Asianet Suvarna News Asianet Suvarna News

8 ದಿನಗಳ ಚಿಕ್ಕಬಳ್ಳಾಪುರ ಉತ್ಸವಕ್ಕೆ ಅದ್ಧೂರಿ ಚಾಲನೆ: ದಸರಾ ಜಂಬೂ ಸವಾರಿ ಶೈಲಿಯಲ್ಲಿ ಮೆರವಣಿಗೆ

ಜಿಲ್ಲೆಗೆ 15 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ 8 ದಿನಗಳ ಕಾಲ ಆಯೋಜಿಸಿರುವ ‘ಚಿಕ್ಕಬಳ್ಳಾಪುರ ಉತ್ಸವ’ಕ್ಕೆ ಶನಿವಾರ ಅದ್ಧೂರಿ ಚಾಲನೆ ನೀಡಲಾಯಿತು. 

A grand inauguration for the 8 days Chikkaballapur Utsav gvd
Author
First Published Jan 8, 2023, 6:57 AM IST

ಚಿಕ್ಕಬಳ್ಳಾಪುರ (ಜ.08): ಜಿಲ್ಲೆಗೆ 15 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ 8 ದಿನಗಳ ಕಾಲ ಆಯೋಜಿಸಿರುವ ‘ಚಿಕ್ಕಬಳ್ಳಾಪುರ ಉತ್ಸವ’ಕ್ಕೆ ಶನಿವಾರ ಅದ್ಧೂರಿ ಚಾಲನೆ ನೀಡಲಾಯಿತು. ನಗರದ ಸರ್‌.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಸಂಜೆ ನಡೆದ ವರ್ಣರಂಜಿತ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಉತ್ಸವಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿ, ಯಾವುದೇ ಕಾರ್ಯ ಸಾಧನೆಗೆ ಅಥವಾ ಕೆಲಸ ಮಾಡಬೇಕಾದರೆ ಹುರುಪು, ಉತ್ಸಾಹ ಬಹಳ ಮುಖ್ಯ. ಇಂತಹ ಉತ್ಸವಗಳಿಂದ ಮಾತ್ರ ಜನರಲ್ಲಿ ಜೀವನೋತ್ಸಾಹ ಹೆಚ್ಚಾಗಲು ಸಾಧ್ಯ. ಚಿಕ್ಕಬಳ್ಳಾಪುರ ಉತ್ಸವ ನೋಡಲು ನಿಜವಾಗಿಯೂ ಎರಡು ಕಣ್ಣು ಸಾಲದು. 

ಇಡೀ ದೇಶದಲ್ಲಿ ಒಂದು ಜಿಲ್ಲೆಗೆ ಎರಡು ಭಾರತ ರತ್ನಗಳು ಬಂದಿದ್ದರೆ ಅದು ಚಿಕ್ಕಬಳ್ಳಾಪುರ ಮಾತ್ರ. ಖ್ಯಾತ ಎಂಜಿನಿಯರ್‌ ಸರ್‌ ಎಂ. ವಿಶ್ವೇಶ್ವರಯ್ಯ ಹಾಗೂ ವಿಜ್ಞಾನಿ ಸಿಎನ್‌ಆರ್‌ ರಾವ್‌ ಈ ಜಿಲ್ಲೆಯ ಎರಡು ಭಾರತರತ್ನಗಳು ಎಂದು ಕೊಂಡಾಡಿದರು. ರಾಜ್ಯದ ಕೋವಿಡ್‌ ನಿರ್ವಹಣೆ ಇಡೀ ದೇಶಕ್ಕೆ ಮಾದರಿ ಎಂದು ಕೇಂದ್ರದ ಆರೋಗ್ಯ ಸಚಿವರು ಕೊಂಡಾಡುತ್ತಿದ್ದಾರೆ. ಇದಕ್ಕೆ ಆರೋಗ್ಯ ಸಚಿವ ಸುಧಾಕರ್‌ ಕಾರಣಕರ್ತರು. ಕೋವಿಡ್‌ ವೇಳೆ ದಿನದ 24 ಗಂಟೆ ಅವರು ಕೆಲಸ ಮಾಡಿದ್ದಾರೆ. ಸುಧಾಕರ್‌ಗೆ ಕರ್ನಾಟಕದ ರಾಜಕಾರಣದಲ್ಲಿ ಒಳ್ಳೆಯ ಭವಿಷ್ಯ ಇದೆ. ಸುಧಾಕರ್‌ ಅವರ ಕಾಲುಗುಣದಿಂದ ಮಂತ್ರಿಯಾದ ಮೇಲೆ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆ ಆಗುತ್ತಿದೆ ಎಂದರು.

