45 ದಿನಗಳ ಕುಂಭಮೇಳದಲ್ಲಿ ಕಾಲ್ತುಳಿತದಿಂದ ಕೆಲ ಭಕ್ತರು ಮೃತಪಟ್ಟರು. ಆದರೆ, ಮೃತರೆಂದು ಭಾವಿಸಿದ್ದ ಖುಂಟಿ ಗುರು ಎಂಬ ವ್ಯಕ್ತಿ ತಿಥಿಯ ದಿನ ಮನೆಗೆ ಮರಳಿದ್ದಾರೆ. ಗಂಗಾ ಸ್ನಾನಕ್ಕೆಂದು ಹೋದ ಖುಂಟಿ ಗುರು ಸಾಧುಗಳೊಂದಿಗೆ ತೆರಳಿದ್ದರು. ಎರಡು ವಾರಗಳ ನಂತರ, ಸತ್ಯ ತಿಳಿದು ಮನೆಗೆ ವಾಪಸಾದರು. ಕಾಲ್ತುಳಿತದಲ್ಲಿ 30 ಯಾತ್ರಿಕರು ಮೃತಪಟ್ಟು, 60 ಜನರು ಗಾಯಗೊಂಡಿದ್ದರು.
45 ದಿನಗಳ ವಿಶ್ವದ ಅತಿದೊಡ್ಡ ಧಾರ್ಮಿಕ ಜಾತ್ರೆ ಕುಂಭಮೇಳ ಮುಗಿದು ಕೆಲವು ದಿನಗಳೇ ಕಳೆದಿವೆ. ಇಡೀ ವಿಶ್ವವೇ ಭಾರತದತ್ತ ಬೆರಗುಗಣ್ಣಿನಿಂದ ನೋಡುವಂಥ ಅದ್ಭುತ ಕ್ಷಣಕ್ಕೆ ಉತ್ತರ ಪ್ರದೇಶ ಸಾಕ್ಷಿಯಾಗಿದೆ. ಹಲವು ವಿಧ್ವಂಸಕ ಕೃತ್ಯಗಳನ್ನು ನಡೆಸುವ ಸೂಚನೆ ಸಿಗುತ್ತಿದ್ದಂತೆಯೇ ಇಲ್ಲಿ ನಡೆಸಿದ ಭದ್ರತಾ ವ್ಯವಸ್ಥೆ ದಾಖಲೆಯನ್ನೂ ಬರೆದಾಗಿದೆ. ವಿಧ್ವಂಸಕ ಕೃತ್ಯಗಳು ನಡೆಸಲು ವಿಫಲವಾದ ಕಾರಣದಿಂದ ಹೇಗಾದರೂ ಮಾಡಿ ಕುಂಭಮೇಳಕ್ಕೆ ಕಪ್ಪುಚುಕ್ಕೆ ತರಬೇಕು ಎನ್ನುವ ಕಾರಣದಿಂದಾಗಿಯೇ ಕೆಲವು ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಹರಡಿದ್ದ ಸುಳ್ಳು ಸುದ್ದಿಯಿಂದ ಉಂಟಾದ ಕಾಲ್ತುಳಿತದಲ್ಲಿ ಕೆಲವು ಭಕ್ತರು ಪ್ರಾಣ ಕಳೆದುಕೊಂಡ ದುರ್ಘಟನೆಯೂ ನಡೆದೇ ಹೋಯ್ತು. ಅದರ ಹಿಂದಿರುವ ಕಾಣದ ಕೈಗಳ ಕುರಿತು ತನಿಖೆ ನಡೆಯುತ್ತಿದೆ.
ಆದರೆ, ಇದರ ನಡುವೆಯೇ, ಕುತೂಹಲ ಎನ್ನುವಂಥ ಒಂದು ಘಟನೆ ನಡೆದಿರುವುದು ಇದೀಗ ಬಯಲಿಗೆ ಬಂದಿದೆ. ಅದೇನೆಂದರೆ ಕಾಲ್ತುಳಿತಕ್ಕೆ ಮೃತಪಟ್ಟಿರುವುದಾಗಿ ಅಂದುಕೊಂಡಿದ್ದ ವ್ಯಕ್ತಿ, ತನ್ನ ತಿಥಿಯ ದಿನವೇ ಮನೆಗೆ ಬಂದಿರುವ ಘಟನೆ ಇದಾಗಿದೆ. ಕಾಲ್ತುಳಿತ ನಡೆದ ಬಳಿಕ ಇವರು ಕೂಡ ಮೃತಪಟ್ಟಿರುವುದಾಗಿ ಹೇಳಲಾಗಿತ್ತು. 13ನೇ ದಿನ ಮತ್ತು ಸಂಬಂಧಿಕರು 'ತೆಹರ್ವಿ'ಗಾಗಿ ಒಟ್ಟುಗೂಡಿದ್ದರು, ಇದು ವ್ಯಕ್ತಿಯೊಬ್ಬನ ಸಾವಿನ 13 ನೇ ದಿನದಂದು ನಡೆದ ಧಾರ್ಮಿಕ ಆಚರಣೆಯಾಗಿದೆ. ಆದರೆ ದಿಢೀರನೆ ಆ ವ್ಯಕ್ತಿ ಪ್ರತ್ಯಕ್ಷನಾಗಿ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ! ಒಂದು ಕಡೆ ಸತ್ತು ಹೋಗಿರುವ ನೋವು, ಇನ್ನೊಂದು ಕಡೆ ದಿಢೀರ್ ಪ್ರತ್ಯಕ್ಷ, ಕಣ್ಣುಗಳನ್ನೇ ನಂಬಲಾಗದ ಸ್ಥಿತಿ... ಆ ಕುಟುಂಬದವರಿಗೆ ಒಂದು ಕ್ಷಣ ಏನಾಗುತ್ತಿದೆ ಎಂದು ಊಹಿಸುವುದಕ್ಕೇ ಆಗದ ಸ್ಥಿತಿ ನಿರ್ಮಾಣವಾಗಿತ್ತು.
