮ ಜೀವನದಲ್ಲಿ ಮಾಡಿದರು. ಗೀತೆಯ ಒಂದು ಅಧ್ಯಾಯದ ೮ ದಿನಗಳ ಕಾಲ ಚಿಂತನೆಯೇ ‘ಗೀತಾಜ್ಞಾನಯಜ್ಞ’.

ಕೇರಳದಿಂದ ಬಂದವರು
ಸ್ವಾಮೀ ಚಿನ್ಮಯಾನಂದರು ಮೂಲತಃ ಕೇರಳ ರಾಜ್ಯದವರು. ಸಾವಿರದ ಒಂಬೈನೂರ ಹದಿನಾರರ ಮೇ ತಿಂಗಳ ಎಂಟರಂದು ಕೇರಳದ ಎರ್ನಾಕುಲಂ ಊರಲ್ಲಿ ಅವರ ಜನನ (೮.೫.೧೯೧೬). ತಂದೆ ತಾಯಿಗಳು ಇಟ್ಟ ಹೆಸರು ಬಾಲಕೃಷ್ಣ ಮೆನನ್. ಪ್ರಾಥಮಿಕ ವಿದ್ಯಾಭ್ಯಾಸ ಕೇರಳದಲ್ಲಿ ಹಾಗೂ ಹೆಚ್ಚಿನ ವ್ಯಾಸಂಗವನ್ನು ಲಖ್ನೋನಲ್ಲಿ ಮಾಡಿದರು. ತಂದೆಯ ಇಚ್ಛೆಯಂತೆ ಸ್ನಾತಕೋತ್ತರ ವಕೀಲ ಪದವಿಯನ್ನು ಪಡೆದರು. ಆದರೆ ಬಾಲಕೃಷ್ಣ ಮೆನನ್‌ರ ಆಸಕ್ತಿಯಿದ್ದದ್ದು ಪತ್ರಿಕೋದ್ಯಮದಲ್ಲಿ. ದೆಹಲಿಯ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯಲ್ಲಿ ಉಪಸಂಪಾದಕ ವೃತ್ತಿಯನ್ನು ಮಾಡತೊಡಗಿದರು. ಭಾರತದ ಆರ್ಥಿಕ ಹಿನ್ನಡೆಗೆ ಸಾಧು ಸಂತರೇ ಕಾರಣ. ಅವರುಗಳು ದುಡಿದರೆ ದೇಶಕ್ಕೆ ಹಿತವೆಂಬ ಮನೋಭಾವದಿಂದ ಸಂತ ಮಹಾಂತರ ಜೀವನವನ್ನು ಹಾಗೂ ಕಪಟವನ್ನು ಜಗತ್ತಿಗೆ ಪರಿಚಯಿಸುತ್ತೇನೆ ಎಂಬ ದೃಢವಿಶ್ವಾಸದಿಂದ ದೆಹಲಿಯಿಂದ ಹೃಷೀಕೇಶಕ್ಕೆ ಬಂದು ಸ್ವಾಮೀ ಶಿವಾನಂದರ ದಿವ್ಯಜೀವನಸಂಘದಲ್ಲಿ ತಂಗಿದರು.