ಇಂದಿನಿಂದ 8 ದಿನ ವೈಭವದ ಚಿಕ್ಕಬಳ್ಳಾಪುರ ಉತ್ಸವ: ಸುದೀಪ್‌, ಶಂಕರ್‌ ಮಹದೇವನ್‌ ಮತ್ತಿತರರು ಭಾಗಿ

ವೇದಿಕೆಯಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ಆದಿಚುಂಚನಗಿರಿ ಶ್ರೀ, ಸಚಿವರಾದ ಡಾ.ಕೆ.ಸುಧಾಕರ್‌, ಎಂಟಿಬಿ ನಾಗರಾಜ್‌, ಭೈರತಿ ಬಸವರಾಜ್‌, ವಿ.ಸುನೀಲ್‌ ಕುಮಾರ್‌, ವಿಧಾನ ಪರಿಷತ್‌ ಸದಸ್ಯ ವೈ.ಎ.ನಾರಾಯಣಸ್ವಾಮಿ, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್‌, ಬಿಎಂಟಿಸಿ ಉಪಾಧ್ಯಕ್ಷ ಕೆ.ವಿ.ನವೀನ್‌ ಕಿರಣ್‌ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮ ಉದ್ಘಾಟನೆಗೂ ಮೊದಲು ಜನಪದ ಕಲಾವಿದರಾದ ಮಹೇಶ್‌ ಹಾಗೂ ಕಲಾ ತಂಡದಿಂದ ನಾಡಗೀತೆ ಕೇಳಿ ಬಂತು.

ಭವ್ಯ ಮೆರವಣಿಗೆ: ಇದಕ್ಕೂ ಮೊದಲು ನಗರದ ಸಿದ್ದೇಶ್ವರ ದೇವಾಲಯದ ಬಳಿ ನಡೆದ ಸಮಾರಂಭದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿ ಜಗದ್ಗುರು ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಗಳು ಗಣಪತಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು. ಉತ್ಸವದ ಸಾರಥ್ಯ ವಹಿಸಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಈ ವೇಳೆ ಉಪಸ್ಥಿತರಿದ್ದರು. ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ, ಚಿಕ್ಕಬಳ್ಳಾಪುರ ಅನಾದಿಕಾಲದಿಂದಲೂ ಕಲೆ, ಸಂಸ್ಕೃತಿ, ಆಧ್ಯಾತ್ಮಕತೆಗೆ ಹೆಸರುವಾಸಿಯಾಗಿದೆ. 

ಪಂಚಗಿರಿಗಳ ಸಾಲು ಇರುವ ಚಿಕ್ಕಬಳ್ಳಾಪುರ, ಅನೇಕ ಆಧ್ಯಾತ್ಮಿಕತೆಯ ಸಂಗಮವಾಗಿದೆ. ಅನೇಕ ಮಹನೀಯರು ಇಲ್ಲಿ ತಪಸ್ಸು ಮಾಡಿ ಜೀವನದಲ್ಲಿ ಅಮೂಲ್ಯವಾದ ಸಾಧನೆ ಮಾಡಿ ಚಿಕ್ಕಬಳ್ಳಾಪುರಕ್ಕೆ ಕೀರ್ತಿ ತಂದಿದ್ದಾರೆ. ಈ ದಿಕ್ಕಿನಲ್ಲಿ ಎಲ್ಲಾ ಕಲಾ ಪ್ರಕಾರಗಳನ್ನು ಮೆಳೈಸುವ ರೀತಿಯಲ್ಲಿ ಚಿಕ್ಕಬಳ್ಳಾಪುರ ಉತ್ಸವ ಆಯೋಜನೆ ಮಾಡಿರುವುದು ನಿಜಕ್ಕೂ ಅರ್ಥಪೂರ್ಣ ಎಂದರು. ಬಳಿಕ, ಸಾಲಂಕೃತ ಸಾರೋಟಿನಲ್ಲಿ ಚುಂಚಶ್ರೀ ಹಾಗೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸಚಿವ ಡಾ.ಕೆ.ಸುಧಾಕರ್‌ ಅವರನ್ನು ಕೂರಿಸಿ, ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. 

