370 ರದ್ದು: ಖರ್ಗೆ ಅವರದ್ದು ತುಕ್ಡೆ ತುಕ್ಡೆ ಗ್ಯಾಂಗ್‌ನ ಮನಸ್ಥಿತಿ: ಪ್ರಧಾನಿ ಮೋದಿ ವಾಗ್ದಾಳಿ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರದು ತುಕ್ಡೆ ತುಕ್ಡೆ ಗ್ಯಾಂಗ್‌ನ ಮನಸ್ಥಿತಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ.
ನವಾಡಾ (ಬಿಹಾರ) (ಏ.08): ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರದು ತುಕ್ಡೆ ತುಕ್ಡೆ ಗ್ಯಾಂಗ್‌ನ ಮನಸ್ಥಿತಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ. ಇತ್ತೀಚೆಗೆ ರಾಜಸ್ಥಾನದ ಚುನಾವಣಾ ಪ್ರಚಾರದಲ್ಲಿ ಮಾತನಾಡುವಾಗ ಖರ್ಗೆ ಅವರು, ‘ಪ್ರಧಾನಿ ಮೋದಿ ಇಲ್ಲಿಗೆ ಬಂದು ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ಪರಿಚ್ಛೇದ ರದ್ದತಿಯ ಬಗ್ಗೆ ಮಾತನಾಡುತ್ತಾರೆ. ಅದಕ್ಕೂ ರಾಜಸ್ಥಾನಕ್ಕೂ ಏನು ಸಂಬಂಧ? ಜಮ್ಮು ಕಾಶ್ಮೀರಕ್ಕೆ ಹೋಗಿ ಇದನ್ನು ಹೇಳಲಿ’ ಎಂದಿದ್ದರು.
ಬಿಹಾರದಲ್ಲಿ ಭಾನುವಾರ ಲೋಕಸಭೆ ಚುನಾವಣೆಯ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಮೋದಿ, ‘ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನ ಸಣ್ಣ ಹುದ್ದೆಯಲ್ಲ. ಆದರೆ ಅದರ ಅಧ್ಯಕ್ಷರು 370ನೇ ವಿಧಿಗೂ ರಾಜಸ್ಥಾನಕ್ಕೂ ಏನೂ ಸಂಬಂಧವಿಲ್ಲ ಎಂದುಕೊಂಡಿದ್ದಾರೆ. ಜಮ್ಮು ಕಾಶ್ಮೀರವು ಭಾರತದ ಭಾಗವಲ್ಲವೇ? ಅವರ ಮನಸ್ಥಿತಿ ತುಕ್ಡೆ ತುಕ್ಡೆ ಗ್ಯಾಂಗ್‌ನ ಮನಸ್ಥಿತಿಯನ್ನು ಹೋಲುತ್ತದೆ’ ಎಂದು ವಾಗ್ದಾಳಿ ನಡೆಸಿದರು.
‘ರಾಜಸ್ಥಾನ ಹಾಗೂ ಬಿಹಾರದವರೂ ಸೇರಿದಂತೆ ದೇಶದ ಎಲ್ಲೆಡೆಯ ಭದ್ರತಾ ಸಿಬ್ಬಂದಿ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡುತ್ತಾ ಪ್ರಾಣ ಕಳೆದುಕೊಂಡಿದ್ದಾರೆ. ಅವರ ದೇಹಗಳು ರಾಷ್ಟ್ರಧ್ವಜವನ್ನು ಹೊದ್ದುಕೊಂಡು ಇಲ್ಲಿಗೆ ಬಂದಿವೆ’ ಎಂದೂ ಮೋದಿ ಹೇಳಿದರು. ಇದೇ ವೇಳೆ ಮೋದಿ ಅವರ ಗ್ಯಾರಂಟಿಗಳನ್ನು ನೋಡಿ ಇಂಡಿಯಾ ಕೂಟ ಹತಾಶೆಗೊಂಡಿದೆ. ಕಾಂಗ್ರೆಸ್ ಸನಾತನ ಧಮದ ವಿರುದ್ಧ ಇರುವ ಪಕ್ಷ ಎಂದೂ ವಾಗ್ದಾಳಿ ನಡೆಸಿದರು.
ಡಿ.ಕೆ.ಸುರೇಶ್ ವಿರುದ್ಧ ಮತ್ತೆ ಕಿಡಿ: ದಕ್ಷಿಣ ಭಾರತದವರು ಪ್ರತ್ಯೇಕ ದೇಶ ಕೇಳಬೇಕಾಗುತ್ತದೆ ಎಂದು ಹೇಳಿದ್ದ ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ವಿರುದ್ಧವೂ ಪುನಃ ಪರೋಕ್ಷ ವಾಗ್ದಾಳಿ ನಡೆಸಿದ ಮೋದಿ, ‘ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಬಹಿರಂಗವಾಗಿ ದಕ್ಷಿಣ ಭಾರತಕ್ಕೆ ಪ್ರತ್ಯೇಕ ದೇಶ ಕೇಳಿದ್ದರು. ಅವರ ಹೇಳಿಕೆಯಿಂದಲೇ ಆ ಪಕ್ಷದ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಬಹುದು’ ಎಂದೂ ಕಿಡಿಕಾರಿದರು.
ಚುನಾವಣೆ ಗೆಲ್ಲಲು ಅಲ್ಲ, ಭ್ರಷ್ಟರ ರಕ್ಷಣೆಗಾಗಿ ಕಾಂಗ್ರೆಸ್ ರ್‍ಯಾಲಿ: ಪ್ರಧಾನಿ ಮೋದಿ ವ್ಯಂಗ್ಯ
ಈ ಬಾರಿ ಬಿಜೆಪಿ 400 ಸೀಟುಗಳಿಗಿಂತ ಹೆಚ್ಚು ಗೆಲ್ಲಲಿದೆ. ಎಲ್ಲಾ ಸಮೀಕ್ಷೆಗಳೂ ಎನ್‌ಡಿಎ ಭರ್ಜರಿ ಜಯಭೇರಿ ಬಾರಿಸಲಿದೆ ಎಂದೇ ಹೇಳಿವೆ. ಆದರೂ ನಾನೇಕೆ ಇಷ್ಟೊಂದು ಪ್ರಚಾರ ಮಾಡುತ್ತಿದ್ದೇನೆ ಎಂದು ಕೆಲವರು ಕೇಳುತ್ತಾರೆ. ಬಿರುದು ಬಾವಲಿಗಳನ್ನು ಧರಿಸಿ ವಿಶ್ರಾಂತಿ ಪಡೆಯುವ ವ್ಯಕ್ತಿ ನಾನಲ್ಲ. ಬಡ ಕುಟುಂಬದಲ್ಲಿ ಹುಟ್ಟಿದ ನಾನು ಈ ದೇಶದಿಂದ ಬಡತನವನ್ನು ಸಂಪೂರ್ಣ ನಿರ್ಮೂಲನೆ ಮಾಡುವವರೆಗೂ ವಿರಮಿಸುವುದಿಲ್ಲ.
- ನರೇಂದ್ರ ಮೋದಿ, ಪ್ರಧಾನಿ