ಸ್ವಾಮೀ ಶಿವಾನಂದರ ಶಿಷ್ಯರು
ಸ್ವಾಮೀ ಶಿವಾನಂದರು ಮೂಲತಃ ತಮಿಳುನಾಡಿನವರು. ವೃತ್ತಿಯಲ್ಲಿ ವೈದ್ಯರಾಗಿದ್ದ ಇವರು ಮಲೇಶಿಯಾದಲ್ಲಿ ಕೆಲಸ ಮಾಡುತ್ತಿದ್ದರು. ಆತ್ಮಜ್ಞಾನದಲ್ಲಿ ಜಿಜ್ಞಾಸೆ ಹೊಂದಿದವರಾಗಿ ಭಾರತಕ್ಕೆ ಹಿಂತಿರುಗಿ ಬಂದು ವಿಧಿವತ್ತಾಗಿ ಸಂನ್ಯಾಸ ಸ್ವೀಕರಿಸಿ, ಹೃಷೀಕೇಶದಲ್ಲಿ ದಿವ್ಯಜೀವನ ಸಂಘವನ್ನು ಸ್ಥಾಪಿಸಿದರು. ಬಾಲಕೃಷ್ಣ ಮೆನನ್ ಪೂಜ್ಯ ಸ್ವಾಮೀ ಶಿವಾನಂದರ ಜೀವನ ಹಾಗೂ ಅವರ ಕಾರ್ಯಗಳನ್ನು ನೋಡಿ ತಮ್ಮ ಮನಸ್ಸಿನಲ್ಲಿದ್ದ ತಪ್ಪು ತಿಳುವಳಿಕೆಯನ್ನು ಬದಲಿಸಿಕೊಂಡು, ಕೆಲಕಾಲ ಅಲ್ಲೆ ವಾಸಿಸತೊಡಗಿದರು. ಅಧ್ಯಾತ್ಮ ಗ್ರಂಥಗಳೆಂದರೆ ಸತ್ತಮೇಲಿನ ವಿಚಾರವನ್ನು ಏನೋ ಹೇಳುತ್ತವೆ ಎಂದು ತಿಳಿದುಕೊಂಡಿದ್ದ ಚಿನ್ಮಯರಿಗೆ ಪರಮಾಶ್ಚರ್ಯ ಕಾದಿತ್ತು. ಸ್ವಾಮೀ ಶಿವಾನಂದರು ಇಂಗ್ಲೀಷ್ ಭಾಷೆಯಲ್ಲಿ ಪ್ರವಚನ ಮಾಡುತ್ತಿದ್ದುದರಿಂದ ಇವರಿಗೆ ನಮ್ಮ ಶಾಸ್ತ್ರಗಳ ಸರಿಯಾದ ಪರಿಚಯವಾಯಿತು. ಸನಾತನ ಗ್ರಂಥಗಳು ಮಾನವನ ವ್ಯಕ್ತಿತ್ವ ನಿರ್ಮಾಣ ಮಾಡುವ ಪುಸ್ತಕಗಳು ಎಂಬುದು ಸ್ಪಷ್ಟವಾಯಿತು.

1946ರಲ್ಲಿ ಸನ್ಯಾಸಗ್ರಹಣ
ಬಾಲಕೃಷ್ಣ ಮೆನನ್‌ಗೆ ಅಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚಾಗತೊಡಗಿತು. ನಿತ್ಯವೂ ಸ್ವಾಮೀ ಶಿವಾನಂದರೊಡನೆ ಸಂವಾದವನ್ನು ಮಾಡುತ್ತಿದ್ದರು. ಇವರ ಆಸಕ್ತಿಯನ್ನು ಗುರುತಿಸಿ ಸ್ವಾಮೀ ಶಿವಾನಂದರು ೧೯೪೬ರ ಶಿವರಾತ್ರಿಯ ಶುಭದಿನದಂದು ಬಾಲಕೃಷ್ಣ ಮೆನನ್‌ಗೆ ಸಂನ್ಯಾಸವನ್ನು ನೀಡಿ, ಸ್ವಾಮೀ ಚಿನ್ಮಯಾನಂದ ಸರಸ್ವತಿ ಎಂಬ ನಾಮಧೇಯವನ್ನು ನೀಡಿದರು. ಸಂನ್ಯಾಸಿಯಾದರೂ ಚಿನ್ಮಯಾನಂದರ ಜ್ಞಾನದಾಹ ಇಂಗಲಿಲ್ಲ. ಇದನ್ನರಿತ ಶಿವಾನಂದರು ಚಿನ್ಮಯಾನಂದರನ್ನು ಉತ್ತರಕಾಶಿಯಲ್ಲಿದ್ದ ಸ್ವಾಮೀ ತಪೋವನ ಮಹರಾಜರ ಬಳಿ ಹೆಚ್ಚಿನ ವ್ಯಾಸಂಗಕ್ಕಾಗಿ ಕಳುಹಿಸಿದರು.