ನಗರದ ಜೈಭೀಮ್‌ ಹಾಸ್ಟೆಲ್‌ನಿಂದ ಆರಂಭಗೊಂಡ ಸಾಂಸ್ಕೃತಿಕ ಮೆರವಣಿಗೆ ಸರ್‌ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದವರೆಗೂ ಸಾಗಿತು. ಕಲಶ ಹೊತ್ತ ನೂರಾರು ಮಹಿಳೆಯರು ಪೂರ್ಣಕುಂಭ ಸ್ವಾಗತದೊಂದಿಗೆ ಮೆರವಣಿಗೆಯ ಮುಂಭಾಗದಲ್ಲಿ ಹೊರಟರೆ, ಅವರನ್ನು ಹಿಂಬಾಲಿಸಿ ಕಲಾತಂಡಗಳು ಹೆಜ್ಜೆ ಹಾಕಿದವು. ಹಾವೇರಿ, ಗುಂಡ್ಲುಪೇಟೆ, ಬಳ್ಳಾರಿ, ಬಾಗಲಕೋಟೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಂದ ಆಗಮಿಸಿದ್ದ 3,000ಕ್ಕೂ ಹೆಚ್ಚು ಕಲಾವಿದರು ಮೆರವಣಿಗೆಗೆ ಮೆರುಗು ತಂದರು.

ನೂರಾರು ಲಂಬಾಣಿ ಮಹಿಳೆಯರಿಂದ ನಡೆದ ನೃತ್ಯ ಪ್ರದರ್ಶನ ನೋಡುಗರ ಮನಸೂರೆಗೊಂಡಿತು. ಶ್ರೀರಾಮ, ಕೃಷ್ಣ, ಅರ್ಜುನ, ಧರ್ಮರಾಯ ಸೇರಿದಂತೆ ವಿವಿಧ ವೇಷ-ಭೂಷಣ ತೊಟ್ಟಕಲಾವಿದರು, ಮೆರವಣಿಗೆಯಲ್ಲಿ ಸಾಗಿ ಬಂದರು. ಡೊಳ್ಳು ಕುಣಿತ, ಪೂಜಿತ ಕುಣಿತ, ಕಂಸಾಳೆ, ಕರಡಿ ನೃತ್ಯ, ನಂದಿಕೋಲಿನ ಸಂಗಮ, ವೀರಗಾಸೆ, ಕೀಲು ಕುದುರೆ, ಯಕ್ಷಗಾನ, ಸುಗ್ಗಿ ಕುಣಿತ, ಗಾರಡಿ ಬೊಂಬೆಗಳ ನೃತ್ಯ ವೈಭವ ಮೆರವಣಿಗೆ ಕಳೆ ಕಟ್ಟಿತು. ಕೃಷಿ, ತೋಟಗಾರಿಕೆ, ಹೈನೋದ್ಯಮ, ರೇಷ್ಮೆ, ಆರೋಗ್ಯ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ 21ಕ್ಕೂ ಅಧಿಕ ಸ್ತಬ್ದಚಿತ್ರಗಳು ಮೆರವಣಿಗೆಯಲ್ಲಿ ಸಾಗಿ ಬಂದವು. 

ಚಿಕ್ಕಬಳ್ಳಾಪುರ ಉತ್ಸವದಲ್ಲಿ ಮೇಳೈಸಿದ ಕಲಾ ವೈಭವ

ಆರೋಗ್ಯ ಇಲಾಖೆಯ ‘ನಮ್ಮ ಕ್ಲಿನಿಕ್‌’ ಜಿಲ್ಲೆಯಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ತಂದಿರುವ ‘ಚಿಮೂಲ್‌’ ಸ್ತಬ್ಧಚಿತ್ರಗಳು ಜನರ ಮನಸೂರೆಗೊಂಡವು. ಮೆರವಣಿಗೆಯಲ್ಲಿ ಸಾಗಿ ಬಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ವೇಷಧಾರಿಯೊಬ್ಬರು ನೋಡುಗರ ಮನಸೂರೆಗೊಂಡರು. ಸುಮಾರು 2 ಕಿ.ಮೀ.ನಷ್ಟುದೂರ ನಡೆದ ಉತ್ಸವದ ಮೆರವಣಿಗೆ ಚಿಕ್ಕಬಳ್ಳಾಪುರ ಉತ್ಸವಕ್ಕೆ ಕಳೆಗಟ್ಟುವಂತೆ ಮಾಡಿತು. ದಸರಾ ಜಂಬೂಸವಾರಿಯನ್ನು ನೆನಪಿಸಿತು. ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್‌, ಬಿಎಂಟಿಸಿ ಉಪಾಧ್ಯಕ್ಷ ಕೆ.ವಿ.ನವೀನ್‌ ಕಿರಣ್‌ ಹಾಗೂ ಇತರ ಗಣ್ಯರು ಈ ವೇಳೆ ಉಪಸ್ಥಿತರಿದ್ದರು.

Follow Us:
Download App:
  • android
  • ios