10 ಸಾವಿರ ಕೋಟಿಯ ಕುಂಭಮೇಳದ ಆದಾಯವೆಷ್ಟು? ಬಿಕರಿಯಾದ ವಸ್ತುಗಳೆಷ್ಟು? ಅಬ್ಬಬ್ಬಾ ಎನ್ನುವ ಮಾಹಿತಿ ಇಲ್ಲಿದೆ...
ಇನ್ನು ಈ ವ್ಯಕ್ತಿಯ ಕುರಿತು ಹೇಳುವುದಾದರೆ, ಈ ಪುಣ್ಯಾತ್ಮನ ಹೆಸರು ಖುಂಟಿ ಗುರು. ವಯಸ್ಸು ಸುಮಾರು 60. ಪ್ರಯಾಗ್‌ರಾಜ್‌ನ ಝೀರೋ ರಸ್ತೆ ಪ್ರದೇಶದ ಚಾಚಂದ್ ಗಾಲಿಯ ನಿವಾಸಿ. ಅಂದು ಕಾಲ್ತುಳಿತ ನಡೆದ ಸಂದರ್ಭದಲ್ಲಿ ಅವರು ಅದೇ ಸ್ಥಳದಲ್ಲಿ ಇದ್ದರು. ಮೌನಿ ಅಮವಾಸ್ಯೆಯಾಗಿದ್ದ ಹಿನ್ನೆಲೆಯಲ್ಲಿ, ಗಂಗಾ ಸ್ನಾನಕ್ಕೆ ಹೋಗಿ ಬರುವುದಾಗಿ ಅವರು ಹೇಳಿದ್ದರು. ಆದರೆ ನಾಪತ್ತೆಯಾಗಿದ್ದರು. ಕಾಲ್ತುಳಿತದಲ್ಲಿ ಕೆಲವು ಶವಗಳು ಗುರುತಿಸಲಾಗದ ರೀತಿಯಲ್ಲಿ ಆಗಿತ್ತು. ಖುಂಟಿ ಗುರುವಿನ ಶವ ಸಿಕ್ಕಿರಲಿಲ್ಲ. ಆದರೆ ಆತ ಸತ್ತಿರುವುದಾಗಿಯೇ ಹೇಳಲಾಗಿತ್ತು.
ಆದರೆ, ಆ ಸಮಯದಲ್ಲಿ ಸಾಧುಗಳಿಂದ ಆಕರ್ಷಿತನಾಗಿದ್ದ ಖುಂಟಿ ಗುರು, ಅವರ ಜೊತೆಯೇ ನಡೆದು ಹೋಗಿಬಿಟ್ಟಿದ್ದಾರೆ! ಘಟನೆ ನಡೆದ ಎರಡು ವಾರಗಳವರೆಗೂ ಸಾಧುಗಳ ಜೊತೆಯಲ್ಲಿಯೇ ಇದ್ದಾರೆ. ಅವರ ಜೊತೆ ಗಾಂಜಾ ಸೇವನೆ ಮಾಡಿದ ಬಳಿಕ ಈ ಲೋಕದ ಪರಿವೇ ಇರಲಿಲ್ಲ. ಇದೇ ಕಾರಣಕ್ಕೆ ಮನೆಯನ್ನೂ ಸಂಪರ್ಕಿಸಲಿಲ್ಲ, ಅಲ್ಲಿ ಏನಾಗುತ್ತಿದೆ ಎನ್ನುವುದೂ ತಿಳಿದಿರಲಿಲ್ಲ. ಅಲ್ಲಿಯ ವಾತಾವರಣದಲ್ಲಿ ಬೆರೆತು ಹೋದ ನನಗೆ ಏನೂ ನೆನಪು ಇರಲಿಲ್ಲ. ಅವರ ಜೊತೆಯಲ್ಲಿಯೇ ಸಾಗಿ ಹೋಗುತ್ತಿದ್ದೆ. ಗಾಂಜಾ ನಶೆ ಇಳಿದಾಗ ವಾಸ್ತವ ಲೋಕಕ್ಕೆ ಬಂದಿದ್ದಾನೆ! ಆಗ ಮನೆಯ ನೆನಪಾಗಿದೆ. ಅದು ಕರೆಕ್ಟ್ ಆಗಿ ಕಾಲ್ತುಳಿತವಾಗಿ 13ನೇ ದಿನ. ಅಂದು ಶ್ರಾದ್ಧಕ್ಕಾಗಿ ಎಲ್ಲಾ ತಯಾರಿ ನಡೆಸಲಾಗಿತ್ತು. ಅಂದಹಾಗೆ, ಮಹಾ ಕುಂಭದ ಸಮಯದಲ್ಲಿ, ಜನವರಿ 29ರಂದು ಕಾಲ್ತುಳಿತ ಸಂಭವಿಸಿದಾಗ ಕನಿಷ್ಠ 30 ಯಾತ್ರಿಕರು ಸಾವನ್ನಪ್ಪಿದರು ಮತ್ತು 60 ಜನರು ಗಾಯಗೊಂಡರು ಎನ್ನಲಾಗಿದೆ.