ತಪೋವನದಲ್ಲಿ ತಪಃಸಿದ್ಧಿ
ಸ್ವಾಮೀ ತಪೋವನ ಮಹರಾಜರು ಸಂಸ್ಕೃತ ಪಂಡಿತರು ಮಾತ್ರವಲ್ಲ, ಶ್ರೋತ್ರಿಯರೂ, ಬ್ರಹ್ಮನಿಷ್ಠರೂ ಆಗಿದ್ದರು. ಅವರನ್ನು ಜನರು ‘ಹಿಮವದ್ ವಿಭೂತಿ’ ಎಂದು ಗೌರವಿಸುತ್ತಿದ್ದರು. ಸ್ವಾಮೀ ಚಿನ್ಮಯಾನಂದರು ಹಲವಾರು ವರ್ಷ ತಪೋವನ ಮಹರಾಜರ ಬಳಿ ವೇದಾಂತವನ್ನು ಕಲಿತರು. ಉತ್ತರಕಾಶಿ ತಪೋವನ ಮಹರಾಜರು ವಾಸಿಸುತ್ತಿದ್ದ ಊರು. ಅಲ್ಲಿ ಕೇವಲ ಚಳಿಗಾಲದಲ್ಲಿ ಮಾತ್ರವಿದ್ದು ಬೇಸಿಗೆಯಲ್ಲಿ ಗಂಗೆಯ ಮೂಲವಾದ ಗೋಮುಖದಲ್ಲಿ ಇರುತ್ತಿದ್ದರು. ಇಂದಿಗೂ ಗೋಮುಖದಿಂದ ಹದಿನಾಲ್ಕು ಕಿಲೋಮೀಟರ್‌ದೂರದಲ್ಲಿ ತಪೋವನ ಎಂಬ ಸ್ಥಳವಿದೆ. ಇದು ಅವರ ತಪೋಭೂಮಿ.

43 ವರ್ಷಗಳ ಕಾಲ ಪ್ರವಚನ
ಗಂಗೆ ಹಿಮಾಲಯದ ಜನರಿಗೆ ಪರಮ ಪವಿತ್ರ ನದಿ. ಸ್ವಾಮೀ ಚಿನ್ಮಯಾನಂದರೂ ಗಂಗೆಯಿಂದ ಉತ್ತೇಜಿತರಾದರು. ಗೋಮುಖದಲ್ಲಿ ಹುಟ್ಟಿದ ಗಂಗೆ ಕೊನೆಗೆ ಕಲ್ಕತ್ತಾದಲ್ಲಿ ಗಂಗಾಸಾಗರವನ್ನು ಸೇರುತ್ತದೆ. ಹುಟ್ಟಿದ ಜಾಗದಿಂದ ಸೇರುವ ಜಾಗದ ನಡುವೆ ಹಲವಾರು ಪುಣ್ಯಕ್ಷೇತ್ರಗಳಿವೆ. ಗಂಗೆಯನ್ನು ವ್ಯವಸಾಯಕ್ಕೆ ಉಪಯೋಗಿಸುವ ರೈತರಿಗಂತೂ ಗಂಗೆ ಜೀವನದಿ. ಸಾಧು ಸಂತರಿಗೆ ಪರಮ ಪವಿತ್ರ ನದಿ. ಸ್ವಾಮೀಜಿಯವರು ನಿತ್ಯವೂ ಉತ್ತರಕಾಶಿಯಲ್ಲಿ ಗಂಗೆಯನ್ನು ನೋಡುತ್ತಿದ್ದರು. ಗಂಗೆಯ ಹಲವಾರು ಕಾರ್ಯಗಳನ್ನು ಗಮನಿಸಿದ ಗುರುದೇವರಿಗೆ ‘ನಾನೇಕೆ ಈ ಜ್ಞಾನಗಂಗೆಯನ್ನು ಭಾರತದಲ್ಲಿ ಹಂಚಬಾರದು’ ಎಂಬ ಆಲೋಚನೆ ಬಂದಿತು. ಸ್ವಾಮೀ ತಪೋವನ ಮಹರಾಜರಿಂದ ಅನುಮತಿ ಪಡೆದು ಹಿಮಾಲಯದಿಂದ ದಕ್ಷಿಣದತ್ತ ಪ್ರಯಾಣ ಬೆಳೆಸಿದರು. ೧೯೫೧ರ ಡಿಸೆಂಬರ್ ೩೧ರಂದು ಪುಣೆಯಲ್ಲಿ ತಮ್ಮ ಮೊದಲ ಪ್ರವಚನವನ್ನು ಪ್ರಾರಂಭಿಸಿದರು. ಹೀಗೆ ಆರಂಭವಾದ ಅವರ ಪ್ರವಚನಮಾಲೆ ಅವಿರತವಾಗಿ ೪೩ ವರ್ಷಗಳ ಕಾಲ ನಡೆಯಿತು. ಸ್ವಾಮೀಜಿಯವರು ದೇಶವಿದೇಶಗಳಲ್ಲಿ ವಿಖ್ಯಾತರಾದರು.

370 ರದ್ದು: ಖರ್ಗೆ ಅವರದ್ದು ತುಕ್ಡೆ ತುಕ್ಡೆ ಗ್ಯಾಂಗ್‌ನ ಮನಸ್ಥಿತಿ: ಪ್ರಧಾನಿ ಮೋದಿ ವಾಗ್ದಾಳಿ

ಜಗತ್ತಿನಾದ್ಯಂತ 108ನೇ ಜನ್ಮದಿನ
೨೦೨೪ನೇ ಇಸವಿಯಲ್ಲಿ ಇಡೀ ವಿಶ್ವದಾದ್ಯಂತ ಪೂಜ್ಯ ಗುರುದೇವ ಸ್ವಾಮೀ ಚಿನ್ಮಯಾನಂದರ ೧೦೮ನೇ ಜನ್ಮದಿನವನ್ನು ಆಚರಿಸಲಾಗುತ್ತಿದೆ. ಬೆಂಗಳೂರಿನಲ್ಲಿ ೧೦೦೮ ಮನೆಗಳಲ್ಲಿ ಸ್ವಾಮೀಜಿಯವರ ಪಾದುಕಾಪೂಜೆಯನ್ನು ಆಯೋಜಿಸಲಾಯಿತು. ಈ ಪೂಜೆಯ ಸಮಾರೋಪ ಸಮಾರಂಭವನ್ನು ಮೇ ೮ರಿಂದ ೧೨ರ ವರೆಗೆ ಬೆಂಗಳೂರಿನ ಜೆ.ಪಿ ನಗರದ ೪ನೇ ಹಂತದಲ್ಲಿರುವ ಚಿನ್ಮಯ ಮಿಷನ್ನಿನ ಶ್ರೀಪಾದಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ ಮೇ ೧೨ರ ಭಾನುವಾರದಂದು ಬೆಳಿಗ್ಗೆ ೧೦ರಿಂದ ೧ರವರೆಗೆ ಶ್ರೀ ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರರು ಹಾಗೂ ಬೆಂಗಳೂರು ರಾಜರಾಜೇಶ್ವರೀ ನಗರದ ಶ್ರೀ ಕೈಲಾಸ ಆಶ್ರಮದ ಜಗದ್ಗುರು ಶ್ರೀ ಜಯೇಂದ್ರ ಪುರಿ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ಈ ಮಹೋತ್ಸವವು ಸಮಾರೋಪಗೊಳ್ಳಲಿದೆ. ಭಕ್ತಾದಿಗಳು ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡು ಕೃತಾರ್ಥರಾಗಬೇಕೆಂದು ಕೋರಲಾಗಿದೆ.

Latest Videos
Follow Us:
Download App:
  • android
  • ios